ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ
ಗ್ರಂಥ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ.
ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲ ಅಧ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ
ಮಹಾಭಾರತ ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂಥ ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ.
ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ
ದರ್ಶನ ನಮಗಾಗುತ್ತದೆ.
ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ
ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ
ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸಮಾತ್ರವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು
ಅಧ್ಯಾತ್ಮ.
ಮಹಾಭಾರತ ತನ್ನ ಎಳುಪಾತ್ರಗಳ ಮೂಲಕ ಹದಿನೆಂಟು ಜೀವನ್ಮೌಲ್ಯಗಳ
ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:
೧. ಧರ್ಮರಾಜ – ಧರ್ಮ.
೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ.
೪. ನಕುಲ – ಶೀಲ.
೫. ಸಹದೇವ – ವಿನಯ.
೬. ದ್ರೌಪದಿ – ವೇದವಿದ್ಯೆ.
೭. ಶ್ರೀಕೃಷ್ಣ – ವೇದವೇದ್ಯ.
ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು
ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ, ಮನನ ಮತ್ತು ನಿದಿಧ್ಯಾಸನದೊಂದಿಗೆ ಶೀಲ ಮತ್ತು ವಿನಯಗಳು ನಮ್ಮ ನಿತ್ಯ
ಸಂಗಾತಿಗಳಾಗಿರಬೇಕು. ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ
ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು
ಬಳಸಬೇಕು.
ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು. ಇದು
ತತ್ವಶಾಸ್ತ್ರದ ಎಲ್ಲ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ. ಮಹಾಭಾರತದಲ್ಲಿ ಕೂಡ ಈ
ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ
ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ
ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.
ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು ಐದು ಸಾವಿರ
ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ
