ವಿವಾಹ ಸಂಸ್ಥೆಯ ಮುಖ್ಯ ಉದ್ದೇಶವೇ ಉತ್ತಮ ಸಂತಾನ
ಪಡೆಯುವುದು. ಹಾಗಾದರೆ ಸಂತಾನ ಲಾಭವಾದ ಮೇಲೆ ವಿವಾಹ ಸಂಸ್ಕಾರ
ತನ್ನ ಅರ್ಥ ಕಳೆದು ಕೊಳ್ಳುವುದೇ? ಹಾಗೇನಿಲ್ಲ! ಹುಟ್ಟಿದ ಮಗುವನ್ನು ದೇಶದ ಉತ್ತಮ
ಪ್ರಜೆಯಾಗಿಸುವವರೆಗೂ ಈ ಸಂಸ್ಥೆ ತನ್ನ ಕಾರ್ಯಕಲಾಪದಿಂದ ಹಿಂದೆ ಸರಿಯುವ ಮಾತೇ ಇಲ್ಲ! ಮಗು
ಹುಟ್ಟಿದ ಮೇಲೆ ’ವಿವಾಹ’ ಸಂಸ್ಕೃತಿಯಾಗಿ ಕೆಲಸ ಮಾಡಿದರೆ, ಮಗು ಹುಟ್ಟುವುದರೊಳಗೆ ಅದು
ಸಂಸ್ಕಾರವಾಗಿ ತನ್ನ ಪಾತ್ರವನ್ನು ಎತ್ತಿ ತೋರಿಸಿದೆ.
ಒಳ್ಳೆಯ ಮಗು ನಮ್ಮಿಂದ ಬರಬೇಕಾದರೆ ನಮ್ಮ
ಕರ್ತವ್ಯವೇನು? ಎಂದರೆ, ಅಷ್ಟಾಂಗ ಹೃದಯ ಗ್ರಂಥದಲ್ಲಿ ವಾಗ್ಭಟ ಮಹರ್ಷಿಗಳು ’ಇಚ್ಚೇತಾಂ
ಯಾದೃಶಂ ಪುತ್ರಂ ತದ್ರೂಪ ಚರಿತಾಂಶ್ಚ ತೌ | ಚಿಂತಯೇತಾಂ ಜನಪದಾಂಸ್ತದಾಚಾರಪರಿಚ್ಛದೌ || ಎಂದು
ಹೇಳುತ್ತಾರೆ. ನೀವೇನು ಬಯಸುತ್ತೀರೋ ಮತ್ತು ನೀವೇನಾಗಿರುವಿರೋ ಅದೇ ರೀತಿ ನಿಮ್ಮ ಮಗುವಿರುತ್ತದೆ.
ಅಂದರೆ ನಾವು ಒಳ್ಳೆಯದನ್ನು ಬಯಸಬೇಕು ಮತ್ತು ಒಳ್ಳೆಯವರಾಗಿರಬೇಕು. ಹಾಗಿದ್ದರೆ ಮಾತ್ರ ನಮ್ಮ ಮಗು
ಒಳ್ಳೆಯ ಮಗುವಾಗುತ್ತದೆ. ಒಟ್ಟಿನಲ್ಲಿ ನಮ್ಮ ಇಚ್ಚೆ ಮತ್ತು ಕೃತಿಗಳಿಗನುಸಾರವಾಗಿ ಮಗುವೊಂದು
ರೂಪುಗೊಳ್ಳುತ್ತದೆ ಎಂಬುದು ಸ್ಪಷ್ಟವಾಯಿತು. ನಮ್ಮ ಇಚ್ಚೆ ಮತ್ತು ಕೃತಿಗಳನ್ನು ಜ್ಯೇಷ್ಠವೂ
ಶ್ರೇಷ್ಠವೂ ಆದ ವಿಶಾಲ ವೈಶ್ವಿಕ ದೃಷ್ಟಿಗೆ ಸಮನ್ವಯಿಸಿದರೆ ವಿವಾಹ ಎಂಬುದು ಸಂಸ್ಕಾರವಾಗಿ
ರೂಪುಗೊಳ್ಳುತ್ತದೆ. ಅದಿಲ್ಲದಿದ್ದರೆ ಅದೊಂದು ಆಡಂಬರದ ಅಥವಾ ಪ್ರದರ್ಶನದ
ಕೆಲಸವೆನಿಸುತ್ತದೆ.
