Tuesday, January 02, 2024

ಪೂಜೆಯ ನಾಲ್ಕು ಭುಜಗಳು

   1.    ಪೂಜೆಗೆ ಮನಸ್ಸು ಮಾಡಿದ ಯಜಮಾನ

2.   ಪೂಜೆಗೆ ಅರ್ಹವಾದ ಬಿಂಬ

3.   ಪೂಜಾ ಸಾಮಗ್ರಿಗಳು

4.   ಪೂಜಾರ್ಹತೆ ಅಥವಾ ಭಾವಪೂರ್ಣತೆ

ಇಂದು ಪೂಜೆಗೆ ಮನಸ್ಸನ್ನು ಕೊಡುವ ಯಜಮಾನ ತುಂಬ ವಿರಳನಾಗುತ್ತಿದ್ದಾನೆ. ಮೌಲ್ಯಕ್ಕಿಂತ ಅನುಕೂಲಕ್ಕೆ ಒಲಿಯುವ ಮನಸ್ಸುಗಳೇ ಸುತ್ತಲೂ ತುಂಬಿವೆ. ಇಂದಿನ ಮಾನವ ಅಂತರಂಗವಿಲ್ಲದ ಅಂಗಡಿಯವನಂತೆ ವ್ಯಾಪಾರಿಯಾಗುತ್ತಿದ್ದಾನೆ. ಚಾತುರ್ವರ್ಣ್ಯಗಳಲ್ಲಿ ವೈಶ್ಯನೇ ಎಲ್ಲೆಡೆ ಎದ್ದು ಕುಣಿಯುತ್ತಿದ್ದಾನೆ. ಚಿತ್ತದಲ್ಲಿ ಕಳೆದದ್ದಕ್ಕೆ ವಿತ್ತದಲ್ಲಿ ಪರಿಹಾರ ಹುಡುಕುತ್ತಿರುವ ಇಂದಿನ ಯಜಮಾನ ಅದರಿಂದ ಏನು? ಅದು ಏಕೆ? ಅದಕ್ಕೆ ಎಷ್ಟು? ಎಂಬ ಪ್ರಶ್ನೆಗಳಲ್ಲಿ ಕೊಚ್ಚಿ ಹೋಗುತ್ತಿದ್ದಾನೆ! ಇದರ ಪರಿಣಾಮವಾಗಿ ಅಮೂಲ್ಯವಾದ ವಿಷಯಕ್ಕೂ ಮೌಲ್ಯವನ್ನು ನಿಗದಿಪಡಿಸಬೇಕಾಗಿದೆ. ಅಲ್ಲಿಗೆ ಧರ್ಮವೂ ಕೂಡ ವ್ಯಾಪಾರ ಮಾರ್ಗವನ್ನೇ ಅನುಸರಿಸುವಂತಾಗಿದೆ. ಹೀಗಿದ್ದರೂ ಕೆಲವೇ ಕೆಲವು ಪೂಜೆಯಲ್ಲಿ ಮನಸ್ಸನ್ನಿಡುವ ಯಜಮಾನರು ಆಶ್ಚರ್ಯವೆಂಬಂತೆ ಕಾಣಸಿಗುತ್ತಾರೆ.

ಪ್ರತಿಯೊಬ್ಬನೂ ನಿರ್ಗುಣ ಬ್ರಹ್ಮನಿಂದ ಬೇರೆ ಬೇರೆಯದೇ ಆದ ವಿಶಿಷ್ಟಗುಣಗಳನ್ನು ಪ್ರತಿಫಲಿಸುತ್ತಿರುತ್ತಾನೆ. ಆದ ಕಾರಣ ಪ್ರತಿಯೊಬ್ಬನಿಗೂ ಪರಬ್ರಹ್ಮನೊಂದಿಗೆ ಸಂಪರ್ಕ ಬೆಳೆಸಲು 'ತಮ್ಮ ಗುಣಗಳಿಗೆ ಹತ್ತಿರವಾದ ದೈವೀಶಕ್ತಿ' ಪೂರಕವಾಗಿ ಕೆಲಸ ಮಾಡುತ್ತಿರುತ್ತದೆ. ಅದಕ್ಕೆಂದೇ ಆಗಮಗಳು ನೂರಾರು ವಿಭಿನ್ನ ಗುಣಗಳ ದೇವತೆಗಳನ್ನು ಪ್ರಕಲ್ಪಿಸಿವೆ. ನಿರ್ಗುಣನೂ ನಿರಾಕಾರನೂ ಆದ ಪರಮಾತ್ಮನನ್ನು ಧ್ಯಾನಿಸಲು ಅಥವಾ ಉಪಾಸನೆ ಮಾಡಲು, ನಿರ್ವಿಕಾರ ಭಾವನೆ ಅತ್ಯಗತ್ಯ. ಮನಸ್ಸಿನ ಸಮಾಹಿತ ಸ್ಥಿತಿಯಿಲ್ಲದೇ ನಿರಾಕಾರನನ್ನು ಉಪಾಸನೆಮಾಡುವುದು ಕಷ್ಟ! ಚಿತ್ತೈಕಾಗ್ರತೆ ಇಲ್ಲದ ಮನಸ್ಸು ಉಪಾಸನೆಯಲ್ಲೂ ನೆಲೆ ಕಾಣಲಾರದು. ಅದಕ್ಕೆಂದೇ ಪ್ರಾಜ್ಞರು ಉಪಾಸನೆಗೆ ಮನಸ್ಸುನ್ನು ಕೇಂದ್ರಗೊಳಿಸಲು ಧ್ಯೇಯನಾದ ಭಗವಂತನಿಗೆ ವಿಗ್ರಹಗಳನ್ನು ಮಾಡಿದ್ದಾರೆ. ಶಬ್ದವೇ ಹೇಳುವಂತೆ ಅಮೂರ್ತನಾದ ಭಗವಂತನನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕಾರಿಯಾದದ್ದೇ ಈ ವಿ-ಗ್ರಹ. ಇದು ಭಗವಂತನ ಮಹಿಮೆ, ಭಗವಂತನಿಗೆ ಮಾಧ್ಯಮ, ಭಗವಂತನ ಮೂರ್ತಿ, ಭಗವದ್ವಸ್ತು, ಧ್ಯೇಯ ವಸ್ತು ... ಅಷ್ಟೇ ಏಕೆ? ಇದು ನಮ್ಮ ಭಾವ ಕೇಂದ್ರವೇ ಆಗಿದೆ. ಆದ್ದರಿಂದಲೇ ವಿಗ್ರಹಗಳಿಗೆ, ಪ್ರತಿಮೆಗಳಿಗೆ ನಿರ್ದಿಷ್ಟವಾದ ಮತ್ತು ನಿರ್ದುಷ್ಟವಾದ ಪವಿತ್ರ ಉದ್ದೇಶಗಳಿವೆ.

ಮಂಡಲೇ ಕರ್ಮಣಾಂ ಸಾಕ್ಷೀ ಕಲಶೇ ಯಜ್ಞರಕ್ಷಕಃ |
ಹೋಮಾಧಿಕರಣಂ ವಹ್ನೌ ಶಿಷ್ಯೇ ಪಾಶವಿಮೋಚಕಃ ||
ಸ್ವಾತ್ಮನ್ಯನುಗೃಹೀತೇತಿ ಪಂಚಾಧಾರೋಽಯಮೀಶ್ವರಃ || ಎಂದು ಸೋಮಶಂಭುಪದ್ಧತಿಯೆಂಬ ಆಗಮ ಗ್ರಂಥ ಸಾರಿ ಹೇಳಿದೆ. [ದೇವನು ಈ ಐದು ಮನೆಗಳಲ್ಲಿ ಐದು ಉದ್ದೇಶದೊಂದಿಗೆ ಇರಬಲ್ಲನು! ಮಂಡಲದಲ್ಲಿ ಸಾಕ್ಷಿಯಾಗಿಯೂ, ಕಲಶದಲ್ಲಿ ರಕ್ಷಕನಾಗಿಯೂ, ಅಗ್ನಿಯಲ್ಲಿ ಕರ್ಮದ ಬೆನ್ನೆಲುಬಾಗಿಯೂ, ತನ್ನೊಳಗೆ ಅನುಗ್ರಹಕಾರಕನಾಗಿಯೂ, ಉಳಿದಂತೆ ಶಾಸ್ತ್ರ ತಿಳಿಸಿದ ಹಾಗೆ - ಪಂಚ ಭೂತಗಳಲ್ಲಿ, ಮರ ಗಿಡಗಳಲ್ಲಿ, ನದೀ ನದಗಳಲ್ಲಿ, ಪವಿತ್ರ ಕ್ಷೇತ್ರಗಳಲ್ಲಿ ಮೋಹ, ಆಲಸ್ಯ, ವಿಘ್ನಗಳೆಂಬ ಪಾಶಗಳನ್ನು ಹೋಗಲಾಡಿಸುವವನಾಗಿಯೂ... ಆಗಿರುತ್ತಾನೆ.]
ಲಿಂಗಸ್ಥಂಡಿಲವಹ್ನ್ಯಂಬುಸೂರ್ಪಕುಡ್ಯಪಟೇಷು ಚ |
ಮಂಡಲೇ ಫಲಕೇ ಮೂರ್ಧ್ನಿ ಹೃದಿ ವಾ ದಶ ಕೀರ್ತಿತಾಃ || ಎಂದು ಕುಲಾರ್ಣವತಂತ್ರ ಗ್ರಂಥ ಒಂದು ಹೆಜ್ಜೆ ಮುಂದೆ ಹೋಗಿ ಹತ್ತು ದೇವತಾ ಸ್ಥಾನಗಳನ್ನು ವರ್ಣಿಸಿದೆ.

