ಬಿಡಬೇಡ ಸದ್ಗುಣವ ಬಾಳಿಗದು ಭೂಷಣವು ಎನ್ನುವಾಗ ಕವಿ ”ಸದ್ಗುಣಗಳು ಬಾಳನ್ನು
ಬೆಳಗಿಸುವವು, ಅವನ್ನು ಬಿಡಬೇಡ...’’ ಎಂದು ಎಚ್ಚರಿಸಿ ಹೇಳುತ್ತಾನೆ. ಆದರೆ ಇವತ್ತು “ನೀನು
ಸದ್ಗುಣ ಬಿಡಬೇಡ, ನೀನು ಧರ್ಮವ ಮಾಡು, ನೀನು ದಾನವ ಮಾಡು.” ಎಂಬುವವರನ್ನು ಎಲ್ಲೆಡೆಯೂ
ಕಾಣುತ್ತೇವೆ. ಅದೇ ತಮಗಾದರೆ ಒಂದಲ್ಲ ಒಂದು ನೆಪ ಹೇಳುವರು. ಹಣವಿಲ್ಲ! ಉದ್ಯೋಗವಿಲ್ಲ!
ಮದುವೆಯಾಗಿಲ್ಲ! ಕೃಷಿಯಲ್ಲಿ ಬಲವಿಲ್ಲ! ಮನೆಯಲ್ಲಿ ಮಾಡುವರಿಲ್ಲ! ಇಂಥ ಕುಂಟು ನೆಪಗಳನ್ನು
ಬದಿಗಿರಿಸಿ, ಯಾರು ತಮ್ಮ ತಮ್ಮ ಕರ್ತವ್ಯದಲ್ಲಿ ನಿರತರಾಗಿ, ಪರೋಪದೇಶಕ್ಕೆ ವಿಮುಖರಾಗಿ, ಪರರಿಗೆ
ಆದರ್ಶವಾಗಿ ನಡೆಯುವರೋ ಅವರೇ ಧರ್ಮಚರರು.
ಅಥವಾ ಇಹ ಪರಗಳೆರಡರಲ್ಲೂ ಚಿರಸ್ಥಾನವನ್ನು ಪಡೆವ ಧಾರ್ಮಿಕರು.
ಇಂಥ ಧಾರ್ಮಿಕರು ಎಲ್ಲ ಕಾಲದಲ್ಲೂ ಇರುವರು, ಎಲ್ಲ ಕಾಲಕ್ಕೂ ಸಲ್ಲುವವರು.
ಧಾರ್ಮಿಕನಾಗಬೇಕೋ ಧರ್ಮವನ್ನು ಆಚರಿಸಬೇಕು! ಅದನ್ನೇ ಮೇಲಿನ ಉಪನಿಷತ್ತಿನ ಮಾತು ಎತ್ತಿ
ಹೇಳುತ್ತಿದೆ. ಶಿಷ್ಯನೊಬ್ಬ ಶಾಲೆಯಿಂದ ಹೊರಬರುವಾಗ ಗುರುವಾದವ ಆತನ ಕಿವಿಯಲ್ಲಿ ಹೇಳಿದ ಮಾತಿದು. ಧರ್ಮವನ್ನು ಮಾಡು.... ಮಾಡು ಎನ್ನುವ
ವಿಷಯದಲ್ಲಿ ಅರ್ಥ ಸ್ಪಷ್ಟವಾಗಿದೆ. ಈ ಕರ್ಮಭೂಮಿಯಲ್ಲಿ ಒಂದಿಲ್ಲೊಂದು ಕಲಾಪದಲ್ಲಿ
ತೊಡಗಿಕೊಂಡಿರುವ ನಮಗೆ ಮಾಡು ಎನ್ನುವುದು ಗೊತ್ತು. ಮಾಡದೇ ಇರುವುದು ಅರ್ಥವಾಗದ
ವಿಷಯ ಅಥವಾ ಸಂದಿಗ್ಧ ವಿಚಾರವಾಗಿದೆ. ಪ್ರಕೃತದಲ್ಲಿ ಧರ್ಮವನ್ನು ಮಾಡು ಎಂಬಲ್ಲಿ ಧರ್ಮ
ಶಬ್ದ ಅರ್ಥವಾಗಬೇಕಿದೆ. ಇದು ಧರ್ಮಕ್ಕೆ ಅರ್ಥವಾಗುವ ವಿಷಯವಲ್ಲ! ಪರಿಶ್ರಮ ಬೇಕು ಅಥವಾ ವಿವೇಕ
ಬೇಕು.
