ಶಿಕ್ಷಣ ಎಂದರೆ
ಕಲಿಕೆ, ತರಬೇತಿ, ವಿಕಾಸ, ವಿದ್ಯಾಭ್ಯಾಸ, ಅಭ್ಯಾಸ, ಅರಿಯುವಿಕೆ...ಎಂದರ್ಥ. ’ಇದು ಮನುಷ್ಯನ ವ್ಯಕ್ತಿತ್ವ ವಿಕಾಸದ ಮೆಟ್ಟಿಲು’
ಎಂದರೆ ತಪ್ಪಲ್ಲ. ಇದನ್ನು ಮಾಹಿತಿ ಪರ ಮತ್ತು ಅನುಭವ ಪರ ಎಂದು ಎರಡಾಗಿ ವಿಭಾಗಿಸಬಹುದು.
ಮಾಹಿತಿ ಪರ ಶಿಕ್ಷಣವು ವಿಷಯ ಸಂಗ್ರಹರೂಪದಲ್ಲಿದ್ದು, ಅನುಭವ ಪರ ಶಿಕ್ಷಣವು ಅರಿವು
ಮೂಡಿಸುವುದಾಗಿದೆ. ಇನ್ನು ಈ ಶಿಕ್ಷಣವನ್ನು ವಿದ್ಯಾರ್ಥಿಯ ವಯಸ್ಸು ಮತ್ತು ಉದ್ದೇಶವನ್ನು
ಗುರುತಿಸಿ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ತಾಂತ್ರಿಕ ಅಥವಾ ವೃತ್ತಿಪರ ಶಿಕ್ಷಣ ಎಂದೂ, ಮೂರು
ತೆರನಾಗಿ ವಿಭಾಗಿಸುತ್ತಾರೆ. ಇವು ತಮಗೆಲ್ಲಾ ತಿಳಿದದ್ದೇ ಆಗಿವೆ.
ಪ್ರಾಚೀನ
ಕಾಲದ ಶಿಕ್ಷಣ ಪದ್ಧತಿಯ ಸೌಂದರ್ಯವೇ ಬೇರೆ. ಅಂದು ಶಿಕ್ಷಣ ಮಾರಾಟದ ಸರಕಾಗಿರಲಿಲ್ಲ. ಶಿಕ್ಷಕರು
ಸಂಬಳಕ್ಕೆ ದುಡಿಯುವವರಾಗಿರಲಿಲ್ಲ. ಹಣಗಳಿಸಿ ಶ್ರೀಮಂತಿಕೆಯ ಕನಸು ಕಾಣುತ್ತಿದ್ದವ ಈ ವೃತ್ತಿಗೆ
ಕಾಲಿಡುತ್ತಲೇ ಇರಲಿಲ್ಲ. ಅವನು ಸೇನೆಗೆ ಸೇರುತ್ತಿದ್ದ, ವ್ಯಾಪಾರಿಯಾಗುತ್ತಿದ್ದ
ಅಥವಾ ಇತರೆ ನೌಕರಿ, ಚಾಕರಿ ಮಾಡಿಕೊಂಡು ಹಾಯಾಗಿರುತ್ತಿದ್ದ. ಸರಳವಾಗಿ ಹೇಳಬೇಕೆಂದರೆ ಐಷಾರಾಮಿ
ಬದುಕು ಬಯಸುವವ ಈ ಶಿಕ್ಷಣ ಮಾರ್ಗದಲ್ಲಿ ಕಾಣಿಸಿ ಕೊಳ್ಳುತ್ತಲೇ ಇರಲಿಲ್ಲ! ಇಲ್ಲಿ ಪರಿಶ್ರಮ
ಅನಿವಾರ್ಯವಾಗಿದ್ದು, “ಗುರು ಶುಶ್ರೂಷಯಾ ವಿದ್ಯಾ” ಎಂಬುದು ನಿಜಕ್ಕೂ ಅರ್ಥವತ್ತಾಗಿತ್ತು
ಮತ್ತು ಆಲಸ್ಯಕ್ಕೂ ವಿದ್ಯೆಗೂ ಸದಾ ಆಗಿಬರುತ್ತಿರಲಿಲ್ಲ.
