ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃ,
ನ ತೇ
ವೃದ್ಧಾ ಯೇ ನ ವದಂತಿ ಧರ್ಮಮ್ |
ನ ತದ್ಧರ್ಮಂ ಯತ್ರ ನ ಸತ್ಯಮಸ್ತಿ,
ನ
ತತ್ಸತ್ಯಂ ಯಚ್ಛಲೇನಾಭ್ಯುಪೇಯಮ್ ||
ಅದೇಕೋ ಏನೋ,ಇತ್ತೀಚೆಗೆ ಭಗವದ್ಗೀತೆ
ಪದೇ ಪದೇ ವಿವಾದಕ್ಕೀಡಾಗುತ್ತಿದೆ.
ಹಲವರು ಅದನ್ನು ‘ರಾಷ್ಟ್ರೀಯ
ಗ್ರ೦ಥವಾಗಿಸಬೇಕು’ ಎನ್ನುತ್ತಾರೆ.
ಕೆಲವರು ಅದನ್ನು
ಸುಡಬೇಕು !?
ಎಂದು ಕೀಳಾಗಿ ಮಾತನಾಡುತ್ತಿರುತ್ತಾರೆ.
ನನಗಂತೂ ಈ ಬೆಳವಣಿಗೆಗಳು ತೀರಾ ವಿಚಿತ್ರವೆನಿಸುತ್ತವೆ.
ನಂಬಿಕೆ ಇದ್ದರೆ ಮಾತ್ರ ಗೀತೆಯನ್ನು ಅಭ್ಯಾಸ, ಅಧ್ಯಯನ ಮಾಡಿ, ನಂಬಿಕೆ ಇಲ್ಲದಿದ್ದರೆ ಭಗವದ್ಗೀತೆಯ ಅಧ್ಯಯನವಾಗಲಿ, ಅದರ ಬಗ್ಗೆ ಅವಹೇಳನಕಾರಿ ಮಾತಾಗಲಿ ಆಡುತ್ತಿರಬೇಡಿ! ಏಕೆ ಸುಮ್ಮನೇ ನಿಮ್ಮ ಜೀವನದ ಅಮೂಲ್ಯವಾದ ಕಾಲವನ್ನು ಹರಣಮಾಡುತ್ತೀರಾ? ಯಾವುದೇ ವೈಚಾರಿಕತೆಯಿಂದ ಕೂಡಿದ ಸಾತ್ವಿಕ ವಿಚಾರಗಳು ನಂಬಿಕೆಗೆ ದಕ್ಕುವುದೇ ಹೊರತು, ಅದರ ಟೀಕೆಮಾಡುವುದರಿಂದ ದೊರಕುವುದಿಲ್ಲ. ನಮಗೆ ಜನ್ಮವಿತ್ತ ತಾಯಿ ಯಾರನ್ನು ತೋರಿಸಿ, “ಈತ ನಿನ್ನ ತಂದೆ, ನಿನ್ನ ಜನ್ಮಕ್ಕೆ ಕಾರಣನಾದವನು.” ಎಂಬ ಹೇಳಿಕೆಯಿಂದಾಗಿ ಆ ವ್ಯಕ್ತಿಯನ್ನು ಯಾವುದೇ ಎರಡನೆಯ ಮಾತಿಲ್ಲದೇ
ಒಪ್ಪಿಕೊಂಡು, ಆತನನ್ನು ‘ಜನ್ಮದಾತ’ ಎಂದು ಪೂಜ್ಯಭಾವನೆಯಿಂದ ನೋಡುತ್ತೇವೆ. ವಿಚಾರ ಹೀಗಿರುವಾಗ ಭಗವದ್ಗೀತೆಯನ್ನು ನಮ್ಮ
ಪ್ರಾಚೀನರು ನಂಬಿ, ಒಪ್ಪಿ, ಅದರಲ್ಲಿ ಹೇಳಿದ ಶ್ರೀ ಕೃಷ್ಣನ ಮಾತುಗಳನ್ನು ಬದುಕಿನ ವಿಕಾಸದಲ್ಲಿ ಕಂಡುಕೊಂಡು, ಭಗವದ್ಗೀತೆಯ ಮಾತುಗಳು ಸತ್ಯವಾಗಿವೆಯೆಂದು ತೋರಿದ್ದರಿಂದಲೇ, ಅದರಲ್ಲಿನ ಪಾವಿತ್ಯ್ರತೆಯ ಸವಿಯನ್ನು ಕಂಡದ್ದರಿಂದಲೇ, ತಮ್ಮ ಮುಂದಿನವರೂ ಅಮೃತಕ್ಕೆ ಸಮವೆನಿಸಿದ ವಿಚಾರ ಪೂರ್ಣ ಗ್ರಂಥ ಭಗವದ್ಗೀತೆಯನ್ನು ಸಾವಿರ ಸಾವಿರ ವರ್ಷಗಳಿಂದಲೂ ಅದನ್ನು ಸವಿಯಿರೆಂದು ಮಾರ್ಗದರ್ಶನ ಮಾಡಿರುವುದು. ಅದು ಸತ್ಯವೆಂದು
ಅನುಭವ ವೇದ್ಯವಾದ್ದರಿಂದಲೇ ಭಗವದ್ಗೀತೆ ಇಲ್ಲಿಯವರೆಗೂ ಪ್ರಸ್ತುತವಾದ ಪವಿತ್ರ ಗ್ರಂಥವಾಗಿ
ನಮ್ಮ ನಡುವೆ ಜೀವಂತವಾಗಿ ಬದುಕಿ ಉಳಿದಿರುವುದು.