ಧರ್ಮ ಎಂದರೆ ಏನು? ಧರ್ಮವೆಂದರೆ ಕರ್ಮ ಅಷ್ಟೇ!
’’ಅಥಾತೋ ಧರ್ಮಜಿಜ್ಞಾಸಾ”
ಎಂದು ಆರಂಭಿಸಿದ ಕರ್ಮಕೋವಿದರಾದ ಮೀಮಾಂಸಕರು ಧರ್ಮ ಎಂದರೆ ಕರ್ಮ ಎಂದೇ ನಿರೂಪಿಸಿದ್ದಾರೆ.
ಹಾಗಾದರೆ ಇಲ್ಲಿ ಕರ್ಮ ಚರ ಎಂದೇ ಹೇಳಬಹುದಿತ್ತಲ್ಲ! ಧರ್ಮಂ ಚರ ಎಂದಿದ್ದರಿಂದ, “ಇಲ್ಲಿ
ಬರೀ ಕರ್ಮವನ್ನಲ್ಲ! ಕೇವಲ ಕೆಲಸವನ್ನಲ್ಲ! ಇನ್ನೇನನ್ನೋ ಗುರುವಾದವ ಎತ್ತಿ ಹೇಳುತ್ತಿದ್ದಾನೆ.”
ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಇಲ್ಲಿ ಗುರುವು ಒಳ್ಳೆಯ ಕೆಲಸ ಮಾಡು ಎಂದು
ಹೇಳುತ್ತಿದ್ದಾನೆಯೇ? ಎಂದು ಕೇಳಿದರೆ ಸರಿ, ಹಾಗೂ ಹೇಳಬಹುದು. ಆದರೆ ಒಳ್ಳೆಯ ಕೆಲಸಗಳು ಧರ್ಮವೇ?
ಅಷ್ಟೇ ಹೇಳಲಿಕ್ಕೆ ಬಾರದು... ಏಕೆಂದರೆ ಒಳ್ಳೆಯದು ಎಂಬುದರ ಅರ್ಥ ವ್ಯಾಪ್ತಿ ಏನು ಮತ್ತು
ಎಷ್ಟು? ಎಂಬುದನ್ನು ಇದು ಅವಲಂಬಿಸಿದೆ. ನನಗೆ ಒಳ್ಳೆಯದಾಗಿದ್ದು, ಪರರಿಗೆ
ಒಳ್ಳೆಯದಾಗಿರಬೇಕೆಂದಿಲ್ಲ! ಅದೇ ರೀತಿ ಈಗ ಒಳ್ಳೆಯದಾದದ್ದು, ನಾಳೆ ಒಳ್ಳೆಯದಾಗಿ ಇರಬೇಕೆಂದಿಲ್ಲ!
