Thursday, April 24, 2014

Adi Shankara Shaka 1500

ಆದಿ ಶಂಕರ ಶಕ (೧೫೦೦)
ತಿಂಗಳು ಬೆಳಕಲ್ಲಿ ಕಣ್-ಬಿಟ್ಟ ಮಗುವಿಗೆ ಚಂದ್ರಮ ಚಂದಮಾಮ.
ಕಂಬನಿ ಕೊಳದಲ್ಲಿ ಮುಳುಗಿದ ಜೀವಕೆ ಶಾರೀರ ಭಾಷ್ಯಧಾಮ!
        ಸಣ್ಣ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡಿದ್ದ ಬಾಲಕನಿಗೆ ಅಮ್ಮನೊಬ್ಬಳೇ ಆಸರೆಯಾಗಿದ್ದಳು. ಅಮ್ಮನಿಗೆ ಮಗನೇ ಎಲ್ಲಾ, ಮಗನನ್ನು ಬಿಟ್ಟು ಜಗವೇ ಇರಲಿಲ್ಲ. ಎಳೆಯಬಾಲಕ ಅಮ್ಮನನ್ನೇ ಆರೈಕೆಮಾಡುವಷ್ಟು ಪ್ರಬುದ್ಧನಿದ್ದ! ಒಂದು ವಿಶಿಷ್ಟ ಸಂಕಲ್ಪದಿಂದ ಕೂಡಿದ್ದ ಈ ಬಾಲಕ ಲೋಕವನ್ನು ಏಕವಾಗಿ ಅವಲೋಕಿಸಿ, ತಪಸ್ಸಿಗೆ(ಸಾಧನೆಗೆ) ಹೊರಟು ನಿಂತ! ತಾಯಿ ಆರ್ಯಾಂಬೆಯ ಮನವೊಲಿಸಿ ಜ್ಞಾನವನ್ನೇ ಹಂಬಲಿಸಿದ. ಗುರು ಗೋವಿಂದರ ಸೇವೆಯಿಂದ ಜ್ಞಾನವನ್ನು ತುಂಬಿಕೊಂಡ. ತನ್ನ ಒಂಭತ್ತನೇ ವಯಸ್ಸಿಗೆ ಸಂನ್ಯಾಸಿಯಾದ. ಉತ್ತಮ ಸಮಾಜದ ಪುನರ್ನಿರ್ಮಾಣಕ್ಕಾಗಿ ಸನಾತನ ವೈದಿಕ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿದ. ದೇಶಾದ್ಯಂತ ಸಂಚರಿಸಿ, ಜನರಿಗೆ ಅರಿವನ್ನುಣಿಸಿದ. ಸುರಿವ ಮಳೆ, ಸುಡುವ ಬಿಸಿಲು, ಬಿಡದೆ ಕೊರೆವ ಚಳಿಯ ನಡುವೆ ಕಾಷಾಯವಸ್ತ್ರವನ್ನುಟ್ಟು, ದಂಡ-ಕಮಂಡಲು ಪಿಡಿದು, ಮೂರಾವರ್ತಿ ಈ ಅಖಂಡ ಭಾರತವನ್ನು ಸಂಚರಿಸಿದ. ನಡೆಯುತ್ತಾ ನಡೆಯುತ್ತಾ ಶೃಂಗೇರಿಗೆ ಬಂದ ಬಾಲ ಸಂನ್ಯಾಸಿಗೆ, ಪ್ರಸವವೇದನೆಯ ಕಪ್ಪೆ ಮತ್ತು ಅದಕ್ಕೆ ನೆರವಾಗಿ ಹೆಡೆಯೆತ್ತಿ ನಿಂತ ಹಾವಿನ ಅಹಿಂಸಾ ಮನೋಧರ್ಮ ಚಕಿತಗೊಳಿಸಿತು! ಅದು ಮಹರ್ಷಿಗಳಾದ ವಿಭಾಂಡಕ ಮತ್ತು ಋಷ್ಯಶೃಂಗರ ದಿವ್ಯ ನೆಲೆವೀಡು ಎಂಬುದು ತಿಳಿಯಿತು. ಅಂತೆಯೇ ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವನ್ನು ಸ್ಥಾಪಿಸಿದ. ಆ ಬಾಲ ಸಂನ್ಯಾಸಿಯೇ ಆದಿಶಂಕರ.

