Sunday, September 08, 2024

'ಗಣಪತಿ ಮತ್ತು ಸಂಕಷ್ಟ ಚತುರ್ಥೀ ವ್ರತ'.

ಮನುಷ್ಯ ಸದಾ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಅದಕ್ಕೆ ಆತ ಮಾಡದ ಕೆಲಸವಿಲ್ಲ! ಓಡದ ಸ್ಥಳವಿಲ್ಲ!  ಒಂದಿಲ್ಲೊಂದು ರೀತಿಯಲ್ಲಿ ಸಂತಸದ ಸತತಾನ್ವೇಷಿಯಾಗಿ ಸಾಗುವ ಮನುಷ್ಯ; ಕಡೆಯಲ್ಲಿ ಪಡೆಯುವುದೇನು? ಎಂಬುದು ಯಕ್ಷಪ್ರಶ್ನೆಯಾಗಿ ಜೀವಿತದ ಕೊನೆಗೆ ಕಾಡುತ್ತಿರುತ್ತದೆ. ಇದಕ್ಕೆ ಉತ್ತರವಾಗಿ ಋಷಿಗಳು ಕಂಡುಕೊಂಡಿದ್ದು, ಶುಭಸ್ಮರಣೆಯೇ ಜೀವನದುದ್ದಕ್ಕೂ ಬರುವಂತಾಗಬೇಕು. ಅದಕ್ಕೆ ದೇವನು ವೇದಿಕೆಯನ್ನುಂಟು ಮಾಡಿಕೊಡಬೇಕು… ಎಂದು ಬೇಡಿಕೊಂಡರು…  
“ ಸ ನೋ ದೇವಶ್ಶುಭಯಾ ಸ್ಮೃತ್ಯಾ ಸಂಯುನಕ್ತು “
ಈ ಸಂಯೋಗ ವೇದಿಕೆಯಲ್ಲಿ  ಜೀವ ದೇವರ ಸಂಯೋಗ ಸಾಂದರ್ಭಿಕವಾಗಿ ಏರ್ಪಡಬೇಕು... ಈ ಸಂಯೋಗಕ್ಕೆ ಅಥವಾ ಈ ಸಂತೋಷಕ್ಕೆ ಮನುಷ್ಯ ಸದಾ ಆತುರನಾಗಿದ್ದಾನೆ. ಅದಕ್ಕೆಂದೇ ಮಹಾಕವಿ ಕಾಳಿದಾಸ ’ಉತ್ಸವಪ್ರಿಯಾಃ
ಖಲು ಮನುಷ್ಯಾಃ!’ ಎಂದು ಹೇಳಿರುವುದು. ಉತ್ಸವ ಎಂದರೆ ಹಬ್ಬ ಎಂದರ್ಥ. ಈ ಹಬ್ಬ ಹರಿದಿನಗಳು ಸನಾತನಿಗಳಲ್ಲಿರುವಷ್ಟು ಮತ್ತೆ ಯಾರಲ್ಲೂ ನಾವು ಈ ಪ್ರಮಾಣದಲ್ಲಿ ಕಾಣಲಾರೆವು! ಎಂದು ಅಂದುಕೊಳ್ಳುತ್ತೇನೆ. ಅದಕ್ಕೆ ಮೂಲ ಕಾರಣ ಶುಭಸ್ಮರಣೆಗಳಿಂದ ಮನಸ್ಸನ್ನು ಉದ್ಧರಿಸಿ ಕೊಳ್ಳುವುದೇ ಆಗಿದೆ. ಅದನ್ನೇ ಡಿ. ವಿ. ಗುಂಡಪ್ಪನವರು ತಮ್ಮ ಮುಕ್ತಕವೊಂದರಲ್ಲಿ ಹೀಗೆ ಹೇಳಿದ್ದಾರೆ.

ದೇವಮಂದಿರ ಭಜನೆ ಪೂಜೆ ಪ್ರಸಾದಗಳು ಜೀವನದಲಂಕಾರ, ಮನಸಿನುದ್ಧಾರ

ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- ದಾವುದಾದೊಡಮೊಳಿತು - ಮಂಕುತಿಮ್ಮ

ಕ್ಷುಲ್ಲಕಜಗದ ತಳಹದಿಯಿಂದ ಮೇಲೆ - ಏಳುವ ಮನಸ್ಸುಳ್ಳವರಿಗೆ ದೇವ ಸೇತುವಾಗಿ ನಿಲ್ಲಿತ್ತಾನೆ. ಆ ದೇವನೇ ಗಣೇಶ ಅಥವಾ ಗಣಪತಿ. ಆತನ ಕುರಿತಾಗಿ ಬ್ರಹ್ಮವೈವರ್ತಪುರಾಣದಲ್ಲಿ