ಪ್ರತಿನಿತ್ಯದ ನಮ್ಮ ಬಯಕೆಗಳನ್ನು ಮತ್ತು ನಮ್ಮ
ಕೆಲಸಗಳನ್ನು ಶೋಧಿಸುವ ಪ್ರಕ್ರಿಯೆ ಆರಂಭಗೊಳ್ಳುವುದೇ ಈ ವಿವಾಹದಿಂದ. ಹೀಗೆ ಆರಂಭಗೊಂಡ
ಪ್ರಕ್ರಿಯೆ ಏಳು ಹಂತಗಳಲ್ಲಿ ಸಾಗಿ ಅಥವಾ ಏಳು ಮೆಟ್ಟಿಲುಗಳನ್ನು ಏರಿ ಅಥವಾ ಏಳು
ಹೆಜ್ಜೆಗಳನ್ನಿಟ್ಟು ಮುಂದುವರೆಯುತ್ತದೆ. ಅದನ್ನೇ ವಿವಾಹ ಸಂಸ್ಕಾರದಲ್ಲಿ ಸಪ್ತಪದಿ ಎಂಬ
ಆಚರಣೆಯಿಂದ ಗುರುತಿಸಿದ್ದಾರೆ. ಈ ಗುರುತಿನ ಜಾಡನ್ನು ಹಿಡಿದು ವಿವಾಹದ ಉದ್ದೇಶವನ್ನು
ಈಡೇರಿಸಬೇಕು. ಅದಕ್ಕೆ ವಧೂವರರೀರ್ವರೂ ಒಮ್ಮನದಿಂದ ಮುನ್ನಡೆಯಬೇಕು.
ಏಕಮಿಷೇ ವಿಷ್ಣುಸ್ತ್ವಾನ್ವೇತು |
ಇರುವ ಜೀವಿಗಳೆಲ್ಲರೂ ಅನ್ನದಿಂದ ತಾನೆ ಬಂದಿದ್ದು?
ಮತ್ತು ಅದರಿಂದಲೇ ಇದ್ದಿದ್ದು. ಅನ್ನಾದ್ಭವಂತಿ ಭೂತಾನಿ | ಪ್ರಕೃತದಲ್ಲಿ ಧರ್ಮ
ಪ್ರಜೆಗಾಗಿ ಇಡುವ ಪ್ರಥಮ ಹೆಜ್ಜೆಯೂ ಅನ್ನದ ಕುರಿತಾಗಿದೆ. ಇಷ ಅಂದರೆ ಅನ್ನ! ಅದು ಅತಿಯಾದರೆ
ವಿಷವಾಗಿ ಬಿಡುತ್ತದೆ. ಇಷ-ವಿಷವಾಗದಂತೆ ಸರಿದೂಗಿಸುವ ಕಲೆಯೇ ಅಥವಾ ಸಾಧನೆಯೇ ಮೊದಲ
ಹೆಜ್ಜೆಯ ಉದ್ದೇಶ. ಹೀಗೆ ವಿವಾಹ ತನ್ನ ಸಾರ್ಥಕ್ಯಕ್ಕೆ ಆಯ್ಕೆ ಮಾಡಿಕೊಂಡ ಪ್ರಥಮ ವೇದಿಕೆ ಅಡಿಗೆ
ಮನೆ. ಇಲ್ಲಿಂದಲೇ ವಿವಾಹ ಸಂಸ್ಥೆ ತನ್ನ ಪಾದಗಳನ್ನು ಬೆಳೆಸಿದೆ. ಲಕ್ಷ್ಮೀ ನಾರಾಯಣರ ವಿವಾಹದಲ್ಲಿ ಈಗ ಲಕ್ಷ್ಮೀ ತನ್ನ
ಮೊದಲ ಹೆಜ್ಜೆಯನ್ನು ಇಡುತ್ತಿದ್ದಾಳೆ. ಅದನ್ನು ವಿಷ್ಣು ಅನುಸರಿಸಿ ಹೆಜ್ಜೆಗೆ
ಹೆಜ್ಜೆಯಿಡುತ್ತಿದ್ದಾನೆ. ವಧುವಿನ ಪ್ರತೀ ಹೆಜ್ಜೆಗೂ ವರನ ಅನುಮೋದನೆಯಿದೆ. ಆಹಾರ ಮತ್ತು ಅದರ
ಬಳಕೆಯ ಕುರಿತಾಗಿ ಪ್ರಕೃತಿ ಪುರುಷರು ಒಟ್ಟಾಗಿ ತಿಳಿದು ಅಡಿಯಿಡಬೇಕು.
ದ್ವೇ ಊರ್ಜೇ ವಿಷ್ಣುಸ್ತ್ವಾನ್ವೇತು |
ತಿಂದದ್ದು ಎಷ್ಟು? ಅನ್ನುವುದಕ್ಕಿಂತ, ತಿಂದ ಅನ್ನ ಜೀರ್ಣವಾಗಿ ಶಕ್ತಿಯಾಯಿತೇ?
