Monday, November 07, 2011

ಬೆಳಗು




ಬೆಳಗಾಗಿ ನಾನೆದ್ದು......
-
ಜಾನಪದ

ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ
ಕೂಸು ಕಂದಮ್ಮ ಒಳ-ಹೊರಗ
ಕೂಸು ಕಂದಮ್ಮ ಒಳ-ಹೊರಗ ಆಡಿದರ
ಬೀಸಣಿಕೆ ಗಾಳಿ ಸುಳಿದಾವ

ಬೆಳಗಾಗಿ ನೆನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ತೊಟ್ಟಿಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮೆ ಹೊಡ್ಕೊಂಡು! ತೌರೂರ
ತಿಟ್ಟಹತ್ತಿ ತಿರುಗಿ ನೋಡ್ಯಾಳೋ

ಹೆಣ್ಣುಮಕ್ಕಳ ಕಳುಹಿ ಹೆಂಗಿದಿ ನನ ಹಡೆದವ್ವಾ
ಹನ್ನೆರಡಂಕನ ಪಡೆಸಾಲಿ
ಹನ್ನೆರಡು ಅಂಕನ ಪಡಸಾಲಿ ಒಳ ಹೊರಗ
ಹೆಣ್ಣು ಮಕ್ಕಳ ಉಲವಿಲ್ಲ

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ...

ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ
ಎಳ್ಳು ಜೀರಿಗೆ ಬೆಳಿಯೋ ಭೂಮಿತಾಯಿ
ಎದ್ದೊಂದು ಗಳಿಗೆ ನೆನೆದೇನು

ಮಣ್ಣಲ್ಲಿ ಹುಟ್ಟೋಳೆ ಮಣ್ಣಾಲಿ ಬೆಳೆವೋಳೆ
ಎಣ್ಣೇಲಿ ಕಣ್ಣಾ ಬಿಡುವೋಳೆ ಜಗಜ್ಯೋತಿ
ಸತ್ಯಾದಿಂದುರಿಯೆ ನಮಗಾಗಿ

ಕಲ್ಲು ಕೊಟ್ಟವ್ವಾಗೆ ಎಲ್ಲಾ ಭಾಗ್ಯವು ಬರಲಿ
ಪಲ್ಲಕ್ಕಿ ಮೇಲೆ ಮಗ ಬರಲಿ ಮನೆಗೆ
ಮಲ್ಲಿಗೆ ಮುಡಿಯೊ ಸೊಸೆ ಬರಲಿ

ಕಲ್ಲಮ್ಮ ಮಾತಾಯಿ ಮೆಲ್ಲಮ್ಮ ರಾಗೀಯ
ಜಲ್ಲ ಜಲ್ಲನೆ ಉದುರಮ್ಮ ನಾನಿನಗೆ
ಬೆಲ್ಲದಾರತಿಯಾ ಬೆಳಗೇನಾ

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ
ಕಲ್ಲು ಕಾವೇರಿ ಕಪನೀಯಾ ನೆನೆದರೆ
ಹೊತ್ತಿದ್ದ ಪಾಪ ಪರಿಹಾರ
ಕನ್ನಡ ಸಂಪದ Kannada Sampada

No comments:

Post a Comment