1.
ಪೂಜೆಗೆ ಮನಸ್ಸು
ಮಾಡಿದ ಯಜಮಾನ
2. ಪೂಜೆಗೆ ಅರ್ಹವಾದ ಬಿಂಬ
3. ಪೂಜಾ ಸಾಮಗ್ರಿಗಳು
4.
ಪೂಜಾರ್ಹತೆ ಅಥವಾ ಭಾವಪೂರ್ಣತೆ
ಇಂದು ಪೂಜೆಗೆ ಮನಸ್ಸನ್ನು
ಕೊಡುವ ಯಜಮಾನ ತುಂಬ ವಿರಳನಾಗುತ್ತಿದ್ದಾನೆ. ಮೌಲ್ಯಕ್ಕಿಂತ ಅನುಕೂಲಕ್ಕೆ ಒಲಿಯುವ ಮನಸ್ಸುಗಳೇ
ಸುತ್ತಲೂ ತುಂಬಿವೆ. ಇಂದಿನ ಮಾನವ ಅಂತರಂಗವಿಲ್ಲದ ಅಂಗಡಿಯವನಂತೆ ವ್ಯಾಪಾರಿಯಾಗುತ್ತಿದ್ದಾನೆ.
ಚಾತುರ್ವರ್ಣ್ಯಗಳಲ್ಲಿ ವೈಶ್ಯನೇ ಎಲ್ಲೆಡೆ ಎದ್ದು ಕುಣಿಯುತ್ತಿದ್ದಾನೆ. ಚಿತ್ತದಲ್ಲಿ
ಕಳೆದದ್ದಕ್ಕೆ ವಿತ್ತದಲ್ಲಿ ಪರಿಹಾರ ಹುಡುಕುತ್ತಿರುವ ಇಂದಿನ ಯಜಮಾನ ಅದರಿಂದ ಏನು? ಅದು ಏಕೆ?
ಅದಕ್ಕೆ ಎಷ್ಟು? ಎಂಬ ಪ್ರಶ್ನೆಗಳಲ್ಲಿ ಕೊಚ್ಚಿ ಹೋಗುತ್ತಿದ್ದಾನೆ! ಇದರ ಪರಿಣಾಮವಾಗಿ
ಅಮೂಲ್ಯವಾದ ವಿಷಯಕ್ಕೂ ಮೌಲ್ಯವನ್ನು ನಿಗದಿಪಡಿಸಬೇಕಾಗಿದೆ. ಅಲ್ಲಿಗೆ ಧರ್ಮವೂ ಕೂಡ ವ್ಯಾಪಾರ
ಮಾರ್ಗವನ್ನೇ ಅನುಸರಿಸುವಂತಾಗಿದೆ. ಹೀಗಿದ್ದರೂ ಕೆಲವೇ ಕೆಲವು ಪೂಜೆಯಲ್ಲಿ ಮನಸ್ಸನ್ನಿಡುವ
ಯಜಮಾನರು ಆಶ್ಚರ್ಯವೆಂಬಂತೆ ಕಾಣಸಿಗುತ್ತಾರೆ.
ಪ್ರತಿಯೊಬ್ಬನೂ
ನಿರ್ಗುಣ ಬ್ರಹ್ಮನಿಂದ ಬೇರೆ ಬೇರೆಯದೇ ಆದ ವಿಶಿಷ್ಟಗುಣಗಳನ್ನು ಪ್ರತಿಫಲಿಸುತ್ತಿರುತ್ತಾನೆ. ಆದ ಕಾರಣ ಪ್ರತಿಯೊಬ್ಬನಿಗೂ ಪರಬ್ರಹ್ಮನೊಂದಿಗೆ ಸಂಪರ್ಕ ಬೆಳೆಸಲು 'ತಮ್ಮ ಗುಣಗಳಿಗೆ
ಹತ್ತಿರವಾದ ದೈವೀಶಕ್ತಿ' ಪೂರಕವಾಗಿ ಕೆಲಸ
ಮಾಡುತ್ತಿರುತ್ತದೆ. ಅದಕ್ಕೆಂದೇ ಆಗಮಗಳು ನೂರಾರು ವಿಭಿನ್ನ ಗುಣಗಳ ದೇವತೆಗಳನ್ನು ಪ್ರಕಲ್ಪಿಸಿವೆ. ನಿರ್ಗುಣನೂ ನಿರಾಕಾರನೂ ಆದ ಪರಮಾತ್ಮನನ್ನು
ಧ್ಯಾನಿಸಲು ಅಥವಾ ಉಪಾಸನೆ ಮಾಡಲು, ನಿರ್ವಿಕಾರ ಭಾವನೆ ಅತ್ಯಗತ್ಯ. ಮನಸ್ಸಿನ ಸಮಾಹಿತ ಸ್ಥಿತಿಯಿಲ್ಲದೇ ನಿರಾಕಾರನನ್ನು ಉಪಾಸನೆಮಾಡುವುದು
ಕಷ್ಟ! ಚಿತ್ತೈಕಾಗ್ರತೆ ಇಲ್ಲದ ಮನಸ್ಸು ಉಪಾಸನೆಯಲ್ಲೂ ನೆಲೆ ಕಾಣಲಾರದು.
