Thursday, June 23, 2016





ಮಳೆಗಾಲ!



ನೆಲ ಜಲಗಳ ಸಂಗಮ, ಜೀವ ಜಂತುಗಳ – ಉಗಮ !

ಹಸಿರುಸಿರಿನ ಪರಿಣಾಮ, ನೇಸರನುರಿಯಿಂ ಗ್ರೀಷುಮ...

ನೇಸರನುರಿಯೇನ್ ? ಗ್ರೀಷ್ಮ !


ಬೀಜ ಗೀಜಗಳ ಸಂಸ್ಪರ್ಶ, ಮೇಘ ಮಾಲೆಗಳ ಸಂಘರ್ಷ.

ಗಿಡ ದಡ ಬಗೆಯುವ - ಉತ್ಕರ್ಷ, ಉಳುವಾ ಕಾಲವೇ ಈ ವರ್ಷ...

ಉಳಿವಿನ ಕಾಲವೇ ? ಈ ವರ್ಷ !

ಪ. ಪು.
ಪರಮೇಶ್ವರ ಪುಟ್ಟನಮನೆ

Saturday, June 04, 2016

"ಶಿವೋಽಹಮ್"

ಮಾನವನು ಸದಾ ಆನಂದದ ಹುಡುಕುವಿಕೆಯಲ್ಲಿ ಅಲೆದಾಡುತ್ತಿರುತ್ತಾನೆ. ಈ ಅಲೆದಾಟದಲ್ಲಿ ಮಹರ್ಷಿಗಳು ಯಾವ ತತ್ವವನ್ನು ಹುಡುಕಿದರೋ ಅವು ಅಚ್ಚರಿದಾಯಕ ಮಾತ್ರವಲ್ಲ; ಶೋಧನೆಯ ವಸ್ತುವೂ ಹೌದು. ಈ ಶೋಧನೆಯಿಂದ ತಿಳಿದು ಬಂದಿದ್ದು, ಎಲ್ಲ ಇಂದ್ರಿಯಗಳೂ ಮನೋವಶವಾಗಿವೆ. ಎಲ್ಲಿಯವರೆಗೆ ಮನವು ಸಾಂಸಾರಿಕವಾಗಿರುತ್ತದೆಯೋ ಅಲ್ಲಿಯವರೆಗೆ ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ ಮನಸ್ಸನ್ನು ನಿಗ್ರಹಿಸುವ ಕ್ರಮವನ್ನು ಹುಡುಕಿದರು. ಅದರನುಸಾರ ಶ್ರುತಿ, ಸ್ಪರ್ಷ, ದೃಷ್ಟಿ, ಸ್ವಾದ ಮತ್ತು ಗಂಧ ಮುಂತಾದ ಸಂಗತಿಗಳನ್ನು ಗ್ರಹಿಸುವ ಇಂದ್ರಿಯಗಳನ್ನು ಜ್ಞಾನೇಂದ್ರಿಯಗಳೆನ್ನುತ್ತಾರೆ. ಇವುಗಳ ಕರ್ಮೇಂದ್ರಿಯಗಳಾದ ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗುಗಳು ಪಂಚತತ್ವಗಳಲ್ಲಿ (ಭೂಮಿ, ಆಕಾಶ, ಗಾಳಿ, ನೀರು, ಅಗ್ನಿಗಳಲ್ಲಿ) ಲೀನವಾಗುವವು ತಾನೇ? ಈ ತತ್ವಗಳಾದರೋ ಆಕಾಶ ತತ್ವದಲ್ಲಿ ಲಯಹೊಂದುವುದನ್ನು ಮನಗಂಡ ಮಹರ್ಷಿಗಳು ಶಬ್ದದ ಮೂಲಕ ಸ್ತಬ್ದರಾಗುವ (ಮನೋನಿಗ್ರಹಿಗಳಾಗುವ) ಮಾರ್ಗವನ್ನು ಹುಡುಕಿದರು.
ಮನಸ್ಸನ್ನು ನಿರುದ್ಧಗೊಳಿಸುವ ಕ್ರಮದಲ್ಲಿ ಋಷಿಗಳಿಗೆ ಈ ಅರಿವು ಸಿಕ್ಕಾಗ, ಮಾನವನ ಮೆದುಳನ್ನು ಶಿವಲಿಂಗದಾಕಾಕೃತಿಯಲ್ಲಿ ನಿರೂಪಿಸಿದರು. ಅದಕ್ಕೆಂದೇ 'ತ್ರಿಣೇತ್ರಧಾರೀ ಶಿವನ ಜಟೆಯಿಂದ ತ್ರಿಪಥಗಾಮಿನೀ ಗಂಗೆ ಹೊರಟಿದ್ದನ್ನು ಸ್ಪಷ್ಟ ಪಡಿಸಿದ್ದಾರೆ.' ಶಿವನ ಹಣೆಯ ಮೇಲೆ ದ್ವಿತೀಯದ ಚಂದ್ರ ಹಾಗೇ ಕುತ್ತಿಗೆಯಲ್ಲಿ ರುದ್ರಾಕ್ಷಿ ಮತ್ತು ನಾಗ ಶೋಭಾಯಮಾನವಾಗಿದೆ. ಇದಕ್ಕೆ ಇಂದು ವೈಜ್ಞಾನಿಕವಾಗಿ ಶೋಧಗಳು ನಡೆಯುತ್ತಿದ್ದು, ಆ ಕುರಿತು ಮುಂದೆ ನೋಡೋಣ.