ಧ್ಯಾನಕ್ಕೆ ವಸ್ತುವಾಗುವ ವಿಗ್ರಹಗಳು ಉಪಾಸಕನ ಅಂತರಂಗದ ತಿಳಿವನ್ನು ಪ್ರತಿನಿಧಿಸುವುದರ ಜೊತೆಗೆ ಜಗದ್ವ್ಯಾಪಿಯಾದ ಪರಮಾತ್ಮನನ್ನೂ ಅರ್ಥೈಸುವಲ್ಲಿ ಸಮರ್ಥ ಸಂಕೇತವಾಗಬೇಕು. ಪ್ರತಿಯೊಬ್ಬ ಮಾನವನ ಹೃತ್ಕಮಲವನ್ನು ಅರಳಿಸುವಂತೆಯೂ, ಒಳ್ಳೆಯ ನೆನಪಿನ ಪರಿಮಳವನ್ನು ಸೂಸುವಂತೆಯೂ, ಮಾಡುವ ದೈವಿಕ ಹಿನ್ನೆಲೆ ಈ ವಿಗ್ರಹಕ್ಕೆ ಇರಲೇ ಬೇಕು. ಏಕೆಂದರೆ ವಿಗ್ರಹ ಧ್ಯಾನ ಕೇಂದ್ರ ತಾನೆ? ಪ್ರತೀಕೋಪಾಸನೆಯಲ್ಲಿ ಮೂರ್ತಿಯ ವಿಶೇಷಗಳನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅದರಲ್ಲಿ ಲೀನವಾಗುವುದೇ ಧ್ಯಾನ. ಧ್ಯಾನದಲ್ಲಿ ದೇವತಾಸ್ತುತಿಯು ತೈಲಧಾರೆಯಂತೆ ಒಂದೇ ಸಮನೆ ಹರಿಯುತ್ತಿರಬೇಕು. ಉಪಾಸಕನ ಮೊದಲ ಹೆಜ್ಜೆ ಮತ್ತು ಉಪಾಸನೆಯ ಪ್ರಥಮ ಉಪಚಾರವೂ ಧ್ಯಾನವೇ ಆಗಿದೆ.

ಧ್ಯೇಯ ಮೂರ್ತಿಯು ಯಾವುದೋ ಅದಕ್ಕೆ ಅನುಗುಣವಾಗಿ ಉಪಚಾರಗಳು ಇರುತ್ತವೆ. ಉದಾಹರಣೆಗೆ ಭಿತ್ತಿ ಚಿತ್ರರೂಪದ ದೇವತಾ ಬಿಂಬಕ್ಕೆ ಸ್ನಾನವೆಂಬ ಉಪಚಾರ ಬಟ್ಟೆಯಿಂದ ಒರೆಸುವ ಮೂಲಕ ಆಗುತ್ತದೆ. ಅಂದರೆ ಇಲ್ಲಿ ಸಮ್ಮಾರ್ಜನೆಯೇ ಸ್ನಾನವಾಗುತ್ತದೆ. ಹೀಗೆ ಬಿಂಬಗಳು ಬದಲಾದಂತೆ ಉಪಚಾರಗಳೂ ಬದಲಾಗುತ್ತವೆ. ಆಗ ಆಯಾ ಉಪಚಾರಕ್ಕೆ ಅನುಕೂಲಕರವಾದ ಸಾಮಗ್ರಿಗಳೂ ಬದಲಾಗುತ್ತಿರುತ್ತವೆ. ಹಲವು ಪೂಜಾ ಸಾಮಗ್ರಿಗಳು ಎಷ್ಟೋ ಬಾರಿ ದೇವನ ಸ್ಥಾನ ಮಾನವನ್ನೇ ಹೊಂದುತ್ತವೆ. ಶಂಖ, ಘಂಟೆ, ಪ್ರಭಾವಳಿಗಳು ಮತ್ತು ಪೀಠಪರಿಕರಗಳು ಇವು ದೇವರಂತೆ ಉಪಚಾರಗಳನ್ನು ಪಡೆಯುತ್ತವೆ. ಆಗಮಗಳಲ್ಲಿ ಇವುಗಳಿಗೂ ದೆವತಾತತ್ವಗಳ ಆವಾಹನೆ ಮತ್ತು ಪೂಜೆಯನ್ನು ಹೇಳಿದ್ದಿದೆ. ಒಟ್ಟಿನಲ್ಲಿ ದೇವರ ಪೂಜೆಗೆ ಬಳಸುವ ಸಾಮಗ್ರಿಗಳು ಪವಿತ್ರವಾಗಿರಬೇಕು ಮತ್ತು ಒಳ್ಳೆಯ ನೆನಪನ್ನು ಸೂಸುವಂತಿರಬೇಕು.

ಅಣುರೇಣುತೃಣಕಾಷ್ಠಗಳಲ್ಲೂ ಭಗವಂತನನ್ನು ಕಂಡ ನಮ್ಮ ಪೂರ್ವಜರು ಪೂಜಾ ಪದ್ಧತಿಗೆ ಒಂದು ವ್ಯವಸ್ಥೆಯನ್ನು ಮಾಡಿರುತ್ತಾರೆ. ಈ ಪೂಜೆಗಳು ಕಲ್ಪಸೂತ್ರತಂತ್ರಾಗಮಪ್ರಯೋಗಗ್ರಂಥಗಳಲ್ಲಿ ಹೇಳಿದ ಹಾಗೆ ನಡೆಯಬೇಕು. ಅದಿಲ್ಲದಿದ್ದರೆ ಶ್ರದ್ಧೆಯ ಹೆಸರಿನಲ್ಲಿ ಎಷ್ಟೋ ಡಾಂಭಿಕ ಆಚರಣೆಗಳು ಈ ಪೂಜಾ ಕೈಂಕರ್ಯಗಳಲ್ಲೂ ನುಸುಳಿಬಿಡುತ್ತವೆ. ಶ್ರದ್ಧೆಗೆ ಮಾನದಂಡವೇ ಇಲ್ಲದಿರುವದರಿಂದ ಕಾಲದ ಪ್ರಭಾವ ಮತ್ತು ನಾಟಕೀಯ ನಡುವಳಿಕೆಗಳಿಂದ ಭಾವಪೂರ್ಣತೆಯ ಸೋಗು ಈ ಪೂಜೆಯ ಮಾರ್ಗದಲ್ಲಿ ಯಾವಾಗಲೂ ನುಸುಳಲು ಅವಕಾಶವಿದೆ. ಅದನ್ನು ತಡೆಗಟ್ಟಲು ಆಯಾ ಕಾಲದಲ್ಲಿ ಸಮರ್ಥ ಅಧಿಕಾರಿಗಳನ್ನು ಹೊಂದಿದ ಮಠ ಮುಂದಾಗಿ ಬರಬೇಕು. ಯದ್ಯಪಿ ಯಾವುದೇ ಮಠ (ಆಮ್ನಾಯ ಪೀಠ) ವೇದವಾಙ್ಮಯದ ಅಧ್ಯಯನ ಅಧ್ಯಾಪನಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿರುತ್ತದೆ. ಹಾಗಿದ್ದರೂ ಅದು ತನ್ನ ವೇದಪರತೆಯಿಂದ ಅಧ್ಯಯನಶೀಲತೆಯಿಂದ ಕಾಲಕಾಲಕ್ಕೆ ಈ ಪೂಜಾ ಪದ್ಧತಿಗಳನ್ನು ಪರಿಶೀಲಿಸಿ, ಪರಿಷ್ಕರಿಸುತ್ತಿರಬೇಕು. ಆಗ ಪೂಜೆಗೆ ಬೆನ್ನೆಲುಬಾದ ಶ್ರದ್ಧೆ, ಅರ್ಹತೆ ಅಥವಾ ಭಾವಪೂರ್ಣತೆ ಸಮಾಜದಲ್ಲಿ ಹೊಳಪಿನಿಂದ ಕೂಡಿರುತ್ತದೆ. ಕೇವಲ ಹಿತ್ತಾಳೆಯ ಪೂಜಾಸಾಮಗ್ರಿಗಳನ್ನು ಕಾಲಕಾಲಕ್ಕೆ ತಿಕ್ಕಿ ಹೊಳಪಿನಿಂದಿರುವಂತೆ ಮಾಡಿದರೆ ಸಾಲದು! ಮಠದ ಮಧ್ಯಸ್ತಿಕೆ, ಪರಿವೀಕ್ಷಣೆ ಮತ್ತು ಪರಿಷ್ಕಾರ ಪೂಜೆಗೆ ವಿಶೇಷತೆಯನ್ನು (ಮೆರಗನ್ನು) ಒದಗಿಸುತ್ತದೆ. ಈ ಪೂಜಾರ್ಹತೆ ಎನ್ನುವುದು ಪೂಜ್ಯವಾದ ಬಿಂಬಕ್ಕೂ, ಪೂಜಕನಾದ ಯಜಮಾನನಿಗೂ, ಪೂಜಾ ಸಾಮಗ್ರಿಗಳ ಗುಣಮಟ್ಟಕ್ಕೂ ಅನ್ವಯಿಸುತ್ತದೆ. ಹಾಗಾಗಿ ಪೂಜಾ ಪಾಠಗಳಿಗೆ ಈ ನಾಲ್ಕನೆಯ ಅಂಶವು ಅತೀಮುಖ್ಯದ್ದಾಗಿದೆ.

ಮನೆಯಂಗಳದ ತುಳಸಿಯ ಪೂಜೆಯಿಂದ ಹಿಡಿದು ಮಠದ ಉತ್ಸವಗಳವರೆಗೆ ವ್ಯಾಪಿಸಿರುವ ಈ ಪೂಜಾಪದ್ಧತಿಗಳ ಮುಖ್ಯ ಪ್ರಯೋಜನಗಳನ್ನು ಈಗ ಪರಿಶೀಲಿಸೋಣ. ದೇವಪೂಜೆಯನ್ನು ದುರಿತಕ್ಷಯಕ್ಕಾಗಿಯೂ, ಪುಣ್ಯಸಂಚಯನಕ್ಕಾಗಿಯೂ ಮಾಡುತ್ತಾರೆ. ದೇವತೆಗಳು ಕೊಡುವವರು, ಬೇಡುವವರು ನಾವು. ಬೇಡುವ ರೀತಿಯನ್ನೇ ಉಪಾಸನೆ ಎಂಬುದಾಗಿ ಋಷಿಗಳು ಸಕ್ರಮಗೊಳಿಸಿರುವರು. ಮನೆಯಲ್ಲಿ ಮಾಡುವ ಪೂಜೆ ಸ್ವಹಿತಕ್ಕೆ ಕಾರಣವಾಗಿರುವುದು. ಇದರಲ್ಲಿ ತನ್ನ ಮತ್ತು ತನ್ನವರ ಕ್ಷೇಮ, ಸ್ಥೈರ್ಯ, ಜಯ, ಆಯುರಾರೋಗ್ಯಗಳು ಸೇರಿಕೊಂಡಿವೆ. ಗೃಹಾ ಹ್ಯಾಶ್ರಮ ಪೂಜಾರ್ಥಂ ಎಂದು ಬೋಧಾಯನರು ಮನೆಯ ಉದ್ದೇಶವೇ ಆಶ್ರಮೋಚಿತ ಪೂಜೆಗೈಯ್ಯಲೆಂದು ಎತ್ತಿ ಹೇಳಿದ್ದಾರೆ.