ಅದಕ್ಕೆಂದೇ ಪ್ರಾಜ್ಞರು ಉಪಾಸನೆಗೆ ಮನಸ್ಸುನ್ನು ಕೇಂದ್ರಗೊಳಿಸಲು ಧ್ಯೇಯನಾದ ಭಗವಂತನಿಗೆ
ವಿಗ್ರಹಗಳನ್ನು ಮಾಡಿದ್ದಾರೆ. ಶಬ್ದವೇ ಹೇಳುವಂತೆ
ಅಮೂರ್ತನಾದ ಭಗವಂತನನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕಾರಿಯಾದದ್ದೇ ಈ ವಿ-ಗ್ರಹ. ಇದು
ಭಗವಂತನ ಮಹಿಮೆ, ಭಗವಂತನಿಗೆ ಮಾಧ್ಯಮ, ಭಗವಂತನ ಮೂರ್ತಿ, ಭಗವದ್ವಸ್ತು, ಧ್ಯೇಯ ವಸ್ತು ...
ಅಷ್ಟೇ ಏಕೆ? ಇದು ನಮ್ಮ ಭಾವ ಕೇಂದ್ರವೇ ಆಗಿದೆ. ಆದ್ದರಿಂದಲೇ ವಿಗ್ರಹಗಳಿಗೆ, ಪ್ರತಿಮೆಗಳಿಗೆ
ನಿರ್ದಿಷ್ಟವಾದ ಮತ್ತು ನಿರ್ದುಷ್ಟವಾದ ಪವಿತ್ರ ಉದ್ದೇಶಗಳಿವೆ.
ಮಂಡಲೇ ಫಲಕೇ ಮೂರ್ಧ್ನಿ ಹೃದಿ ವಾ ದಶ ಕೀರ್ತಿತಾಃ || ಎಂದು ಕುಲಾರ್ಣವತಂತ್ರ ಗ್ರಂಥ ಒಂದು ಹೆಜ್ಜೆ ಮುಂದೆ ಹೋಗಿ ಹತ್ತು ದೇವತಾ ಸ್ಥಾನಗಳನ್ನು ವರ್ಣಿಸಿದೆ.
ಧ್ಯಾನಕ್ಕೆ ವಸ್ತುವಾಗುವ ವಿಗ್ರಹಗಳು ಉಪಾಸಕನ
ಅಂತರಂಗದ ತಿಳಿವನ್ನು ಪ್ರತಿನಿಧಿಸುವುದರ ಜೊತೆಗೆ ಜಗದ್ವ್ಯಾಪಿಯಾದ ಪರಮಾತ್ಮನನ್ನೂ
ಅರ್ಥೈಸುವಲ್ಲಿ ಸಮರ್ಥ ಸಂಕೇತವಾಗಬೇಕು. ಪ್ರತಿಯೊಬ್ಬ ಮಾನವನ ಹೃತ್ಕಮಲವನ್ನು ಅರಳಿಸುವಂತೆಯೂ,
ಒಳ್ಳೆಯ ನೆನಪಿನ ಪರಿಮಳವನ್ನು ಸೂಸುವಂತೆಯೂ, ಮಾಡುವ ದೈವಿಕ ಹಿನ್ನೆಲೆ ಈ ವಿಗ್ರಹಕ್ಕೆ ಇರಲೇ
ಬೇಕು. ಏಕೆಂದರೆ ವಿಗ್ರಹ ಧ್ಯಾನ ಕೇಂದ್ರ ತಾನೆ? ಪ್ರತೀಕೋಪಾಸನೆಯಲ್ಲಿ
ಮೂರ್ತಿಯ ವಿಶೇಷಗಳನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅದರಲ್ಲಿ ಲೀನವಾಗುವುದೇ ಧ್ಯಾನ.