ಲೆಬನಾನ್ ಮೂಲದ ಡಾ. ಟೋನಿ ಅಬುನಾದರ್ ಮತ್ತು ಪೂರ್ವ ಮೆಸಾಚುಯಟಸ್ಸದ ವರಿಷ್ಠ ವೈಜ್ಞಾನಿಕರ ಅನುಸಾರ 'ಮೆದುಳು ಯಥಾವತ್ತಾಗಿ ಶಿವಲಿಂಗವನ್ನು ಹೋಲುತ್ತದೆ.' ಹೇಗೆ ಮಾನವನ ಮಿದುಳಿನ ಆಕೃತಿ ಇಂಗ್ಲೀಷಿನ 'ಸಿ' ಆಕಾರದಲ್ಲಿದೆಯೋ ಹಾಗೆಯೇ ಶಿವಲಿಂಗದ ಪೃಷ್ಠ ಅಥವಾ ಯೋನಿಯೂ ಈ ಆಕಾರದ್ದೇ ಆಗಿದೆ! ಅಲ್ಲದೇ ಶಿವನ ಹಣೆಯ ಮೇಲೆ ಸ್ಥಿತ ಅರ್ಧ ಚಂದ್ರ ವಸ್ತುತಃ ಮೆದುಳಿನ ವೆಂಟ್ರಿಕುಲರ್ ಸಿಸ್ಟಮ್ಮಿನ 'ಹೈಪೋಥಲಾಮಸ್' ಆಗಿದೆ. ಅದು ಮನೋಭಾವವನ್ನು ನಿಯಂತ್ರಿಸುತ್ತದೆ. ಈ ಸಂವೇದನಾ ಶೀಲ ಭಾಗವನ್ನು ಋಷಿಗಳು ಕೇಂದ್ರೀಕರಿಸಿದ್ದು, ಇಲ್ಲಿಯೇ ಮನವನ್ನು ತೊಡಗಿಸಲು ಪ್ರಾರಂಭಿಸಿದರು.

