Monday, February 13, 2017

ನಮ್ಮ ದೇವರು



ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು || ||

ನಾವು ಹೌದಂದ್ರ ಹೌದಂತಾವು,  
ನಾವಲ್ಲಂದ್ರ ಅಲ್ಲಂತಾವು
ನಕ್ಕರ ನಮ್ಮಗೂಡ ನಗತಾವು
ಅತ್ತರ ನಮ್ಮಗೂಡ ಅಳತಾವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೧||

ಮನೆಯಾಗಿಟ್ಟರ ಮನೆಯಾಗಿರ್ತಾವು
ಗುಡಿಯಾಗಿಟ್ಟರೂ ಗುಡಿಯಾಗಿರ್ತಾವು
ಮಸೀದ್ಯಾಗಿಟ್ಟರ ಮಸೀದ್ಯಾಗಿರ್ತಾವು,  
ಚರ್ಚ್ನಾಗಿಟ್ಟರ ಚರ್ಚ್ನಾಗಿರ್ತಾವು

ನಾವಿಟ್ಟಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೨||

ನಾ ವಿಭೂತಿ ಹಚ್ಚಿದರ ಇಭೂತಿ ಹಚ್ಗೋತಾವು,
ಕುಂಕ್ಮ ಹಚ್ಚಿದರ ಕುಂಕ್ಮಾ ಹಚ್ಗೋತಾವು
ಭಂಡಾರ ಹಚ್ಚಿದರ ಭಂಡಾರ ಹಚ್ಗೋತಾವು,  
ಗಂಧ ಇಟ್ಟರ ಗಂಧ ಹಚ್ಗೋತಾವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು,
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೩||

ನಾವು ಹಾಲು ತುಪ್ಪ ಸುರಿದಾರೆ ಕುಡೀತಾವು,  
ಹೋಳ್ಗಿ ಹುಗ್ಗಿ ಮಾಡಿದರೆ ಹೊಡೀತಾವು
ಕೋಳಿಕುರಿ ಕೊಯ್ದರೆ ತಿಂತಾವು,  
ಅನ್ನಗಿನ್ನ ಬೇಯ್ಸಿದರೆ ಉಣತಾವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೪||

ಮಾತಾಡೊ ದೇವರ ಮರೆತೇವು
ನಂಬಿದ ದೇವರ ಕೈ ಬಿಟ್ಟೇವು
ಇಲ್ಲದ ದೇವರ ಹುಟ್ಶೇವು,  
ಅಲ್ಲದ ಊರಿಗೆ ಹೊಂಟೇವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೫||

ರಚನೆ
ಸಿದ್ದಪ್ಪ ಸಾವಣ್ಣ ಬಿದರಿ



No comments:

Post a Comment