 ಊರಿನಲ್ಲಿ ಮತ್ತು ಗುಡಿಗಳಲ್ಲಿ ಮಾಡುವ ಪೂಜೆಯು ಪರಾರ್ಥ ವಾಗಿರುವುದು. ಇವು ಊರಿನವರ ಮತ್ತು ಒಡೆಯರ ಪೀಡಾ ಪರಿಹಾರವಾಗಿಯೂ, ಗ್ರಾಮಕ್ಕೆ ಬಂದಿರುವ ಮತ್ತು ಒದಗಬಹುದಾದ ಆಪತ್ತು, ಆತಂಕಗಳ ನಿವಾರಣೆಗಾಗಿಯೂ, ಲೋಕಕಲ್ಯಾಣಕ್ಕೆ ಒತ್ತುನೀಡುವ ರೀತಿಯಲ್ಲಿಯೂ ಇರುತ್ತವೆ. ಒಟ್ಟರ್ಥದಲ್ಲಿ ಆತ್ಮಾರ್ಥವಾಗಿಯೂ ಪರಾರ್ಥವಾಗಿಯೂ ಸಾರ್ಥಕವೆನಿಸಿದ ಪೂಜೆಯನ್ನು ಕೈಗೊಳ್ಳುವಾಗ ಪೂಜಕನ ಮನಸ್ಸು “ದೇವಾ! ನಾನು ನಿನ್ನ ದಾಸ!” ಎನ್ನುವ ದ್ವೈತ ಭಾವನೆಯಿಂದಲೂ; “ನಾನು ಅದು!” ಎಂಬ ವಿಶಿಷ್ಟಾದ್ವೈತ ಭಾವನೆಯಿಂದಲೂ; ಇನ್ನು ಮೂರನೆಯ ಹಂತವಾದ “ನಾನು ನೀನು ಬೇರೆಯಲ್ಲವೆಂಬುದಾಗಿ” ಅದ್ವೈತ ಭಾವನೆಯಿಂದಲೂ ತುಂಬಿಕೊಂಡಿರುತ್ತದೆ.  ಇವು ಮೂರೂ ಭಾವಗಳೂ ದೇವತಾರ್ಚನೆಯ ಫಲವಾಗಿವೆ. 

Saturday, September 09, 2023

ಧರ್ಮಂ ಚರ

ಬಿಡಬೇಡ ಸದ್ಗುಣವ ಬಾಳಿಗದು ಭೂಷಣವು ಎನ್ನುವಾಗ ಕವಿ ”ಸದ್ಗುಣಗಳು ಬಾಳನ್ನು ಬೆಳಗಿಸುವವು, ಅವನ್ನು ಬಿಡಬೇಡ...’’ ಎಂದು ಎಚ್ಚರಿಸಿ ಹೇಳುತ್ತಾನೆ. ಆದರೆ ಇವತ್ತು “ನೀನು ಸದ್ಗುಣ ಬಿಡಬೇಡ, ನೀನು ಧರ್ಮವ ಮಾಡು, ನೀನು ದಾನವ ಮಾಡು.” ಎಂಬುವವರನ್ನು ಎಲ್ಲೆಡೆಯೂ ಕಾಣುತ್ತೇವೆ. ಅದೇ ತಮಗಾದರೆ ಒಂದಲ್ಲ ಒಂದು ನೆಪ ಹೇಳುವರು. ಹಣವಿಲ್ಲ! ಉದ್ಯೋಗವಿಲ್ಲ! ಮದುವೆಯಾಗಿಲ್ಲ! ಕೃಷಿಯಲ್ಲಿ ಬಲವಿಲ್ಲ! ಮನೆಯಲ್ಲಿ ಮಾಡುವರಿಲ್ಲ! ಇಂಥ ಕುಂಟು ನೆಪಗಳನ್ನು ಬದಿಗಿರಿಸಿ, ಯಾರು ತಮ್ಮ ತಮ್ಮ ಕರ್ತವ್ಯದಲ್ಲಿ ನಿರತರಾಗಿ, ಪರೋಪದೇಶಕ್ಕೆ ವಿಮುಖರಾಗಿ, ಪರರಿಗೆ ಆದರ್ಶವಾಗಿ ನಡೆಯುವರೋ ಅವರೇ ಧರ್ಮಚರರು. ಅಥವಾ ಇಹ ಪರಗಳೆರಡರಲ್ಲೂ ಚಿರಸ್ಥಾನವನ್ನು ಪಡೆವ ಧಾರ್ಮಿಕರು. ಇಂಥ ಧಾರ್ಮಿಕರು ಎಲ್ಲ ಕಾಲದಲ್ಲೂ ಇರುವರು, ಎಲ್ಲ ಕಾಲಕ್ಕೂ ಸಲ್ಲುವವರು.

ಧಾರ್ಮಿಕನಾಗಬೇಕೋ ಧರ್ಮವನ್ನು ಆಚರಿಸಬೇಕು! ಅದನ್ನೇ ಮೇಲಿನ ಉಪನಿಷತ್ತಿನ ಮಾತು ಎತ್ತಿ ಹೇಳುತ್ತಿದೆ. ಶಿಷ್ಯನೊಬ್ಬ ಶಾಲೆಯಿಂದ ಹೊರಬರುವಾಗ ಗುರುವಾದವ ಆತನ ಕಿವಿಯಲ್ಲಿ ಹೇಳಿದ ಮಾತಿದು. ಧರ್ಮವನ್ನು ಮಾಡು.... ಮಾಡು ಎನ್ನುವ ವಿಷಯದಲ್ಲಿ ಅರ್ಥ ಸ್ಪಷ್ಟವಾಗಿದೆ. ಈ ಕರ್ಮಭೂಮಿಯಲ್ಲಿ ಒಂದಿಲ್ಲೊಂದು ಕಲಾಪದಲ್ಲಿ ತೊಡಗಿಕೊಂಡಿರುವ ನಮಗೆ ಮಾಡು ಎನ್ನುವುದು ಗೊತ್ತು. ಮಾಡದೇ ಇರುವುದು ಅರ್ಥವಾಗದ ವಿಷಯ ಅಥವಾ ಸಂದಿಗ್ಧ ವಿಚಾರವಾಗಿದೆ. ಪ್ರಕೃತದಲ್ಲಿ ಧರ್ಮವನ್ನು ಮಾಡು ಎಂಬಲ್ಲಿ ಧರ್ಮ ಶಬ್ದ ಅರ್ಥವಾಗಬೇಕಿದೆ. ಇದು ಧರ್ಮಕ್ಕೆ ಅರ್ಥವಾಗುವ ವಿಷಯವಲ್ಲ! ಪರಿಶ್ರಮ ಬೇಕು ಅಥವಾ ವಿವೇಕ ಬೇಕು.

ಧರ್ಮ ಎಂದರೆ ಏನು? ಧರ್ಮವೆಂದರೆ ಕರ್ಮ ಅಷ್ಟೇ!

’’ಅಥಾತೋ ಧರ್ಮಜಿಜ್ಞಾಸಾ” ಎಂದು ಆರಂಭಿಸಿದ ಕರ್ಮಕೋವಿದರಾದ ಮೀಮಾಂಸಕರು ಧರ್ಮ ಎಂದರೆ ಕರ್ಮ ಎಂದೇ ನಿರೂಪಿಸಿದ್ದಾರೆ. ಹಾಗಾದರೆ ಇಲ್ಲಿ ಕರ್ಮ ಚರ ಎಂದೇ ಹೇಳಬಹುದಿತ್ತಲ್ಲ! ಧರ್ಮಂ ಚರ ಎಂದಿದ್ದರಿಂದ, “ಇಲ್ಲಿ ಬರೀ ಕರ್ಮವನ್ನಲ್ಲ! ಕೇವಲ ಕೆಲಸವನ್ನಲ್ಲ! ಇನ್ನೇನನ್ನೋ ಗುರುವಾದವ ಎತ್ತಿ ಹೇಳುತ್ತಿದ್ದಾನೆ.” ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಇಲ್ಲಿ ಗುರುವು ಒಳ್ಳೆಯ ಕೆಲಸ ಮಾಡು ಎಂದು ಹೇಳುತ್ತಿದ್ದಾನೆಯೇ? ಎಂದು ಕೇಳಿದರೆ ಸರಿ, ಹಾಗೂ ಹೇಳಬಹುದು. ಆದರೆ ಒಳ್ಳೆಯ ಕೆಲಸಗಳು ಧರ್ಮವೇ? ಅಷ್ಟೇ ಹೇಳಲಿಕ್ಕೆ ಬಾರದು... ಏಕೆಂದರೆ ಒಳ್ಳೆಯದು ಎಂಬುದರ ಅರ್ಥ ವ್ಯಾಪ್ತಿ ಏನು ಮತ್ತು ಎಷ್ಟು? ಎಂಬುದನ್ನು ಇದು ಅವಲಂಬಿಸಿದೆ. ನನಗೆ ಒಳ್ಳೆಯದಾಗಿದ್ದು, ಪರರಿಗೆ ಒಳ್ಳೆಯದಾಗಿರಬೇಕೆಂದಿಲ್ಲ! ಅದೇ ರೀತಿ ಈಗ ಒಳ್ಳೆಯದಾದದ್ದು, ನಾಳೆ ಒಳ್ಳೆಯದಾಗಿ ಇರಬೇಕೆಂದಿಲ್ಲ! ಹಾಗಿರುವಾಗ ಅದು ಧರ್ಮದ ವ್ಯಾಖ್ಯಾನವಾಗದು. ಅದಕ್ಕೆ ಜೈಮಿನಿ ಮುನಿಗಳು “ಚೋದನಾಲಕ್ಷಣೋರ್ಥೋ ಧರ್ಮಃ” ಎಂದಿದ್ದಾರೆ. ವೇದವಿಹಿತಶ್ರೇಯಃ ಪ್ರದವಾದ ಕರ್ಮವೇ ಧರ್ಮ. ವೇದವು ನಿತ್ಯವೂ, ಅಸಂದಿಗ್ಧವೂ, ಸರ್ವಹಿತಸಾಧಕವೂ ಆದದ್ದರಿಂದ, ಇದು ತ್ರಿಕಾಲಾಬಾಧಿತವಾದ ಜ್ಞಾನಭಂಡಾರವಾಗಿದೆ. ಇಂಥ ಜ್ಞಾನರಾಶಿಯ ಬಲದಿಂದ ಆಚರಿಸಿದ ಕರ್ಮ ನಮ್ಮನ್ನು ಶ್ರೇಯಸ್ಸಿನ ಜೊತೆ ಸೇರಿಸುತ್ತದೆ. ಅಲ್ಲಿ ಯಾವುದೇ ಸ್ವಾರ್ಥಕ್ಕೆ ಅವಕಾಶವಿಲ್ಲ! ಹಾಗಂತ ಇಹದಲ್ಲಿ ಸಂತೋಷವನ್ನೂ, ಪರದಲ್ಲಿ ನಿಶ್ಶ್ರೇಯಸ್ಸನ್ನೂ ಕೊಡುವ ಕರ್ಮ ಇದಾಗಿದೆ. ಜ್ಞಾನಪ್ರಕಾಶದಿಂದ ಕೂಡಿದ ಶ್ರೇಯಃಪ್ರದವೂ ಶುಭಕರವೂ  ಆದ, ಕೆಡುಕನ್ನು ಹೊಂದಿರದ, ಕ್ರಿಯಾಕಲಾಪಗಳನ್ನು ಒಟ್ಟರ್ಥದಲ್ಲಿ ಧರ್ಮ ಎಂದೆನ್ನುತ್ತೇವೆ.

