Monday, November 09, 2015

ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತ ಸಾಧನ



ಮಾನ್ಯರೇ,
ವ್ಯಕ್ತಿತ್ವ-ವಿಕಸನ ಎಂಬ ವಿಷಯದ ಬಗ್ಗೆ ಮನುಷ್ಯರಾದ ನಾವು ಯೋಚಿಸುವಂತೆ ಪಶು-ಪಕ್ಷಿಗಳಾಗಲೀ ಹುಳ-ಹುಪ್ಪಡಿಗಳಾಗಲೀ ಯೋಚಿಸುವುದೂ ಇಲ್ಲ, ಚಿಂತಿಸುವುದೂ ಇಲ್ಲ. ಏಕೆಂದರೆ ಅವುಗಳಿಗೆ ಅದರ ಅಗತ್ಯವಿಲ್ಲ. ಅವುಗಳ ವಿಕಾಸ (ಬೆಳವಣಿಗೆ) ಅನಾಯಾಸವಾಗಿ ಆಗುತ್ತಲೇ ಇರುತ್ತದೆ. ಆದರೆ ಮನುಷ್ಯನ ಬದುಕಿನ ರೀತಿಯೇ ಬೇರೆ. ಅವನು ನೆಲದಲ್ಲಿ ನೆಲೆಸುವಂತೆ ನೀರಿನಲ್ಲೂ ಬದುಕಬಲ್ಲ. ಆಕಾಶದಲ್ಲೂ ಹಾರಾಡಬಲ್ಲ. ಮಾಂಸ ತಿಂದು ಅರಗಿಸಬಲ್ಲ. ಹುಲ್ಲು ತಿಂದೂ ಬದುಕಬಲ್ಲ. ಈತ ತ್ಯಾಗಿಯೂ ಆಗ ಬಲ್ಲ, ಭೋಗಿಯೂ ಆಗಬಲ್ಲ. ಪ್ರಾಣ ಕೊಡಬಲ್ಲ, ಪ್ರಾಣ ಕೊಳ್ಳಬಲ್ಲ. ತನ್ನ ಜೀವನವನ್ನು ರೂಪಿಸಬಲ್ಲನಷ್ಟೇ ಅಲ್ಲ, ತನಗೆ ಬೇಕಾದ ಜಗತ್ತನ್ನೂ ನಿರ್ಮಿಸಬಲ್ಲ, ಕಟ್ಟಬಲ್ಲ, ಕೆಡವಬಲ್ಲ. ಇದು ಮನುಷ್ಯಜೀವನಕ್ಕೆ ಸಂಬಂಧಿಸಿದ ಸತ್ಯಸಂಗತಿ. ಇದನ್ನು ಭಾರತೀಯ ಋಷಿ-ಮುನಿಗಳು ಸಾವಿರಾರು ವರುಷಗಳ ಹಿಂದೆಯೇ ಕಂಡುಕೊಂಡರು. ಈ ಸತ್ಯವನ್ನಲ್ಲದೇ ನಮ್ಮ ಪೂರ್ವಜರು ಇನ್ನೊಂದು ಐತಿಹಾಸಿಕ ಸತ್ಯವನ್ನೂ ಅರಿತುಕೊಂಡರು. ಅದೆಂದರೆ ವಿಶ್ವದ ಆರಂಭದಿಂದಲೂ ಇಡಿಯ ಜಗತ್ತಿನ ಆಗುಹೋಗುಗಳಿಗೆ ಮನುಷ್ಯನೇ ಕಾರಣ. ಜಗತ್ತಿನಲ್ಲಿ ಹಿಂದೆ ಆಗಿಹೋದ, ಇಂದಾಗುತ್ತಿರುವ, ಮುಂದೆ ಆಗಬಹುದಾದ ಉನ್ನತಿ-ಅವನತಿಗಳಿಗೆಲ್ಲಾ ಮನುಷ್ಯನೇ ಕಾರಣ. ಅದಕ್ಕಾಗಿಯೇ ಪೂರ್ವಜರು-ಭಾರತೀಯರು-ಮಾನವರು ದಾನವತ್ವದ ಕಡೆ ಹೊರಳದೇ, ದೇವತ್ವದ ಕಡೆ ಮುನ್ನಡೆಯುವಂತೆ ಅವನ ಬೆಳವಣಿಗೆಯ ಅಂದರೆವ್ಯಕ್ತಿತ್ವ ವಿಕಸನದ ರಾಜಮಾರ್ಗ ಕಂಡುಹಿಡಿದರು. ಅದರ ಪರಿಚಯವನ್ನು ಈಗ ಮಾಡಿ ಕೊಳ್ಳೋಣ.