ಧ್ಯಾನದಲ್ಲಿ ದೇವತಾಸ್ತುತಿಯು ತೈಲಧಾರೆಯಂತೆ ಒಂದೇ ಸಮನೆ ಹರಿಯುತ್ತಿರಬೇಕು. ಉಪಾಸಕನ ಮೊದಲ
ಹೆಜ್ಜೆ ಮತ್ತು ಉಪಾಸನೆಯ ಪ್ರಥಮ ಉಪಚಾರವೂ ಧ್ಯಾನವೇ ಆಗಿದೆ.
ಧ್ಯೇಯ ಮೂರ್ತಿಯು ಯಾವುದೋ ಅದಕ್ಕೆ ಅನುಗುಣವಾಗಿ
ಉಪಚಾರಗಳು ಇರುತ್ತವೆ. ಉದಾಹರಣೆಗೆ ಭಿತ್ತಿ ಚಿತ್ರರೂಪದ ದೇವತಾ ಬಿಂಬಕ್ಕೆ ಸ್ನಾನವೆಂಬ ಉಪಚಾರ ಬಟ್ಟೆಯಿಂದ ಒರೆಸುವ
ಮೂಲಕ ಆಗುತ್ತದೆ. ಅಂದರೆ ಇಲ್ಲಿ ಸಮ್ಮಾರ್ಜನೆಯೇ ಸ್ನಾನವಾಗುತ್ತದೆ. ಹೀಗೆ ಬಿಂಬಗಳು
ಬದಲಾದಂತೆ ಉಪಚಾರಗಳೂ ಬದಲಾಗುತ್ತವೆ. ಆಗ ಆಯಾ ಉಪಚಾರಕ್ಕೆ ಅನುಕೂಲಕರವಾದ ಸಾಮಗ್ರಿಗಳೂ
ಬದಲಾಗುತ್ತಿರುತ್ತವೆ. ಹಲವು ಪೂಜಾ ಸಾಮಗ್ರಿಗಳು ಎಷ್ಟೋ ಬಾರಿ ದೇವನ ಸ್ಥಾನ ಮಾನವನ್ನೇ
ಹೊಂದುತ್ತವೆ. ಶಂಖ, ಘಂಟೆ, ಪ್ರಭಾವಳಿಗಳು ಮತ್ತು ಪೀಠಪರಿಕರಗಳು ಇವು ದೇವರಂತೆ ಉಪಚಾರಗಳನ್ನು
ಪಡೆಯುತ್ತವೆ. ಆಗಮಗಳಲ್ಲಿ ಇವುಗಳಿಗೂ ದೆವತಾತತ್ವಗಳ ಆವಾಹನೆ ಮತ್ತು ಪೂಜೆಯನ್ನು ಹೇಳಿದ್ದಿದೆ. ಒಟ್ಟಿನಲ್ಲಿ
ದೇವರ ಪೂಜೆಗೆ ಬಳಸುವ ಸಾಮಗ್ರಿಗಳು ಪವಿತ್ರವಾಗಿರಬೇಕು ಮತ್ತು ಒಳ್ಳೆಯ ನೆನಪನ್ನು
ಸೂಸುವಂತಿರಬೇಕು.
ಅಣುರೇಣುತೃಣಕಾಷ್ಠಗಳಲ್ಲೂ ಭಗವಂತನನ್ನು ಕಂಡ ನಮ್ಮ
ಪೂರ್ವಜರು ಪೂಜಾ ಪದ್ಧತಿಗೆ ಒಂದು ವ್ಯವಸ್ಥೆಯನ್ನು ಮಾಡಿರುತ್ತಾರೆ. ಈ ಪೂಜೆಗಳು
ಕಲ್ಪಸೂತ್ರತಂತ್ರಾಗಮಪ್ರಯೋಗಗ್ರಂಥಗಳಲ್ಲಿ ಹೇಳಿದ ಹಾಗೆ ನಡೆಯಬೇಕು. ಅದಿಲ್ಲದಿದ್ದರೆ
ಶ್ರದ್ಧೆಯ ಹೆಸರಿನಲ್ಲಿ ಎಷ್ಟೋ ಡಾಂಭಿಕ ಆಚರಣೆಗಳು ಈ ಪೂಜಾ ಕೈಂಕರ್ಯಗಳಲ್ಲೂ ನುಸುಳಿಬಿಡುತ್ತವೆ.