ನಮ್ಮನ್ನು ದಾರಿ ತಪ್ಪಿಸುವ ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು
ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ ಪಾಂಡವರು ಸೋತು ಕೌರವರು
ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ
ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.
ಅರ್ಜುನನ ಮನಸ್ಸಿನ ಗೊಂದಲಕ್ಕೆ ಶ್ರೀಕೃಷ್ಣ ಪರಿಹಾರದ ಉಪದೇಶ ಕೊಟ್ಟ, ಆದರೆ ದುಷ್ಟ ದುರ್ಯೋಧನ ಗೊಂದಲದಿಂದಲೇ ಸತ್ತ.
ಆದ್ದರಿಂದ ಮೊದಲ ಅಧ್ಯಾಯವನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಕಾಣದೆ ಇಲ್ಲಿರುವ ಮನಃಶಾಸ್ತ್ರವನ್ನು
ಅರಿಯಲು ಪ್ರಯತ್ನಿಸಬೇಕು. ಇಲ್ಲಿ ಹೇಳಿರುವ ಮನಃಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ
ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟಿದ್ದು. ಭಗವದ್ಗೀತೆ
ಪ್ರಾರಂಭವಾಗುವುದು ಧೃತರಾಷ್ಟ್ರನ ಪ್ರಶ್ನೆಯಿಂದ. ಧೃತರಾಷ್ಟ್ರ ಎಂದರೆ
ರಾಷ್ಟ್ರವನ್ನು(ಪುರವನ್ನು) ಧಾರಣೆ ಮಾಡಿದವ ಎಂದರ್ಥ. ಅಂದರೆ ಸತ್ಯದ ಬಗ್ಗೆ ಕುರುಡಾಗಿ
ಕಣ್ಮುಚ್ಚಿ ಮಲಗಿರುವ ಜೀವವೇ ಧೃತರಾಷ್ಟ್ರ. ದುರ್ಯೋಧನ ಎನ್ನುವುದು ನಮ್ಮೊಳಗಿರುವ ದುಷ್ಟತನದ
ಪರಾಕಾಷ್ಠೆಯ ಸಂಕೇತ. ಭೀಷ್ಮ-ದ್ರೋಣ-ಕೃಪಾ-ಶಲ್ಯ-ಕರ್ಣ-ಇವರೆಲ್ಲರೂ ನಮ್ಮ ಇಂದ್ರಿಯಗಳಂತೆ. ನಮ್ಮ
ಮನಸ್ಸಿನಲ್ಲಿರುವ ಕೆಟ್ಟತನದಿಂದ ನಾವು ನಮ್ಮಲ್ಲಿರುವ ಅಮೂಲ್ಯವಾದ ಇಂದ್ರಿಯಗಳನ್ನು ಕೆಟ್ಟ
ಕಾರ್ಯಕ್ಕೆ ಬಳಸುತ್ತೇವೆ. ವಸ್ತುತಃ ಇಂದ್ರಿಯಗಳು ಕೆಟ್ಟವಲ್ಲ. ಆದರೆ ಕೆಟ್ಟದ್ದರ ಜೊತೆ ಸೇರಿ ಕೆಟ್ಟದ್ದನ್ನು
ಮಾಡುತ್ತವೆ. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕದಲ್ಲಿ, ಮಹಾಭಾರತದ ಪ್ರತಿಯೊಂದು
ಪಾತ್ರದಲ್ಲಿ ಅತ್ಯಮೂಲ್ಯವಾದ ಹಾಗು ಗುಹ್ಯವಾದ ಅರ್ಥ ಅಡಗಿದೆ.
ಭಗವದ್ಗೀತೆ ಹೊಡೆದಾಟ, ವೈರತ್ವದ ಪಾಠವಲ್ಲ.
ಅರ್ಜುನನು ಧೃತಿಗೆಟ್ಟು ನನ್ನ ಸ್ವಂತ ಸಂಬಂಧಿಕರನ್ನು, ಗುರು ಹಿರಿಯರ
ಜೊತೆ ತಾನು ಹೇಗೆ ತಾನೆ ಹೋರಾಡಲಿ ಎಂದು ನಡುಗಿದಾಗ ಅವನಲ್ಲಿ ಆತ್ಮ ಸ್ಥೈರ್ಯ ಮೂಡಿಸಿದ, ಸರಿ-ತಪ್ಪು,
ಧರ್ಮ-ಅಧರ್ಮದ ಬಗ್ಗೆ, ನ್ಯಾಯ-ಅನ್ಯಾಯದ ಬಗ್ಗೆ
ಬೋಧಿಸುವ ಪವಿತ್ರ ಗ್ರಂಥ - ಜ್ಞಾನ ಭಂಡಾರ. ಗೀತೆ ಕೇವಲ ಮಹಾಭಾರತದ ಪಾತ್ರನಾದ ಪಾರ್ಥನಿಗೆ ಮಾತ್ರ
ಅನ್ವಯಿಸುತ್ತದಾ? ಎಂದು ಕೇಳಿದರೆ ಅದಕ್ಕೆ ಉತ್ತರ ಚುಟುಕಾಗಿ ಹೇಳಬಹುದಾದರೆ, ನಮ್ಮ ಮಹಾನ್ ಭಾರತದ ಪ್ರತಿ ಮನುಷ್ಯನಲ್ಲೂ ಅಡಗಿಕೊಂಡಿರುವ ಪಾರ್ಥನ ಪಾತ್ರಕ್ಕೂ ಗೀತೆಯ
ಪ್ರಸಕ್ತತೆ ಎದ್ದು ತೋರುತ್ತದೆ.