ಹಾಗಿರುವಾಗ ಅದು ಧರ್ಮದ ವ್ಯಾಖ್ಯಾನವಾಗದು. ಅದಕ್ಕೆ ಜೈಮಿನಿ ಮುನಿಗಳು “ಚೋದನಾಲಕ್ಷಣೋಽರ್ಥೋ ಧರ್ಮಃ” ಎಂದಿದ್ದಾರೆ. ವೇದವಿಹಿತಶ್ರೇಯಃ ಪ್ರದವಾದ
ಕರ್ಮವೇ ಧರ್ಮ. ವೇದವು ನಿತ್ಯವೂ, ಅಸಂದಿಗ್ಧವೂ, ಸರ್ವಹಿತಸಾಧಕವೂ ಆದದ್ದರಿಂದ, ಇದು
ತ್ರಿಕಾಲಾಬಾಧಿತವಾದ ಜ್ಞಾನಭಂಡಾರವಾಗಿದೆ. ಇಂಥ ಜ್ಞಾನರಾಶಿಯ ಬಲದಿಂದ ಆಚರಿಸಿದ ಕರ್ಮ ನಮ್ಮನ್ನು
ಶ್ರೇಯಸ್ಸಿನ ಜೊತೆ ಸೇರಿಸುತ್ತದೆ. ಅಲ್ಲಿ ಯಾವುದೇ ಸ್ವಾರ್ಥಕ್ಕೆ ಅವಕಾಶವಿಲ್ಲ! ಹಾಗಂತ ಇಹದಲ್ಲಿ
ಸಂತೋಷವನ್ನೂ, ಪರದಲ್ಲಿ ನಿಶ್ಶ್ರೇಯಸ್ಸನ್ನೂ ಕೊಡುವ ಕರ್ಮ ಇದಾಗಿದೆ. ಜ್ಞಾನಪ್ರಕಾಶದಿಂದ ಕೂಡಿದ ಶ್ರೇಯಃಪ್ರದವೂ ಶುಭಕರವೂ ಆದ, ಕೆಡುಕನ್ನು ಹೊಂದಿರದ, ಕ್ರಿಯಾಕಲಾಪಗಳನ್ನು
ಒಟ್ಟರ್ಥದಲ್ಲಿ ಧರ್ಮ ಎಂದೆನ್ನುತ್ತೇವೆ.
“ಯ ಏವ ಶ್ರೇಯಸ್ಕರಃ, ಸ ಏವ ಧರ್ಮಃ | “ ಎಂಬುದು ತಿಳಿಯಿತು. ಹಾಗಾದರೆ ಈ ಶ್ರೇಯಸ್ಸು ಅಂದರೆ
ಏನು? ಈ ಲೋಕದಲ್ಲಿ ಶ್ರೇಯಸ್ಸು ಮತ್ತು ಪ್ರೇಯಸ್ಸು ಎಂಬ ಎರಡು ಪ್ರಶಸ್ತವಾದ ಕಾರ್ಯಗಳಿವೆ. ಅರ್ಥ
ಮತ್ತು ಕಾಮನೆಗಳಿಗೆ ಒಪ್ಪಿತವಾದ (ತನಗೆ ಸಂಪತ್ಪ್ರದವೂ, ಇಷ್ಟವೂ ಆದ) ಕೆಲಸ ಕಾರ್ಯಗಳನ್ನು
ಪ್ರೇಯಸ್ಸೆಂದೂ, ಆ ಕೆಲಸಕಾರ್ಯಗಳಿಗೆ (ಪ್ರೇಯಸ್ಸಿಗೆ) ಧರ್ಮದ ಬೆಂಬಲವೂ ಒದಗಿದರೆ ಅವನ್ನು
ಶ್ರೇಯಸ್ಸೆಂದೂ ಅರ್ಥೈಸಬೇಕು. ಇದನ್ನೇ ಧರ್ಮ, ಅರ್ಥ ಮತ್ತು ಕಾಮ ಇವು ಮೂರರಲ್ಲಿ ಪರಸ್ಪರ
ಸಾಮರಸ್ಯ ಅಥವಾ ಅವಿರೋಧತೆ ಕಂಡು ಬಂದರೆ ಅಂಥ ಕೆಲಸ ಕಾರ್ಯಗಳನ್ನು ಶ್ರೇಯಃಪ್ರದವೆಂದು
ಕರೆಯುತ್ತಾರೆ. [ಧರ್ಮಾರ್ಥಕಾಮಾತ್ಮಕಃ ಪರಸ್ಪರಾವಿರುದ್ಧಸ್ತ್ರಿವರ್ಗ ಏವ ಪುರುಷಾರ್ಥತಯಾ