ಎನ್ನುವುದು ಬಹು ಮುಖ್ಯವೆನಿಸುತ್ತದೆ. ಈ ಅನ್ನದ ಶಕ್ತಿಯೇ ಊರ್ಜೆ. ತಿಂದ ಆಹಾರ
ಶಕ್ತಿಯಾಗಿ ಪರಿಣಮಿಸಲು ತೆಗೆದು ಕೊಳ್ಳ ಬೇಕಾದ ಕ್ರಮಗಳೇನು ಮತ್ತು ಅದಕ್ಕೆ ಮೀಸಲಾಗಿಡಬೇಕಾದ
ಸಮಯವೆಷ್ಟು? ಎಂಬುದರ ನಿರ್ಣಯವೇ ಎರಡನೆಯ ಹೆಜ್ಜೆಯಲ್ಲಿ ವಧೂ ವರರು ಅನುಸರಿಸಿ, ಶೋಧಿಸ ಬೇಕಾದ
ವಿಷಯವಾಗಿದೆ.
ತ್ರೀಣಿ ವ್ರತಾಯ ವಿಷ್ಣುಸ್ತ್ವಾನ್ವೇತು |
ಮುಂದಿನ ಹಂತದಲ್ಲಿ ಆಹಾರ ಶಕ್ತಿಯಾಗಿ ಮೈಯ್ಯಲ್ಲಿ ಹರಿಯುವಾಗ ಆ ಶಕ್ತಿಯನ್ನು
ಉಪಯೋಗಿಸುವಲ್ಲಿ ನಾವು ಮಾಡಬೇಕಾದ ಅಭ್ಯಾಸವೇನು? ಪ್ರತೀ ಅಭ್ಯಾಸವೂ ನಮ್ಮ ಅರಿವಿಗೆ ಬಾರದಂತೆ,
ನಮ್ಮನ್ನು ರೋಗದೆಡೆಗೆ ತಳ್ಳಿ ಬಿಡುತ್ತದೆ! ಅಂಥ ಸಂದರ್ಭದಲ್ಲಿ ನಮ್ಮ ಆತ್ಮವಿಶ್ವಾಸವನ್ನು
ಹೆಚ್ಚೆಸುವ, ನಮಗೆ ಹಿತವೆನಿಸುವ, ವ್ಯಾಯಾಮ, ಪ್ರಾಣಾಯಾಮ, ನಿಯಮಗಳನ್ನು ಸಾಧಿಸುವುದು ಅತ್ಯವಶ್ಯ.
ಅಂಥದೊಂದು ಪ್ರಯತ್ನವನ್ನೇ “ವ್ರತ” ಎಂಬುದಾಗಿ ಕರೆಯಲಾಗಿದೆ. ಇದು ಮೂರನೆಯ ಹೆಜ್ಜೆಯ ಸಾಧನೆ.
ಚತ್ವಾರಿ ಮಾಯೋಭವಾಯ ವಿಷ್ಣುಸ್ತ್ವಾನ್ವೇತು |
ನಿಯಮ ಪಾಲನೆಯ ಭರದಲ್ಲಿ ಉಸಿರುಗಟ್ಟುವ ವಾತಾವರಣ ಮನೆಯಲ್ಲಿ ನಿರ್ಮಾಣವಾಗಲೂ
ಬಹುದು! ಅದಾಗದಂತೆ ಎಲ್ಲರೊಂದಿಗೆ ಸೌಮನಸ್ಯ ಸಂಪಾದಿಸುವ, ತನ್ಮೂಲಕ ಆರೋಗ್ಯಕರ ವಾತಾವರಣವನ್ನು
ಕಾಪಿಡುವ ಕಾಳಜಿಯ ಹೆಜ್ಜೆಯಿದು. ಮಾಯೋಭವ ಅಂದರೆ ಸ್ವಾಸ್ಥ್ಯ, ಆರೋಗ್ಯ ಎಂದರ್ಥ. ಆರೋಗ್ಯಕ್ಕೆ
ನಾಲ್ಕು ಹೆಜ್ಜೆ ನಡೆಯಲೇ ಬೇಕು ತಾನೆ!?