 
         ಮಾಯಾಮಯವಾದ ಈ ಜಗತ್ತಿನಲ್ಲಿ, ಪ್ರತಿಯಾಮವೂ ಮತ್ತು ಪ್ರತೀ ಆಯಾಮವೂ ಯಮನ ಸಮೀಪಕ್ಕೆ ನಮ್ಮನ್ನು ಒಯ್ಯುತ್ತಿರುತ್ತದೆ. ಕಾರಣ ಇಂಥ ಜರಾಮರಣ ಚಕ್ರದಿಂದ ಬಿಡುಗಡೆ ಪಡೆಯ ಬೇಕೆಂಬ ತೀವ್ರತೆಯೇ ಜ್ಞಾನಮಾರ್ಗಕ್ಕೆ ನಾಂದಿಯೂ ಆಗಿದೆ. ಆದಿಶಂಕರರ ದಿವ್ಯ ಚೇತನ ಈ ಜಂಗಮನ ಗಮ್ಯವನ್ನು ಅರಸಿತು! ಆ ಅರಿವನ್ನು ಸಾರಿ ಹೇಳಿತು, ಅದನ್ನೇ ಪೋಷಿಸಿ ಪ್ರತಿಷ್ಠಾಪಿಸಿತು. ಕಲ್ಲುಮುಳ್ಳುಗಳ ದುರ್ಗಮ ಹಾದಿಯಲ್ಲಿ, ಸುಕೋಮಲವಾದ ತನ್ನ ಪಾದಗಳನ್ನು ಲೆಕ್ಕಿಸದೇ, ನಮಗಾಗಿ ನಡೆದಾಡಿದ, ಆ ಬಾಲ ಸಂನ್ಯಾಸಿಗಳಾದ ಆದಿ ಶಂಕರರ ಕಾಳಜಿಗೆ ಮನುಕುಲ ಮೌನದಿಂದ ತಲೆಬಾಗಿದೆ.
        ದೇಶ ಕಾಲಗಳನ್ನು ಮೀರಿ ತಮ್ಮ ಚಿಂತನಬಿಂದುವನ್ನು ಸಿಂಧುವಾಗಿಸಿದ ಜ್ಞಾನಬಂಧು ನಮಗಿಂತ ಒಂದುವರೆ ಸಾವಿರವರ್ಷಗಳ ಹಿಂದೆ ಇಲ್ಲಿಗೆ ಬಂದರು. ಕೇರಳದ ಕಾಲಟಿಯಲ್ಲಿ ಹುಟ್ಟಿ, ಕಾಲ್ನಡಿಗೆಯಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ಹೋಗಿ, ದಿಗ್ಗೆಟ್ಟ ಮಾನವ ವಿವೇಕ ಗಂಗೆಗೆ ದಿಕ್ಸೂಚಿಯಾಗಿ, ಜ್ಞಾನಾಮೃತಸಾಗರದ ಕಡೆಗೆ ಮುಖಮಾಡುವಂತೆ ಮಾಡಿದರು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಾಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು. ಭಗವದ್-ಗೀತೆ, ಉಪನಿಷತ್ತು ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷೆ ಕೊಟ್ಟ (ಭಾಷ್ಯ ಬರೆದ) ಮೊದಲ ಅಚಾರ್ಯರಾದರು. ಶ್ರೀ ಶಂಕರಾಚಾರ್ಯರು ಬರೆದ ವೇದಾಂತ ಭಾಷ್ಯಕ್ಕೆ "ಶಾರೀರಕಭಾಷ್ಯ" ಎಂದು ಕರೆಯುತ್ತಾರೆ. ಶರೀರವೇ ಸರ್ವಸ್ವವಾಗಿರುವ ಇಂದಿನ ಜನ ಮಾನಸಕ್ಕೆ ವಿಭಿನ್ನವೆನಿಸಿದರೂ, ಶರೀರ ಮೀರಿರುವ ತತ್ವಕ್ಕೆ ಪ್ರಾಶಸ್ತ್ಯ ನೀಡಿದ್ದು ಶಾರೀರಕ ಭಾಷ್ಯದ ವಿಶೇಷ! ಇದನ್ನೇ ಬೇರೆ ರೀತಿಯಲ್ಲಿ ಹೇಳಬಹುದು. ಕಾಣುವ ಆತ್ಮ ಶರೀರ, ಕಾಣದ ಶರೀರ ಆತ್ಮ! ಇಂಥ ಆತ್ಮತತ್ವ ವಿವೇಕವೇ ಜ್ಞಾನ ಅರ್ಥಾತ್ ಅರಿವು. ಇದೇ (ಅರಿವೇ) ಗುರು. ಆದ್ದರಿಂದ ಗುರುತ್ವವುಳ್ಳ ಆದಿ ಶಂಕರಾಚಾರ್ಯರ ಪಾದಗಳಿಗೆ ನನದಿದೋ ನುಡಿ ನಮನ.

ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಮ್ |
ನಮಾಮಿ ಭಗವತ್ಪಾದಶಂಕರಂ ಲೋಕಶಂಕರಮ್ ||

ಪ.ಪು.

poornapathi@gmail.com