ಮೆದುಳಿನ ಮಧ್ಯದಲ್ಲಿ ಸ್ಥಿತ ಅಮೃತ ಗ್ರಂಥಿಯನ್ನು ಋಷಿಗಳು ಶಿವನ ಮೂರನೇ ಕಣ್ಣೆಂದು ಕೊಂಡಾಡಿದರು. ಅದನ್ನೇ ಕೂಟಸ್ಥ ಎಂಬುದಾಗಿ ಕರೆದರು. ಈ ಗ್ರಂಥಿಯು ಬೆಳಕಿಗೆ ಅತೀ ಸಂವೇದನೆಯುಂಟುಮಾಡುತ್ತದೆ. ಈ ಗ್ರಂಥಿಯಿಂದ ಮೆಲಾಟೋನಿನ್ ಎಂಬ ಹಾರ್ಮೋನ್ ಕೂಡಾ ಸ್ರವಿಸುತ್ತಿರುತ್ತದೆ. ಇದು ಮನೋಭಿತ್ತಿಯನ್ನು ಪ್ರಭಾವಗೊಳಿಸುತ್ತದೆ. ಇದನ್ನು ಜಾಗ್ರತಮಾಡಿಕೊಂಡರೆ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳೂ ಕಾಣಿಸಿಕೊಳ್ಳತೊಡಗುತ್ತವೆ.

ರುದ್ರಾಕ್ಷಿಯಂತೆ ಹೋಲುವ ಮೆದುಳಿನ 'ಕೊರಾಯ್ಡ್ ಪ್ಲೆಕ್ಸಸ್' ಎಂಬಲ್ಲಿಂದ 'ಸೆರಿಬ್ರೂಸ್ಪಿನಲ್' ಎನ್ನುವ ದ್ರವ ಸದಾ ಸೊರುತ್ತಿರುತ್ತದೆ. ಇದು ಶಿವನ ಮಸ್ತಕದಿಂದ ಗಂಗೆಯು ಬರುವಂತೆ ಅಥವಾ ಶಿವನ ಜಡೆಯಿಂದ ಗಂಗೆಯು ಹರಿಯುವಂತೆ ಭಾಸವಾಗುತ್ತದೆ.
ಡಾ. ಟೋನಿ ಅಬೂನಾದರರ ಪ್ರಕಾರ ಗಂಗೆಯ ಸುಚಕ್ಷು, ಸೀತಾ ಮತ್ತು ಸಿಂಧುಧಾರೆಗಳು ಪಶ್ಚಿಮದ ಕಡೆಗೂ; ಹಲಾದಿನೀ, ಪಾವನೀ ಮತ್ತು ನಲಿನೀಧಾರೆಗಳು ಪೂರ್ವದಿಕ್ಕಿನ ಕಡೆಗೂ; ಭಾಗೀರಥೀ ಎಂಬ ಮುಖ್ಯ ವಾಹಿನಿಯು ದಕ್ಷಿಣದ ಕಡೆಗೂ ಹರಿಯುತ್ತಾ, ತ್ರಿಪಥಗಾಮಿನಿಯಾಗಿ ಭೂಮಿಯನ್ನು ಪವಿತ್ರಗೊಳಿಸುವಂತೆ, ಸೆರಿಬ್ರೋಸ್ಟಿನಲ್ ಕೂಡಾ ತ್ರಿಪಥಗಾಮಿನಿಯಾಗಿದೆ. ಅದೇ ಪ್ರಕಾರವಾಗಿ ಈ ದ್ರವವೂ ಮೊದಲು ಬಲಭಾಗದಲ್ಲೂ, ಆಮೇಲೆ ಎಡಭಾಗಕ್ಕೂ, ಕೊನೆಯದಾಗಿ ಬ್ರೇನಸ್ಟೆಮ್ ಮತ್ತು ಸ್ಪೈನಲ್ ಕಾರ್ಡ್ ಕಡೆಗೂ ಹರಿಯುತ್ತಾ ತ್ರಿಪಥಗಾಮಿನಿಯಾಗಿ ಹೊಂದಿಕೆ ಯಾಗುತ್ತದೆ.