ಪಂಚ ಪಶುಭ್ಯೋ ವಿಷ್ಣುಸ್ತ್ವಾನ್ವೇತು |
ಸರ್ವಮವಿಶೇಷೇಣ ಪಶ್ಯತಿ | ಎಂಬ ಅರ್ಥದಲ್ಲೂ ಪಶು ಶಬ್ದವಿದೆ. ಪ್ರಾಣಿ
ಮಾತ್ರದಲ್ಲೂ ಈ ಶಬ್ದದ ಬಳಕೆಯಿದೆ. ಹಾಗಾಗಿ ವಧೂ ವರರಿಬ್ಬರೂ ತಮ್ಮ ಸುತ್ತಲೂ ಜೊತೆಯಾಗಿ
ಬದುಕುವ ಎಲ್ಲ ಜೀವಿಗಳ ಕುರಿತು-ಅರಿತು ಬಾಳುವ ಹೆಜ್ಜೆಯಿದು. ಅವರೆಲ್ಲಾ ನಮ್ಮ ಬದುಕಿನ ಬಹು ಮುಖ್ಯ ಅಂಗಗಳೆಂದು ಅವುಗಳ
ಜೊತೆ ಸಾಗುವುದೇ ಐದನೆಯ ಹೆಜ್ಜೆಯಾಗಿದೆ.
ಷಡ್ರಾಯಸ್ಪೋಷಾಯ ವಿಷ್ಣುಸ್ತ್ವಾನ್ವೇತು |
ನಮ್ಮ ಆರ್ಥಿಕ ನೀತಿ ಮತ್ತು ಅದರ ಸುರಕ್ಷತೆಗೆ ಮಾಡಬೇಕಾದ ಉಪಾಯಗಳು, ವಿಮರ್ಶೆಗಳು
ಮುಂದಿನ ಹೆಜ್ಜೆಯಾಗಿ ರೂಪು ಗೊಂಡಿದೆ. ರಾಯಸ್ಪೋಷ ಅಂದರೆ ಚರ-ಸ್ಥಿರ ಸಂಪತ್ತುಗಳು.
ಸಪ್ತ ಸಪ್ತಭ್ಯೋ ಹೋತ್ರಾಭ್ಯೋ
ವಿಷ್ಣುಸ್ತ್ವಾನ್ವೇತು |
ಹೀಗೆ ಪ್ರತೀ ಹೆಜ್ಜೆಯನ್ನೂ ಸಾಧಿಸಿಯಾದ ಮೇಲೆ ಮುಂದೆ ಏನು? ಎಂಬ ಪ್ರಶ್ನೆ ಸಹಜ
ತಾನೆ? ಅದಕ್ಕಾಗಿ ಯಜ್ಞಸಂಸ್ಕೃತಿಯ ಉಳಿವಿಗೆ ಮತ್ತು ಬೆಳವಣಿಗೆಗೆ ಮುಂದಿನ ಅಧಿಕಾರಿ ಯಾರು? ಎಂದು
ಈರ್ವರೂ ವಿಚಾರಿಸಿ ಅಡಿಯಿಡಬೇಕಾಗಿದೆ. ಅವನೇ ಹೋತಾ ಅಂದರೆ ಹೋಮ ಮಾಡುವವ ಎಂದರ್ಥ.
ಗೆಳೆತನಕ್ಕೆ ಈ ಏಳು ಹೆಜ್ಜೆಗಳು ಸಾಕು. ವಿವಾಹದ ಉದ್ದೇಶ ಈಡೇರಲು ಈ ಏಳು
ಹೆಜ್ಜೆಗಳು ಬೇಕೇ ಬೇಕು. ಎಂಬುದನ್ನು ಮನಗಂಡ ನಮ್ಮ ಹಿರಿಯರು (ಬೋಧಾಯನರು) ನೂತನ ವಧೂ ವರರು
ಮೇಲ್ಕಂಡ ಏಳೂ ಹೆಜ್ಜೆಗಳನ್ನು ಸಮರ್ಥವಾಗಿ ಸಾಗುವಂತಾಗಲಿ ಎಂದು ಆಶಿಸಿದರು.
ಸಖಾಯ ಸಪ್ತ ಪದಾ ಅಭೂಮ | ಸಖ್ಯಂ
ತೇ ಗಮೇಯಮ್ | ಸಖ್ಯಾನ್ಮೇ ಮಾಯೋಷ್ಠಮ್ | ಸಖ್ಯಾನ್ಮೇ
ಮಾಯೋಷ್ಠಾಃ ||
’ಅಡಿಗೆ ಮನೆಯಿಂದ ಆರಂಭಿಸಿ ಯಜ್ಞಶಾಲೆಯವರೆಗಿನ ಈ ಏಳು ಹಂತದ ಪ್ರಯಾಣ ನಮ್ಮ
ಅಭ್ಯಾಸವನ್ನು ತಿದ್ದುವುದರ ಜೊತೆಗೆ ನಮಗೆ ಉತ್ತಮ ಪ್ರಜೆಗಳನ್ನೂ ದೊರಕಿಸಿ ಕೊಡುತ್ತದೆ.’ ಎಂಬಲ್ಲಿ
ಸಂಶಯವಿಲ್ಲ!
ಪರಮೇಶ್ವರ ಪುಟ್ಟನಮನೆ