ಆದರೆ
ಇಂದು ಶಿಕ್ಷಣ ತನ್ನ ಹಾದಿಯನ್ನು ತಪ್ಪಿ ಎತ್ತೆತ್ತಲೋ ಸಾಗುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟೆಲ್ಲ ವರುಷಗಳಾದರೂ, ಭಾಷಾವಾರು ಪ್ರಾಂತ್ಯ
ರಚನೆಯಾಗಿ ಆರು ದಶಕಗಳೇ ಕಳೆದರೂ, ಇಪ್ಪತ್ತೆರಡು ಭಾಷೆಗಳನ್ನು ರಾಜ್ಯಭಾಷೆಗಳನ್ನಾಗಿ ಸಂವಿಧಾನದಲ್ಲಿ ಒಪ್ಪಿಕೊಂಡರೂ, ಸರ್ಕಾರಗಳಿಗೆ “ಮಾತೃಭಾಷೆಯಲ್ಲಿ ಮಕ್ಕಳಿಗೆ
ಶಿಕ್ಷಣ ಕೊಡುವುದು ಮುಖ್ಯ” ಎಂದೆನಿಸಲಿಲ್ಲ! ವರ್ಷದಿಂದ ವರ್ಷಕ್ಕೆ ಮಾತೃಭಾಷೆಯಲ್ಲಿ ಶಿಕ್ಷಣ
ಕೊಡುವ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ, ಶಿಕ್ಷಣ ಕ್ಷೇತ್ರದಲ್ಲಿ
ಪ್ರಾಥಮಿಕ ಮಟ್ಟದಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಖಾಸಗೀಕರಣವನ್ನು ಉತ್ತೇಜಿಸುತ್ತಿದೆ.
ಒಂದು ಕಡೆ ಮಾರುಕಟ್ಟೆಯ ಸೆಳೆತ, ಉದ್ಯೋಗಾವಕಾಶಗಳ ಏರಿಳಿತ, ಇಂಗ್ಲಿಷ್ ಭಾಷಾ ಜ್ಞಾನವೇ ನಿಜವಾದ ಅರ್ಹತೆ ಎನ್ನುವ ಮಿಥ್ಯೆ, ಅದಕ್ಕೆ ಪೂರಕವಾಗಿ ಲಾಭಕೋರ ಖಾಸಗಿ ಶಾಲೆಗಳು. ಹೀಗೆ ಇವೆಲ್ಲದರ ಪರಿಣಾಮವಾಗಿ ’ಇಂಗ್ಲಿಷ್
ಕಲಿತರಷ್ಟೆ ಬದುಕುವ ಅವಕಾಶ’ ಎಂಬ
ಧಾವಂತಕ್ಕೆ ಪಾಲಕರು ಬೀಳುವಂತಾಗಿದೆ.
ಭಾಷೆ ಎಂದರೆ ಬುದ್ಧಿ, ಭಾವಗಳ ವಿದ್ಯುದಾಲಿಂಗನ. ಭಾವದ ಸಂಪರ್ಕವಿಲ್ಲದೆ ಬುದ್ಧಿ ಬರಡಾಗುತ್ತದೆ.
