Sunday, August 18, 2024

ಶ್ರಾವಣದಲ್ಲಿ ರುದ್ರಾನುಷ್ಠಾನ

ನಮಸ್ತೇ  ರುದ್ರ ಮನ್ಯವ ಉತೋತ ಇಷ್ಟವೇ ನಮಃ | 

ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ ||  ರುದ್ರಾಧ್ಯಾಯದ ಆರಂಭ ಮಂತ್ರ ||

 





ವರ್ಷ ಋತುವಿನ ಆರಂಭವೇ ಶ್ರಾವಣ ಮಾಸ. ಮಾಸದಲ್ಲಿ  ಮಳೆಗಾಲದ ಪ್ರಭಾವವನ್ನು ಇವತ್ತಿಗೂ ನಾವು ಕಾಣುತ್ತಿದ್ದೇವೆ.  ಮಳೆಯಿಂದ ಆವೃತವಾದ ಬೆಟ್ಟಗುಡ್ಡಗಳ ನಡುವೆ ಇರುವ ಎಲ್ಲ ಮರಗಿಡಗಳೂ, ಪ್ರಾಣಿಪಕ್ಷಿಗಳೂ ಬೆಳಕಿಗೆ ಕಾಯುತ್ತಿರುವುದು  ಸರ್ವೇಸಾಮಾನ್ಯವಾಗಿರುತ್ತದೆ. ಅವುಗಳಿಗೆ ಆಹಾರ ತಯಾರಿಸಲು ಸೂರ್ಯನ ಬೆಳಕು ಬೇಕೇಬೇಕು. ನಮಗೆ ಅಗ್ನಿಯಿದ್ದರೆ ಕೆಲವು ದಿನ ಕಳೆಯಲು ಸಾಕು. ಒಟ್ಟರ್ಥದಲ್ಲಿ ಜಗದ ಕಣಕಣವೂ ಬೆಳಕನ್ನು ನಿರೀಕ್ಷಿಸುವ ಸಂದರ್ಭ, ಅಗ್ನಿಯನ್ನು ಬಯಸುವ ಸಂದರ್ಭ,,, ಒಂದಿದ್ದರೆ ಅದು ಶ್ರಾವಣ ಸಂದರ್ಭಎಂದರೆ ಅತಿಶಯವಾಗಲಾರದು. ಶ್ರಾವಣ ಮಾಸ ಹಬ್ಬಗಳಿಂದ ಕೂಡಿದ ಶುಭಮಾಸ. ಇಲ್ಲಿಂದಲೇ ಸಾಲು ಸಾಲಾಗಿ ಹಬ್ಬಗಳು ಬರುತ್ತವೆ. ಒಂದು ಕಾಲದಲ್ಲಿ ಮಾಸಪೂರ್ತಿ ರುದ್ರಾಭಿಷೇಕ ಪೂಜೆಗಳು ಮನೆಮನೆಗಳಲ್ಲಿ ಧಾರಾಕಾರವಾಗಿ ಆಚರಣೆಗೊಳ್ಳುತ್ತಿತ್ತು. ಇವೆಲ್ಲವೂ ಬೆಳಕು ಮತ್ತು ಅಗ್ನಿಗಾಗಿ ನಡೆಯುತ್ತಿದೆಯೆಂದರೆ ತಪ್ಪಾಗುವುದೇ?

 