ಶ್ರದ್ಧೆಗೆ ಮಾನದಂಡವೇ ಇಲ್ಲದಿರುವದರಿಂದ ಕಾಲದ ಪ್ರಭಾವ
ಮತ್ತು ನಾಟಕೀಯ ನಡುವಳಿಕೆಗಳಿಂದ ಭಾವಪೂರ್ಣತೆಯ ಸೋಗು ಈ ಪೂಜೆಯ ಮಾರ್ಗದಲ್ಲಿ ಯಾವಾಗಲೂ ನುಸುಳಲು
ಅವಕಾಶವಿದೆ. ಅದನ್ನು ತಡೆಗಟ್ಟಲು ಆಯಾ ಕಾಲದಲ್ಲಿ ಸಮರ್ಥ ಅಧಿಕಾರಿಗಳನ್ನು ಹೊಂದಿದ
ಮಠ ಮುಂದಾಗಿ ಬರಬೇಕು. ಯದ್ಯಪಿ ಯಾವುದೇ ಮಠ (ಆಮ್ನಾಯ ಪೀಠ) ವೇದವಾಙ್ಮಯದ ಅಧ್ಯಯನ
ಅಧ್ಯಾಪನಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿರುತ್ತದೆ. ಹಾಗಿದ್ದರೂ ಅದು ತನ್ನ
ವೇದಪರತೆಯಿಂದ ಅಧ್ಯಯನಶೀಲತೆಯಿಂದ ಕಾಲಕಾಲಕ್ಕೆ ಈ ಪೂಜಾ ಪದ್ಧತಿಗಳನ್ನು ಪರಿಶೀಲಿಸಿ, ಪರಿಷ್ಕರಿಸುತ್ತಿರಬೇಕು.
ಆಗ ಪೂಜೆಗೆ ಬೆನ್ನೆಲುಬಾದ ಶ್ರದ್ಧೆ, ಅರ್ಹತೆ ಅಥವಾ ಭಾವಪೂರ್ಣತೆ ಸಮಾಜದಲ್ಲಿ ಹೊಳಪಿನಿಂದ
ಕೂಡಿರುತ್ತದೆ. ಕೇವಲ ಹಿತ್ತಾಳೆಯ ಪೂಜಾಸಾಮಗ್ರಿಗಳನ್ನು ಕಾಲಕಾಲಕ್ಕೆ ತಿಕ್ಕಿ ಹೊಳಪಿನಿಂದಿರುವಂತೆ
ಮಾಡಿದರೆ ಸಾಲದು! ಮಠದ ಮಧ್ಯಸ್ತಿಕೆ, ಪರಿವೀಕ್ಷಣೆ ಮತ್ತು ಪರಿಷ್ಕಾರ ಪೂಜೆಗೆ ವಿಶೇಷತೆಯನ್ನು
(ಮೆರಗನ್ನು) ಒದಗಿಸುತ್ತದೆ. ಈ ಪೂಜಾರ್ಹತೆ ಎನ್ನುವುದು ಪೂಜ್ಯವಾದ ಬಿಂಬಕ್ಕೂ, ಪೂಜಕನಾದ
ಯಜಮಾನನಿಗೂ, ಪೂಜಾ ಸಾಮಗ್ರಿಗಳ ಗುಣಮಟ್ಟಕ್ಕೂ ಅನ್ವಯಿಸುತ್ತದೆ. ಹಾಗಾಗಿ ಪೂಜಾ ಪಾಠಗಳಿಗೆ ಈ
ನಾಲ್ಕನೆಯ ಅಂಶವು ಅತೀಮುಖ್ಯದ್ದಾಗಿದೆ.