ಶ್ರೇಯ ಇತಿ ವಿನಿಶ್ಚಯಃ] ಯಾರೊಬ್ಬರಿಗೂ ಇಲ್ಲಿ (ಈ ಲೋಕದಲ್ಲಿ) ಮಾತ್ರ ಸಂತೋಷ ಬೇಕು; ಅಲ್ಲಿ
(ಪುಣ್ಯ ಲೋಕದಲ್ಲಿ) ಏನಾದರೇನು? ಎಂಬ ಧಾರ್ಷ್ಟ್ಯವಿರುವುದಿಲ್ಲ. ಅದೇ ರೀತಿ ಅಲ್ಲಿ (ಸಾವಿನಾಚೆಯ
ಬದುಕಿನಲ್ಲಿ) ಮಾತ್ರ ಸುಖದಿಂದಿರಬೇಕು; ಇಲ್ಲಿ (ಹುಟ್ಟಿನ ನಂತರದ ಬದುಕಿನಲ್ಲಿ) ಏನಾದರೇನು? ಎಂಬ
ಮೌಢ್ಯವೂ ಇರಲಾರದು. ಹಾಗಾಗಿ ಇಹ ಪರಗಳೆರಡರಲ್ಲೂ ಒಪ್ಪಿತವಾಗುವ ಪ್ರಶಸ್ತವಾದ ಕ್ರಿಯಾಕಲಾಪವನ್ನೇ
ಶ್ರೇಯಸ್ಸು ಎಂದಿದ್ದಾರೆ. ಇದನ್ನೇ ಭವಿಷ್ಯಪುರಾಣದಲ್ಲಿ ಧರ್ಮಃ
ಶ್ರೇಯಃ ಸಮುದ್ದಿಷ್ಟಂ, ಶ್ರೇಯೋಽಭ್ಯುದಯಸಾಧನಮ್ | ಎಂದು ಹೇಳಿದ್ಡಾರೆ.
ಅಭ್ಯುದಯ ಸಾಧನವಾದದ್ದೇ ಧರ್ಮ. ಇಹ ಪರಗಳೆರಡರಲ್ಲೂ ನಮ್ಮನ್ನು ಪೊರೆವ ಸಾಧನವೇ
ಧರ್ಮ. ಇಂಥ ಸಾಧನಾ ರೂಪವಾದ ಧರ್ಮದ ಪ್ರಕಾರಗಳನ್ನೂ ಋಷಿಗಳು ನಾನಾ ವಿಧವಾಗಿ
ಪ್ರತಿಪಾದಿಸಿದ್ದಾರೆ. ಅವುಗಳಲ್ಲಿ ವರ್ಣಧರ್ಮಗಳು, ಆಶ್ರಮಧರ್ಮಗಳು, ವರ್ಣಾಶ್ರಮಧರ್ಮಗಳು,
ಗುಣಧರ್ಮಗಳು ಮತ್ತು ನೈಮಿತ್ತಿಕಧರ್ಮಗಳು ವಿಶೇಷವಾದವು. ಸರ್ವಸಾಧಾರಣವಾಗಿರುವ ಎಂಟು
ಧರ್ಮಪ್ರಕಾರಗಳನ್ನು ಬೃಹಸ್ಪತಿ ಋಷಿ ಹೀಗೆ ವಿವರಿಸಿದ್ದಾನೆ.
ಅಕಾರ್ಪಣ್ಯಮಸ್ಪೃಹತ್ವಂ ಸರ್ವಸಾಧಾರಣಾನಿ ಚ ||
2. ಕ್ಷಮಾ – ತನಗೆ ಬಂದ ದುಃಖಕ್ಕೆ ಇತರರ ಮೇಲೆ ರೇಗದೇ ಇರುವುದು.
3. ಅನಸೂಯಾ – ಪರರ ಗುಣವನ್ನು ಗುರುತಿಸಿ, ದೋಷವನ್ನು ನುಂಗಿ ಕೊಳ್ಳುವುದು.
4. ಶೌಚಮ್ – ಭಕ್ಷ್ಯಾಭಕ್ಷ್ಯವಿವೇಚನೆ ಮಾಡಿ, ದುರಭ್ಯಾಸದಿಂದ ದೂರವಿರುವುದು.
5. ಅನಾಯಾಸಃ – ಶರೀರವನ್ನು ಅತಿಯಾಗಿ ಪೀಡಿಸದೇ ಶಿಸ್ತಿನಿಂದಿರುವುದು.
6. ಮಂಗಲಮ್ – ಕೇಡನ್ನು ಬಿಟ್ಟು ಒಳಿತಿನಿಂದ ಕೂಡಿದ ಆಚರಣೆ ಮಾಡುವುದು.