ಶಿವನ 'ತ್ರಿಶೂಲ' ಮೆದುಳಿನಲ್ಲಿರುವ ವೆಂಟ್ರಿಕಲ್‍ಸಿಸ್ಟೆಮ್ ನೊಂದಿಗೆ ಯಥಾವತ್ತಾಗಿ ಹೋಲಿಕೆಯಾಗುತ್ತದೆ. ಅದಲ್ಲದೇ ಶಿವನ 'ಡಮರುಗ'ವೂ ಕೂಡ ಸ್ಪೆಕ್ಟಂ ಪೆಲೂಸಿಡಮ್ ಎಂಬ ವೆಂಟ್ರಿಕಲ್ಸ್‍ನ ಕಣ್ಣಿನ ಪೊರೆಯಂಥ ಒಂದು ಭಾಗವನ್ನು ಹೋಲುತ್ತದೆ. ಈ ಭಾಗ ಭಾವನೆ, ಪ್ರೇರಣೆ ಮತ್ತು ಅಬಿವ್ಯಕ್ತಿಗೆ ಮುಖ್ಯ ಸಾಧಕವಾಗಿದೆ. ಇನ್ನು 'ಬೆಸಲ್ ಗೈಂಗಲಿಯಾ' ಎಂಬ ಮಿದುಳಿನ ಭಾಗವು ವೆಂಟ್ರಿಕಲರ್ ಸಿಸ್ಟೆಮ್‍ನ ಮೇಲಿನ ಭಾಗ ಮತ್ತು ಸುತ್ತಲಿನ ಫಾರೆನ್ಸಿಕ್ ಭಾಗದ ಜೊತೆಗೂಡಿದೆ. ಇದು ಶಿವನ ಕುತ್ತಿಗೆಯಲ್ಲಿರುವ ನಾಗನಿಗೆ ಸಮವಾಗಿ ಕಾಣುತ್ತದೆ. ಇಷ್ಟೇ ಅಲ್ಲ ಮಿದುಳಿನ ಕೇಂದ್ರವಾದ ಮೂರನೇ ವೇಂಟ್ರಿಕಲ್ ಶಿವನ ಕಮಂಡಲುವಿನಂತಿದೆ!

ಒಟ್ಟಿನಲ್ಲಿ ಮಿದುಳಿನಂತಿರುವ ಶಿವಲಿಂಗದಲ್ಲಿ, ಮನೋ  ವೇದಿಕೆಯಲ್ಲಿ ಜೀವಿಸುವ ಮನುಷ್ಯರು ಪೂಜಾದಿ ಕ್ರಮದಿಂದ ಪಂಚತತ್ವಗಳನ್ನು ಸಮರ್ಪಿಸುತ್ತಿದ್ದಾರೆ. ಇಂಥ ಸಮರ್ಪಕ ವಿಧಿ ವಿಧಾನಗಳಿಂದ ಶಿವಲಿಂಗವು ಸಾಧಕರ ಅತ್ಯಂತ ಶ್ರೇಷ್ಠ ಸಾಧನವೂ, ಅಷ್ಟೇ ಏಕೆ? ಅದೇ ಸಾಧ್ಯವೂ ಆಯಿತು!

