ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು || ಪ ||
ನಾವು ಹೌದಂದ್ರ ಹೌದಂತಾವು,
ನಾವಲ್ಲಂದ್ರ ಅಲ್ಲಂತಾವು
ನಕ್ಕರ ನಮ್ಮಗೂಡ ನಗತಾವು,
ಅತ್ತರ ನಮ್ಮಗೂಡ ಅಳತಾವು
ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೧||
ಮನೆಯಾಗಿಟ್ಟರ ಮನೆಯಾಗಿರ್ತಾವು,
ಗುಡಿಯಾಗಿಟ್ಟರೂ ಗುಡಿಯಾಗಿರ್ತಾವು
ಮಸೀದ್ಯಾಗಿಟ್ಟರ ಮಸೀದ್ಯಾಗಿರ್ತಾವು,
ಚರ್ಚ್ನಾಗಿಟ್ಟರ ಚರ್ಚ್ನಾಗಿರ್ತಾವು
ನಾವಿಟ್ಟಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೨||
ನಾ ವಿಭೂತಿ ಹಚ್ಚಿದರ ಇಭೂತಿ ಹಚ್ಗೋತಾವು,
ಕುಂಕ್ಮ ಹಚ್ಚಿದರ ಕುಂಕ್ಮಾ ಹಚ್ಗೋತಾವು
ಭಂಡಾರ ಹಚ್ಚಿದರ ಭಂಡಾರ ಹಚ್ಗೋತಾವು,
ಗಂಧ ಇಟ್ಟರ ಗಂಧ ಹಚ್ಗೋತಾವು
ನಾವಿದ್ದಾಂಗ ಇರ್ತಾವು ನಮ್ಮ ದೇವ್ರು,
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೩||
ನಾವು ಹಾಲು ತುಪ್ಪ ಸುರಿದಾರೆ ಕುಡೀತಾವು,
ಹೋಳ್ಗಿ ಹುಗ್ಗಿ ಮಾಡಿದರೆ ಹೊಡೀತಾವು
ಕೋಳಿಕುರಿ ಕೊಯ್ದರೆ ತಿಂತಾವು,
ಅನ್ನಗಿನ್ನ ಬೇಯ್ಸಿದರೆ ಉಣತಾವು
ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೪||
ಮಾತಾಡೊ ದೇವರ ಮರೆತೇವು,
ನಂಬಿದ ದೇವರ ಕೈ ಬಿಟ್ಟೇವು
ಇಲ್ಲದ ದೇವರ ಹುಟ್ಶೇವು,
ಅಲ್ಲದ ಊರಿಗೆ ಹೊಂಟೇವು
ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೫||
ರಚನೆ
ಸಿದ್ದಪ್ಪ
ಸಾವಣ್ಣ ಬಿದರಿ