Saturday, August 02, 2025

ವಿಸ್ತರೋ ಹಂತಿ

ಸತ್ಕ್ರಿಯಾಂ ದೇಶಕಾಲೌ ಚ 

ಶೌಚಂ ಬ್ರಾಹ್ಮಣಸಂಪದಮ್ |

ಪಂಚೈತಾನ್ ವಿಸ್ತರೋ ಹಂತಿ 

ತಸ್ಮಾನ್ನೇಹೇತ ವಿಸ್ತರಮ್ || ಬೌಧಾಯನ ಧರ್ಮ ಸೂತ್ರ...


ಯಾವುದೇ ಶ್ರಾದ್ಧಾದಿ ಪುಣ್ಯ ಕರ್ಮಗಳನ್ನು ಮಾಡುವಾಗ ಅಥವಾ ವೈದಿಕ ಕರ್ಮ ನಿರ್ವಹಿಸುವಾಗ ಈ ಐದು ವಿಷಯಗಳನ್ನು ಸುಮ್ಮನೆ ವಿಸ್ತರಿಸಬಾರದು. 

೧) ಆಚರಣೆ ಮತ್ತು ಕ್ರಿಯಾ ಕಲಾಪವನ್ನು ಅನ್ಯಥಾ ಬೆಳೆಸಬಾರದು. ಸರಿಯಾದ ಕರ್ಮ (ಯಾವದುಕ್ತಂ ಕರ್ಮ) ಅನುಷ್ಠಾನಕ್ಕೆ ಬರಬೇಕು.

೨) ಯಾವ ಸ್ಥಾನದಲ್ಲಿ ಕರ್ಮ ನಿರ್ವಹಿಸಬೇಕು? ಎಂಬ ದೇಶದ (ಜಾಗದ) ಬಗೆಗಿನ ಅತಿಯಾದ ಆಕರ್ಷಣೆ (ಮೋಹ) ಒಳ್ಳೆಯದಲ್ಲ! ಯಥಾ ಯೋಗ್ಯ ಸ್ಥಾನದಲ್ಲಿ ಕರ್ಮ ನಿರ್ವಹಣೆಯಾಗಬೇಕು. ಅಷ್ಟೇ!

೩) ಆಯಾ ಕರ್ಮಕ್ಕೆ ಪ್ರಶಸ್ತ ಕಾಲವನ್ನು ಆಯ್ಕೆ ಮಾಡಬೇಕು. ಆದರೆ ಕರ್ಮಕ್ಕಿಂತ ಕಾಲದ ವಿಷಯವೇ ಮುಖ್ಯವೆನ್ನುವಂತೆ ಆಗಬಾರದು. ಕಾಲವನ್ನು ಆರಿಸುವ ಗಡಿಬಿಡಿಯಲ್ಲಿ ಕರ್ಮದ ಆಚರಣೆ ಮೊಟಕು ಗೊಳ್ಳಬಾರದು.

೪) ಶುದ್ಧವಾಗಿ ಕರ್ಮ ಮಾಡಬೇಕು. ಆದರೆ ಅತಿಯಾಗಿ ಪರರನ್ನು ನಿಂದಿಸುವ (ನೋಯಿಸುವ) ಹಂತದಲ್ಲಿ ಮಡಿವಂತಿಕೆಯನ್ನು ಬೆಳೆಸಬಾರದು. ಸ್ಪೃಷ್ಟಾಸ್ಪೃಷ್ಟ, ಮೈಲಿಗೆ ಮತ್ತು ಜಾತಿ ವಿಷಯಗಳನ್ನು ಕರ್ಮದ ನಡುವೆ ಚರ್ಚಿಸಿ ಬೆಳೆಸಬಾರದು.

೫) ಬ್ರಾಹ್ಮಣ ಸಂಖ್ಯೆಗೆ ಹೆಚ್ಚು ಒತ್ತು ನೀಡಿ, ೧೨, ೧೪, ೨೪.... ಹೀಗೆ ಅಂಕೆಗಳ ಹೆಚ್ಚಳ ಅಥವಾ ಸಂಖ್ಯಾಬಲವೇ ಹೆಚ್ಚುಗಾರಿಕೆಯಾಗಬಾರದು. ಸಂದರ್ಭಕ್ಕೆ ಸರಿಯಾಗಿ ಬ್ರಾಹ್ಮಣ ಸಂಖ್ಯೆಯಿರಬೇಕು.

ಹೀಗೆ ಸಹಜ ಶೈಲಿಯ ಕಾರ್ಯಕ್ರಮ ಶ್ರೇಯಃಪ್ರದವಾಗುತ್ತದೆ. ಅದನ್ನು ಬಿಟ್ಟು ಮೇಲಿನ ಐದು ವಿಷಯಗಳ ವಿಸ್ತರಣೆ ಸರ್ವಥಾ ಯೋಗ್ಯವಲ್ಲ! ಅದು ಮಾಡುವವನಿಗೆ (ಕರ್ತೃವಿಗೆ) ಒಳ್ಳೆಯದನ್ನು ಮಾಡುವುದಿಲ್ಲ!