ಜ್ಞಾನಾರ್ಥವಾಚಕೋ ಗಶ್ಚ ಣಶ್ಚ ನಿರ್ವಾಣವಾಚಕಃ |

ತಯೋರೀಶಂ ಪರಂ ಬ್ರಹ್ಮ ಗಣೇಶಂ ಪ್ರಣಮಾಮ್ಯಹಮ್ || ಎಂದು ನಿರ್ವಚನ ನೀಡಿದ್ದಾರೆ. ಇವ ವೇದಕಾಲದವ ಅಲ್ಲ! ಇವ ದ್ರಾವಿಡರ ದೇವ! ಇವನಿಗೆ ಆರ್ಯಮರ್ಯಾದೆಯಿಲ್ಲ! ಇವ ಗಾಂಪರ ದೇವ! ಈ ರೀತಿ ಹಲವು ಹತ್ತು ಮಾತುಗಳಿಂದ ಸನಾತನಿಗಳಾದ ನಮ್ಮ ಮನಸ್ಸನ್ನು ಮುರಿಯುವ ಹುನ್ನಾರವೊಂದು ಬಹುಕಾಲದಿಂದ ನಡೆದುಕೊಂಡು ಬರುತ್ತಲಿದೆ. ಇವಕ್ಕೆಲ್ಲ ಸೊಪ್ಪು ಹಾಕುವುದು ಅನಗತ್ಯ! ಎಂಬುದು ನನ್ನ ಅಭಿಪ್ರಾಯ…. ಏಕೆಂದರೆ ವೇದಕಾಲ, ಉಪನಿಷತ್-ಕಾಲ ಸ್ಮೃತಿಕಾಲ, ಶಾಸ್ತ್ರಕಾಲ ಈ ರೀತಿ ವಿಭಾಗವೇ ಅವೈಜ್ಞಾನಿಕವಾಗಿದೆ. ಕಾಲವನ್ನು ಬೇಕಾದಷ್ಟು ವಿಭಾಗಿಸುವ, ವಿವೇಚಿಸುವ - ಅದರದ್ದೇ ಆದ ಸಂಜ್ಞೆಗಳಿವೆ. ಸಂವತ್ಸರ, ಮನ್ವಂತರ, ಯುಗಗಳೇ ಮೊದಲ್ಗೊಂಡು ಲವ, ತ್ರುಟಿ, ಕಲಾ, ಕಾಷ್ಠಾ ಎಂದೆಲ್ಲಾ ಕ್ಷಣ ಕ್ಷಣವನ್ನೂ ವಿಭಾಗಿಸಿ ಹೇಳಲಾಗಿದೆ. ಇದಲ್ಲದೇ  ಹಳೇಯದಾದರೆ ಶ್ರೇಷ್ಠ; ಹೊಸದು ಕನಿಷ್ಠ ಎಂಬಿತ್ಯಾದಿಯಾಗಿ ಯಾಕೆ ಈ ತರಹದ ವಿಚಾರಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ?  ಪ್ರಾಜ್ಞರಂತೂ “ಪುರಾಣಮಿತ್ಯೇವ ನ ಸಾಧು ಸರ್ವಂ” ಎಂದು ಸಾರಿ ಹೇಳಲಿಲ್ಲವೇ? ಗಣಗಳ ಅಧಿಪನಾಗಿ, ಜ್ಞಾನನಿರ್ವಾಣಕಾರಣನಾಗಿ, ಪರಬ್ರಹ್ಮನಾಗಿ ಗಣಪತಿ ಸದಾಕಾಲ, ಯಾವತ್ತೂ, ಯುಗಯುಗಗಳಿಂದಲೂ ನಮ್ಮ ದೇವರಾಗಿ ನಮ್ಮೆಲ್ಲರಿಗೆ ವಿಘ್ನನಿವಾರಕನಾಗಿ, ಅಭೀಷ್ಟಪ್ರದನಾಗಿ ನಮ್ಮ ಜೊತೆಯಲ್ಲಿಯೇ ಇದ್ದಾನೆ. ಇನ್ನೇನು? ನಮ್ಮೊಳಗೇ ಅವಿತಿದ್ದಾನೆ!