ದ್ವಾಪರದಲ್ಲಿ ಆಗಿಹೋದ ಮಾಹಾಭಾರತ ಇಂದಿಗೂ ನಮ್ಮ ನಡುವೆ
ಬದುಕಿ ಉಳಿದಿದೆ ಎಂದಾದರೆ ಅದರ ಜೀವಶಕ್ತಿ ಎಂಥದ್ದು? ಇಂದಿಗೂ ಭಾರತದ ಹಳ್ಳಿ-ಹಳ್ಳಿಗೆ ಹೋದರೆ ರಾಮಾಯಣ, ಮಹಾಭಾರತ ರಚಿಸಿದ ವಾಲ್ಮೀಕಿ, ವ್ಯಾಸರ ಹೆಸರು ಹಾದಿಬೀದಿಯಲ್ಲಿ ಆಡುವ ಸಣ್ಣ ಮಕ್ಕಳಿಂದ ಹಿಡಿದು ಪಂಡಿತ ಪಾಮರರವರೆಗೂ
ಗೊತ್ತಿದೆ. ಈ ಭಾರತೀಯ ಪ್ರಾಚೀನ ಪವಿತ್ರ ಗ್ರಂಥಗಳಲ್ಲಿ
ಸತ್ವವಿಲ್ಲದಿದ್ದರೆ ಜನರು ಇವುಗಳನ್ನು ಆರಾಧಿಸುತ್ತಿದ್ದರೇ? ಇಂದಿಗೂ ಹಳ್ಳಿ-ಹಳ್ಳಿಗಳಲ್ಲಿ ಕುರುಕ್ಷೇತ್ರ, ಕೃಷ್ಣಸಂಧಾನ, ಪ್ರಚಂಡರಾವಣ ಹೀಗೆ ಹಲವಾರು ನಾಟಕಗಳನ್ನೂ, ಯಕ್ಷಗಾನ ಪ್ರಸಂಗಗಳನ್ನೂ, ಅಭ್ಯಾಸಮಾಡಿ ಆಡುತ್ತಿರುತ್ತಾರೆ. ಎಂಬಲ್ಲಿಗೆ ‘ನಂಬಿದವರಿಗೆ ಉಂಟು, ನಂಬದವರಿಗೆ ಇಲ್ಲ’! ಎಂದೂ ‘ನಂಬಿ
ಕೆಟ್ಟವರಿಲ್ಲ’!!! ಎಂದೂ ಹೇಳಬಹುದಾಗಿದೆ.
ಈಗ ಪ್ರದತ್ತ ಪ್ರಕರಣಕ್ಕೆ ಬರೋಣ. ‘ಇಂದಿನ
ವೈಜ್ಞಾನಿಕ ಪ್ರಗತಿಯ ಕಾಲದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಭಗವದ್ಗೀತೆ ಅನಿವಾರ್ಯ’! ಇಲ್ಲಿ ಮೂರು ಮುಖ್ಯ ಅಂಶಗಳನ್ನು ತಾವು ಗಮನಿಸ ಬೇಕು.