ಮನೆಯಂಗಳದ ತುಳಸಿಯ ಪೂಜೆಯಿಂದ ಹಿಡಿದು ಮಠದ
ಉತ್ಸವಗಳವರೆಗೆ ವ್ಯಾಪಿಸಿರುವ ಈ ಪೂಜಾಪದ್ಧತಿಗಳ ಮುಖ್ಯ ಪ್ರಯೋಜನಗಳನ್ನು ಈಗ ಪರಿಶೀಲಿಸೋಣ. ದೇವಪೂಜೆಯನ್ನು ದುರಿತಕ್ಷಯಕ್ಕಾಗಿಯೂ,
ಪುಣ್ಯಸಂಚಯನಕ್ಕಾಗಿಯೂ ಮಾಡುತ್ತಾರೆ. ದೇವತೆಗಳು ಕೊಡುವವರು, ಬೇಡುವವರು ನಾವು. ಬೇಡುವ
ರೀತಿಯನ್ನೇ ಉಪಾಸನೆ ಎಂಬುದಾಗಿ ಋಷಿಗಳು ಸಕ್ರಮಗೊಳಿಸಿರುವರು. ಮನೆಯಲ್ಲಿ ಮಾಡುವ ಪೂಜೆ
ಸ್ವಹಿತಕ್ಕೆ ಕಾರಣವಾಗಿರುವುದು. ಇದರಲ್ಲಿ ತನ್ನ ಮತ್ತು ತನ್ನವರ ಕ್ಷೇಮ, ಸ್ಥೈರ್ಯ, ಜಯ,
ಆಯುರಾರೋಗ್ಯಗಳು ಸೇರಿಕೊಂಡಿವೆ. ಗೃಹಾ ಹ್ಯಾಶ್ರಮ ಪೂಜಾರ್ಥಂ ಎಂದು ಬೋಧಾಯನರು ಮನೆಯ
ಉದ್ದೇಶವೇ ಆಶ್ರಮೋಚಿತ ಪೂಜೆಗೈಯ್ಯಲೆಂದು ಎತ್ತಿ ಹೇಳಿದ್ದಾರೆ.
ಊರಿನಲ್ಲಿ ಮತ್ತು ಗುಡಿಗಳಲ್ಲಿ ಮಾಡುವ ಪೂಜೆಯು ಪರಾರ್ಥ ವಾಗಿರುವುದು. ಇವು ಊರಿನವರ ಮತ್ತು ಒಡೆಯರ ಪೀಡಾ ಪರಿಹಾರವಾಗಿಯೂ, ಗ್ರಾಮಕ್ಕೆ ಬಂದಿರುವ ಮತ್ತು ಒದಗಬಹುದಾದ ಆಪತ್ತು, ಆತಂಕಗಳ ನಿವಾರಣೆಗಾಗಿಯೂ, ಲೋಕಕಲ್ಯಾಣಕ್ಕೆ ಒತ್ತುನೀಡುವ ರೀತಿಯಲ್ಲಿಯೂ ಇರುತ್ತವೆ. ಒಟ್ಟರ್ಥದಲ್ಲಿ ಆತ್ಮಾರ್ಥವಾಗಿಯೂ ಪರಾರ್ಥವಾಗಿಯೂ ಸಾರ್ಥಕವೆನಿಸಿದ ಪೂಜೆಯನ್ನು ಕೈಗೊಳ್ಳುವಾಗ ಪೂಜಕನ ಮನಸ್ಸು “ದೇವಾ! ನಾನು ನಿನ್ನ ದಾಸ!” ಎನ್ನುವ ದ್ವೈತ ಭಾವನೆಯಿಂದಲೂ; “ನಾನು ಅದು!” ಎಂಬ ವಿಶಿಷ್ಟಾದ್ವೈತ ಭಾವನೆಯಿಂದಲೂ; ಇನ್ನು ಮೂರನೆಯ ಹಂತವಾದ “ನಾನು ನೀನು ಬೇರೆಯಲ್ಲವೆಂಬುದಾಗಿ” ಅದ್ವೈತ ಭಾವನೆಯಿಂದಲೂ ತುಂಬಿಕೊಂಡಿರುತ್ತದೆ. ಇವು ಮೂರೂ ಭಾವಗಳೂ ದೇವತಾರ್ಚನೆಯ ಫಲವಾಗಿವೆ.