Wednesday, July 15, 2026

ಎಂಟು ಆತ್ಮಗುಣಗಳು

ದಯಾ ಕ್ಷಮಾನಸೂಯಾ ಚ ಶೌಚಾನಾಯಾಸಮಂಗಲಮ್ |

ಅಕಾರ್ಪಣ್ಯಮಸ್ಪೃಹತ್ವಂ ಸರ್ವಸಾಧಾರಣಾನಿ ಚ || 

1.     ದಯಾ – ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |

ವರ್ತತೇ ಸತತಂ ಹೃಷ್ಟಃ  ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ ||

ತನ್ನಂತೆ ಎಲ್ಲರ ಹಿತವನ್ನೂ, ಶುಭವನ್ನೂ ಬಯಸುವವನಾಗಿದ್ದು, ಸದಾ ಸಂತುಷ್ಟನಾಗಿರುವ ಗುಣವಂತನೇ ದಯಾವಂತನಾಗಿದ್ದಾನೆ.

2.     ಕ್ಷಮಾ – ಆಕೃಷ್ಟೋಭಿಹತೋ ವಾಪಿ ನ ಕ್ರೋಶೇನ್ನ ಚ ತಾಡಯೇತ್ |

ಅದುಷ್ಟೋ ವಾಙ್ಮನಃ ಕಾಯೈಃ ಸಾ ತಿತಿಕ್ಷಾ ಕ್ಷಮಾ ಸ್ಮೃತಾ ||

ತನಗೆ ಪೆಟ್ಟು ಕೊಟ್ಟರೂ, ತನ್ನ ಕಷ್ಟಗಳಿಗೆ ಆತನೇ ಕಾರಣವೆಂಬುದು ತಿಳಿದರೂ, ಆತನ ಬಗ್ಗೆ ಮಾತಿನಿಂದ ಮತ್ತು ಶರೀರದಿಂದ ಹಿಂಸೆ ಕೊಡದೇ ಅದನ್ನು ನುಂಗಿ ಕೊಂಡು, ಪ್ರತಿಕ್ರಿಯಾ ಶೂನ್ಯನಾಗಿ ಬದುಕುವ ಸಹನಾ ಮೂರ್ತಿಯೇ ಕ್ಷಮಾವಂತನೆನಿಸುತ್ತಾನೆ.

3.     ಅನಸೂಯಾ – ಯೋ ಧರ್ಮಮರ್ಥಂ ಕಾಮಂ ಚ ಲಭತೇ ಮೋಕ್ಷಮೇವ ಚ |

ನ ದ್ವಿಷ್ಯಾತ್ತಂ ಸದಾ ಪ್ರಾಜ್ಞಃ ಸಾನಸೂಯಾ ಸ್ಮೃತಾ ಬುಧೈಃ ||

ಯಾರು ಧರ್ಮಾರ್ಥಕಾಮಮೋಕ್ಷಗಳನ್ನು ಪಡೆಯಲು ಉದ್ಯುಕ್ತರಾಗಿರುತ್ತಾರೋ, ಅವರು ಇನ್ನೊಬ್ಬರ ಪ್ರಯತ್ನವನ್ನು ನಿಂದಿಸಬಾರದು, ಪರರ ಏಳಿಗೆಯನ್ನು ದ್ವೇಷಿಸದೇ ಇರುವ ಗುಣವೇ ಅನಸೂಯಾ.

4.     ಶೌಚಮ್ – ದ್ರವ್ಯಶೌಚಂ ಮನಃ ಶೌಚಂ ವಾಚಿಕಂ ಕಾಯಿಕಂ ತಥಾ |

ಶೌಚಂ ಚತುರ್ವಿಧಂ ಪ್ರೋಕ್ತಂ ಋಷಿಭಿಸ್ತತ್ವದರ್ಶಿಭಿಃ ||

ಶೌಚವೆಂದರೆ ಶುದ್ಧಿ. ದ್ರವ್ಯ, ಮನಸ್ಸು, ಮಾತು ಮತ್ತು ಶರೀರ ಇವುಗಳ ಶುದ್ಧತೆ ಮತ್ತು ಬದ್ಧತೆಯ ಸಂಪಾದನೆ ಬಹು ಮುಖ್ಯವಾಗಿದ್ದು, ಅದನ್ನು ಸಾಧಿಸಲು ಈ ಗುಣವನ್ನು ಎತ್ತಿ ಹೇಳಿದ್ದಾರೆ.