ಮೊದಲನೆಯದು - ಇಂದಿನ ವೈಜ್ಞಾನಿಕ ಪ್ರಗತಿಯ ಕಾಲದಲ್ಲಿ………
ಶಿಲಾಯುಗದ ಮಾನವನೂ ಕೂಡಾ, ಆತನ ಅವಧಿಯನ್ನು ಪ್ರಗತಿಯ ಕಾಲವೆಂದೂ,
ಅದೂ ವೈಜ್ಞಾನಿಕ ಪ್ರಗತಿಯ ಕಾಲವೆಂದೂ ಹೇಳಿ ಕೊಳ್ಳ ಬಹುದಲ್ಲವೇ!? ಏಕೆಂದರೆ ಮಾನವತೆಯ ಪ್ರತಿ ಹಂತವೂ ವಿಜ್ಞಾನ ಮತ್ತು ಪ್ರಗತಿಯಿಂದ ಕೂಡಿಕೊಂಡಿದೆ.
ಅಂದು ಮಾನವನಿಗೆ ಬೆಂಕಿಯನ್ನು ಕಂಡು ಹಿಡಿಯುವುದೇ ಅವನ ಪ್ರಗತಿಯಾಗಿತ್ತು.
ಬೆಂಕಿ ಕಂಡು ಹಿಡಿದ ನಂತರದ ಜೀವನ, ಆತನ ಪಾಲಿಗೆ ವೈಜ್ಞಾನಿಕ
ಯುಗಾದಿಯಾಗಿತ್ತು. ಹೀಗಿರುವಾಗ ‘ಇಂದಿನ
ವೈಜ್ಞಾನಿಕ ಪ್ರಗತಿಯ ಕಾಲದಲ್ಲಿ’ ಎಂದು ನಾಲ್ಕು ಶಬ್ದಗಳಲ್ಲಿ ಹೇಳಿದ ಒಟ್ಟೂ
ಅರ್ಥ ಇವತ್ತಿಗೂ ಅಥವಾ ಇಂದಿಗೂ ವ್ಯಕ್ತಿತ್ವ ವಿಕಸನಕ್ಕೆ ಭಗವದ್ಗೀತೆ ಅನಿವಾರ್ಯ’!
ಇವತ್ತಿಗೂ ಎಂದು ಹೇಳಲಿಕ್ಕೆ ಕಾರಣ: ಭಗವದ್ಗೀತೆ ತುಂಬಾ ಪ್ರಾಚೀನವಾದದ್ದು, ಅಷ್ಟು ಹಳೆಯ ವಿಚಾರ ಇವತ್ತೂ
ಪ್ರಯೋಜನಕಾರಿಯೇ? ಎಂಬ ಅಂಶ ಇಲ್ಲಿ ವ್ಯಕ್ತವಾಗುತ್ತದೆ.
ಇನ್ನು ಎರಡನೆಯ ಅಂಶ : ‘ವ್ಯಕ್ತಿತ್ವ ವಿಕಸನಕ್ಕೆ’
ಎಂಬುದು. . ವ್ಯಕ್ತಿತ್ವ ವಿಕಾಸವು ಭೌತಿಕ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕತೆಗಳ ಸಮಗ್ರ, ಸರ್ವತೋಮುಖ ಬೆಳವಣಿಗೆ. ಹೇಗೆ ದೇಹವು
ತನಗೆ ಬೇಕಾದುದನ್ನು ಸ್ವೀಕರಿಸಿ, ಮಾರ್ಪಡಿಸಿ, ಅರಗಿಸಿಕೊಂಡು ಬೆಳೆಯುತ್ತದೆಯೋ ಹಾಗೆಯೇ ಒಬ್ಬ ವ್ಯಕ್ತಿಯು ತನ್ನತನಕ್ಕೆ ಅನುಗುಣವಾಗಿ ಹೊರಗಿನ ಅಂಶಗಳನ್ನು
ಸ್ವೀಕರಿಸುತ್ತಾ, ಸಾಧ್ಯವಾದುದನ್ನು
ಮಾರ್ಪಡಿಸುತ್ತಾ, ತಾನು ಬಾಳುತ್ತಾ-ಬೆಳೆಯುತ್ತಾನೆ ಇದನ್ನೇ ‘ವ್ಯಕ್ತಿತ್ವದ ವಿಕಾಸ’ ಎನ್ನಬಹುದು.