ಪಾಶ್ಚಾತ್ಯವಿಚಾರಧಾರೆಯಲ್ಲಿ ಕಾಲ ಒಂದು ಸರಳರೇಖೆಯಾಗಿ ತೋರುತ್ತದೆ. ಮಧ್ಯ ಬಿಂದುವಿನಿಂದ ಮುಂದೆ ಕ್ರಿಸ್ತಶಕ ಎಂಬುದಾಗಿಯೂ, ಅದರ ಹಿಂದೆ ಕ್ರಿಸ್ತಪೂರ್ವ ಎಂಬುದಾಗಿಯೂ ಗಣನೆಯನ್ನು ನಾವು ನೋಡುತ್ತೇವೆ. ಆದರೆ ಭಾರತೀಯ ವಿಚಾರಧಾರೆಯಲ್ಲಿ ಕಾಲ ಒಂದು ವರ್ತುಳ ಅಥವಾ ಚಕ್ರ. ಹಾಗಾಗಿ ಇಲ್ಲಿ ಯುಗಗಳೂ ಮನ್ವಂತರಗಳೂ ಆವೃತ್ತಿಯಾಗುತ್ತಿರುತ್ತವೆ.  ಅದರ ಪರಿಣಾಮವಾಗಿ ವರ್ತುಳದಲ್ಲಿ ಕಡೆ-ಮೊದಲಿಲ್ಲ! ಹಾಗಾಗಿ ನಮಗೆ ಇದು ಮೊದಲು ಇದು ಕೊನೆ ಎಂಬ ವಿಭಾಗ ರೂಢಿಯಲ್ಲಿಲ್ಲ! ವೃತ್ತವೊಂದರಲ್ಲಿ ಶೂನ್ಯಕ್ಕೂ ಪೂರ್ಣಕ್ಕೂ (೦-೩೬೦) ವ್ಯತ್ಯಾಸ ತೋರಿಸುವುದೂ ಕಷ್ಟಸಾಧ್ಯವಾಗಿದೆ. ಹಾಗಾಗಿ ಉಪನಿಷತ್ತಿನಲ್ಲಿ “ವಿಜ್ಞಾತಂ ಅವಿಜಾನತಾಂ, ಅವಿಜ್ಞಾತಂ ವಿಜಾನತಾಂ” ಎಂಬ ಅಪರೂಪದ ವಾಕ್ಯಗಳನ್ನೂ ನಾವು ಕಾಣಬಹುದು. ಇಂಥ ಮಾತುಗಳು ದಾರ್ಶನಿಕ ಪ್ರಪಂಚದಲ್ಲಿ ಸಂಚಲನವನ್ನೇ ಎಬ್ಬಿಸಿವೆ. ಹಾಗಾಗಿ ಭಾರತ ಇಂದಿಗೂ ಜ್ಞಾನದೀವಿಗೆಯಾಗಿ (ಅನ್ವರ್ಥವಾಗಿ) ರಾರಾಜಿಸುತ್ತಿದೆ.

ಧಾಯೇತ್ಸಿಂಹಗತಂ ವಿನಾಯಕಮಮುಂ ದಿಗ್ಬಾಹುಮಾದ್ಯೇ ಯುಗೇ |

ತ್ರೇತಾಯಂ ತು ಮಯೂರವಾಹನಮಮುಂ ಷಡ್ಬಾಹುಕಂ ಸಿದ್ಧಿದಮ್ ||

ದ್ವಾಪರೇ ತು ಗಜಾನನಂ ಯುಗಭುಜಂ ರಕ್ತಾಂಗರಾಗಂವಿಭುಮ್ |

ತುರ್ಯೇ ತು ದ್ವಿಭುಜಂ ಸಿತಾಂಗರುಚಿರಂ ಸರ್ವಾರ್ಥದಂ ಸರ್ವದಾ || ಹೀಗೆ ಗಣೇಶಪುರಾಣದಲ್ಲಿಯ ಧ್ಯಾನವೊಂದನ್ನು ಪರಿಶೀಲಿಸಲಾಗಿ, ಗಣಪತಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ವಿರಾಜಮಾನನಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಷ್ಟೇ ಅಲ್ಲ! ಸ್ಕಾಂದ ಪುರಾಣದಲ್ಲಿ ಸ್ಕಂದ-ಋಷಿಗಳ ಸಂವಾದದಲ್ಲಿ ಪಾರ್ವತಿಯೇ ಪರಶಿವನನ್ನು ಮೆಚ್ಚಿ ವಿವಾಹವಾಗುವಾಗ; ತನ್ನ ಬಯಕೆ ನೆರವೇರಲು ಗಣಪತಿಯನ್ನು ಸ್ಮರಿಸಿಕೊಂಡ ಸನ್ನಿವೇಶ ವರ್ಣಿತವಾಗಿದೆ.