5.    ಅನಾಯಾಸಃ – ಯದಾರಂಭೇ ಭವೇತ್ಪೀಡಾ ನಿತ್ಯಮತ್ಯಂತಮಾತ್ಮನಃ |

ತದ್ವರ್ಜಯೇದ್ಧರ್ಮ್ಯಮಪಿ ಸೋನಾಯಾಸಃ ಪ್ರಕೀರ್ತಿತಃ || 

ಯಾವುದನ್ನು ಮಾಡುವುದರಿಂದ ಶರೀರ, ಬುದ್ಧಿ, ಮನಸ್ಸುಗಳಿಗೆ ಪೀಡೆಯುಂಟಾಗುವುದೋ, ಈ ಪೀಡೆ ನಿರಂತರವಾಗಿ ನಮ್ಮನ್ನು ಕಾಡಲಾರಂಭಿಸಿ, ನಾವು ಬಾಡದಂತೆ, ಶರೀರಾದಿಗಳನ್ನು ಅತಿಯಾಗಿ ಪೀಡಿಸದೇ ಶಿಸ್ತಿನಿಂದಿರುವುದು.

6.     ಮಂಗಲಮ್ – ಪ್ರಶಸ್ತಾಚರಣಂ ನಿತ್ಯಮಪ್ರಶಸ್ತವಿವರ್ಜನಮ್ |

ಏತದ್ಧಿ ಮಂಗಲಂ ಪ್ರೋಕ್ತಂ ಮುನಿಭಿಸ್ತತ್ವದರ್ಶಿಭಿಃ ||

ವಿಹಿತವಾದದ್ದನ್ನು ಮಾಡುವುದು, ಕೆಟ್ಟದ್ದನ್ನು ಬಿಡುವುದು ಹೀಗೆ ಪ್ರಶಸ್ತಕರ್ಮದಲ್ಲಿ ನಿರತನಾಗಿರುವುದೇ ಮಂಗಲ ಅಥವಾ ಶುಭಾಚರಣೆ ಎಂದೆನಿಸುತ್ತದೆ. ಅಂದರೆ ಕೇಡನ್ನು ಬಿಟ್ಟು ಒಳಿತಿನಿಂದ ಕೂಡಿದ ಆಚರಣೆ ಮಾಡುವುದು.

7.     ಅಕಾರ್ಪಣ್ಯಮ್ – ಆಪದ್ಯಪಿ ಚ ಕಷ್ಟಾಯಾಂ ಭವೇದ್ದೀನೋ ನ ಕಸ್ಯಚಿತ್ |

ಸಂವಿಭಾಗರುಚಿಶ್ಚ ಸ್ಯಾತ್ತದಕಾರ್ಪಣ್ಯಮುಚ್ಯತೇ ||

ಎಂಥಾ ಆಪತ್ತು ಎದುರಾದರೂ ಬೇರೆಯವರಲ್ಲಿ ಬೇಡುವುದನ್ನು ಬಿಟ್ಟು, ಹಂಚಿಕೊಂಡು ಬಾಳುವುದರಲ್ಲಿ ವಿಶ್ವಾಸವಿಟ್ಟು, ಮನಃಪೂರ್ವಕವಾಗಿ ವಿತರಣಾ ಬುದ್ಧಿಯನ್ನು ಹೊಂದುವುದು..

8.     ಅಸ್ಪೃಹಾ – ವಿವರ್ಜಯೇದಸಂತೋಷಂ ವಿಷಯೇಷು ಸದಾ ನರಃ |

ಪರದ್ರವ್ಯಾಭಿಲಾಷಂ ಚ ಸಾಸ್ಪೃಹಾ ಕಥ್ಯತೇ ಬುಧೈಃ ||

ಅಸಮಾಧಾನವನ್ನು ಬಿಟ್ಟು, ಪರರ ವಸ್ತುವಿಗೆ ಆಸೆಪಡದೆ, ಇಂದ್ರಿಯಗಳನ್ನು ನಿಗ್ರಹಿಸಿ, ತೃಪ್ತಿಯಿಂದಿರುವುದನ್ನೇ ಅಸ್ಪೃಹಾ ಎನ್ನುವರು.