ಈಗ ವಿಷಯದ ಮೂರನೆಯ ಅಂಶಕ್ಕೆ ಬಂದರೆ ವ್ಯಕ್ತಿತ್ವ
ವಿಕಾಸಕ್ಕೆ ಭಗವದ್ಗೀತೆ ಅನಿವಾರ್ಯ! ಎಂಬಲ್ಲಿ ಅನಿವಾರ್ಯತೆಯ ಬಗ್ಗೆ ನಾವೀಗ ಚಿಂತಿಸಬೇಕಾಗಿದೆ. ಮಾನವನ ಇತಿಹಾಸದಲ್ಲಿ
ಎಲ್ಲೆಲ್ಲಿ ವ್ಯಕ್ತಿತ್ವ ವಿಕಾಸ ಕಂಡು ಬಂದಿದೆಯೋ ಅಲ್ಲೆಲ್ಲ ಭಗವದ್ಗೀತೆಯನ್ನು ನಾವು
ಕಂಡುಕೊಂಡರೆ ಅಥವಾ ಎಲ್ಲಿ ಭಗವದ್ಗೀತೆ ಎಂಬ ಗ್ರಂಥವೇ ಇಲ್ಲವೋ ಅಲ್ಲಿ ವ್ಯಕ್ತಿತ್ವ ವಿಕಾಸವೂ
ಕಾಣಸಿಗುವುದಿಲ್ಲ! ಎಂಬುದು ಸ್ಪಷ್ಟವಾದರೆ ಮಾತ್ರ ನಾವು ವ್ಯಕ್ತಿತ್ವ
ವಿಕಾಸಕ್ಕೆ ಭಗವದ್ಗೀತೆ ಅನಿವಾರ್ಯ ಎಂಬ ನಿಲುಮೆಗೆ ಬರಲು ಸಾಧ್ಯ. ಎಂದು
ಕೊಂಡು ವ್ಯಕ್ತಿತ್ವ ವಿಕಾಸಕ್ಕೆ ಭಗವದ್ಗೀತೆ ಅನಿವಾರ್ಯ! ಎಂಬುದು ‘ಬರಿಯ ಕಟ್ಟು ಕಥೆ’ ಎಂದು ತಮಗನಿಸಿದರೆ ಅದು ತಪ್ಪಲ್ಲ!
ಹಾಗಾದರೆ ಈ ಅನಿವಾರ್ಯ ಶಬ್ದಕ್ಕೆ ಏನು ಅರ್ಥ? ‘ನಡೆಯುವವನಿಗೆ ಚಪ್ಪಲಿ ಅನಿವಾರ್ಯ’! ಎಂಬ ವಾಕ್ಯವನ್ನು “ಯಾರು ಯಾರು ನಡೆಯುತ್ತಾರೋ ಅವರೆಲ್ಲಾ ಚಪ್ಪಲಿ ಹಾಕಿರುತ್ತಾರೆ ಎಂದಾಗಲೀ, ಚಪ್ಪಲಿಯಿಲ್ಲದಿದ್ದರೆ ನಡೆಯಲು ಸಾಧ್ಯವಿಲ್ಲವೆಂದಾಗಲೀ” ಅರ್ಥಮಾಡುವುದಿಲ್ಲವಷ್ಟೇ? ಹಾಗಾದರೆ ಈ ವಾಕ್ಯಕ್ಕೆ ಅರ್ಥವೇನು? ಎಂದು ನೋಡಿದರೆ “ಚಪ್ಪಲಿ ಹಾಕಿಕೊಂಡು ನಡೆದರೆ ಕ್ಷೇಮವಾಗಿ ತಲುಪುತ್ತಾರೆ”… ಇದೇ ರೀತಿ ಇಲ್ಲೂ ಕೂಡ ‘ಯಾರು ಯಾರು
ವ್ಯಕ್ತಿತ್ವವಿಕಾಸವನ್ನು ಹೊಂದಿದ್ದಾರೋ ಅವರು ಭಗವದ್ಗೀತೆಯನ್ನು ಅನುಮೋದಿಸಿದ್ದಾರೆ’…
ಇದು ಹೌದೋ? ಅಲ್ಲವೋ? ಎಂಬುದು
ಚರ್ಚೆಯ ವಿಷಯವಾಗಿದೆ.
ಈಗ ಮಹನೀಯರು ಗೀತೆಯ ಬಗ್ಗೆ ಏನು ಹೇಳಿದ್ದಾರಪ್ಪಾ ನೋಡೋಣ!