“ಯ ಏವ ಶ್ರೇಯಸ್ಕರಃ, ಸ ಏವ ಧರ್ಮಃ | “ ಎಂಬುದು ತಿಳಿಯಿತು. ಹಾಗಾದರೆ ಈ ಶ್ರೇಯಸ್ಸು ಅಂದರೆ ಏನು? ಈ ಲೋಕದಲ್ಲಿ ಶ್ರೇಯಸ್ಸು ಮತ್ತು ಪ್ರೇಯಸ್ಸು ಎಂಬ ಎರಡು ಪ್ರಶಸ್ತವಾದ ಕಾರ್ಯಗಳಿವೆ. ಅರ್ಥ ಮತ್ತು ಕಾಮನೆಗಳಿಗೆ ಒಪ್ಪಿತವಾದ (ತನಗೆ ಸಂಪತ್ಪ್ರದವೂ, ಇಷ್ಟವೂ ಆದ) ಕೆಲಸ ಕಾರ್ಯಗಳನ್ನು ಪ್ರೇಯಸ್ಸೆಂದೂ, ಆ ಕೆಲಸಕಾರ್ಯಗಳಿಗೆ (ಪ್ರೇಯಸ್ಸಿಗೆ) ಧರ್ಮದ ಬೆಂಬಲವೂ ಒದಗಿದರೆ ಅವನ್ನು ಶ್ರೇಯಸ್ಸೆಂದೂ ಅರ್ಥೈಸಬೇಕು. ಇದನ್ನೇ ಧರ್ಮ, ಅರ್ಥ ಮತ್ತು ಕಾಮ ಇವು ಮೂರರಲ್ಲಿ ಪರಸ್ಪರ ಸಾಮರಸ್ಯ ಅಥವಾ ಅವಿರೋಧತೆ ಕಂಡು ಬಂದರೆ ಅಂಥ ಕೆಲಸ ಕಾರ್ಯಗಳನ್ನು ಶ್ರೇಯಃಪ್ರದವೆಂದು ಕರೆಯುತ್ತಾರೆ. [ಧರ್ಮಾರ್ಥಕಾಮಾತ್ಮಕಃ ಪರಸ್ಪರಾವಿರುದ್ಧಸ್ತ್ರಿವರ್ಗ ಏವ ಪುರುಷಾರ್ಥತಯಾ ಶ್ರೇಯ ಇತಿ ವಿನಿಶ್ಚಯಃ] ಯಾರೊಬ್ಬರಿಗೂ ಇಲ್ಲಿ (ಈ ಲೋಕದಲ್ಲಿ) ಮಾತ್ರ ಸಂತೋಷ ಬೇಕು; ಅಲ್ಲಿ (ಪುಣ್ಯ ಲೋಕದಲ್ಲಿ) ಏನಾದರೇನು? ಎಂಬ ಧಾರ್ಷ್ಟ್ಯವಿರುವುದಿಲ್ಲ. ಅದೇ ರೀತಿ ಅಲ್ಲಿ (ಸಾವಿನಾಚೆಯ ಬದುಕಿನಲ್ಲಿ) ಮಾತ್ರ ಸುಖದಿಂದಿರಬೇಕು; ಇಲ್ಲಿ (ಹುಟ್ಟಿನ ನಂತರದ ಬದುಕಿನಲ್ಲಿ) ಏನಾದರೇನು? ಎಂಬ ಮೌಢ್ಯವೂ ಇರಲಾರದು. ಹಾಗಾಗಿ ಇಹ ಪರಗಳೆರಡರಲ್ಲೂ ಒಪ್ಪಿತವಾಗುವ ಪ್ರಶಸ್ತವಾದ ಕ್ರಿಯಾಕಲಾಪವನ್ನೇ ಶ್ರೇಯಸ್ಸು ಎಂದಿದ್ದಾರೆ. ಇದನ್ನೇ ಭವಿಷ್ಯಪುರಾಣದಲ್ಲಿ ಧರ್ಮಃ ಶ್ರೇಯಃ ಸಮುದ್ದಿಷ್ಟಂ, ಶ್ರೇಯೋಭ್ಯುದಯಸಾಧನಮ್ | ಎಂದು ಹೇಳಿದ್ಡಾರೆ. 

ಅಭ್ಯುದಯ ಸಾಧನವಾದದ್ದೇ ಧರ್ಮ. ಇಹ ಪರಗಳೆರಡರಲ್ಲೂ ನಮ್ಮನ್ನು ಪೊರೆವ ಸಾಧನವೇ ಧರ್ಮ. ಇಂಥ ಸಾಧನಾ ರೂಪವಾದ ಧರ್ಮದ ಪ್ರಕಾರಗಳನ್ನೂ ಋಷಿಗಳು ನಾನಾ ವಿಧವಾಗಿ ಪ್ರತಿಪಾದಿಸಿದ್ದಾರೆ. ಅವುಗಳಲ್ಲಿ ವರ್ಣಧರ್ಮಗಳು, ಆಶ್ರಮಧರ್ಮಗಳು, ವರ್ಣಾಶ್ರಮಧರ್ಮಗಳು, ಗುಣಧರ್ಮಗಳು ಮತ್ತು ನೈಮಿತ್ತಿಕಧರ್ಮಗಳು ವಿಶೇಷವಾದವು. ಸರ್ವಸಾಧಾರಣವಾಗಿರುವ ಎಂಟು ಧರ್ಮಪ್ರಕಾರಗಳನ್ನು ಬೃಹಸ್ಪತಿ ಋಷಿ ಹೀಗೆ ವಿವರಿಸಿದ್ದಾನೆ.

ದಯಾ ಕ್ಷಮಾನಸೂಯಾ ಚ ಶೌಚಾನಾಯಾಸಮಂಗಲಮ್ |

ಅಕಾರ್ಪಣ್ಯಮಸ್ಪೃಹತ್ವಂ ಸರ್ವಸಾಧಾರಣಾನಿ ಚ ||

1.     ದಯಾ - ನಮ್ಮ ಜೊತೆ ಬದುಕುತ್ತಿರುವವರನ್ನು ಆಪತ್ತಿನಿಂದ ರಕ್ಷಿಸುವುದು.

     2.     ಕ್ಷಮಾ – ತನಗೆ ಬಂದ ದುಃಖಕ್ಕೆ ಇತರರ ಮೇಲೆ ರೇಗದೇ ಇರುವುದು.

   3.     ಅನಸೂಯಾ – ಪರರ ಗುಣವನ್ನು ಗುರುತಿಸಿ, ದೋಷವನ್ನು ನುಂಗಿ ಕೊಳ್ಳುವುದು.

   4.     ಶೌಚಮ್ – ಭಕ್ಷ್ಯಾಭಕ್ಷ್ಯವಿವೇಚನೆ ಮಾಡಿ, ದುರಭ್ಯಾಸದಿಂದ ದೂರವಿರುವುದು.

    5.     ಅನಾಯಾಸಃ – ಶರೀರವನ್ನು ಅತಿಯಾಗಿ ಪೀಡಿಸದೇ ಶಿಸ್ತಿನಿಂದಿರುವುದು.

    6.     ಮಂಗಲಮ್ – ಕೇಡನ್ನು ಬಿಟ್ಟು ಒಳಿತಿನಿಂದ ಕೂಡಿದ ಆಚರಣೆ ಮಾಡುವುದು.

    7.     ಅಕಾರ್ಪಣ್ಯಮ್ – ಮನಃಪೂರ್ವಕವಾಗಿ ಅತ್ಯಲ್ಪವಾದರೂ ಉಪಕರಿಸುವುದು.

    8.     ಅಸ್ಪೃಹಾ – ಪರರ ವಸ್ತುವಿಗೆ ಆಸೆಪಡದೆ ತೃಪ್ತಿಯಿಂದಿರುವುದು.