ಈ ಎಂಟು ಆತ್ಮಗುಣಗಳನ್ನು ಗೌತಮರು ಎತ್ತಿ ಹೇಳಿದ್ದಾರೆ. ಅತೀ ಮುಖ್ಯ ವಿಷಯವೇನೆಂದರೆ, ವೇದೋಕ್ತ ಸಂಸ್ಕಾರಗಳನ್ನು ಮಾಡಿಯೂ ವ್ಯಕ್ತಿಯಲ್ಲಿ ಮೇಲಿನ ಎಂಟು ಗುಣಗಳು ಪ್ರಕಟವಾಗದಿದ್ದರೆ ಆ ಸಂಸ್ಕಾರಗಳು ವ್ಯರ್ಥವೆಂದೇ ತಿಳಿಯಬೇಕು. ಒಂದು ವೇಳೆ ಸಂಸ್ಕಾರಗಳಲ್ಲಿ ಕೆಲವನ್ನು ಮಾತ್ರ ಮಾಡಿದ್ದರೂ, ಈ ಗುಣಗಳು ವ್ಯಕ್ತಿಯ ವ್ಯಕ್ತಿತ್ವದಲ್ಲಿ ಕಂಡು ಬಂದರೆ ಆತನು ಪೂರ್ಣವಾಗಿ ಸುಸಂಸ್ಕೃತನೆಂದು ತಿಳಿಯಬೇಕು. ಹೀಗೆ ತಾಳೆಯನ್ನು ನೋಡಬೇಕೆಂದು ಋಷಿಗಳು ಒತ್ತಿ ಹೇಳಿದ್ದಾರೆ. ಸಮಾಜದ ಯಾವುದೇ ಕ್ರಿಯಾ ಕಲಾಪಗಳು ವ್ಯರ್ಥವಾಗಿಯೂ, ಬೂಟಾಟಿಕೆಯಾಗಿಯೂ ಆಗಿರುವುದು ಹಿರಿಯರಿಗೆ ಇಷ್ಟವಾಗಿರಲಿಲ್ಲ!

ಯಸ್ಯ ಖಲು ಸಂಸ್ಕಾರಾಣಾಂ ಏಕದೇಶೋಪಿ ಅಷ್ಟೌ ಆತ್ಮಗುಣಾಃ ಅಥ ಸ ಬ್ರಹ್ಮಣಃ ಸಾಯುಜ್ಯಂ ಸಾಲೋಕ್ಯಂ ಚ ಗಚ್ಚತಿ ||


Tuesday, June 16, 2026

ಸ್ವಾಹೇತ್ಯಾದಿ ಸಂತತಧಾರಯೇತಿ ಮೀಮಾಂಸಕಾಃ

ವಸೋರ್ಧಾರಾ ಕುರಿತ ವಿಷಯವನ್ನು ಪೂರ್ವ ಮೀಮಾಂಸೆಯ ೧೨ನೇ ಅಧ್ಯಾಯದ ೩ನೇ ಪಾದ ೧೧ನೇ ಅಧಿಕರಣದಲ್ಲಿ ಕಾಣಬಹುದು.

೧೦ನೇ ಅಧಿಕರಣದಲ್ಲಿ ಮಂತ್ರಾಂತೇನ ಕರ್ಮಾದಿ ಸನ್ನಿಪಾತಸ್ಸ್ಯಾತ್ ಎಂದು ವಿವರಿಸುವಾಗ ಮಂತ್ರದ ಕೊನೆಯ ಶಬ್ದ ಹೇಳಿ ಮುಗಿಯದೇ ಆ ಮಂತ್ರ ಅರ್ಥವಾಗಲಾರದಷ್ಟೇ? ಹಾಗಾಗಿ ಮಂತ್ರಾದಿ ಮತ್ತು ಮಂತ್ರಮಧ್ಯಗಳಲ್ಲಿ ಕರ್ಮವನ್ನು ಕೈಗೊಳ್ಳದೇ ಮಂತ್ರದ ಅಂತ್ಯದಲ್ಲಿ ಕರ್ಮವನ್ನು ಆಚರಿಸುವಂತೆ ಸಿದ್ಧಾಂತಿಸಲಾಗಿದೆ.