1. ಆಲ್ಡ್‌ಸ್ ಹಕ್ಸ್‌ಲೆ – ಭಗವದ್ಗೀತೆ ಆಧ್ಯಾತ್ಮಿಕ ಬೆಳವಣಿಗೆ ಹೊಂದಲು ಸಮತೋಲನ
ಸ್ಥಿತಿ ಉಂಟು ಮಾಡಿ ವೌಲ್ಯಗಳನ್ನು ಹೆಚ್ಚಿಸುತ್ತದೆ. ಇದು
ಭಾರತಕ್ಕೆ ಸೀಮಿತವಾಗಿರದೆ ಎಲ್ಲ ಮಾನವರಿಗೂ ಅನ್ವಯಿಸುತ್ತದೆ.
2. ಮಹಾತ್ಮ ಗಾಂಧಿ – ಇದು ಜಗತ್ತಿಗೆ ಮಾತೃಸ್ವರೂಪಿ. ಅವಳ ಬಾಗಿಲು
ಎಲ್ಲರಿಗೂ ತೆರೆದುಕೊಳ್ಳುವಂತಹುದು. ನನಗೆ ಹತಾಶೆಯಾದಾಗ ಭಗವದ್ಗೀತೆಯನ್ನು ಜ್ಞಾಪಿಸಿಕೊಳ್ಳುತ್ತೇನೆ.
ತಕ್ಷಣ ನನಗೆ ಶಕ್ತಿ ಬಂದಂತಾಗಿ ನಾನು ನಸುನಗುತ್ತೇನೆ.
3. ಹೆನ್ರಿಡೆವಿಡ್‌ತೋರು – ನಾನು ಬೆಳಗ್ಗೆ ಭಗವದ್ಗೀತೆಯಿಂದ ಸ್ನಾನ ಮಾಡುತ್ತೇನೆ.
4. ಹರ್ಮನ್ ಹೆಸ್ಸೆ – ಜೀವನದಲ್ಲಿ ಬುದ್ಧಿಯನ್ನು ಹೆಚ್ಚು ಮಾಡಿಕೊಂಡು
ತತ್ವಜ್ಞಾನ ಪಡೆದುಕೊಂಡು ಅರಳಲು ಸಹಕಾರಿ ಭಗವದ್ಗೀತೆ.
5. ರಾಲ್ಫ್ ವಾಲ್ಡೊ ಎಮರ್‌ಸನ್ -
ಇದೊಂದು ಅದ್ವಿತೀಯ ಪುಸ್ತಕ. ಒಬ್ಬ ಚಕ್ರವರ್ತಿ ನಮ್ಮೊಂದಿಗೆ ಮಾತನ್ನು ಹಂಚಿಕೊಂಡಂತೆ, ಸರಿಯಾದ
ದಿಕ್ಕು ತೋರಿದಂತೆ ಭಾಸವಾಗುತ್ತದೆ. ಹಿಂದಿನ ಮತ್ತು ಇಂದಿನ ನಮ್ಮ ಪ್ರಶ್ನೆಗಳಿಗೆ
ಭಗವದ್ಗೀತೆಯಲ್ಲಿ ಉತ್ತರವಿದೆ.
6. ರುಡಾಲ್ಫ್‌ಸ್ಟೇನರ್ – ಸೃಷ್ಟಿಯ ಅರ್ಥವನ್ನು ಮಾಡಿಸುವುದಲ್ಲದೆ. ನಮ್ಮ
ಆತ್ಮವನ್ನು ಬೆಸೆಯುವಂತೆ ಮಾಡುತ್ತದೆ.
7. ಆದಿಶಂಕರರು -
ಪರಿಪೂರ್ಣ ಭಗವದ್ಗೀತೆಯ ತಿಳಿವಳಿಕೆಯಿಂದ ನಮ್ಮ ಜೀವನಗುರಿ ನಿಶ್ಚಯವಾಗುತ್ತದೆ. ಭಗವದ್ಗೀತೆಯು
ವೇದದ ಸಂಪೂರ್ಣ ಸಾರವಾಗಿದೆ.
8. ರಾಮಾನುಜಾಚಾರ್ಯರು –
ಭಗವಂತನ ಅವತಾರ ಪ್ರತಿ ಯುಗದಲ್ಲಿ ಆಗುವುದೇ ಆಧ್ಯಾತ್ಮದ ವಿರುದ್ಧ ಹುಟ್ಟುವ
ಶಕ್ತಿಗಳನ್ನು ನಾಶ ಮಾಡಲು ಎಂದರೆ ತಪ್ಪಲ್ಲ.