7. ಅಕಾರ್ಪಣ್ಯಮ್ – ಮನಃಪೂರ್ವಕವಾಗಿ ಅತ್ಯಲ್ಪವಾದರೂ ಉಪಕರಿಸುವುದು.
8. ಅಸ್ಪೃಹಾ – ಪರರ ವಸ್ತುವಿಗೆ ಆಸೆಪಡದೆ ತೃಪ್ತಿಯಿಂದಿರುವುದು.
ಇವುಗಳ ಆಚರಣೆಯಿಂದ ಈ ಜಗತ್ತಿನಲ್ಲಿ ಭಯೋತ್ಪಾದನೆಯೋ,
ಪರಿಸರಹಾನಿಯೋ, ಅತಿಕ್ರಮಣವೋ, ಅತ್ಯಾಚಾರವೋ, ಅಸಮಾನತೆಯೋ, ಅನಾರೋಗ್ಯವೋ, ಅಸಹಿಷ್ಣುತೆಯೋ
ಬಾರದಂತಾಗಿ ಸಮಾಜದ ಸರ್ವತೋಮುಖ ಹಿತವಾಗುವಲ್ಲಿ ಸಂಶಯವಿಲ್ಲ. ಹಾಗಾಗಿ ನಮ್ಮ ಪೂರ್ವಜರು ಸರ್ವಹಿತಕಾರಕವಾದ
ಜಗದ ಧಾರಕ ತತ್ವವೇ ಧರ್ಮ. ಧಾರಣಾದ್ಧರ್ಮಮಿತ್ಯಾಹುಃ |
ಎಂದು ಸಾರಿ ಹೇಳಿದ್ದಾರೆ. ಈ ತತ್ವವನ್ನೇ ನಮ್ಮ ಕಗ್ಗದ ಕವಿ ಗುಂಡಪ್ಪನವರು ಹೀಗೆ ತೋರಿದ್ದಾರೆ.
ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ |
ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ||
ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ |
ಸಹಕರಿಪುದಲೆ ಧರ್ಮ ಮಂಕುತಿಮ್ಮ ||
ತಾನೊಬ್ಬನೇ ಬದುಕಬೇಕು. ಎನ್ನುವ ಧೋರಣೆಯುಳ್ಳವ ಸ್ವಾರ್ಥೀ.
ಇತರರೇ ಬಾಳಲಿ. ಎಂಬ ಅತಿರೇಕದವ ಪರಾರ್ಥೀ. ತಾನು, ಮತ್ತುಳಿದಂತೆ ಯಾರೂ ಬಾಳುವುದು
ಬೇಡವೆಂಬವ ದುಃಖಾರ್ಥೀ. ತಾನೂ ಬದುಕಿ, ಇತರರೂ ಬಾಳುವಂತೆ ಜೀವಿಸುವವನೇ ಧರ್ಮವನ್ನು
ಅನುಸರಿಸುವವನು. ಅವನೇ ಧಾರ್ಮಿಕ. ಅಂಥ ಧಾರ್ಮಿಕರು ಇಡೀ ವಿಶ್ವದ ಬೆನ್ನೆಲುಬಾಗಿದ್ದಾರೆ.
ಅವರು ಸತ್ಯವನ್ನು ಎತ್ತಿಹಿಡಿದಿದ್ದಾರೆ. ಹಾಗಾಗಿ
ನೀನು ಸತ್ಯವಂತನಾಗು. ಆಚಾರವಂತನಾಗು. ಎಲ್ಲರ ಹಿತದಲ್ಲಿ ನಿನ್ನ ಒಳಿತನ್ನು ನೋಡು. ಅದನ್ನೇ
ಆಚರಿಸು. ಎಂದು ಗುರು ತನ್ನ ಶಿಷ್ಯನಿಗೆ ಗುಟ್ಟಿನಲ್ಲಿ ಗಟ್ಟಿಯಾದ ಧರ್ಮವನ್ನು
ಮಾಡೆನ್ನುತ್ತಿದ್ದಾನೆ. ಬಾಳಿಗೆ ಭೂಷಣವಾದ ಈ ಧರ್ಮವೇ ನಮ್ಮ ಉಸಿರು. ಅದೇ ನಮ್ಮ ಪ್ರತಿಷ್ಠೆ.
ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ |
ತಾ || ೮ ||