ಇದನ್ನು ಪ್ರಶ್ನಿಸಿ ೧೨ನೇ ಅಧಿಕರಣದಲ್ಲಿ ವೈಷಮ್ಯವನ್ನು ತೋರಿಸುತ್ತಾ ಸಂತತಾಂ ವಸೋರ್ಧಾರಾಂ ಜುಹೋತಿ ಅಥವಾ ದ್ವಾದಶದ್ವಾದಶಾನಿ ಜುಹೋತಿ ಎಂಬಲ್ಲಿ ಅವಿಚ್ಛಿನ್ನಧಾರೆ ಅಥವಾ ಸಾಂತತ್ಯ ವಿಹಿತವಾಗಿದೆ. ಮಂತ್ರಾದಿಯಲ್ಲಿ ಮಂತ್ರ ಮತ್ತು ಕರ್ಮಗಳ ಸಾಹಿತ್ಯ ಸ್ಪಷ್ಟ ಎಂದು ಪೂರ್ವಪಕ್ಷ ಮಾಡಿದ್ದಾರೆ. ವಿಚಿತ್ರವೆಂಬಂತೆ ಸಂತತವಚನಾದ್ಧಾರಾಯಾಮಾದಿ ಸಂಯೋಗಃ ಎಂಬುದು ಪೂರ್ವ ಪಕ್ಷವಾಗಿ ಸೂತ್ರಿತವಾಗಿದೆ.


ಕರ್ಮಸಂತಾನೋ ವಾ ನಾನಾಕರ್ಮತ್ವಾದಿತರಸ್ಯಾಶಕ್ಯತ್ವಾತ್ ಎಂಬುದು ಸಿದ್ಧಾಂತ. ಇಲ್ಲಿ ಹನ್ನೆರಡೂ ಹೋಮಗಳ ಸಾಂತತ್ಯ ಹೇಳಲ್ಪಟ್ಟಿದ್ದು, ಮಂತ್ರಕರ್ಮಗಳ ಸಾಂತತ್ಯವಲ್ಲ! ಕ್ಷಣಿಕ ಕರ್ಮವು ಮಂತ್ರದ ಜೊತೆ ಸಾಗಲಾರದು! ಮಂತ್ರಕರ್ಮಸಾಂತತ್ಯಸ್ಯ ಅಶಕ್ಯತ್ವಾತ್ ಎಂದು ಪ್ರತಿಪಾದಿಸಿದ್ದಾರೆ.

ಹಾಗಾದರೆ ಆಘಾರಹೋಮದಲ್ಲಿ ಕರ್ಮ ಮತ್ತು ಮಂತ್ರಗಳ ಸಂಯೋಗ ಕಾಣಿಸುತ್ತಿದೆಯಲ್ಲ!? ಎಂಬುದು ಮುಂದಿನ ಅಧಿಕರಣದ ವಿಶಯವಾಗಿದೆ. ಆಘಾರೇ ಚ ದೀರ್ಘ ಧಾರಾತ್ವಾತ್ ಆಘಾರದಲ್ಲಿ ಧಾರಾ ಹೋಮ ಮಾತ್ರ ಗ್ರಾಹ್ಯ ವಾಗಿದೆ. ಇಲ್ಲಿಯೂ ಕರ್ಮಸಾಂತತ್ಯ ಮುಖ್ಯವಾಗುವುದಿಲ್ಲ! ಎಂದು ಸಿದ್ಧಾಂತ ಮಾಡಿದ್ದಾರೆ...

 ನೋಡುತ್ತಾ ನೋಡುತ್ತಾ ಮೂರು ಅಧಿಕರಣಗಳನ್ನು ಚರ್ಚಿಸಿದಂತೆ ಆಯಿತು... ಇದೆಲ್ಲದರಿಂದ ಮೀಮಾಂಸಕರ ಅಭಿಪ್ರಾಯ ಸುಸ್ಪಷ್ಟವಾಗಿ ಗೋಚರಿಸುತ್ತದೆ. ಮಂತ್ರ ಮತ್ತು ಆಜ್ಯಧಾರೆ ಏಕಕಾಲದಲ್ಲಿ ಆರಂಭವಾಗಲಾರದು. ಪ್ರತೀಮಂತ್ರವನ್ನೂ ಪಠಿಸಿ ಆದಮೇಲೆ ಕರ್ಮದ ವಿನಿಯೋಗ ಯುಕ್ತವಾಗಿದೆ.  ಎಲ್ಲಿ ಧಾರೆ ಅಪೇಕ್ಷಿತವೋ, ಅಲ್ಲಿ ಚತುರ್ಗೃಹೀತ ಮಾಡಿ ಹೋಮಿಸುವುದು ಸರಿಯಾದ ಕ್ರಮವೇ ಹೊರತು ಮಂತ್ರಾರಂಭದಿಂದ ಧಾರೆಯನ್ನು ಮೀಮಾಂಸಾ ಸುತರಾಂ ಒಪ್ಪುವುದಿಲ್ಲ! ಧನ್ಯವಾದಗಳು 

