ಒಂದು ದಿನ ಮನೆಯ ಮುಂದಿರುವ ಹಣತೆಯಲ್ಲಿ ಚಿಕ್ಕ
ಜಗಳ ಪ್ರಾರಂಭವಾಯಿತು.
ಹಣತೆ ” ನನ್ನಿಂದ
ದೀಪ ಉರಿಯುತ್ತಿದೆ! ಆ ಬೆಳಕು ನನ್ನದು ” ಎಂದು ಹೇಳಿತು. ಇದನ್ನು ಕೇಳಿದ ಹಣತೆಯಲ್ಲಿದ್ದ
ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ. ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ! ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು...” ಎಂದಿತು. ಅಲ್ಲಿಯೇ ಇದ್ದ ಬತ್ತಿ ” Hello! ನಾನು
ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ. Logically ಬೆಳಕು
ನನ್ನದು “ ಎಂದಿತು. ಈ ಕಚ್ಚಾಟವನ್ನು ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯುವುದಿಲ್ಲ! ಒಂದು ವೇಳೆ ನಾನು ಜೋರಾಗಿ ಬಂದರೆ
ದೀಪ ಆರಿಹೋಗುತ್ತದೆ. ಆದ್ದರಿಂದ ಬೆಳಕು ನನ್ನ ನಿಯಂತ್ರಣದಲ್ಲಿದೆ ” ಎಂದು
ವಾದಿಸಿತು. ಈ ವಾದ ವಿವಾದಗಳ ಭರಾಟೆಯಲ್ಲಿ ಹಣತೆ ಒಡೆದು ಹೋಯಿತು.
ಎಣ್ಣೆ ಹರಿದು ಹೋಯಿತು.
ಬತ್ತಿ ಒಂಟಿಯಾಗಿ ಸೊರಗಿ ಹೋಯಿತು.
ಗಾಳಿ ಜೋರಾಗಿ ಬೀಸಿ, ಉರಿಯುತ್ತಿದ್ದ ದೀಪ ಆರಿಹೋಯಿತು !
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ, ಆ ಭರವಸೆಯ ಬೆಳಕು ಮನೆಯಲ್ಲೆಲ್ಲಾ ಪಸರಿಸಿರುತ್ತಿತ್ತು. ” ಅಹಮಿಕೆಯಿಂದ ಅಂಧಕಾರ ಮನೆಯನ್ನು ಹೊಕ್ಕಿತು... ”
ಇಂಥ ಒಂದು ಕಥೆ ಮನುಷ್ಯನ ಕಣ್ಣನ್ನು ಅದೆಷ್ಟು
ಬಾರಿ ತೆರಿಸಿದೆಯೋ??? ಅದಕ್ಕೆ ನಾವು ಚಿರ ಋಣಿಗಳು... ಇಂಥ ಕಥೆಗಳನ್ನು ಹೇಳುವ ಮತ್ತು ಕೇಳುವ
ಪರಿಪಾಠ... ಬಾಲ್ಯದಿಂದಲೂ ನಮ್ಮ ಜೊತೆ ಬಂದಿದೆ. ಮೌಖಿಕವಾಗಿ ಕಥೆಗಳನ್ನು ಹಂಚಿಕೊಳ್ಳುವ ವಿಧಾನ
ಅತ್ಯಂತ ಹಳೆಯದ್ದಾಗಿದ್ದು, ಹೆಚ್ಚಾಗಿ
ಜನರ ಒಳ್ಳೆಯ ವರ್ತನೆಗೆ ಮತ್ತು ಮೌಲ್ಯಯುತ ಬದುಕಿಗೆ ಈ ಕಥೆಗಳು ತುಂಬಾ ಸಹಕಾರಿಗಳಾಗಿವೆ.
ಕಥೆ ಎಂದರೆ ಬರಹದ ಅಥವಾ ಮಾತಿನ ಮೂಲಕವಾಗಿ, ತಾನು
ಕಂಡ ಅಥವಾ ಕೇಳಿದ ವಿಷಯವನ್ನು ಚಿತ್ರಿಸುವುದು. ಕನ್ನಡದಲ್ಲಿ ಪ್ರಾಚೀನ
ಕಾಲದಿಂದಲೂ ಕತೆಗಳು ಜನಪ್ರಿಯವಾಗಿವೆ. ವಡ್ಡಾರಾಧನೆ,
ಪಂಚತಂತ್ರಕಥೆಗಳು,
ಬೃಹತ್ಕಥೆ, ಕಥಾಸರಿತ್ಸಾಗರ, ನೀತಿಕಥೆಗಳು, ಪುರಾಣಕಥೆಗಳು, ಉಪನಿಷತ್ಕಥೆಗಳು
ಹೀಗೆ ಕಥೆಗಳ ಸಾಲುಗಳನ್ನೇ ಕಾಣುತ್ತೇವೆ. ಪ್ರತಿನಿತ್ಯ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಮತ್ತು ವಿಶೇಷ ಸಂಚಿಕೆಗಳಲ್ಲಿ
ಹೊಸ ಹೊಸ ಕಥೆಗಳು
ಪ್ರಕಟವಾಗುತ್ತಲೇ ಇರುತ್ತವೆ. ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ, ಸ್ವಾರಸ್ಯವಾಗಿ
ನಿರೂಪಿಸುವ, ಈ ಸಾಹಿತ್ಯ ಪ್ರಕಾರವನ್ನು
ಇಷ್ಟ ಪಡದವರಿಲ್ಲ! ಕಥಾ ಸಾಹಿತ್ಯವನ್ನು ಚುಟುಕು(ತುಣುಕು) ಕಥೆಗಳು, ಸಣ್ಣ ಕಥೆಗಳು ಮತ್ತು
ನೀಳ್ಗಥೆಗಳು ಎಂದು ವಿಭಾಗಿಸಬಹುದು. ಈ ಎಲ್ಲ ಚೌಕಟ್ಟನ್ನೂ ದಾಟಿದ ಭಾಗವೇ ಕಾದಂಬರಿಯೆನಿಸುತ್ತದೆ.
ಅದೂ ಕೂಡ ಸಾಹಿತ್ಯ ಪ್ರಕಾರಗಳಲ್ಲಿ
ಜನಪ್ರಿಯವಾಗಿದೆ. ಪ್ರಕೃತ ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಸಾಹಿತ್ಯಪ್ರಕಾರ
ಎನ್ನಬಹುದು.