ಪ್ರಸ್ತುತ ವಿದ್ಯಮಾನಗಳನ್ನು ಗಮನಿಸೋಣ. ಪಾಕಿಸ್ತಾನದದಿಂದಲೇ ಭಯೋತ್ಪಾದನಾ ಚಟುವಟಿಕೆಗಳು
ನಡೆಯುತ್ತಿವೆ ಎಂದು ತಿಳಿದಿದೆ. ಉತ್ತರದ, ಜಮ್ಮು
ಮತ್ತು ಕಾಶ್ಮೀರದಲ್ಲಿ ಯೋಧರನ್ನು, ಜನಸಾಮಾನ್ಯರನ್ನು, ಅಮಾಯಕರನ್ನು ಕೊಲ್ಲಲಾಗುತ್ತಿದೆ. ಪೂರ್ವದಲ್ಲಿ ಬಾಂಗ್ಲಾದೇಶದಿಂದ ನುಸುಳುಕೋರರು
ಬಂಗಾಳವನ್ನು, ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿ ಅಲ್ಲಿನ ಶಾಂತಿ
ಕದಡುತ್ತಿದ್ದಾರೆ. ನಮ್ಮ ಸಂಪನ್ಮೂಲಗಳನ್ನು ಅನುಭವಿಸುತ್ತಾ ನಮ್ಮ ದೇಶದ ಜನರಿಗೆ ತೊಂದರೆಗಳನ್ನು
ನೀಡುತ್ತಿರುವುದು ಜನಜನಿತ ವಿಷಯ. ಚೀನಾ ಅರುಣಾಚಲ ಪ್ರದೇಶದಲ್ಲಿ ನುಗ್ಗುವುದಲ್ಲದೇ, ಲಢಾಕ್ ನಿಂದಲೂ ನುಗ್ಗಲು ಹವಣಿಸುತ್ತಿದೆ. ಶ್ರೀಲಂಕಾ ಜೊತೆ ಸೇರಿ ದಕ್ಷಿಣ ದಿಕ್ಕಿನಿಂದಲೂ
ನಮ್ಮ ದೇಶಕ್ಕೆ ಆಪತ್ತು ತರಬಹುದೆಂದು ಭಾರತೀಯ ಬೇಹುಗಾರಿಕೆ ಇಲಾಖೆ ಸೂಕ್ಷ್ಮವಾಗಿ
ತಿಳಿಸಿದ್ದಾರೆ. ಹಾಗಾಗಿ ನಮ್ಮ ದೇಶ ಭಾರತಕ್ಕೆ ನೆರೆಹೊರೆಯವರಿಂದ
ಆಪತ್ತು. ಹಾಗೆ ನಮ್ಮ ದೇಶದ ಗಡಿಗಳಲ್ಲಿ ಹೋರಾಡುವ ಯೋಧರಿಗೆ ಯಾವ ನೀತಿಯ ಪಾಠವನ್ನು ಯುದ್ಧವೇ ಮಹಾ
ಪಾಪ! ಎಂದು ಬಡಬಡಾಯಿಸುವವರು ಬೋಧಿಸುತ್ತಾರೆಂದರೆ ಇವರುಗಳ ವಿದ್ವತ್ತನ್ನೇ
ಪ್ರಶ್ನಿಸಬೇಕಾಗುತ್ತದೆ. ಅಲ್ಲದೆ ದೇಶದಲ್ಲಿನ ಇತರೆ ಸಮಸ್ಯೆಗಳಿಗೂ "....ಹೋಗ್ಲಿ
ಬಿಡಪ್ಪಾ... " ಅನ್ನುವ ಉತ್ತರ ಉತ್ತರಪುರುಷನಿಗಷ್ಟೇ ಸರಿಹೋಗಬಹುದು.
ಭಗವದ್ಗೀತೆಯ ಗುರಿಯು ಮಾನವ ಕುಲವನ್ನು ಐಹಿಕ ಅಸ್ತಿತ್ವದ ಅಜ್ಞಾನ ದಿಂದ
ಉದ್ಧರಿಸುವುದು. ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಬೇಕಾಗಿ ಬಂದು ಅರ್ಜುನನು
ಕಷ್ಟದಲ್ಲಿದ್ದಂತೆ, ಪ್ರತಿಯೊಬ್ಬನೂ ಹಲವಾರು ಬಗೆಯ ಕಷ್ಟದಲ್ಲಿರುತ್ತಾನೆ. ಅರ್ಜುನನು ಕೃಷ್ಣನಿಗೆ ಶರಣಾಗತನಾದನು. ಇದರಿಂದಾಗಿ ಗೀತೆಯ ಉಪದೇಶವಾಯಿತು.