’ ಭಾರತಸ್ಯ ಪ್ರತಿಷ್ಠೇ ದ್ವೇ ಸಂಸ್ಕೃತಂ ಸಂಸ್ಕೃತಿಸ್ತಥಾ ’ ಎಂಬ ಆರ್ಯೋಕ್ತಿಯಂತೆ ಸಂಸ್ಕೃತ ನಮ್ಮ ದೇಶಕ್ಕೆ ಗೌರವ ತಂದು ಕೊಟ್ಟ ಭಾಷೆ. ಅದು ನಮ್ಮ ರಾಷ್ಟ್ರಿಯ ಸಂಪತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭಾಷೆ ಭರತ ಖಂಡದ ಜೀವನಾಡಿ; ಸಂಸ್ಕೃತಿಯ ವಾಹಿನಿ. ರಾಷ್ಟ್ರಕವಿ ಕುವೆಂಪು ಅವರು ’ಸಂಸ್ಕೃತ ಮಾತೆ’ ಎಂಬ ತಮ್ಮ ಕವನ ಸಂಕಲನದಲ್ಲಿ ಸಂಸ್ಕೃತದ ಪ್ರಾಚೀನತೆ ಮತ್ತು ಮಹತ್ವಗಳ ಕುರಿತು ಹೀಗೆ ಹಾಡುತ್ತಾರೆ.
“ಪೃಥ್ವಿಯಾ ಪ್ರಥಮ ಪ್ರಭಾತದಲಿ, ಇತಿಹಾಸ ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ
ಚಿರಧವಲ ಹಿಮಕಿರಣ ಪೃಥುಲೋರು ಪ್ರೇಂಖದಲಿ, ನವಜಾತ ಶಿಶುವಾಗಿ ನಲಿದ ಮಂಗಲಮಾಯೀ”
ಇತಿಹಾಸ ತಜ್ಞರಿಗೂ ನಿಲುಕದ ಸೃಷ್ಟಿಯ ಆರಂಭದಲ್ಲಿ, ಅತಿ ಪ್ರಾಚೀನ ಕಾಲದಲ್ಲಿ, ಹಿಮಗಿರಿಯ ಕಂದರಗಳಲ್ಲಿ ಮೊಳಗಿದ ಭಾಷೆಯಿದು. ಇದು ಕೇವಲ ಪ್ರಾಚೀನ ಮಾತ್ರವಲ್ಲ, ಸತ್ವಯುತ ಭಾಷೆಯೂ ಹೌದು. ಈ ರಾಷ್ಟ್ರದ ತಂದೆ, ’ಬಾಪೂಜಿ’ ಎಂದು ಗೌರವಿಸುವ ಗಾಂಧಿಯವರು “The education of any Hindu child is incomplete, unless he has got some knowledge of Sanskrit.” ಅಂದರೆ ಹಿಂದೂಸ್ಥಾನದ ಪ್ರತಿಮಗುವಿನ ವಿದ್ಯಾಭ್ಯಾಸ ಸಂಸ್ಕೃತದ ಪರಿಚಯವಿಲ್ಲದಿರೆ ಅಪರಿಪೂರ್ಣ. ಹಾಗಾಗಿ ’ಸಂಸ್ಕೃತದಲ್ಲಿ ನಮ್ಮ ವ್ಯಕ್ತಿತ್ವವನ್ನು ಸಂಸ್ಕರಿಸಬಲ್ಲ, ನಮ್ಮ ಬದುಕಿಗೆ ಹೊಸ ಆಯಾಮವನ್ನು ಕೊಡಬಲ್ಲ, ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲ ಅಪೂರ್ವ ಶಕ್ತಿಯಿದೆ.’ ಎಂಬುದು ಸ್ಪಷ್ಟ. ಈ ಮಾತಿಗೆ ಪೂರಕವಾಗಿ ಸಂಸ್ಕೃತ ಸಾಹಿತ್ಯದಲ್ಲಿ ಬರುವ ಕೆಲವೇ ಕೆಲವು ಸಂದರ್ಭ ಸೂಕ್ತಿಗಳನ್ನು ಇಲ್ಲಿ ಗಮನಿಸೋಣ.