ಪುರಾ ಕೃತಯುಗೇ ಪುಣ್ಯೇ ಹಿಮಾಚಲಸುತಾ ಸತೀ |

ತಪಸ್ತಪ್ತವತೀ ಭೂರಿ ನ ಲಬ್ಧಾ ಸಾ ಶಿವಂ ಪತಿಮ್ ||

ತದಾಸ್ಮರತ್ಸಾ ಹೇರಮ್ಬಂ ಗಣೇಶಂ ಪೂರ್ವಜಂ ಸುತಮ್ | … ಕಲ್ಪಾಂತರದಲ್ಲಿ ತಾಯಿಯಾಗಿದ್ದ ಪಾರ್ವತಿಗೆ ಗಣಪತಿ ಪ್ರತ್ಯಕ್ಷನಾಗಿ ಸಂಕಷ್ಟಹರಗಣಪತಿವ್ರತವನ್ನು ಬೋಧಿಸಿದ್ದು ಕಂಡುಬರುತ್ತದೆ. ಇದು ಕೃತಯುಗದ ವಿಷಯವಾಗಿದೆ. ಹಾಗಾಗಿ ಯುಗಯುಗಗಳಲ್ಲಿ ಸದಾಸರ್ವದಾ ನಮ್ಮ ಹೃದಯದಲ್ಲಿ ವಾಸವಾಗಿರುವ ಗಣೇಶ ನಮ್ಮ ಎಲ್ಲ ಸಂಕಷ್ಟಗಳನ್ನೂ ಪರಿಹರಿಸಲು ಸಮರ್ಥ!

ಯದಾ ಯದಾ ಪರಂ ವಿಪ್ರಾ ನರಃ ಪ್ರಾಪ್ನೋತಿ ಸಂಕಟಮ್ |

ತದಾ ತದಾ ಪ್ರಕರ್ತವ್ಯಂ ವ್ರತಂ ಸಂಕಷ್ಟನಾಶನಮ್ || ಕಷ್ಟಗಳು ಯಾರನ್ನು ಬಿಟ್ಟಿಲ್ಲ!? ಎಲ್ಲರೂ ಒಂದಿಲ್ಲೊಂದು ಜೀವನ ಘಟ್ಟದಲ್ಲಿ ಕಷ್ಟಕ್ಕೆ ತುತ್ತಾಗುತ್ತಾರೆ. ಈ ಕಷ್ಟವನ್ನು ಸಂಕಷ್ಟವಾಗಿಸಿಕೊಂಡು ಮನುಷ್ಯ ವಿಲಿವಿಲಿ ಒದ್ದಾಡುತ್ತಾನೆ. ಹಾಗಾದರೆ ಕಷ್ಟ ಮತ್ತು ಸಂಕಷ್ಟಗಳ ಅಂತರ ತಿಳಿಯೋಣ.

  • ಬಂದ ಕಷ್ಟ ತನಗೇ ಏಕೆ ಬಂತು?
  • ತಾನು ಇಷ್ಟು ಒಳ್ಳೆಯ ಕೆಲಸಕಾರ್ಯಗಳನ್ನು ಮಾಡಿದ್ದರೂ ದೇವ ಏಕೆ ಕಷ್ಟ ಕೊಟ್ಟ?
  • ಈ ಕಷ್ಟ ಯಾವಾಗ ದೂರಾಗುತ್ತದೆ?
  • ಇದು ಇನ್ನೊಬ್ಬರಿಗೆ ಯಾಕೆ ಬರಲಿಲ್ಲ (ಬರುವುದಿಲ್ಲ)?
  • ಇದರಲ್ಲೇ ದಿನವೂ ಸೊರಗಿ ಬದುಕುವುದಕ್ಕಿಂತ ಸಾಯುವುದು ಲೇಸು!
  • ಕಷ್ಟದ ಪಾತಳಿಯಿಂದ ಮನಸ್ಸನ್ನು ಬೇರೆಡೆಗೆ ವರ್ಗಾಯಿಸಲು ಹತ್ತಿರದವರು ಎಷ್ಟೇ ಪ್ರಯತ್ನಿಸಿದರೂ; ತನ್ನ ಭಾಗ್ಯವೇ ಇಷ್ಟು! ಎಂದು ಆ ಕಡೆ ಮುಖಮಾಡದೇ ನೊಂದುಕೊಂಡು, ಮರುಗುತ್ತಾ ಹತ್ತಿರದವರನ್ನೂ ನೋಯಿಸಿ, ಬದುಕುವುದು...
  • ಪಕ್ಕದವನು ನಕ್ಕರೆ ಸಂಶಯಿಸುವುದು...