ಅರ್ಜುನನು ಮಾತ್ರವೇ ಅಲ್ಲ, ನಮ್ಮಲ್ಲಿ ಪ್ರತಿಯೊಬ್ಬನೂ ಐಹಿಕ ಅಸ್ತಿತ್ವದಿಂದಾಗಿ ಆತಂಕದಿಂದ
ತುಂಬಿಹೋಗಿರುತ್ತಾನೆ. ನಮ್ಮ ಅಸ್ತಿತ್ವವೇ ಅಸ್ತಿತ್ವರಹಿತ
ವಾತಾವರಣದಲ್ಲಿದೆ. ವಾಸ್ತವವಾಗಿ
ಅಸ್ತಿತ್ವರಾಹಿತ್ಯದ ಭಯ ನಮಗಿರಬಾರದು. ನಮ್ಮ
ಅಸ್ತಿತ್ವವು ನಿತ್ಯವಾದದ್ದು. ಆದರೆ ಹೇಗೋ ಏನೋ ನಾವು ಅಸತ್ತಿನಲ್ಲಿ ಸಿಕ್ಕಿಕೊಂಡಿದ್ದೇವೆ. ಅಸತ್ ಎಂದರೆ ಯಾವುದು ಅಸ್ತಿತ್ವದಲ್ಲಿಲ್ಲವೋ ಅದು.
ಕಷ್ಟದಲ್ಲಿರುವ ಅಸಂಖ್ಯಾತ ಮನುಷ್ಯರಲ್ಲಿ ತಮ್ಮ
ಸ್ಥಿತಿಯನ್ನು ಕುರಿತು ಪ್ರಶ್ನಿಸುವವರು ಕೆಲವರಿದ್ದಾರೆ; ತಾವು ಯಾರು? ತಾವು ಈ ತೊಡಕಿನ
ಸ್ಥಿತಿಯಲ್ಲಿರುವುದಕ್ಕೆ ಕಾರಣವೇನು? ಮುಂತಾಗಿ
ಕೇಳಿಕೊಳ್ಳುತ್ತಾರೆ. ವ್ಯಕ್ತಿಯು ಸಂಕಟವನ್ನು ಕುರಿತು ಪ್ರಶ್ನೆ ಮಾಡುವ ಈ ಸ್ಥಿತಿಗೆ ಬರದಿದ್ದರೆ, ಸಂಕಟ ಬೇಡ, ಆದರೆ ಎಲ್ಲ ಸಂಕಟಕ್ಕೆ ಪರಿಹಾರ ಬೇಕು!
ಎಂಬುದನ್ನು ಅರಿತುಕೊಳ್ಳದಿದ್ದರೆ, ಅವನನ್ನು ಪರಿಪೂರ್ಣ ಮನುಷ್ಯ! ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಪ್ರಶ್ನೆಯು ಮನಸ್ಸಿನಲ್ಲಿ ಜಾಗ್ರತವಾದಾಗ
ಮಾನವಕುಲ ಪ್ರಾರಂಭವಾಗುತ್ತದೆ. ಪರಾತ್ಪರದ ಸ್ವರೂಪವನ್ನು
ಕುರಿತು ಮನುಷ್ಯನು ಪ್ರಶ್ನೆ ಮಾಡದಿದ್ದರೆ
ಅವನ ಎಲ್ಲ ಬಗೆಯ ಕ್ರಿಯೆಗಳನ್ನೂ ವಿಫಲವೆಂದೇ ಭಾವಿಸಬೇಕಾಗುತ್ತದೆ.
No comments:
Post a Comment