Wednesday, April 15, 2026

ಸಂಗೀತ

ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ | ಏಕಮಾಪಾತಮಧುರಂ - ಅನ್ಯದಾಲೋಚನಾಮೃತಮ್ || ಸುಭಾಷಿತಮ್ || 

ಸಂಗೀತವೆಂದರೆ ಚೆನ್ನಾಗಿ ಹಾಡುವುದು. ಇದರಲ್ಲಿ ಗಾಯನ, ವಾದನ ಮತ್ತು ನರ್ತನ ಎಂಬ ಮೂರು ಅಂಶಗಳು ಮೇಳೈಸಿವೆ. ಹಾಗಾಗಿ ಸಂಗೀತವನ್ನು ತ್ರಿತಯ ಎಂದೂ ಕರೆಯುತ್ತಾರೆ. ಇವು ಮೂರೂ ಪ್ರಕಾರಗಳು (ಹಾಡು, ವಾದ್ಯ ಮತ್ತು ನೃತ್ಯ) ಬೇರೆ ಬೇರೆಯಾಗಿ ಸ್ವತಂತ್ರವೋ ಎಂಬಂತೆ ಇಂದು ಬೆಳೆದು ನಿಂತಿವೆ. ಅದರಂತೆ ಇವು ಪರಸ್ಪರ ಗಾಢವಾಗಿ ಬೆಸೆದು ಕೊಂಡಿವೆ. ಆದರೆ ಇಂದು ಸಂಗೀತ ಶಬ್ದ ಗಾಯನಕ್ಕೆ ಮಾತ್ರ ಸೀಮಿತವಾಗಿ ಬಳಕೆಯಾಗುತ್ತಿದೆ. ಪ್ರಕೃತ ಲೇಖನದಲ್ಲಿ ಸಂಗೀತ ಪದ ತ್ರಿತಯವನ್ನೂ ಪ್ರತಿನಿಧಿಸುತ್ತದೆ. ಗೀತ, ವಾದ್ಯ ಮತ್ತು ನೃತ್ಯಗಳಲ್ಲಿ (ಸಂಗೀತದಲ್ಲಿ) ನಾದ ಮತ್ತು ಲಯಗಳೆಂಬ ಎರಡು ಅಂಶಗಳು; ಇಡೀ ಸಂಗೀತದ ತ್ರಿತಯಗಳನ್ನು ಪರಸ್ಪರ ಒಂದನ್ನೊಂದು ಬೆಸೆದು ಕೊಳ್ಳಲು ಮತ್ತು ರೂಪುಗೊಳ್ಳಲು ಸಹಕಾರಿಯಾಗಿ ನಿಂತಿವೆ. ಇವು ಸಂಗೀತ ಪ್ರಪಂಚದುದ್ದಕ್ಕೂ ಹಾಸುಹೊಕ್ಕಾಗಿವೆ. 