ಹೀಗೆ ಹಲವು ಹತ್ತು ಸಂಕಷ್ಟ ಭೂತಗಳನ್ನು(ದೆವ್ವಗಳನ್ನು) ನಿತ್ಯವೂ ಜನರ ಮಾನಸವಲಯದಲ್ಲಿ ಎದ್ದು ಕುಣಿಯುತ್ತಿರುವಂತೆ ಇರುವುದನ್ನು ಕಾಣುತ್ತೇವೆ. ಇಂಥ ಸಂದರ್ಭದಲ್ಲಿ ಕಷ್ಟವನ್ನು ಸಂಕಷ್ಟವಾಗಿಸಿಕೊಂಡ ಮನುಷ್ಯನ ಮನಸ್ಸಿಗೆ ಶಾಂತಿ ಸಮಾಧಾನವಾಗಲು; ವರ್ತುಳಾಕಾರವೂ, ಸದಾ ಚಂಚಲವೂ, ಆದ ಮನಸ್ಸು ಒಂದೆಡೆ ನೆಲೆ ನಿಲ್ಲಲು ಸಂಕಷ್ಟಹರಗಣಪತಿವ್ರತ ರಾಮಬಾಣವಾಗಿದೆ. ಎಲ್ಲ ವ್ರತಗಳೂ ಶರೀರ ತಾಪನೆಯಿಂದ ಮನಸ್ಸನ್ನು ಹದಗೊಳಿಸುವವೇ ಆಗಿವೆ. ಸರ್ವೇ ಮನೋ ನಿಗ್ರಹ ಲಕ್ಷಣಾಂತಾಃ ಎಂಬ ವಚನದಂತೆ ವ್ರತ ನಿಯಮಗಳು ಕಂಡ ಕಡೆ ತಿರುಗುವ ಮನಸ್ಸನ್ನು ಸ್ವಚ್ಛಗೊಳಿಸುತ್ತವೆ. ಅದಕ್ಕೆಂದೇ ಸುಮಾರು ವರ್ಷಕ್ಕೆ ಮುನ್ನೂರೈವತ್ತಕ್ಕೂ ಹೆಚ್ಚು ವ್ರತಗಳನ್ನು ನಾವು ಸನಾತನ ವ್ರತಗಳ ಯಾದಿಯಲ್ಲಿ ಕಾಣಬಹುದು. 

ಈ ವ್ರತಗಳನ್ನು ನಿತ್ಯವ್ರತಗಳು ಮತ್ತು ಕಾಮ್ಯವ್ರತಗಳು; ಉಪವಾಸಾದಿ ನಿಯಮ ಪ್ರಧಾನ ವ್ರತಗಳು ಮತ್ತು ಪೂಜಾಕೈಂಕರ್ಯ ಪ್ರಧಾನವಾಗಿರುವ ವ್ರತಗಳು; ಪುರುಷರ ವ್ರತಗಳು ಮತ್ತು ಸ್ತ್ರೀಯರ ವ್ರತಗಳು; ಲೋಕಾಂತ (ಉತ್ಸವಪ್ರಧಾನ) ವ್ರತಗಳು ಮತ್ತು ಏಕಾಂತ (ವಯಕ್ತಿಕವಾದ) ವ್ರತಗಳು; ವೈದಿಕ ವ್ರತಗಳು, ಸ್ಮಾರ್ತವ್ರತಗಳು, ಪೌರಾಣಿಕ ವ್ರತಗಳು ಮತ್ತು ಲೌಕಿಕ ವ್ರತಗಳು ಹೀಗೆ ಹಲವು ಹತ್ತು ರೀತಿಯಲ್ಲಿ ವಿಭಾಗಿಸಬಹುದು....  