ಇವುಗಳ ಆಚರಣೆಯಿಂದ ಈ ಜಗತ್ತಿನಲ್ಲಿ ಭಯೋತ್ಪಾದನೆಯೋ, ಪರಿಸರಹಾನಿಯೋ, ಅತಿಕ್ರಮಣವೋ, ಅತ್ಯಾಚಾರವೋ, ಅಸಮಾನತೆಯೋ, ಅನಾರೋಗ್ಯವೋ, ಅಸಹಿಷ್ಣುತೆಯೋ ಬಾರದಂತಾಗಿ ಸಮಾಜದ ಸರ್ವತೋಮುಖ ಹಿತವಾಗುವಲ್ಲಿ ಸಂಶಯವಿಲ್ಲ. ಹಾಗಾಗಿ ನಮ್ಮ ಪೂರ್ವಜರು ಸರ್ವಹಿತಕಾರಕವಾದ ಜಗದ ಧಾರಕ ತತ್ವವೇ ಧರ್ಮ. ಧಾರಣಾದ್ಧರ್ಮಮಿತ್ಯಾಹುಃ | ಎಂದು ಸಾರಿ ಹೇಳಿದ್ದಾರೆ. ಈ ತತ್ವವನ್ನೇ ನಮ್ಮ ಕಗ್ಗದ ಕವಿ ಗುಂಡಪ್ಪನವರು ಹೀಗೆ ತೋರಿದ್ದಾರೆ.

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ |

ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ||

ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ |

ಸಹಕರಿಪುದಲೆ ಧರ್ಮ ಮಂಕುತಿಮ್ಮ ||

ತಾನೊಬ್ಬನೇ ಬದುಕಬೇಕು. ಎನ್ನುವ ಧೋರಣೆಯುಳ್ಳವ ಸ್ವಾರ್ಥೀ. ಇತರರೇ ಬಾಳಲಿ. ಎಂಬ ಅತಿರೇಕದವ ಪರಾರ್ಥೀ. ತಾನು, ಮತ್ತುಳಿದಂತೆ ಯಾರೂ ಬಾಳುವುದು ಬೇಡವೆಂಬವ ದುಃಖಾರ್ಥೀ. ತಾನೂ ಬದುಕಿ, ಇತರರೂ ಬಾಳುವಂತೆ ಜೀವಿಸುವವನೇ ಧರ್ಮವನ್ನು ಅನುಸರಿಸುವವನು. ಅವನೇ ಧಾರ್ಮಿಕ. ಅಂಥ ಧಾರ್ಮಿಕರು ಇಡೀ ವಿಶ್ವದ ಬೆನ್ನೆಲುಬಾಗಿದ್ದಾರೆ.

ಅವರು ಸತ್ಯವನ್ನು ಎತ್ತಿಹಿಡಿದಿದ್ದಾರೆ. ಹಾಗಾಗಿ ನೀನು ಸತ್ಯವಂತನಾಗು. ಆಚಾರವಂತನಾಗು. ಎಲ್ಲರ ಹಿತದಲ್ಲಿ ನಿನ್ನ ಒಳಿತನ್ನು ನೋಡು. ಅದನ್ನೇ ಆಚರಿಸು. ಎಂದು ಗುರು ತನ್ನ ಶಿಷ್ಯನಿಗೆ ಗುಟ್ಟಿನಲ್ಲಿ ಗಟ್ಟಿಯಾದ ಧರ್ಮವನ್ನು ಮಾಡೆನ್ನುತ್ತಿದ್ದಾನೆ. ಬಾಳಿಗೆ ಭೂಷಣವಾದ ಈ ಧರ್ಮವೇ ನಮ್ಮ ಉಸಿರು. ಅದೇ ನಮ್ಮ ಪ್ರತಿಷ್ಠೆ.

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ |


ತಾ || ೮ ||

Thursday, December 29, 2022

ಮೌಲ್ಯ ಶಿಕ್ಷಣದ ಪ್ರಸ್ತುತತೆ...!