ಬೆಳಕಿನ ಗಣಿ ಸೂರ್ಯ (“ಯೋಸಾವಾದಿತ್ಯಃ”) ಮತ್ತು ಕೃಷ್ಣಯಜುರ್ವೇದದ ಅಗ್ನಿಕಾಂಡದಲ್ಲಿ ಪಠಿತವಾದ (“ ಅಗ್ನಿಃ ಕಾಂಡಋಷಿಃ “) ಅಗ್ನಿದೇವತಾಕ ಮಂತ್ರಸಂಪತ್ತನ್ನು ಹುದುಗಿಸಿಕೊಂಡಶತರುದ್ರೀಯಸಂಜ್ಞೆ ಹೊಂದಿದ ಮಂತ್ರ ಸಮೂಹವೇ ರುದ್ರೋಪನಿಷತ್ತು ಅಥವಾ ರುದ್ರಾಧ್ಯಾಯ. ಹೀಗೆ ಸೂರ್ಯ ಅಂದರೆ ಬೆಳಕು ಮತ್ತು ಅಗ್ನಿ ಎಂದರೆ ಶಾಖ... ಇವೆರಡಕ್ಕೂ ಆಶ್ರಯವಾದದ್ದೇ ರುದ್ರ. ಹೀಗೆ ಒಂದೇ ಮಂತ್ರಭಾಗ ಬೆಳಕಾಗಿಯೂ, ಅಗ್ನಿಯಾಗಿಯೂ ಕಂಡಿದ್ದು ಋಷಿಗಳ ಪರಿಶ್ರಮದ ಫಲವೆನ್ನಬೇಕು. ರುದ್ರಾಧ್ಯಾಯ ಜ್ಞಾನದ ದೀವಿಗೆಯಾಗಿ, ಪ್ರಭೆಯಾಗಿ ಅಮೃತತ್ವವನ್ನು ಉಂಟುಮಾಡುತ್ತದೆಯೆಂದು ಜಾಬಾಲೋಪನಿಷತ್ತಿನಲ್ಲಿ ಎತ್ತಿ ಹೇಳಿದ್ದಾರೆ. ಇದೇ ರುದ್ರೋಪನಿಷತ್ತು ಜಪ ಹೋಮ-ಅಭಿಷೇಕರೂಪವಾದ ಕರ್ಮದಿಂದ ಮನುಷ್ಯನ ಪಾಪವನ್ನು ಸಂಪೂರ್ಣವಾಗಿ ತೊಳೆಯುತ್ತದೆಯೆಂದು ಕೈವೈಲ್ಯೋಪನಿಷತ್ತು ಸಾರುತ್ತದೆ. ಒಟ್ಟರ್ಥದಲ್ಲಿ  ಜ್ಞಾನಕ್ಕೂ ಕರ್ಮಕ್ಕೂ ಕೇಂದ್ರವಾದ ಒಂದೇ ಮಂತ್ರಸಮೂಹವಿದ್ದರೆ ಅದು ರುದ್ರಾಧ್ಯಾಯ. ತಕ್ಕಡಿಯ ಕೇಂದ್ರಸೂಚಿಯಂತೆ, ಜಪಮಾಲೆಯ ಮಧ್ಯಮಣಿಯಂತೆ, ಸೌರಮಂಡಲದ ತೇಜಃಪುಂಜದಂತೆ, ಮಧ್ಯಮಮಾರ್ಗದ ಅಪರೂಪದ ಕೊಂಡಿಯಂತೆ ನಿಂತಿರುವ ಈ ರುದ್ರಾಧ್ಯಾಯ “ ವೇದಗಳ ಮಧ್ಯೆ ಶೋಭಿಸುವ ಯಜುರ್ವೇದದಲ್ಲಿ ಬರುವ ಪಂಚಕಾಂಡಗಳ ಮಧ್ಯದ ಅಗ್ನಿಕಾಂಡದಲ್ಲಿರುವ ಹನ್ನೊಂದು ಅನುವಾಕಗಳ ಮಧ್ಯದ “ನಮಃ ಸೋಮಾಯಚ” ಎಂಬ ಅನುವಾಕದ ಮಧ್ಯ ಮಂತ್ರವಾದ “ನಮಃ ಶಿವಾಯ” ಎಂಬ ಪಂಚಾಕ್ಷರಗಳನ್ನು ಧರಿಸಿದ್ದು, ನಮ್ಮನ್ನು ಉದ್ಧರಿಸಲಿಕ್ಕೆಂದು ನಂಬಿದರೆ ಅದು ಸರ್ವಥಾ ತಪ್ಪಲ್ಲ! ಈ ನಂಬಿಕೆಯೇ ಶ್ರದ್ಧೆಯಾಗಿ, ಯಜ್ಞ ಸಂಸ್ಕೃತಿಯ ಬುನಾದಿಯಾಗಿ ಇವತ್ತಿಗೂ ರುದ್ರಾನುಷ್ಠಾನವಾಗಿ ಮನೆ ಮನೆಗಳಲ್ಲಿ ರಾರಾಜಿಸುತ್ತಿದೆ. 