9. ಮಧ್ವಾಚಾರ್ಯರು -
ಮಾನವನ ವಿಕಾಸಕ್ಕೆ ಬೇಕಾದ ಎಲ್ಲ
ವಿಚಾರಗಳು ಇದರಲ್ಲಿ ಅಡಕವಾಗಿದೆ. ತುಪ್ಪವು ಹಾಲಿನಲ್ಲಿ ಅಡಕವಾಗಿರುವಂತೆ, ಹೂವಿನಲ್ಲಿ
ಸುವಾಸನೆ ಇರುವಂತೆ ಮಹಾಭಾರತ ಭಗವದ್ಗೀತೆಯಲ್ಲಿ ಅಡಗಿದೆ.
10. ಶ್ರೀ ಅರವಿಂದರು -
ಇದೊಂದು ನಿಜವಾದ ಗ್ರಂಥ. ಇದನ್ನು ‘ಪುಸ್ತಕ’
ಎನ್ನುವುದಕ್ಕಿಂತ ಬದುಕಿರುವ
ಸೃಷ್ಟಿ ಎನ್ನಬಹುದು. ಎಲ್ಲಾ ವಯೋಮಾನದವರಿಗೂ ಸಂದೇಶವನ್ನು
ತಲುಪಿಸುವ ಮತ್ತು ಪ್ರತಿ ನಾಗರಿಕತೆಗೆ ಆದರ್ಶವಾದ ಗ್ರಂಥ.
ಯಾವುದೇ ಒಬ್ಬ ವ್ಯಕ್ತಿಗೂ ಒಮ್ಮೊಮ್ಮೆ ತನ್ನ ಸಾಧನೆಯ ಹಾದಿಯಲ್ಲಿ ಗುರಿಯ ಬಗೆಗಿನ ದೃಷ್ಟಿಗೆ
ಮಂಜುಕವಿದಂತಾಗಿ ಹತಾಶೆಯ ಭಾವ ಆವರಿಸುತ್ತದೆ. ಅಂತಹ ಸಂದರ್ಭದಲ್ಲಿ ಆ ಹತಾಶೆಯನ್ನು
ಮೆಟ್ಟಿನಿಂತು ಗುರಿ ಸಾಧಿಸಲು ಮನಸ್ಸನ್ನು ದೃಢಗೊಳಿಸುವುದೇ ವ್ಯಕ್ತಿತ್ವ ವಿಕಸನದ ಮೊದಲ ಮೆಟ್ಟಿಲು.
ಕೆಲವೊಮ್ಮೆ ತಾನು ಗೆಲ್ಲಲಾರೆ ಎಂಬ ಸ್ಥಿತಿಯು ಎದುರಾದಾಗ ; ಗೆಲ್ಲಲೇ ಬೇಕು ಎಂಬ ಛಲವಿದ್ದಾಗ ವಾಮಮಾರ್ಗದ
ಮೂಲಕವಾದರೂ ಗೆಲ್ಲಬೇಕು ಎಂದೆನ್ನಿಸಿಬಿಡುತ್ತದೆ. ಆದರೆ
ಗೀತೆಯಲ್ಲಿ ಹೇಳಿರುವ ಮಾರ್ಗ ಅದಲ್ಲ. ಗೀತೆಯಲ್ಲಿ ಉಪದೇಶಿತವಾದದ್ದು ಧರ್ಮಮಾರ್ಗ. ಎಂತಹ ಕ್ಲಿಷ್ಟ
ಸಂದರ್ಭದಲ್ಲೂ ಸಹ ಧರ್ಮವನ್ನು ಬಿಡಬಾರದು. ಧರ್ಮದಿಂದಲೇ
ಎಲ್ಲವನ್ನೂ, ಎಲ್ಲರನ್ನೂ ಗೆಲ್ಲಬೇಕು ಎಂದೇ ಹೇಳಿದೆ. ಹಾಗಾಗಿ ಭಗವದ್ಗೀತೆ ವ್ಯಕ್ತಿತ್ವ ವಿಕಸನದ ಸಂಜೀವಿನಿ.
ಅದೊಂದು ಮೈಂಡ್ ಮ್ಯಾನೇಜ್ಮೆಂಟ್ ಗ್ರಂಥ.