ಸಂಸ್ಕೃತ ಸಾಹಿತ್ಯದ ಅತ್ಯಂತ ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ರಾಷ್ಟ್ರಿಯ ಭಾವೈಕ್ಯವನ್ನು “ ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ “ ಮತ್ತು “ ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ “ ಎಂದು ಹೇಳುವುದರ ಮುಖೇನ ನಮ್ಮ ಯೋಚನೆ, ನಮ್ಮ ಭಾವನೆ, ನಮ್ಮ ಹೃದಯ, ನಮ್ಮ ಮನಸ್ಸು ಎಲ್ಲ ಒಂದಾಗಿ; ನಾವೆಲ್ಲರೂ ಒಟ್ಟಿಗೆ ಮುಂದೆ ಸಾಗೋಣ; ಬಲಿಷ್ಠ ರಾಷ್ಟ್ರ ಕಟ್ಟೋಣ.“ ಎಂದು ಕರೆ ನೀಡುತ್ತದೆ. ಅಥರ್ವವೇದವಂತೂ ಇನ್ನೂ ಮುಂದೆ ಸಾಗಿ “ವಿಶ್ವಂ ಭವತ್ಯೇಕ ನೀಡಮ್.“ ಎನ್ನುತ್ತಾ ಇಡೀ ಜಗತ್ತೇ ಹಕ್ಕಿಯ ಗೂಡಾಗಬೇಕೆಂದು ಸಾರುತ್ತದೆ. ನಮ್ಮ ನಡುವೆಯಿರುವ ಜಾತಿ, ಮತ, ಪಂಥಗಳ ಅಡ್ಡಗೋಡೆಗಳನ್ನು ಕುಟ್ಟಿ ಕೆಡುಹಿ, ಇಡೀ ಜಗತ್ತನ್ನೇ ಒಂದು ಗೂಡಾಗಿಸಬೇಕು; ಅಂಥ ಜಗದ ಲವಲವಿಕೆಯ ಹಕ್ಕಿಗಳು ನಾವಾಗಬೇಕು. ಎಂಬ ಕಲ್ಪನೆ ನಮ್ಮ ಮನೋಭಾವವನ್ನು ವಿಸ್ತರಿಸಿ, ವಿಶ್ವಮಾನವರನ್ನಾಗಿ ಮಾಡುತ್ತದೆ. ಮತ್ತದೇ ಋಗ್ವೇದದಲ್ಲಿ ’ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ.’ ‘Let the noble thoughts come from every side.’ ಎಂದು ಹೇಳಿದೆ. ಹೇಗೆ ಒಂದು ಕೊಠಡಿಯ ಕಿಟಕಿ, ಬಾಗಿಲುಗಳನ್ನು ತೆರೆದಾಗ ಗಾಳಿ, ಬೆಳಕುಗಳು ಕೊಠಡಿಯ ತುಂಬ ಪಸರಿಸುವವೋ; ಹಾಗೆ ನಮ್ಮ ಹೃದಯ, ಮನಸ್ಸುಗಳ ಕದವನ್ನು ತೆರೆದಾಗ ಒಳ್ಳೆಯ ವಿಚಾರಗಳು ನಮ್ಮನ್ನು ಆವರಿಸುತ್ತವೆ. ಇಂಥ ವಿಚಾರಗಳನ್ನು ಮುಕ್ತಮನಸ್ಸಿನಿಂದ ಸ್ವಾಗತಿಸೋಣ. ಇದೇ ರೀತಿ ’ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ, ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ.’ ಎಂಬಂತೆ ’ಕಿವಿ, ಕಣ್ಣುಗಳಿಂದ ಒಳಿತನ್ನು ಕಂಡುಂಡು ನೂರ್ಕಾಲ ಬಾಳೋಣ.’ ಎಂದು ಸಂಸ್ಕೃತ ಸಾಹಿತ್ಯದ ಮೂಲ ಸ್ತಂಭಗಳಾದ ವೇದಗಳು ನಮ್ಮ ವ್ಯಕ್ತಿತ್ವವನ್ನು ಉದಾತ್ತಗೊಳಿಸಲು ಕರೆ ನೀಡುತ್ತವೆ.