ಭಾಷೆಯು ಭಾವನೆ ಮತ್ತು ವಿಚಾರಗಳ ವಾಹಕವಾಗಿದೆ. ಅದು
ಸಂವಹನ, ಸಂಪರ್ಕ ಹಾಗೂ ಚಿಂತನೆಗಳ ಸಾಧನ. ಹೀಗೆ ಸಾಧನವಾದ ಒಂದೊಂದು ಭಾಷೆ ಆಯಾ ವ್ಯಕ್ತಿಯ
ಹುಟ್ಟು, ಬೆಳೆದ ಪರಿಸರ, ಬದುಕುವ ಪ್ರದೇಶ ಇವುಗಳಿಗನುಗುಣವಾಗಿ ಅವರವರಿಗೆ ’ಮಾತೃಭಾಷೆ’ಯಾಗಿ
ರೂಪಿತವಾಗುತ್ತದೆ. ವ್ಯಕ್ತಿಯ ಬದುಕಿನ ಆದಿಯಿಂದ ಅಂತ್ಯದ ತನಕ ಜೊತೆಗಾರನಾಗಿ, ಸಹಚರನಾಗಿ
ನೆರವಿಗೆ ಬರುವುದೇ ಈ ಮಾತೃಭಾಷೆ. ದೈನಂದಿನ ವ್ಯಾಪಾರ, ವ್ಯವಹಾರ, ಸಲ್ಲಾಪ, ಪ್ರೇಮ, ಕಲಹ-ಕಲಾಪ ಎಲ್ಲವೂ ವ್ಯಕ್ತಿಯ
ಮಾತೃಭಾಷೆಯಲ್ಲೇ ನಡೆಯುತ್ತದೆ. ’ತೊಟ್ಟಲಿನಿಂದ ಚಟ್ಟದವರೆಗೆ ಮಾತೃಭಾಷೆ ವ್ಯಕ್ತಿಗೆ
ಊರುಗೋಲು’ ಎಂದರೆ ಅತಿಶಯವಲ್ಲ! ಅದು ಎಲ್ಲ ವಿಧದಲ್ಲಿ ವ್ಯಕ್ತಿಯ ಬಾಳನ್ನು ಬೆಳಗುತ್ತದೆ.
ಬದುಕು ಮತ್ತು ಭಾವವನ್ನು ಸಂಸ್ಕರಿಸುತ್ತದೆ. ಹಾಗಾಗಿ ಮಾತೃಭಾಷೆಯು ಪ್ರತಿಯೊಬ್ಬ
ವ್ಯಕ್ತಿಯ ನೆರಳಿನಂತೆ. ಅದು ವ್ಯಕ್ತಿತ್ವದ ಅವಿನಾಭಾವ ಅಂಗ. ಆದ್ದರಿಂದ
ಮಾತೃಭಾಷೆಯನ್ನು ಶಾಲೆಗಳಲ್ಲಿ ಪ್ರಥಮ ಭಾಷೆಯ ನೆಲೆಯಲ್ಲಿ
ಕಲಿಸಲಾಗುತ್ತದೆ.
ಪ್ರಪಂಚದಾದ್ಯಂತ ಶಿಕ್ಷಣಕ್ರಮದಲ್ಲಿ ಮಾತೃಭಾಷೆಗೇ
ಪ್ರಾಶಸ್ತ್ಯ ನೀಡಲಾಗಿದೆ. ಭಾರತದಲ್ಲಾದರೋ ಹತ್ತೊಂಭತ್ತನೆಯ ಶತಮಾನದ
ಆದಿಯಿಂದಲೇ ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕೆಂಬ ಬೇಡಿಕೆಗಳು ಕೇಳಿಬಂದವು.