”ಶಿಕ್ಷಣ’ ಮಾಹಿತಿಗಳಿಂದ ಕೂಡಿರಬೇಕು...” ಎನ್ನುವುದು ಎಷ್ಟು ಮುಖ್ಯವೋ!  ಅದೇ ರೀತಿಯಲ್ಲಿ ಅದು ಮೌಲ್ಯಯುತವಾಗಿಯೂ ಇರಬೇಕು... ! ಎನ್ನುವುದೂ ಕೂಡ ತುಂಬಾ ಮುಖ್ಯವಾದ ಅಂಶವಾಗಿದೆ. ಇವತ್ತಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದಾಗ ಮೌಲ್ಯಯುತ ಶಿಕ್ಷಣದ ಕೊರತೆ ಎದ್ದು ಕಾಣಿಸುತ್ತಿದೆ. ಒಂದು ಕಾಲದಲ್ಲಿ ಎಲ್ಲರೂ (100%) ಶಿಕ್ಷಿತರಾದರೆ ಒಳ್ಳೆಯ ಬೆಳವಣಿಗೆಯಾದಂತೆ ಎಂಬ ನಂಬಿಕೆ ಬಲವಾಗಿ ಇತ್ತು. ಈಗ ಪರಿಸ್ಥಿತಿ ಬಿಗಡಾಯಿಸಿದೆ! ಶಿಕ್ಷಿತರು ಹೆಚ್ಚಿದಂತೆ, ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ! ಉದಾಹರಣೆಗೆ ಹಿಂದೆ ಅಶಿಕ್ಷಿತರಾದರೂ ಜನ ಮೌಲ್ಯಪ್ರಜ್ಞೆಯನ್ನು ರೂಢಿಸಿಕೊಂಡು ಕರ್ತವ್ಯದಲ್ಲಿ ಮತ್ತು ಮಾನವೀಯತೆಯಲ್ಲಿ ಬದುಕು ಮಾಡಿದರು.  ಅದೇ ಇವತ್ತು ಕರ್ತವ್ಯಕ್ಕಿಂತ - ಹಕ್ಕು ಪ್ರತಿಪಾದನೆಯಲ್ಲಿ ಮತ್ತು ಮಾನವೀಯತೆಗಿಂತ – ಕಾಗದಪತ್ರಗಳನ್ನು ಸಂಪಾದಿಸುವಲ್ಲಿ ಜನ ನಿರತರಾಗಿರುವುದು ಎದ್ದುಕಾಣಿಸುತ್ತಿದೆ. ಇದನ್ನು ಗಮನಿಸಿದಾಗ ಮೌಲ್ಯಯುತ ಶಿಕ್ಷಣವೇ ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಕಂಡುಬರುತ್ತದೆ.
ಒಂದು ದಿನ ಮನೆಯ ಮುಂದಿರುವ ಹಣತೆಯಲ್ಲಿ ಚಿಕ್ಕ ಜಗಳ ಪ್ರಾರಂಭವಾಯಿತು. 
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ! ಆ ಬೆಳಕು ನನ್ನದು ” ಎಂದು ಹೇಳಿತು. ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ. ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ! ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು...” ಎಂದಿತು. ಅಲ್ಲಿಯೇ ಇದ್ದ ಬತ್ತಿ ” ಊeಟಟo! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ. ಐogiಛಿಚಿಟಟಥಿ ಬೆಳಕು ನನ್ನದು “ ಎಂದಿತು. ಈ ಕಚ್ಚಾಟವನ್ನು ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯುವುದಿಲ್ಲ! ಒಂದು ವೇಳೆ ನಾನು ಜೋರಾಗಿ ಬಂದರೆ ದೀಪ ಆರಿಹೋಗುತ್ತದೆ. ಆದ್ದರಿಂದ ಬೆಳಕು ನನ್ನ ನಿಯಂತ್ರಣದಲ್ಲಿದೆ ” ಎಂದು ವಾದಿಸಿತು. ಈ ವಾದ ವಿವಾದಗಳ ಭರಾಟೆಯಲ್ಲಿ ಹಣತೆ ಒಡೆದು ಹೋಯಿತು. 
ಎಣ್ಣೆ ಹರಿದು ಹೋಯಿತು. 
ಬತ್ತಿ ಒಂಟಿಯಾಗಿ ಸೊರಗಿ ಹೋಯಿತು. 
ಗಾಳಿ ಜೋರಾಗಿ ಬೀಸಿ, ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ, ಆ ಭರವಸೆಯ ಬೆಳಕು ಮನೆಯಲ್ಲೆಲ್ಲಾ ಪಸರಿಸಿರುತ್ತಿತ್ತು. ” ಅಹಮಿಕೆಯಿಂದ ಅಂಧಕಾರವೆಂಬುದು ಮನೆಯನ್ನು ಹೊಕ್ಕಿತು... 
ಇಂಥ ಒಂದು ಕಥೆ ಮನುಷ್ಯನ ಕಣ್ಣನ್ನು ಅದೆಷ್ಟು ಬಾರಿ ತೆರಿಸಿದೆಯೋ??? ಅದಕ್ಕೆ ನಾವು ಚಿರ ಋಣಿಗಳು... ಇಂಥ ಕಥೆಗಳು ಜನರ ಒಳ್ಳೆಯ ವರ್ತನೆಗೆ ಮತ್ತು ಮೌಲ್ಯಯುತ ಬದುಕಿಗೆ ತುಂಬಾ ಸಹಕಾರಿಗಳಾಗಿವೆ.
ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ ಸುಖ-ಶಾಂತಿಗಳಿಲ್ಲದೆ ಹಲವು ಸಮಸ್ಯೆಗಳನ್ನು  ಎದುರಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಡಾ|| ರಾಧಾಕೃಷ್ಣನ್ ಹೇಳುವಂತೆ “ಮಾನವ ಹಕ್ಕಿಯಂತೆ ಹಾರಾಡುವುದನ್ನು, ಮೀನಿನಂತೆ ಈಜುವುದನ್ನು ಕಲಿತ. ಆದರೆ...! ಮಾನವನಾಗಿ ಬಾಳುವುದನ್ನು ಮಾತ್ರ ಕಲಿಯಲಿಲ್ಲ!” ಅಂದರೆ, ಮಾನವನಾಗಿ ಬಾಳಲು ಇರಬೇಕಾದ ಮಾನವೀಯ ಮೌಲ್ಯಗಳು ಮಕ್ಕಳಲ್ಲಿ ಕ್ಷೀಣಿಸುತ್ತಿರುವುದನ್ನ ಇವತ್ತು ನಾವು ಗಮನಿಸಲೇ ಬೇಕಾಗಿದೆ.
ಮಾನವ ಇಂದು ವೈಜ್ಞಾನಿಕವಾಗಿ ಪ್ರಗತಿ ಹೊಂದಿದ್ದರೂ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕುಟುಂಬ, ಶಾಲೆ ಸ್ನೇಹಿತರು, ಸಮಾಜ, ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಇಂದು ಕುಟುಂಬಗಳು ಅರ್ಥಲೋಲುಪತೆ ಹಾಗೂ ಅತಿಯಾದ ಮಹತ್ವಾಂಕಾಂಕ್ಷೆಗಳಿಂದಾಗಿ ತನ್ನ ನೈಜ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ವಿಫಲಗೊಂಡಿವೆ. ಹಾಗಾಗಿ ಈ ಜವಾಬ್ದಾರಿಯನ್ನು ಸಮಾಜದ ಮುಖ್ಯ ಕೇಂದ್ರವಾದ ಶಾಲೆ ಅಥವಾ ಶಿಕ್ಷಣ ಕೇಂದ್ರಗಳು ಪೂರೈಸಬೇಕಾಗಿದೆ. ಅದು ಶಿಕ್ಷಣದ ಪ್ರಧಾನ ಗುರಿಯೂ ಆಗಿದೆಯಲ್ಲವೇ? ಗಾಂಧೀಜಿಯವರು - “ಶೀಲ ಸಂವರ್ಧನೆ, ವ್ಯಕ್ತಿಯಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸುವಲ್ಲಿ ಶಿಕ್ಷಣ ಕೇಂದ್ರಗಳು ಯಶಸ್ವಿಯಾದರೆ, ಸಮಾಜವು ತನ್ನಿಂದ ತಾನೇ ಸುಧಾರಿಸುತ್ತದೆ, ಎಂದು ಭಾವಿಸುತ್ತೇನೆ” ಎಂದು ಹೇಳುವುದರ ಮುಖೇನ ಶೈಕ್ಷಣಿಕವಾದ ಮಹತ್ವವನ್ನು ಎತ್ತಿ ಸಾರಿದ್ದಾರೆ.
ಶಿಕ್ಷಕನೆಂಬ ಶಿಲ್ಪಿಯ ಗುರಿ ಎಂದರೆ, ವಿದ್ಯಾರ್ಥಿಗಳ ಶರೀರ ಬೆಳೆಸುವುದಲ್ಲ! ಅಥವಾ ಕೇವಲ ಜ್ಞಾನ (ಮಾಹಿತಿಗಳನ್ನು) ತುಂಬುವುದಲ್ಲ! ಬದಲಿಗೆ, ಶುದ್ಧವೂ ಮೌಲ್ಯಯುತವೂ ಆದ ಮನೋಬಲವನ್ನು ರೂಪಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಸಂವರ್ಧಿಸುವುದು.  ನೈತಿಕ ಮೌಲ್ಯವು ವಿದ್ಯಾರ್ಥಿಗಳ ಜೀವನದ ರೂಪುರೇಷೆಯನ್ನೇ ಬದಲಿಸುತ್ತದೆ. ಹೀಗಾಗಿಯೇ ಮೌಲ್ಯರಹಿತ ಶಿಕ್ಷಣಕ್ಕೆ ಯಾವುದೇ ಅರ್ಥವಿರುವುದಿಲ್ಲ. ಮೌಲ್ಯವರ್ಧನೆ ಎಂದರೆ, ಮಕ್ಕಳಲ್ಲಿ ನೈತಿಕ ಸದ್ಗುಣಗಳಾದ ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಅಹಿಂಸೆ, ಸಹಕಾರ  ಇವೇ ಮೊದಲಾದ ಗುಣಗಳ ಜೊತೆಗೆ ರಾಷ್ಟ್ರೀಯತೆ ಮತ್ತು ದೇಶಾಭಿಮಾನವನ್ನೂ ಬೆಳೆಸುವುದಾಗಿದೆ. ಮಕ್ಕಳಲ್ಲಿ ಅಥವಾ ವಿದ್ಯಾರ್ಥಿಗಳಲ್ಲಿ ಈ ಮೌಲ್ಯಗಳನ್ನು ತುಂಬದಿದ್ದರೆ, ತತ್ಪರಿಣಾಮವಾಗಿ ಒತ್ತಡವೇ (ಟೆನ್ಶನ್) ಎಲ್ಲೆಡೆ ಕಾಣುವಂತಾಗುತ್ತದೆ. ಅದರಿಂದ ಒಬ್ಬರು ಮತ್ತೊಬ್ಬರಿಗೆ ಒತ್ತಡವನ್ನು ವರ್ಗಾಯಿಸುತ್ತ ಬದುಕಬೇಕಾಗುತ್ತದೆ. ಮೌಲ್ಯರಹಿತ ಶಿಕ್ಷಣದಿಂದ ಒತ್ತಡಗಳನ್ನು ಒಬ್ಬ ಇನ್ನೊಬ್ಬನಿಗೆ ವರ್ಗಾಯಿಸುವುದನ್ನೇ ಕಾಯಕವಾಗಿಸಿ ಕೊಂಡಿರುವುದು ಸಮಾಜದ ಎಲ್ಲ ಕಡೆಗಳಲ್ಲಿ ಕಾಣುವಂತಾಗಿದೆ. ಇವತ್ತಿನ ಓಡುವ ಜಗತ್ತಿನ ಅರ್ಥದಾತುರದ ಜನರನ್ನೂ, ರೋಗದಿಂದ ಬಳಲಿ ಬೆಂಡಾದ ಒತ್ತಡದ ಬಲಿಪಶುಗಳನ್ನೂ, ಹಕ್ಕಿಗಾಗಿ ಅಥವಾ ತನ್ನ ಸ್ವಾರ್ಥಕ್ಕಾಗಿ ಅಂಡಲೆಯುವ ಮಾನವರಂತಿರುವ ಯಂತ್ರಗಳನ್ನೂ ಎಲ್ಲೆಂದರಲ್ಲಿ ನೋಡುತ್ತಿದ್ದೇವೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಮೌಲ್ಯವರ್ಧನೆಗೊಳಿಸುವ ಕಾರ್ಯ ಚುರುಕುಗೊಳ್ಳಬೇಕಾಗಿದೆ. ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳು ಹಣಗಳಿಕೆಯ ಮಿಕಗಳಾಗುತ್ತಿರುವುದು ಪ್ರಜ್ಞಾವಂತ ನಾಗರೀಕರೆಲ್ಲರಿಗೂ ಚಿಂತಾಜನಕ ವಿಷಯವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ.
ಶಿಕ್ಷಣ ನೀಡಿಕೆ ನಿಜಕ್ಕೂ ಪವಿತ್ರ ಕಾರ್ಯ. ನಿಸ್ವಾರ್ಥತೆಯಿಂದ ಶಿಕ್ಷಣ ನೀಡಿದಷ್ಟು ಉತ್ತಮ ಫಲ ದೊರೆಯುತ್ತದೆ. ಶಿಕ್ಷಣವಿಲ್ಲದಿದ್ದರೆ, ನೈತಿಕ ಪ್ರಜ್ಞೆ ಇಲ್ಲದಿದ್ದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಬೆಲೆಯಿಲ್ಲ!. ವ್ಯಕ್ತಿತ್ವವಿಲ್ಲದೆ ಸಮಾಜದಲ್ಲಿ ಮನ್ನಣೆ ಇಲ್ಲ. ಮನ್ನಣೆಗಾಗಿಯಾದರೂ ನೈತಿಕ ಮೌಲ್ಯಗಳ ಜ್ಞಾನಾರ್ಜನೆ ಅತ್ಯಗತ್ಯ. ಮಕ್ಕಳ ಅಥವಾ ವಿದ್ಯಾರ್ಥಿಗಳ ಮನೋಬಲ ಮತ್ತು ಬೌದ್ದಿಕ ವಿಕಾಸಕ್ಕೆ ಕಲಿಕೆ ವರವಾಗಿ ಪರಿಣಮಿಸಬೇಕು ಎಂದಾದರೆ, ಶಿಕ್ಷಣ ಕೇಂದ್ರಗಳು ಮೌಲ್ಯಯುತ ಶಿಕ್ಷಣ ನೀಡುವುದರೆಡೆಗೆ ಹೆಜ್ಜೆ ಹಾಕಲೇಬೇಕು. ಸ್ವಾಮಿ ವಿವೇಕಾನಂದರು “ಈಗಾಗಲೇ ಮಗುವಿನ ಅಂತರಂಗದಲ್ಲಿ ಹುದುಗಿರುವ ಪರಿಪೂರ್ಣತೆಯನ್ನು, ದೈವತ್ವವನ್ನು ಹೊರತರುವುದೇ ಶಿಕ್ಷಣ.” ಎಂದು ಶಿಕ್ಷಣದ ಮಹತ್ವವನ್ನು ವರ್ಣಿಸಿದ್ದಾರೆ. ಈ ಹಾದಿಯಲ್ಲಿ ಶಿಕ್ಷಣ ಸಂಸ್ಥೆಗಳು ಸಾಗಿದರೆ ಸಾಮಾಜಿಕರಲ್ಲಿ ಮೌಲ್ಯವರ್ಧನೆ ಖಂಡಿತ ಸಾಧ್ಯ. ಗೀತೆಯಲ್ಲಿ ಶ್ರೀಕೃಷ್ಣ "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" - ಕ್ಷುದ್ರವಾದ ಮನೋದೌರ್ಬಲ್ಯವನ್ನು ಕಿತ್ತೊಗೆದು ಮೇಲೆದ್ದು ನಿಲ್ಲು...! ಎಂದು ಅರ್ಜುನನನ್ನು ಉತ್ತೇಜಿಸುತ್ತಾನೆ. ಅದರಂತೆ ಈ ಮಹತ್ಕಾರ್ಯಕ್ಕೆ ನಾವೆಲ್ಲ ಕಟಿಬದ್ಧರಾಗಿ ನಿಲ್ಲೋಣ! ಆಗುತ್ತದೋ? ಇಲ್ಲವೋ? ಎಂಬ ಹೊಯ್ದಾಟವನ್ನು ದೂರಮಾಡಿ,  ನಿಶ್ಚಯ ಬುದ್ಧಿಯನ್ನು ಗಳಿಸೋಣ. ಮಾಹಿತಿ ಪ್ರಪಂಚದಿಂದ ಮೌಲ್ಯಯುತ ಪ್ರಪಂಚವನ್ನು ನಮ್ಮ ಮುಂದಿನ ಪ್ರಜೆಗಳಿಗೆ (ತಲೆಮಾರಿನ ಜನರಿಗೆ) ಪರಿಚಯಿಸೋಣ...