ವ್ಯಕ್ತಿತ್ವ-ವಿಕಸನ ಎಂಬುದನ್ನು ತಿಳಿಯಬೇಕಾದರೆ ವ್ಯಕ್ತಿತ್ವ ಎಂಬುದರ ಅರ್ಥ ತಿಳಿಯ ಬೇಕಾಗುತ್ತದೆ. ಮನುಷ್ಯನ ವ್ಯಕ್ತಿತ್ವದಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೂಡಿಕೊಂಡಿವೆ. ಅವುಗಳೆಂದರೆ ಬುದ್ಧಿ, ಮನಸ್ಸು ಮತ್ತು ಇಂದ್ರಿಯಗಳುಳ್ಳ ದೇಹ. ಇವುಗಳಲ್ಲಿ ಬುದ್ಧಿ ಒಂದೆಡೆಯಿದ್ದರೆ ಇಂದ್ರಿಯಗಳು ಇನ್ನೊಂದು ಕಡೆ ಇವೆ. ಬುದ್ಧಿಯಲ್ಲಿ ಅರಿವು ತುಂಬಿ ಅದು ಪ್ರಬಲವಾದರೆ, ಅದರಂತೆ ಮನಸ್ಸು-ಇಂದ್ರಿಯಗಳು ಕಾರ್ಯಪ್ರವೃತ್ತವಾಗುತ್ತವೆ. ಹೀಗಾದಾಗಲೇ ಮಾನವನು ದೇವನಾಗುವ (ಒಳ್ಳೆಯವನಾಗುವ) ಸಾಧ್ಯತೆ ಅಧಿಕವಾಗುತ್ತದೆ. ತದ್ವಿರುದ್ಧವಾಗಿ, ಇಂದ್ರಿಯಗಳು ಬಲಶಾಲಿಯಾಗಿ ಅವುಗಳ ಇಚ್ಛೆಯಂತೆ ಮನಸ್ಸು-ಬುದ್ಧಿಗಳೆರಡೂ ಕೆಲಸ ಮಾಡತೊಡಗಿದರೆ ಮಾನವನು ದಾನವನಾಗುವ (ಕೆಟ್ಟವನಾಗುವ) ಸಂಭವ ಬಲಿಯುತ್ತದೆ. ಶಾರೀರಿಕ ಅಂಗವೈಕಲ್ಯದಿಂದ ಮನುಷ್ಯನು ವಿಕಲಾಂಗನಾಗುವುದಿಲ್ಲ. ಆದರೆ ಬೌದ್ಧಿಕ ವೈಕಲ್ಯದಿಂದ ಸಂಪೂರ್ಣ ವಿಕಲಾಂಗನಾಗಿ ಪಶುವೇ ಆಗಿಬಿಡುತ್ತಾನೆ. ಆದುದರಿಂದ ಹಿತಕಾರಕ ವ್ಯಕ್ತಿತ್ವ ವಿಕಸನವಾಗಬೇಕಾದರೆ ಬುದ್ಧಿ ಬಲಶಾಲಿಯಾಗುವಂತೆ ಪ್ರಯತ್ನವಾಗಬೇಕು. ಒಳಿತು-ಕೆಡುಕುಗಳ ಅರಿವನ್ನು ತುಂಬಿದ ಬುದ್ಧಿಗೇ ವಿವೇಕವೆನ್ನುವರು. ಇಂತಹ ವಿವೇಕೋದಯಕ್ಕೆ ಒಳ್ಳೆಯ ಆಲೋಚನೆಯ ಜೊತೆಗೆ ಉತ್ತಮ ಪ್ರಾರ್ಥನೆಯೂ ಬೇಕು. ಅದಕ್ಕಾಗಿ ಪೂರ್ವಜರು “ಧಿಯೋ ಯೋ ನಃ ಪ್ರಚೋದಯಾತ್.“ ಎಂದು ಪ್ರಾರ್ಥಿಸಿದರು.