ಯಜ್ಞಕ್ಕೆ ಬೇಕಾದ ಎರಡು ಮುಖ್ಯ ತತ್ವ ಗಳೆಂದರೆ ಅಗ್ನಿ ಮತ್ತು ಸೋಮಗಳು. ಅವೆರಡೂ ರುದ್ರನೇ ಆಗಿದ್ದು, ಯಜ್ಞಸಂಸ್ಕೃತಿಯ ಬೆನ್ನೆಲುಬೇ ರುದ್ರನಾಗಿದ್ದಾನೆ ಎನ್ನಬಹುದು. ಅಗ್ನಿ - ಆಹುತಿ ಸ್ವೀಕರಿಸುವವ, ಸೋಮ – ಆಹುತಿಯಾಗುವವ, ಇವೆರಡರಲ್ಲಿ ಇಡೀ ಜಗತ್ತನ್ನೇ ಸಮೀಕರಿಸಿದ ನಮ್ಮ ಸನಾತನ ೠಷಿಗಳು ಇವೆರಡಕ್ಕೂ ಒಂದೇ ತತ್ವಾಧಿಷ್ಠಾನವನ್ನು ತೋರಿಸಿದ್ದು ಸೋಜಿಗವೆನೆಸಿದೆ! ಅಂದರೆ ನಮಗೆ ಕಾಣುವ ಮತ್ತು ಕಾಣದ (ನಾವು ಅನುಭವಿಸುವ ಮತ್ತು ನಮ್ಮ ಅನುಭವಕ್ಕೆ ನಿಲುಕದ) ಇಡೀ ಪ್ರಪಂಚವೂ ಕೂಡ ಒಂದೋ ಅಗ್ನಿಯಾಗಿರಬೇಕು; ಇಲ್ಲವೋ ಸೋಮವಾಗಿರಬೇಕು; ಅದಿಲ್ಲದಿದ್ದರೆ ಉಭಯವೂ ಆಗಿರಬೇಕು. ’ಅದು ಯಾವುದಾದರೂ ಆಗಿರಲಿ - - ಅದು ಅರ್ಧನಾರೀಶ್ವರನಾದ, ಸೋಮೇಶ್ವರನಾದ, ದೇವದೇವನಾದ, ಲಿಂಗರೂಪನಾದ ಮಹಾದೇವನನ್ನೇ ಪ್ರತಿನಿಧಿಸುತ್ತದೆ.’ ಎಂಬಲ್ಲಿಗೆ ಒಂದು ಯಜ್ಞ ಅಥವಾ ಒಂದು ಕರ್ಮ ಅಥವಾ ಜಪಹೋಮಾತ್ಮಕವಾದ ಒಂದು ಅನುಷ್ಠಾನ ಇಹ ಮತ್ತು ಪರಗಳೆರಡಕ್ಕೂ ಸಾಧನವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

 