Saturday, October 15, 2022

ದೇವಮಾನವ!

ಮನುಷ್ಯ ದೇವನಾಗಲು ಅನಾದಿ ಕಾಲದಿಂದಲೂ ಪ್ರಯತ್ನಿಸುತ್ತಿದ್ದಾನೆ! ಅದಕ್ಕೆ ವೇದಾಗಮತಂತ್ರಶಾಸ್ತ್ರಗಳಲ್ಲಿ ಹಲವು ನಿದರ್ಶನಗಳು ದೊರೆಯುತ್ತವೆ.
೧) ದೇವೋ ಭೂತ್ವಾ , ದೇವಂ ಯಜೇತ | ಎಂದು ಮಂತ್ರಶಾಸ್ತ್ರದಲ್ಲೂ, ಅವುಗಳ ಪ್ರಯೋಗಗಳಲ್ಲೂ  ಪ್ರಾರಂಭದಲ್ಲೇ ಬರುತ್ತದೆ. ಪರಿಣಾಮವಾಗಿ ಕರನ್ಯಾಸ, ಹೃದಯಾದಿನ್ಯಾಸ ಹೀಗೆ ನ್ಯಾಸ ವಿನ್ಯಾಸಗಳು ವಿಹಿತವಾಗಿವೆ. ಮುಂದೆ ಇವು ವಿಸ್ತರಣೆ ಹೊಂದಿ ಮಹಾನ್ಯಾಸಗಳಾಗಿ ರೂಪುಗೊಂಡಿದ್ದನ್ನೂ ನೋಡುತ್ತೇವೆ. 
೨) ಮಂಡಲೇ ಕರ್ಮಣಾಂ ಸಾಕ್ಷೀ ಕಲಶೇ ಯಜ್ಞರಕ್ಷಕಃ |
ಹೋಮಾಧಿಕರಣಂ ವಹ್ನೌ ಶಿಷ್ಯೇ ಪಾಶವಿಮೋಚಕಃ || ಎಂದು ತಂತ್ರಾಗಮಗಳು ಒತ್ತಿ ಹೇಳಿದ್ದರಿಂದ ಇವುಗಳಲ್ಲಿ ದೇವನನ್ನು ಅರ್ಚಿಸಿ, ಕೊನೆಗೆ ಬ್ರಾಹ್ಮಣ-ಸುಹಾಸಿನೀ-ಕುಮಾರಿಯರಲ್ಲಿ ದೇವನನ್ನು ಆವಾಹಿಸಿ, ಪೂಜಿಸುವುದನ್ನು ಶಾಸ್ತ್ರವೇ ವಿಧಿಸಿದೆ! ಶ್ರೇಯಸ್ಸಿಗಾಗಿ ಇವರಲ್ಲಿ(ಜೀವರಲ್ಲಿ) ದೇವರ ಆವಾಹನೆ ಅನಿವಾರ್ಯವಾಗಿರುವುದು ಕಂಡುಬರುತ್ತದೆ.
೩) ಪರಾರ್ಥವಾಗಿಯೂ, ಆತ್ಮಾರ್ಥವಾಗಿಯೂ ಸಾರ್ಥಕವೆನಿಸಿದ ಪೂಜೆಯನ್ನು ಕೈಗೊಳ್ಳುವಾಗ ಪೂಜಕನ ಮನಸ್ಸು “ದೇವಾ! ನಾನು ನಿನ್ನ ದಾಸ!” ಎನ್ನುವ ದ್ವೈತ ಭಾವನೆಯಿಂದಲೂ; “ನಾನು ಅದು!” ಎಂಬ ವಿಶಿಷ್ಟಾದ್ವೈತ ಭಾವನೆಯಿಂದಲೂ; ಇನ್ನು ಮೂರನೆಯ ಹಂತವಾದ “ನಾನು ನೀನು ಬೇರೆಯಲ್ಲವೆಂಬುದಾಗಿ” ಅದ್ವೈತ ಭಾವನೆಯಿಂದಲೂ ತುಂಬಿಕೊಂಡಿರುತ್ತದೆ.  ದಾಸೋಽಹಮ್ | ತತ್ವಮಸಿ | ಸೋಽಹಮ್ | ಹೀಗೆ ಇವು ಮೂರೂ  ಭಾವಗಳೂ ದೇವತಾರ್ಚನೆಯ ಫಲವಾಗಿವೆ.
೪) ಹೀಗೆ ಸಾಂಖ್ಯವು ಭಾವ ಸಂಗಮವನ್ನು ಸಾರಿ ಹೇಳಿದರೆ, ಸಂಖ್ಯಾ ಶಾಸ್ತ್ರವೇನೂ ಹಿಂದೆಯಿಲ್ಲ! ಸಂಖ್ಯಾ ಶಾಸ್ತ್ರಜ್ಞರು ಬೆಸ ಸಂಖ್ಯೆಗಳು {೧, ೩, ೫,...} ದೇವನನ್ನೂ; ಸಮ ಸಂಖ್ಯೆಗಳು {೨, ೪, ೬,...} ಜೀವನನ್ನೂ ಪ್ರತಿನಿಧಿಸುತ್ತವೆ! ಎನ್ನುತ್ತಾ.... ಇದಕ್ಕೆ ವೈದಿಕ ಮೂಲವನ್ನೂ ಪ್ರತಿಪಾದಿಸುತ್ತಾರೆ. ಯಾವುದೇ ಎರಡು ದೇವ ಅಥವಾ ಜೀವ(ಮಾನವ) ಸಂಖ್ಯೆಗಳು ಸೇರಿದಾಗ ಗಮನಕ್ಕೆ ಬರುವ ಅಂಶವೆಂದರೆ, ದೇವ ಮಾತ್ರ ಮನುಷ್ಯನನ್ನೂ, ದೇವನನ್ನೂ ಹೀಗೆ ಎರಡನ್ನೂ ಸೃಜಿಸಬಲ್ಲ! ಆದರೆ ಮನುಷ್ಯ ದೇವನನ್ನು ಸೃಜಿಸಲಾರ! ಹೀಗಿರುವಾಗ ಜೀವ ತಾನು ತನ್ನ ಸಂಖ್ಯೆಯನ್ನು ಅರಿತು, ಅದರಿಂದ ಭಾಗಿಸಿ ಕೊಂಡರೆ (ನಿಃಶೇಷನಾದರೆ) ಮಾತ್ರ ಇದು ಸಾಧ್ಯ! ಎನ್ನುತ್ತದೆ ಸಂಖ್ಯಾ ಶಾಸ್ತ್ರ. 
೫) ಇವರನ್ನು ದೇವರೆಂದು ಭಾವಿಸಿ.... ಎಂಬುದಾಗಿ ಭಾವ ಪ್ರಬೋಧಕ ಶಾಸ್ತ್ರಗಳೂ ಬಹಳಷ್ಟು ಇವೆ. ಮುಖ್ಯವಾಗಿ ಮಾತೃದೇವೋ ಭವ | ಪಿತೃದೇವೋ ಭವ | ಆಚಾರ್ಯದೇವೋ ಭವ | ಅತಿಥಿದೇವೋ ಭವ | ಎಂಬುದಾಗಿ ಕಾಣಸಿಗುತ್ತವೆ.
ಹೀಗೆ ಸಂಸ್ಕೃತಿಯ ಅಡಿಪಾಯವನ್ನು ಭಾವ ಕೇಂದ್ರದ ಮೇಲೆ ನಿರ್ಮಿಸಿ, ಸ್ವಭಾವವನ್ನು ದೇವ ಭಾವದಲ್ಲಿ ನೆಲೆಯಾಗಿಸುವ ಪ್ರಯತ್ನವೇ ಎಲ್ಲೆಲ್ಲೂ ಕಂಡು ಬರುತ್ತದೆ. ಅದೇ ಶ್ರದ್ಧೆ.... ಅದೇ ಆಚಾರ.... ಅದೇ ಆರಾಧನೆ....
ಈ ಮೇಲಿನ ಎಲ್ಲ ವಿಚಾರಗಳಿಗೆ ಪ್ರತಿಧ್ವನಿಯಾಗಿ ಅಥವಾ ಪ್ರತಿಸ್ಪಂದಿಯಾಗಿ `ಕಾಂತಾರ` ಮಧ್ಯದ ದೈವಾರಾಧನೆಗಳು ನಿಲ್ಲುವವೇ? ಎಂಬುದನ್ನು ವಿಮರ್ಶಿಸ ಬೇಕಾಗಿದೆ....

Wednesday, August 17, 2022

ನವಭಾರತನಿರ್ಮಾಣೇ ಯುವಕಾನಾಂ ಪಾತ್ರತಾ

ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ |

ಕ್ಷುದ್ರಂ ಹೃದಯದೌರ್ಬಲ್ಯಂ "ತ್ಯಕ್ತ್ವೋತ್ತಿಷ್ಠ ಪರಂ ತಪ" || 

ಆದೌ ಗೀತಾಚಾರ್ಯೇಣ ಶ್ರೀಕೃಷ್ಣೇನ ಶ್ರೀಮದ್ಭಗವದ್ಗೀತಾಯಾಂ ಯದುಕ್ತಂ ತತ್ಸ್ಮರಾಮಿ |

ಅಯಿ! ಮಾನ್ಯಾಃ, ಸಭ್ಯಾಃ, ಸಭಾಸದಃ!