ಈ ಪ್ರಕ್ರಿಯೆಗಳನ್ನು ಸುಲಭಗೊಳಿಸಿದ ನಮ್ಮ ಹಿರಿಯರು ಶಿವನ ಲಿಂಗವನ್ನು ಪೃಥ್ವೀ, ಜಲ, ಅಗ್ನಿ, ವಾಯು ಮತ್ತು ಆಕಾಶ ಮೂರ್ತಿಯಾಗಿ ಪ್ರತಿಷ್ಠಾಪಿಸಿದರು. ಅವು ನಮ್ಮ ಶ್ರದ್ಧಾಕೇಂದ್ರಗಳಾಗಿವೆ. ಪೃಥ್ವೀ ಮೂರ್ತಿ ಏಕಾಮ್ರೇಶ್ವರ ಅಥವಾ ಏಕಾಮ್ರನಾಥನೆಂಬ ಹೆಸರಿನಿಂದ ಶಿವಕಾಂಚಿಯಲ್ಲಿ ಸ್ಥಾಪಿತಗೊಂಡಿದ್ದು, ಇದಕ್ಕೆ ಅಭಿಷೇಕವಿಲ್ಲ! ಕಾರಣ ಇದು ಪೃಥ್ವೀತತ್ವದ ಮೂರ್ತಿ. ಜಲಮೂರ್ತಿಯು ಜಂಬುಕೇಶ್ವರಲಿಂಗರೂಪದಲ್ಲಿ ತಿರುಚನಾಪಳ್ಳಿಯಲ್ಲಿ ಸ್ಥಾಪಿತವಾಗಿದೆ. ಈ ಮೂರ್ತಿಯ ಬುಡದಿಂದ ಸದಾ ನೀರು ಮೇಲ್ಮುಖವಾಗಿ ಚಿಮ್ಮುತ್ತಿರುತ್ತದೆ! ದಕ್ಷಿಣ ಭಾರತದ ತಿರುವಣ್ಣಮಲೈ ಬೆಟ್ಟದ ಅರುಣಾಚಲೇಶ್ವರನ ಮಂದಿರದಲ್ಲಿ ಅಗ್ನಿಮೂರ್ತಿಯು ನಿಂತಿದೆ. ತಿರುಪತಿಯಿಂದ ಉತ್ತರಕ್ಕೆ ಸ್ವರ್ಣಮುಖೀ ನದೀ ತೀರದಲ್ಲಿ ಕಾಲಹಸ್ತೀಶ್ವರನಾಗಿ ವಾಯುವಿನಾಘಾತರೂಪದಲ್ಲಿ ದೇವದೇವನ ವಾಯುಮೂರ್ತಿನಿಂತಿದೆ. ಇನ್ನು ಆಕಾಶಮೂರ್ತಿಯು ದಕ್ಷಿಣ ಭಾರತದ ಕಾವೇರೀ ನದೀ ತೀರದಲ್ಲಿ ಚಿದಂಬರದಲ್ಲಿ ಪವಡಿಸಿದ್ದಾನೆ.


ಅಂತೆಯೇ ಹನ್ನೆರಡು(ದ್ವಾದಶ) ಜ್ಯೋತಿರ್ಲಿಂಗದಲ್ಲೂ ಭಾರತಾದ್ಯಂತ ಶಿವನ ಕುರುಹುಗಳು ಬೆಳಕಿಗೆ ಬಂದಿವೆ. ಅವೆಂದರೆ ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಲೇಶ್ವರ, ಓಂಕಾರೇಶ್ವರ, ಕೇದಾರನಾಥ, ಭೀಮಶಂಕರ, ವಿಶ್ವೇಶ್ವರ, ತ್ರ್ಯಂಬಕೇಶ್ವರ, ವೈದ್ಯನಾಥ, ನಾಗೇಶ್ವರ, ರಾಮೇಶ್ವರ ಮತ್ತು ಘುಶ್ಮೇಶ್ವರಗಳು. ಶ್ರದ್ಧೆಯ ಪ್ರತೀಕಗಳೂ, ಮನೋಭೂಮಿಕೆಯನ್ನು ಸಿದ್ಧಪಡಿಸುವ, ಚಿತ್ತ ಸ್ಥೈರ್ಯ ಹೇತುಗಳಾಗಿಯೂ ಇರುವ ಈ ಲಿಂಗಗಳು ಸಾಧಕರನ್ನು ಇಂದಿಗೂ ಕೈ ಬೀಸಿ ಕರೆಯುತ್ತಿವೆ. ಅಲ್ಲಿಂದ ಬರುತ್ತಾ ಪ್ರತೀಸಾಧಕನೂ "ಶಿವೋಽಹಮ್" ಎಂದು 'ಜೀವನ ಜೋಗುಳ' ಹಾಡುತ್ತಾನೆ!

ಸಂಗ್ರಹ
Pashya-papu!