ಪ್ರಕೃತದಲ್ಲಿ ಗಣಪತಿ ತನ್ನ ತಾಯಿಗೆ ಮದುವೆಯ ಸಂದರ್ಭದಲ್ಲೂ, ತಂದೆಗೆ ತ್ರಿಪುರಾಸುರಸಂಹಾರ ಸಂದರ್ಭದಲ್ಲೂ, ಇಂದ್ರನಿಗೆ ಪದವಿಯಿಂದ ಚ್ಯುತನಾದ ಸಂದರ್ಭದಲ್ಲೂ, ಹನುಮಂತನಿಗೆ ಸೀತಾನ್ವೇಷಣೆಯ ಸಂದರ್ಭದಲ್ಲೂ ಕಾರ್ಯಸಿದ್ಧಿಗಾಗಿ ಸಂಕಷ್ಟಹರ ಗಣಪತಿವ್ರತವನ್ನು ಮಾಡಿದಾಗ; ಅವರಿಗೆ ಅಭಯವನ್ನೂ, ನಿರ್ವಿಘ್ನತೆಯನ್ನೂ, ಸಂಕಷ್ಟನಿವಾರಣೆಯನ್ನೂ ಮಾಡಿರುತ್ತಾನೆ. ಹಾಗಾಗಿ ಸಂಕಷ್ಟದಲ್ಲಿರುವ ನಾವು ಅದರ ಪರಿಹಾರಕ್ಕೆ ಅತೀ ಯೋಗ್ಯವಾದ ನಿತ್ಯವ್ರತ ಒಂದಿದ್ದರೆ ಅದು ಸಂಕಷ್ಟಹರಗಣಪತಿ ವ್ರತ.

ಪ್ರತಿಮಾಸಂ ತು ಯಃ ಕುರ್ಯಾತ್ - ತ್ರೀಣ್ಯಬ್ದಾನ್ಯೇಕಮೇವ ವಾ |

ಅಥವಾ ಜನ್ಮ ಪರ್ಯಂತಂ ತಸ್ಯ ದುಃಖಂ ಕದಾಚನ |

ದಾರಿದ್ರ್ಯಂ ಭವೇತ್ತಸ್ಯ ಸಂಕಷ್ಟಂ ಭವೇದಿಹ || 

ಈ ಪೌರಾಣ ವಚನವನ್ನನುಸರಿಸಿ, ಗಣಪತಿಗೆ ಮನಸ್ಸನ್ನು ಅರ್ಪಿಸಿದರೆ ಸಂಕಷ್ಟ ಪಿಶಾಚಿಗಳು ಮನಸ್ಸಿನಿಂದ ದೂರಾಗುವುದರಲ್ಲಿ ಸಂದೇಹವಿಲ್ಲ! ಮನಸ್ಸೊಂದು ಪಕ್ವಗೊಂಡರೆ ಬದುಕೇ ಹಸನಾದಂತೆ! ಜೀವಭಾರವನು ಮರೆತಂತೆ, ಅಲ್ಲವೇ?

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು ।

ನೆನೆಯದಿನ್ನೊಂದನೆಲ್ಲವ ನೀಡುತದರಾ ॥

ಅನುಸಂಧಿಯಲಿ ಜೀವಭಾರವನು ಮರೆಯುವುದು ।

ಹನುಮಂತನುಪದೇಶ – ಮಂಕುತಿಮ್ಮ ||

ನಮ್ಮ ಮನಸ್ಸನ್ನು ಸಂಕಷ್ಟಹರ ಗಣಪತಿಯ ಪದತಳಕ್ಕೆ ಸಮರ್ಪಿಸಿ, ಶಾಂತವಾಗಿಸಿ, ಕಷ್ಟಕೋಟಲೆಗಳನ್ನು ಸಮರ್ಥವಾಗಿ ಎದುರಿಸಿ, ಬದುಕನ್ನು ಬಾಳಾಗಿಸೋಣ. ಹನುಮಂತನನ್ನು ಆದರ್ಶವಾಗಿಸಿ, ಗಣಪತಿಯನ್ನು ಆರಾಧಿಸಿ, ಆರಾಧನಾ ಮಾರ್ಗದಲ್ಲಿ ಮುಂದೆ ಸಾಗೋಣ. ಈ ಶುಭ ಸ್ಮೃತಿ ನಮ್ಮ ಮನಸ್ಸಿನಲ್ಲಿ ಸದಾ ಗಣಪತಿಯನ್ನು ನೆಲೆಯಾಗಿಸಲಿ.... ವಂದನೆಗಳು. 

ಗೌರೀ ಗಣೇಶ ಹಬ್ಬದ ಶುಭಾಶಯಗಳು





ಪರಮೇಶ್ವರ ಪುಟ್ಟನ್ಮನೆ

No comments:

Post a Comment