ಮನಸ್ಸು ಏಕಕಾಲಕ್ಕೆ ಚಂಚಲವೂ ಹೌದು, ಬದಲಾಯಿಸಲು ದುಸ್ಸಾಧ್ಯವಾದ ಕ್ಲಿಷ್ಟ ಸಂಗತಿಯೂ ಹೌದು. ಅದನ್ನು ನಿಭಾಯಿಸುವುದೊಂದು ಕಲೆ. ನಮ್ಮ
ಮನಸ್ಸನ್ನು ನಾವು ನಿಗ್ರಹಿಸುವುದು ಹಾಗೂ ಬೇರೆಯವರ ಮನಸ್ಸನ್ನು ನಾವು ನಿಭಾಯಿಸುವುದು ಇವೆರಡೂ ಪ್ರತ್ಯೇಕ
ವಿಷಯಗಳು. ಶ್ರೀಕೃಷ್ಣ ಅರ್ಜುನನ
ಮೇಲೆ ಇವೆರಡೂ ತಂತ್ರಗಳನ್ನು ಪ್ರಯೋಗಿಸಿದ. ಒಮ್ಮೆ ಅರ್ಜುನ ತನ್ನ ಮನಸ್ಸನ್ನು ತಾನೇ ಬದಲಿಸಿಕೊಳ್ಳುವಂತೆ ಪ್ರಚೋದನೆ
ನೀಡಿದ. ಮತ್ತೊಮ್ಮೆ ಅವನ ಮನಸ್ಸನ್ನು ತಾನು ಬದಲಿಸಲು ಪ್ರಯತ್ನಿಸಿದ. ಸಾಂಖ್ಯಯೋಗದ ಮೂಲಕ ಬದುಕಿನ
ನಶ್ವರತೆಯ ಬಗ್ಗೆ ಹಾಗೂ ಮನಸ್ಸನ್ನು
ಸ್ಥಿರಗೊಳಿಸಿಕೊಳ್ಳುವ ಬಗ್ಗೆ ಹೇಳಿದ. ನಂತರ ಕರ್ಮಯೋಗದ ಮೂಲಕ ಬದುಕಿನ ಉದ್ದೇಶವನ್ನು ಬೋಧಿಸಿದ. ಅನಂತರ
ಜ್ಞಾನಯೋಗದ ಮೂಲಕ ಅರಿವಿನ ಮಹತ್ವ ಹೇಳಿಕೊಟ್ಟ. ಸಂನ್ಯಾಸ, ಧ್ಯಾನ, ಜ್ಞಾನ-ವಿಜ್ಞಾನ ಹೀಗೆ ಎಲ್ಲವನ್ನೂ ಹೇಳಿ
ಕೊನೆಯಲ್ಲಿ ‘ಯಥೇಚ್ಛಸಿ ತಥಾ ಕುರು’ ಎಂದು ಹೇಳಿ ನಿನಗೆ ಹೇಗೆ ತೋಚುತ್ತದೆಯೂ
ಹಾಗೇ ಮಾಡು. ನೀನೇ ಒಂದು ನಿರ್ಧಾರಕ್ಕೆ ಬಾ ಎಂದ.
ಶ್ರೀಕೃಷ್ಣ ಯಥೇಚ್ಚಸಿ
ತಥಾಕುರು ಎಂದು ಹೇಳಿದ್ದರ ಹಿಂದೆ ಒಂದು ಅದ್ಭುತ ಕಾರಣವಿದೆ. ಈ ಮನಸ್ಸೇ ಹಾಗೆ ಎಲ್ಲವನ್ನೂ
ಕೇಳುತ್ತದೆ. ತನಗೆ ಬೇಕಾದುದ್ದನ್ನು ಮಾತ್ರ ಸ್ವೀಕರಿಸುತ್ತದೆ. ತನಗನುಕೂಲವಾದದ್ದನ್ನು ಮಾತ್ರ
ಕಾರ್ಯಗತಗೊಳಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸವಾಗಬೇಕಾದರೆ ಆತ ತೆಗೆದುಕೊಳ್ಳುವ ನಿರ್ಧಾರ
ಆತನ ಮೇಲೆ ಹೇರಿಕೆಯದ್ದಾಗಿರಬಾರದು. ಅದು ಸ್ವಯಂ ನಿರ್ಧಾರವಾಗಿರಬೇಕು. ಯಾಕೆಂದರೆ ಸ್ವಯಂ
ನಿರ್ಧಾರದ ಮೇಲೆ ಇರುವ ಪ್ರೀತಿ, ಕಾಳಜಿ, ವಿಶ್ವಾಸ ಹೇರಿಕೆಯಲ್ಲಿ ಇರುವುದಿಲ್ಲ.