ಇಹ ಮತ್ತು ಪರಗಳೆರಡರಲ್ಲೂ ವಿಶ್ವಾಸವಿರಿಸಿದ್ದ ನಮ್ಮ ಋಷಿಗಳು ರುದ್ರನ ನಾಮರೂಪಗಳನ್ನು ಕೊಂಡಾಡಿ, ನಮಿಸಿ ನಮಕ ಮಂತ್ರಗಳನ್ನು ಹೇಳಿದ್ದಲ್ಲದೇ,  “ಯಜ್ಞಕ್ಕೋಸ್ಕರ ನನಗೆ ಎಲ್ಲವೂ ದೊರಕಲಿ” ಎಂಬ ಸದಾಶಯದಿಂದ ಕೇಳಿಕೊಳ್ಳುವ ಚಮಕಗಳನ್ನೂ ಕಟ್ಟಿಕೊಟ್ಟಿರುವರು... ನಮಕ ಮತ್ತು ಚಮಕರೂಪವಾದ ಇಡೀ ರುದ್ರಾಧ್ಯಾಯದಲ್ಲಿ ಭಕ್ತಿಯಿದೆ, ಬೇಡಿಕೆಯಿದೆ; ಉಪಾಸನೆಯಿದೆ, ಉತ್ಪಾದನೆಯಿದೆ; ವಿಭೂತಿಯಿದೆ, ಪ್ರಾಪ್ತಿಯಿದೆ; ಜ್ಞಾನವಿದೆ, ಕರ್ಮವಿದೆ;  ನೀವೇನನ್ನು ನೋಡುತ್ತೀರೋ ಅದೆಲ್ಲವನ್ನೂ ತನ್ನಲ್ಲಿ ತೋರುವ ಒಂದು ಅಪರೂಪದ ಮಂತ್ರಭಾಗ ಇದಾಗಿದೆ. ಇಲ್ಲಿ ಪುನರುಕ್ತವಾಗುವ ’ನಮೋ’ ಶಬ್ದವು, ಪದೇ ಪದೇ ಕೇಳಿ ಬರುವ ಚ-ಮೇ ಎಂಬ ಶಬ್ದಗಳು ಮಂತ್ರದುದ್ದಕ್ಕೂ  ಅನುರಣನವಾಗುತ್ತಾ, ಇಡೀ ರುದ್ರಾಧ್ಯಾಯದ ಸೌಂದರ್ಯವನ್ನು ದಿವ್ಯತೆಗೆ ಏರಿಸಿವೆ. ಈ ದಿವ್ಯವಾದ ನಾದತರಂಗಗಳು ವಿಸ್ಮಯ, ಹರ್ಷ ಹಾಗೂ ಶ್ರದ್ಧೆ; ಹೀಗೆ ಈ ಮೂರೂ ಭಾವನೆಗಳನ್ನು ಏಕತ್ರಗೊಳಿಸಿ, ವಿಶಿಷ್ಟವಾದ ಅನುಭೂತಿಯೊಂದನ್ನು ಬಿಂಬಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. ಇಂಥ ಅಪರೂಪದ ಶಕ್ತಿಗಳಿಂದ ಕೂಡಿದ ರುದ್ರ ತನ್ನ ಘೋರ ರೂಪವನ್ನು ಶಾಂತಗೊಳಿಸಿ, ಅನುಗ್ರಹಿಸಬೇಕೆಂಬುದು ಇಡೀ ರುದ್ರಾನುಷ್ಠಾನದ ವಿಶಿಷ್ಟ ಪ್ರಾರ್ಥನೆಯಾಗಿದೆ.   



ಬೆಳಕು ಹೆಬ್ಬೆಳಕಾದರೆ ಕಾಣಿಸುವ ಕಣ್ಣನ್ನೂ ತೆರೆಯುವುದು ಕಷ್ಟವಾಗಿ ಬಿಡುತ್ತದೆ. ಅದೇ ಅಗ್ನಿ ಬೆಂಕಿಯಾದರೆ ಅಥವಾ ಕಿಚ್ಚಾದರೆ, ಅದು ನಮ್ಮ ಮನಸ್ಸು, ಮನೆ ಮತ್ತು ಮನುಕುಲವನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಹೀಗಾಗದೇ ಘೋರರೂಪೀ ರುದ್ರನು ನಮ್ಮಿಂದ ಹವಿಸ್ಸನ್ನೋ, ಸ್ತುತಿಯನ್ನೋ ಸ್ವೀಕರಿಸಿ... ಅಘೋರರೂಪದಿಂದ ಮನಸ್ಸನ್ನು ಶಿವವಾಗಿಸಿ, ಮನೆಯನ್ನು ಶುಭವಾಗಿಸಿ, ಮನುಕುಲವನ್ನು ಶಂಕರನಾಗಿ ಅನುಗ್ರಹಿಸಲಿ.

 

ನಮಿಪೆ ನಮಿಪೆನು ರುದ್ರ ದೇವನೆ ನಿನ್ನ ಕೋಪಕೆ ಬಾಣಗಳಿಗೆ |

ನಮಿಪೆ ಪುನರಪಿ ನಿನ್ನ ಬಿಲ್ಲಿಗೆ, ಮತ್ತೆ ತೋಳ್ಗಳಿಗೆ .... |

 ಪರಮೇಶ್ವರ ಪುಟ್ಟನ್ಮನೆ