ಹೀಗೆ ಮನಸ್ಸು ಬುದ್ಧಿಗಳಿಗೆ ಉತ್ತಮ ಆಹಾರವನ್ನು ಸಂಸ್ಕೃತ ಸಾಹಿತ್ಯ ಮಾನವ ಸಮಾಜಕ್ಕೆ ನೀಡಿದೆ. ಜೊತೆಗೆ ಶಾರೀರಿಕ ದೃಢತೆಗೂ ಈ ಸಾಹಿತ್ಯದಲ್ಲಿ ವಿಪುಲ ಸಂಗ್ರಹಗಳಿವೆ. ಉದಾಹರಣೆಯಾಗಿ ಧನ್ವಂತರಿಯು ವೈದ್ಯಶ್ರೇಷ್ಠರಾದ ವಾಗ್ಭಟರಲ್ಲಿ “ಕೋರುಕ್ ?” ಅಂದರೆ ಯಾರು ರೋಗ ಬಾರದವರು? ಎಂದು ಪ್ರಸ್ನಿಸಿದಾಗ ಅವರು ’ಹಿತಭುಕ್, ಮಿತಭುಕ್, ಶಾಕಭುಕ್.’ ಎಂದು ಹೇಳಿದರು.  ಅದರರ್ಥ “ ಯಾರು ಹಿತಮಿತವಾಗಿ ಆಹಾರವನ್ನು ಸೇವಿಸುತ್ತಾ, ಕಾಯಿಪಲ್ಲೆಗಳನ್ನೇ ಹೆಚ್ಚು ಹೆಚ್ಚಾಗಿ ಉಪಯೋಗಿಸುವರೋ ಅವರೇ ಆರೋಗ್ಯವಂತರು.” ಎಂದು. ಇದೇ ರೀತಿ ಆಯುರ್ವೇದ, ಯೋಗಶಾಸ್ತ್ರಗಳಲ್ಲಿ ದೇಹಾರೋಗ್ಯವನ್ನು ಚೆನ್ನಾಗಿಡುವ ಕುರಿತು ಸಾರ್ವಕಾಲಿಕವೂ, ಸಾರ್ವಜನೀನವೂ ಆದ ಮಾರ್ಗವನ್ನು ಹೇಳಿದೆ.

ಒಟ್ಟಿನಲ್ಲಿ ಸಮಗ್ರ ಸಂಸ್ಕೃತ ಸಾಹಿತ್ಯ ನಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳಲು ಬೇಕಾದ ಮನೋಬಲ, ಬುದ್ಧಿಬಲ, ಶರೀರಬಲ, ಆತ್ಮಬಲಗಳನ್ನು ಒದಗಿಸಿ ಕೊಡುತ್ತದೆ. ಮನುಷ್ಯರಾದ ನಾವು ”ಉದ್ಧರೇದಾತ್ಮನಾತ್ಮಾನಮ್.” ಎಂಬಂತೆ ನಮ್ಮ ಬಾಳಿಗೆ ನಾವೇ ಶಿಲ್ಪಿಗಳು. ಎಂದರಿತು, ಸಂಸ್ಕೃತವನ್ನಾಶ್ರಯಿಸಿ, ನಮ್ಮ ವ್ಯಕ್ತಿತ್ವವನ್ನು ನಾವು ರೂಪಿಸಿ ಕೊಳ್ಳೋಣ. 

ಸಂಗ್ರಾಹಕಃ
ಪರಮೇಶ್ವರ ಪುಟ್ಟನ್ಮನೆ

No comments:

Post a Comment