ಹಾಗಾಗಿಯೇ ಶ್ರೀಕೃಷ್ಣ “ಯಥೇಚ್ಚಸಿ ತಥಾ ಕುರು” ಎಂದದ್ದು.
ಅದಕ್ಕಾಗಿಯೇ ನಾನು ಆರಂಭದಲ್ಲಿ ಹೇಳಿದ್ದು, “ನ ತತ್ಸತ್ಯಂ ಯಚ್ಛಲೇನಾಭ್ಯುಪೇಯಮ್” ||
ಒತ್ತಾಯದಿಂದ
ಒಪ್ಪಿದ್ದು ಸತ್ಯವಾಗದಷ್ಟೇ?
ಸತ್ಯವಲ್ಲದ್ದು ಧರ್ಮಹೇಗಾದೀತು? ಧರ್ಮವಾದರೋ ಅನುಭವಿಗಳ
ಮಾತು! ಅನುಭವಿಗಳೇ ವೃದ್ಧರು ಅವರಿಲ್ಲದ ಸಭೆ ಸಭೆಯೆನಿಸುವುದೇ?
ಎಂದು.
ಇತ್ತೀಚಿನ
ದಿನಗಳಲ್ಲಿ ಜನರ ತಿಳುವಳಿಕೆ ಎಲ್ಲಿಗೆ ಬಂದು ನಿಂತಿದೆಯೆಂದರೆ ವ್ಯಕ್ತಿತ್ವ ವಿಕಾಸ ಮಾಡಿಕೊಂಡವರು ಭಗವದ್ಗೀತೆ
ಓದುತ್ತಾರೆ ಎಂದು ಭಾವಿಸಿದ್ದಾರೆಯೇ ಹೊರತು, ಭಗವದ್ಗೀತೆಯನ್ನು ಓದಿದರೆ ವ್ಯಕ್ತಿತ್ವ
ವಿಕಾಸವಾಗುತ್ತದೆ ಎಂಬ ಸತ್ಯವನ್ನು ಮರೆತಿದ್ದಾರೆ. ಕೆಲವರಿಗೆ ತಾವು ಮೆರೆತಿರುವುದೂ ಮರೆತು
ಹೋಗಿದೆ. ಅಂತಹವರು ತಮ್ಮನ್ನೇ ತಾವು ಎಚ್ಚರಿಸಿಕೊಳ್ಳಬೇಕಾಗಿದೆ. ಯಾಕೆಂದರೆ ನಮ್ಮ ಮನಸ್ಸಿಗೆ
ನಾವೇ ಅರ್ಜುನ, ನಾವೇ ಶ್ರೀಕೃಷ್ಣ!
ಸಮಸ್ಯೆಗೊಂದು
ಪರಿಹಾರವಿದೆ ಎಂದು
ತಿಳಿದಾಗ ಸಮಸ್ಯೆ ಸಮಸ್ಯೆಯಾಗಿ ಉಳಿಯುವುದಿಲ್ಲ. ದುಃಖಕ್ಕೂ ಅರ್ಥವಿದೆ ಎಂದು ತಿಳಿದಾಗ
ದುಃಖವು ದುಃಖವಾಗಿ ಉಳಿಯುವುದಿಲ್ಲ. ಈ ತಿಳುವಳಿಕೆಗೆ
ಮನಸ್ಸು ತಿಳಿಯಾಗಿ ಇರಬೇಕಾಗುತ್ತದೆ. ತಿಳಿಮನಸ್ಸಿನಲ್ಲಿ ದ್ವಂದ್ವವಿರಲು ಸಾಧ್ಯವಿಲ್ಲ.
ಭಗವದ್ಗೀತೆಯಲ್ಲಿ ಎದ್ದು ತೋರುವ ಭಾವವೇ ಇದು. ಗೊಂದಲದಲ್ಲಿದ್ದ ಮನಃಸ್ಥಿತಿಯನ್ನು ತಿಳಿಗೊಳಿಸಿ ಗುರಿಯತ್ತ ಹುರಿ ಗೊಳಿಸುವ ಗೀತೆ ವ್ಯಕ್ತಿತ್ವ ವಿಕಾಸಕ್ಕೆ ಮಾತೆಯಲ್ಲವೇ?