     ಅಸ್ಮಾಕಂ ಭಾರತದೇಶಸ್ಯ ಪುನರುತ್ಥಾನಂ ಕೇವಲೇನ ಉಪರಿತನ ಶ್ಲೋಕೇನೈವ ಸಿದ್ಧ್ಯತಿ | ಕಿಂ ಬಹುನಾ "ತ್ಯಕ್ತ್ವೋತ್ತಿಷ್ಠ ಪರಂ ತಪ" ಇತ್ಯೇಭಿಃ ಚತುರ್ಭಿಃ ಪದೈರಪಿ ರಾಷ್ಟ್ರೋತ್ಥಾನಂ ಭವಿತುಮರ್ಹತಿ | ಇತಿ ಸ್ವಾಮೀ ವಿವೇಕಾನಂದಃ ವದತಿ ಸ್ಮ | ಅದ್ಯ ಭಾರತರಾಷ್ಟ್ರಸ್ಯ ಪುನರುತ್ಥಾನಂ ಅಥವಾ ನವಭಾರತನಿರ್ಮಾಣಂ ಆವಶ್ಯಕಂ ವಾ? ಯದಿ ಆವಶ್ಯಕಂ, ತರ್ಹಿ ತತ್ರ ಕೇ ಮುಖ್ಯಂ ಪಾತ್ರಂ ವಹಂತಿ? ಇತಿ ವಿವೇಚಯಾಮಃ ||

   ಶಾಸ್ತ್ರೇತಿಹಾಸ-ಪುರಾಣ-ಕಾವ್ಯಾದಿಭ್ಯೋ ಅತೀತಸ್ಯ ಭಾರತಸ್ಯ ತದುತ್ಥಾನಮವಲೋಕ್ಯ, ಅದ್ಯತನಸ್ಯ ಭಾರತಸ್ಯ ಏತಾದೃಶಂ ಶೋಚನೀಯಂ ಪತನಂ ವೀಕ್ಷ್ಯ, ಈದೃಗ್ಭಾರತೀಯೋ ಯೋ ನಾತಿತರಾಂ ದೂಯತೇ? ಅದ್ಯ ತು ಅಸ್ಯಾಂ ವಸಿಷ್ಠ-ಜನಕ-ರಾಮ-ಕೃಷ್ಣಾರ್ಜುನಾದೀನಾಂ ಪವಿತ್ರಾಯಾಂ ಭರತವಸುಧಾಯಾಂ ದಾರಾಃ ಅಪಹ್ರಿಯಂತೇ, ಮರ್ಯಾದಾಃ ನಿಪಾತ್ಯಂತೇ, ಆಚಾರಾಃ ವಿಲೋಪ್ಯಂತೇ! ಸಂಪ್ರತಿ ತು ಅಸ್ಮಿನ್ ದೇಶೇ ನಗರೇ ನಗರೇ ಗ್ರಾಮೇ ಗ್ರಾಮೇ ಗೇಹೇ ಗೇಹೇ ಪ್ರವಂಚನಪಟವೋ ದುರಾಚರಣಪ್ರಿಯಾ ಏವ ಪುರುಷಾಃ ಪ್ರಾಪ್ಯಂತೇ!

     ಯದ್ಯಪಿ ಭಾರತಂ ತದೇವ ವರ್ತತೇ ; ಏವ ಹಿಮಾಲಯ ಇಹ ತಿಷ್ಠತಿ ; ಸೈವ ಗಂಗಾತ್ರ ಪ್ರವಹತಿ ; ಸೈವ ಭೂಮಿರಿಹ ವಿದ್ಯತೇ ; ಪರಂ ಮಾನವೇಷು ಮಾನವತಾ, ಮಹಿಲಾಸು ಸಂಸ್ಕೃತ್ಯಾಂ ನಿಷ್ಠಾ, ಬಂಧುಷು ಬಂಧುತ್ವಂ, ಮಿತ್ರೇಷು ಮಿತ್ರತ್ವಂ, ಧನವತ್ಸು ದೀನ-ದರಿದ್ರಭರಣಭಾವಃ, ಶಾಸನಕಾರಿಷು ಜನವಾತ್ಸಲ್ಯಂ ಪ್ರಾಯೇಣ ಸಂಲಕ್ಷ್ಯತೇ !

     ಯದಾ ಪ್ರಭೃತ್ಯೇವ ಜಗದಂಬಾನುಕಂಪಯಾ ಭಾರತೇನ ಸ್ವಾತಂತ್ರ್ಯಂ ಸಮವಾಪ್ತಂ ತದಾ ಪ್ರಭೃತ್ಯೇವ ದೇಶಮಪಕರ್ತುಂ ಸಹಸ್ರೇಭ್ಯೋಪ್ಯಧಿಕಾಃ ಸ್ವಾರ್ಥಭಾವಾಃ ಯುಗಪದೇವ ಭಾರತ-ಧರಾಂ ಆವೃಣ್ವಂತೋ ದೃಗ್ಗೋಚರೀ ಭವಂತಿ | ಅತಃ ಸಿದ್ಧಂ "ಅಸ್ಯ ಭಾರತರಾಷ್ಟ್ರಸ್ಯ ಪುನರುತ್ಥಾನಂ ಅಥವಾ ನವಭಾರತನಿರ್ಮಾಣಂ ಆವಶ್ಯಕಂ" ಇತಿ | ತರ್ಹಿ ತತ್ರ ಕೇ ಮುಖ್ಯಂ ಪಾತ್ರಂ ವಹಂತಿ? ಇತಿ ಚೇತ್ 'ಸರ್ವೇಪಿ ಭಾರತೀಯಾಃ' ಇತಿ ಪ್ರಥಮತಯಾ ವದಾಮಃ | ಪರಮತ್ರ ದುರ್ಬಲ ಹೃದಯಾಃ ಬಾಲಾಃ, ಜರಾ-ವ್ಯಾಧಿಗ್ರಸ್ತಾಃ ಪುರುಷಾಶ್ಚ ವಿಚಾರಯಂತಿ ಬಹುತರಂ; ನಾಚರಂತಿ ಕಿಂಚನ! ತೇಷಾಂ ಪ್ರಕೃತಿರೇವ ಈದೃಶೀ ಭವತಿ! ಅಸ್ತು ನಾಮ! ಪರಂ, "ಯೇ ಭಾರತೀಯಾಃ ಯಶಸಾ ವಯಸಾ ಕೀರ್ತ್ಯಾ ಸಮೇತಾಃ ತೇ ಅತ್ರ ನವಭಾರತನಿರ್ಮಾಣೇ ಸಮರ್ಥಾಃ ಭವಂತಿ | ಯೇ ಮನಸ್ವಿನಃ ಸತ್ವಯುತಾಃ ಸೋತ್ಸಾಹಂ ಸನ್ನದ್ಧಾಃ ಸಾಹಸಸ್ಯಾಗ್ರೇ ಗಚ್ಚಂತಿ | ಏವ ಯುವಕಾಃ ಅತ್ರ ನವಭಾರತನಿರ್ಮಾಣೇ ಪ್ರಮುಖಂ ಪಾತ್ರಂ ವಹಂತಿ" ಇತಿ ನಿಶ್ಚಪ್ರಚಮ್ ||

     ಇದಾನೀಂ ಯುವಕಾಃ ಬಹುಷು ಕ್ಷೇತ್ರೇಷು ಕೃತಭೂರಿಪರಿಶ್ರಮಾಃ ವಿಜ್ಞಾನೇ ತಥಾ ನೈಕ-ತಾಂತ್ರಿಕವಿಷಯೇ ಗತಕೌಶಲಾಃ ದರೀದೃಶ್ಯಂತೇ | ತೇ ಇತೋಪ್ಯತಿಶಯೇನ ಪ್ರೋತ್ಸಾಹಮರ್ಹಂತಿ | ಸಂಪ್ರತಿ ಭಾರತಸ್ಯ ಕೃತೇ ಸಚ್ಚರಿತ್ರಾಣಾಂ ವಿಶಾಲಹೃದಯಾನಾಂ ಉಚ್ಚವಿಚಾರವಿಭೂಷಿತಾನಾಂ ತರುಣಾನಾಮಪೇಕ್ಷಾ ವರ್ತತೇ | ಯೇನ ಪುನಃ ಸರ್ವಮಪಿ ಸುಖೇನ ಶಾಂತ್ಯಾ ಶ್ವಾಸಮಾದಾತುಂ ಶಕ್ನುಯಾತ್ | ಭಾರತೀಯತಾ ಪುನರಪಿ ಜಾಗೃಯಾತ್ ; ಭೂಯಶ್ಚ ಭಾರತಂ ಸ್ವೀಯಮತೀತಂ ಮಹಿಮಾನಂ ಗರಿಮಾಣಂ ಸಮವಾಪ್ನುಯಾತ್ || ಅತಃ ಯಶಸಾ ವಯಸಾ ಕೀರ್ತ್ಯಾ ಸಮೇತಾನ್ ಭಾರತೀಯಯುವಕಾನ್ "ತ್ಯಕ್ತ್ವೋತ್ತಿಷ್ಠ ಪರಂ ತಪ" ಇತಿ ಪುನರುದ್ಬೋಧ್ಯ, ಸಂಸ್ತೂಯತೇ ಮಯಾ ||

ಸರ್ವೇಪಿ ಸುಖಿನಃ ಸಂತು ಸರ್ವೇ ಸಂತು ನಿರಾಮಯಾಃ |

ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖಭಾಗ್ಭವೇತ್ ||

                         ಅಥವಾ

ಯಾ ಮೇ ಮಾತಾ ಸಕಲಸುಖದಂ ರಾಮರಾಜ್ಯಂ ಹ್ಯಭುಂಕ್ತ |

ಯಾ ಮೇ ಮಾತಾ ಸುಕೃತಸುಭಗಂ ಧರ್ಮರಾಜ್ಯಂ ದದರ್ಶ ||

ಯಾ ಮೇ ಮಾತಾ ಹ್ಯಧಿಗತವತೀ ಸತ್ಯನೀತ್ಯಾ ಸ್ವರಾಜ್ಯಂ |

ಸಾ ಭೂಯಾನ್ಮೇ ವಿಮಲಚರಿತಾ ಜನ್ಮಭೂಮಿರ್ಜಗತ್ಯಾಮ್ ||

                   ಇತಿ ಶಮ್ ||

                                                                                                           ಪರಮೇಶ್ವರ - ಪುಟ್ಟನ್ಮನೆ