ಎಲ್ಲ ಶಿಕ್ಷಣ ಆಯೋಗಗಳು ಹಾಗೂ ಗಾಂಧಿ, ರಾಧಾಕೃಷ್ಣನ್
ಮುಂತಾದ ವಿಚಾರವೇತ್ತರು ಮಾತೃಭಾಷೆಯ ಮೂಲಕ ಬೋಧನೆ ಮತ್ತು ಕಲಿಕೆಯನ್ನು
ಸಮರ್ಥಿಸಿದ್ದಾರೆ. ಕನಿಷ್ಠ ಪ್ರೌಢಶಾಲಾ ಹಂತದವರೆಗಾದರೂ
ಶಿಕ್ಷಣವನ್ನು ಮಗುವಿನ ತಾಯ್ನುಡಿಯ ಮೂಲಕವೇ ಕೊಡಬೇಕೆಂಬುದು ಶಿಕ್ಷಣತಜ್ಞರ
ಒಮ್ಮತದ ಅಭಿಪ್ರಾಯ. ನಮ್ಮ ಚಿಂತನ ಶೀಲತೆ, ವೈಚಾರಿಕ ಪ್ರಕ್ರಿಯೆ ಪ್ರಥಮವಾಗಿ ನಡೆಯುವುದು ನಮ್ಮ
ಮಾತೃಭಾಷೆಯಲ್ಲಿ. ಬೇರಾವುದೇ ಭಾಷೆ ಮಾತನಾಡುವಾಗಲೂ ನಮ್ಮ ಮನಸ್ಸು ಒಳಒಳಗೇ ತರ್ಜುಮೆ ಮಾಡುತ್ತಿರುತ್ತದೆ. ತಾನು ನೋಡುವ ಪದಾರ್ಥಗಳನ್ನು, ಗ್ರಹಿಸುವ
ಗಂಧವನ್ನು, ಸವಿಯುವ ರುಚಿಯನ್ನು, ಕೇಳುವ
ಧ್ವನಿಗಳನ್ನು, ಬಣ್ಣಗಳನ್ನು ಮಗುವು ತನ್ನ ತಾಯ್ನುಡಿಯ
ಮೂಲಕವೇ ಹೆಸರಿಸಲು ಕಲಿಯುತ್ತದೆ. ಆಮೇಲೆ ಮಗು ಬೆಳೆದಂತೆ, ಭಾಷಾಂತರ ಪ್ರಕ್ರಿಯೆಯಿಂದ
ವಿಷಯವನ್ನು ಗ್ರಹಿಸುತ್ತದೆ. ಆದ್ದರಿಂದ ಪ್ರತಿಯೊಂದು ಮಗುವಿನ ಬುದ್ಧಿವಿಕಾಸ ಹಾಗೂ ಭಾವಪ್ರಕಾಶದ
ದೃಷ್ಟಿಯಿಂದ ಮಾತೃಭಾಷಾ ಬೋಧನೆ ಆಗಬೇಕು. ಅದಿಲ್ಲದಿದ್ದರೆ ನೇರವಾಗಿ ವಿಷಯ ಗ್ರಹಣವಾಗುವುದಿಲ್ಲ.
ಭಾಷೆ ಕರ್ತೃ, ಕರ್ಮ, ಕ್ರಿಯಾಪದಮಾತ್ರವಲ್ಲ. ಅದು ಒಂದು ಸಾಂಸ್ಕೃತಿಕ ಅನುಭವ.
ನಮ್ಮ ಸುತ್ತ ಒಂದು
ಸಾಂಸ್ಕೃತಿಕ ಆವರಣ ಇದೆ. ಪ್ರತಿಯೊಂದು ಸಂಸ್ಕೃತಿಯಲ್ಲೂ ನೂರಾರು ಆಚರಣೆಗಳು, ವಿಧಿ ನಿಷೇಧಗಳು, ಕಟ್ಟು
ಪಾಡುಗಳು ಇದ್ದೇ ಇರುತ್ತವೆ. ಇವೆಲ್ಲವೂ ಭಾಷೆಯ ಮೂಲಕ
ಹಾಸು ಹೊಕ್ಕಾಗಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುತ್ತವೆ. ಆದ್ದರಿಂದ ’ಭಾಷೆ ನಶಿಸಿದರೆ
ಸಂಸ್ಕೃತಿ ನಾಶವಾದಂತೆ’ ಎಂಬ ಅನಂತಮೂರ್ತಿಯವರ ಮಾತೂ ಕೂಡ ಮೌಲಿಕವಾಗಿದೆ.
ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ರವಾನಿಸುವ ದೃಷ್ಟಿಯಿಂದಲೂ ತಾಯ್ನುಡಿ
ಬೋಧನೆ ಮಾಡುವುದು ಅತ್ಯವಶ್ಯ. ಏಕೆಂದರೆ ಯಾವುದೇ ಶಿಕ್ಷಣದ ಅಂತಿಮ ಗುರಿ ಮನುಷ್ಯನನ್ನು ಹೆಚ್ಚು ಸುಸಂಸ್ಕೃತನನ್ನಾಗಿಸುವುದು, ಮಾನವೀಯಗೊಳಿಸುವುದು. ಮಾತೃಭಾಷಾ
ಬೋಧನೆ ಈ ಗುರಿಸಾಧನೆಗೆ ಪೂರಕವಾಗಿದೆ. ಪರಭಾಷಾ ಮಾಧ್ಯಮದ ಶಿಕ್ಷಣದಲ್ಲಿ ಆಗುವ ಅಡೆತಡೆಗಳು,
ಮಾನಸಿಕ ಪ್ರಕ್ರಿಯೆಗಳ ವ್ಯತ್ಯಯಗಳು ಮತ್ತು ಸಾಂಸ್ಕೃತಿಕ ವೈಪರೀತ್ಯಗಳು ಮಾತೃಭಾಷೆಯಲ್ಲಿ ಶಿಕ್ಷಣ
ಪಡೆಯುವಾಗ ಆಗದು; ಎಂಬಲ್ಲಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ’ಉತ್ತಮ ಮಾಧ್ಯಮ’
ಎನಿಸುವುದು ಮತ್ತು ಪರಭಾಷಾ ಮಾಧ್ಯಮ ಮಾತೃಭಾಷಾ ಮಾಧ್ಯಮದಷ್ಟು ಉತ್ತಮವಲ್ಲ ಎಂದೂ ಕೂಡ ಸ್ಪಷ್ಟವಾಗಿ
ಹೇಳಬಹುದು.
ಹೀಗೆ ನಿರೂಪಿಸಿದ ಅಂಶಗಳನ್ನು ನಾನು ನಮ್ಮ
ಮಾತೃಭಾಷೆಯಾದ ಕನ್ನಡದಲ್ಲಿ ಹೇಳಿದ್ದೇನೆ. ಅದನ್ನೇ ಪರಭಾಷೆಯಲ್ಲಿ ಹೇಳಿದ್ದಿದ್ದರೆ, ನಿಮ್ಮಲ್ಲಿ
ಎಷ್ಟು ಜನರಿಗೆ ಅದು ಅರ್ಥವಾಗುತ್ತಿತ್ತೋ ನಾನು ಕಾಣೆ! ಹಾಗಾಗಿ ನಮಗೆ ಅರ್ಥವಾಗುವ ದೃಷ್ಟಿಯಲ್ಲಿ
ಮಾತೃಭಾಷೆಯ ಮಾಧ್ಯಮ ಉತ್ತಮವಾಗುತ್ತದೆ. ಇನ್ನು ಶಿಕ್ಷಣ ಉದ್ಯೋಗಪ್ರದವಾಗಬೇಕು, ಪರದೇಶದಲ್ಲಿ ವಾಸ
ಬೇಕು, ಪರಸಂಸ್ಕೃತಿಯ ಮೋಹ ಬಿಡದು! ಎನ್ನುವವರಿಗೆ ಮಾತೃಭಾಷಾ ಶಿಕ್ಷಣ ಉತ್ತಮವಾಗದಿರಬಹುದು. ಆದರೆ
ಯಾವತ್ತೂ ಅನುಭವ ಪರ ಶಿಕ್ಷಣ ಕೋಟಿಗೆ ಒತ್ತು ನೀಡಿದ ನಮ್ಮ ಸಂಸ್ಕೃತಿಯ ಹಿರಿಯರು ’ಅರಿವೇ
ಗುರು’ ಎಂಬುದನ್ನು ನಮ್ಮ ಶಿಕ್ಷಣದ ಧ್ಯೇಯವಾಗಿ ಕಂಡವರು. ಹೀಗಿರುವಾಗ ಎಲ್ಲ
ಹಿರಿಯರೂ ನನ್ನ ಮಾತಿಗೆ ಬೆಂಬಲವಾಗಿರುವರು ಎಂಬುದನ್ನು ಬಲವಾಗಿ ನಂಬಿ, “ಮಾತೃಭಾಷಾ ಮಾಧ್ಯಮ,
ಶಿಕ್ಷಣಕ್ಕೆ ಅತ್ಯುತ್ತಮ” ಎಂದು ಪುನಃ ಪುನಃ ಹೇಳುತ್ತೇನೆ.