ನಾದ ಮತ್ತು ಲಯ ಸಂಗೀತದ ಉಸಿರು. ಹೇಗೆ ಪ್ರಾಣಪ್ರಪಂಚಕ್ಕೆ ಎಡ ಮೂಗು ಮತ್ತು ಬಲ ಮೂಗಿನ ಹೊಳ್ಳೆಗಳು ದ್ವಾರಗಳೋ ಹಾಗೆ. ಇಡೀ ಸಂಗೀತ ಪ್ರಪಂಚಕ್ಕೆ ನಾದ ಮತ್ತು ಲಯಗಳು ಇಡಾಪಿಂಗಳಾ ನಾಡಿಗಳಂತೆ ಜೀವನಾಡಿಗಳಾಗಿವೆ. ಇವುಗಳ ಮೂಲವನ್ನು ಬಗೆದರೆ, ನಾದದ ಮೂಲವೇ ವೇದ ಮತ್ತು ಲಯದ ಮೂಲವೇ ಛಂದಸ್ಸು ಎಂಬ ಅಂಶಗಳು ಸ್ಫುಟವಾಗುತ್ತವೆ. ಅವು ಪರಸ್ಪರ ಬೇರೆಯೇನಲ್ಲ! ಛಂದಾಂಸಿ ಜಜ್ಞಿರೇ ತಸ್ಮಾತ್ | ಯಜುಸ್ತಸ್ಮಾದಜಾಯತ | ಎಂಬ ವೈದಿಕ ಮಾತಿನಂತೆ ಅವು ಪರಸ್ಪರ ಪೂರಕವಾಗಿಯೇ ನಿಂತಿವೆ. ಎಂಬಲ್ಲಿಗೆ ಸಂಗೀತದ ಬೇರು ವೇದವೆಂಬ ವಿದ್ಯೆಯ ರಾಶಿಯಲ್ಲಿ ಮನೆ ಮಾಡಿದ್ದು ಕಂಡುಬರುತ್ತದೆ. 

ಋಗ್ಯಜುಸ್ಸಾಮಭೇದದಿಂದ ಮೂರಾದ ಈ ವಿದ್ಯಾಸಮುದ್ರ ತ್ರಯೀ ಎಂಬ ಅನ್ವರ್ಥವನ್ನೂ ಪಡೆದಿದೆ. ಇಲ್ಲಿ ಪ್ರತೀ ವೇದಕ್ಕೂ ಉಪವೇದಗಳನ್ನು ನಾವು ನೋಡುತ್ತೇವೆ. ಉಪವೇದವೆಂದರೆ ಈ ಮೂಲವೇದಕ್ಕೆ ಪೂರಕವೂ, ಅಧ್ಯಯನ ಯೋಗ್ಯವೂ ಆದ ಭಾಗ ಎಂದರ್ಥ ಮಾಡಬೇಕು. ಇದೊಂದು ಬೇರೆ ವೇದವೆಂದು ಭಾವಿಸಬಾರದು. ಇವು ಮೂಲ ವೇದದ ವಿಕಾಸವಾಗಿ ರೂಪುಗೊಂಡ ವಿದ್ಯೆಗಳಾಗಿವೆ. ಪ್ರಕೃತ ಸಾಮವೇದದ ಉಪವೇದವಾಗಿ ನಾವು ಗಂಧರ್ವವೇದವನ್ನು ಕಾಣಬಹುದು.
ಈ ಗಂಧರ್ವ ವೇದದಲ್ಲಿ ನೃತ್ಯ ಹಾಗೂ ಗಾಯನಕ್ಕೆ ಸಂಬಂಧಿಸಿದ ಹಲವು ಪ್ರಾಚೀನ ವಿಷಯಗಳನ್ನು ನಾವು ನೋಡಬಹುದು. ರಾಗ, ರಾಗಿಣೀ, ತಾಳ, ಸ್ವರ, ವಾದ್ಯಗಳು ಮತ್ತು ನೃತ್ಯಗಳ ಭೇದೋಪಭೇದಗಳ ವರ್ಣನೆಗಳು ಇಲ್ಲಿವೆ. ಇನ್ನು ಸಾಮಗಾನದ ಗೇಯಪ್ರಕಾರಗಳು ಮತ್ತು ಶಾಖೋಪಶಾಖೆಗಳು ಇಂದಿಗೆ ಸರಿಸುಮಾರು ಲುಪ್ತವಾಗಿಹೋಗಿವೆ. ಆದರೂ ಪ್ರಾಚೀನ ನೃತ್ಯಶಾಸ್ತ್ರಗಳಲ್ಲಿ ಭರತನ ನಾಟ್ಯಶಾಸ್ತ್ರ, ದತ್ತಿಲಮುನಿಯ ದತ್ತಿಲಮ್, ಶಾರ್ಙದೇವನ ಸಂಗೀತ ರತ್ನಾಕರ ಮತ್ತು ದಾಮೋದರನ ಸಂಗೀತ ದರ್ಪಣ ಗ್ರಂಥಗಳು ಇಂದಿಗೂ ಆಧಾರವಾಗಿದ್ದು, ನಾಟ್ಯದ ವಿವಿಧರೂಪಗಳು, ರಸಭಾವಗಳು, ಸ್ವರ, ತಾಳ, ಲಯಗಳ ವಿಸ್ತೃತ ವರ್ಣನೆಗಳನ್ನು ನಾವಿಲ್ಲಿ ಗಮನಿಸಬಹುದು. ಒಟ್ಟಿನಲ್ಲಿ ಸಾಮವೇದದ ಉಪವೇದವಾದ ಗಂಧರ್ವವೇದದಲ್ಲಿ ಈ ಸಂಗೀತದ ಕುರಿತ ಮೂಲಭೂತವಾದ ವಿಚಾರಗಳು ಮೊದಲು ಬೆಳಕಿಗೆ ಬಂದವು.
 

ಬೆಳಕಿನ ದೇಶ ಭಾರತ. ತಾನು ಬೆಳಕನಲ್ಲಿ ಬಾಳಿ, ಬೆಳಕನ್ನೇ ನಂಬಿ, ಜಗತ್ತಿಗೇ ಬೆಳಕಾಗಿ ನಿಂತಿರುವ ಭಾರತ ನಮಗೆ ತಾಯಿ. ವಿದ್ಯಾವಾರಿಧಿಯಂತಿರುವ ವೇದಗಳನ್ನು ಜಗತ್ತಿಗೆ ನೀಡಿದ ಭಾರತ, ಜ್ಞಾನನಿಧಿಯೆನಿಸಿದೆ. ಸಂಗೀತ, ಸಾಹಿತ್ಯಗಳನ್ನು ವೇದಕಾಲದಿಂದಲೂ ನಮಗೆ ಉಣಿಸಿದ ಮಾತೆಯಾಗಿದ್ದಾಳೆ. ವೇದಮಾತೆಯನ್ನು ಗಾಯತ್ರಿಯಂತೆಯೂ, ಸಾವಿತ್ರಿಯಂತೆಯೂ ಮತ್ತು ಸರಸ್ವತಿಯಂತೆಯೂ ಕಂಡ ನಮ್ಮ ಋಷಿಗಳು; ಆಕೆ ತನ್ನ ಎದೆಯಲ್ಲಿ ಸಂಗೀತ ಮತ್ತು ಸಾಹಿತ್ಯಗಳೆಂಬ ಶಕ್ತಿಯುತಹಾಲುಗಳನ್ನು ತುಂಬಿ ಕೊಂಡಿದ್ದಾಳೆ. ಅಲ್ಲದೇ ನಮ್ಮನ್ನು ಎದೆ ಹಾಲುಣಿಸಿ, ಹರಸಿದ್ದಾ
ಳೆಂದು ಕೊಂಡಾಡಿದ್ದಾರೆ. ಒಂದು ಎದೆಯಲ್ಲಿ ಸಂಗೀತವನ್ನೂ, ಇನ್ನೊಂದರಲ್ಲಿ ವೇದವಾಙ್ಮಯವನ್ನೂ ಅಂದರೆ ಸಾಹಿತ್ಯವನ್ನೂ ತುಂಬಿಕೊಂಡಿದ್ದಾಳೆ. ಇದರಿಂದ ಭಾರತೀಯರಿಗೆ ಅಮೃತವನ್ನುಣಿಸಿದ್ದಾಳೆ. ಸಂಗೀತಾಮೃತದಿಂದ ರಸ ಮಾಧುರ್ಯವನ್ನೂ, ಸಾಹಿತ್ಯಾಮೃತದಿಂದ ವಿಚಾರ ವೈಶಾಲ್ಯವನ್ನೂ (ನಾವು ಸಣ್ಣವರಿದ್ದಾಗಲೇ) ನಮಗೆ ನೀಡಿ, ನಮ್ಮ ಮನೋ ವೇದಿಕೆಗಳಾದ ಭಾವ  ಮತ್ತು ಬುದ್ಧಿಗಳನ್ನು ವಿಕಾಸಗೊಳಿಸಿದ್ದಾಳೆ. ಅದಕ್ಕೆ ಭಾರತೀಯರಾದ ನಾವು ಧನ್ಯರು. ಭಾವ ಮತ್ತು ಬುದ್ಧಿ ಪ್ರಪಂಚದಲ್ಲಿನ ದಕ್ಷತೆಯೇ ಬದುಕಿನ ಬಹುದೊಡ್ಡ ಸಾಧನೆಯಲ್ಲವೇ?