Thursday, December 21, 2017

ಸಾಮಾಜದ ಶೋಷಣೆ ನಿರ್ಮೂಲನೆಗೆ ಸಹಕಾರ ತತ್ವವೊಂದೇ ಪರಿಣಾಮಕಾರೀ ಸಾಧನ! (ಒಂದು ಚರ್ಚೆ)


ಸಭ್ಯರೇ ಹಾಗೂ ಸಭಾಸದರೇ,
ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
ದೇವತೆಗಳು ಹೇಗೆ ನಾವು ನೀಡಿದ ಹವಿಸ್ಸನ್ನು ಸಮವಾಗಿ (ಒಟ್ಟಾಗಿ) ಸ್ವೀಕರಿಸುವರೋ ಹಾಗೆಯೇ ನಾವೂ ಕೂಡ ದೇವರು ದಯಪಾಲಿಸಿದ ಸಂಪತ್ತನ್ನು ಒಟ್ಟಾಗಿ ಅನುಭವಿಸೋಣ. ನಮ್ಮ ನಡೆ, ನುಡಿ ಅಷ್ಟೇ ಏಕೆ? ನಮ್ಮೆಲ್ಲರ ಮನಸ್ಸೂ ಕೂಡ  ಒಂದಾಗಿ ಸಾಗಲಿ. ಎಂದು ಬಯಸಿದ ನಮ್ಮ ಪೂರ್ವಜರು ಒಂದು ಉದಾತ್ತ ಸಮಾಜದ ಕನಸನ್ನು ಹೊತ್ತಿದ್ದರು.
  
ಈ ’ಸಮಾಜ’ ಎನ್ನುವ ಪದ ತುಂಬಾ ವಿಶಿಷ್ಟವಾದದ್ದು ಮತ್ತು ವ್ಯಾಪಕ ಅರ್ಥವುಳ್ಳದ್ದಾಗಿದೆ. ಮಾನವೀಯ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಮೈಗೂಡಿಸಿ ಕೊಂಡಿರುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಒಟ್ಟಾಗಿ ಸಮಾಜ ಎಂದು ಹಿರಿಯರು ಗುರುತಿಸಿದ್ದಾರೆ. ಅಲ್ಲದೇ ಸುಸಂಸ್ಕೃತರ ಅಂದರೆ ಗುಣವಂತರ ಸಂಬಂಧ ಮತ್ತು ಸಮುದಾಯಗಳನ್ನು ನಾವು ಸಮಾಜವೆಂದು ಕರೆಯುತ್ತೇವೆ. ಇಂಥ ಸಮಾಜದಲ್ಲಿ ಶೋಷಣೆ ಒಂದು ರೋಗದಂತೆ ಕಂಡು ಬರುತ್ತದೆ. ಈ ರೋಗಕ್ಕೆ ಮದ್ದನ್ನು ಕಂಡು ಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.

ಜನ ಸಮುದಾಯದಲ್ಲಿ ಅಥವಾ ಪ್ರತ್ಯೇಕ ಜನರಲ್ಲಿ ಇರುವ ನ್ಯೂನತೆಗಳನ್ನನುಸರಿಸಿ ಮತ್ತು ತಮಗೆ ದೊರೆತ ಸ್ಥಾನ, ಮಾನ ಮತ್ತು ಬಲಗಳ ಮದದಿಂದ ಒಬ್ಬರು ಮತ್ತೊಬ್ಬರನ್ನು ಶೋಷಿಸುವುದು ಕಂಡು ಬರುತ್ತದೆ. ಎಂಬಲ್ಲಿಗೆ ಶೋಷಣೆ ಎಂಬ ರೋಗಕ್ಕೆ ಎರಡು ಜನ ಬೇಕೆಂಬುದು ಸ್ಪಷ್ಟವಾಯಿತು. ಒಬ್ಬ ಶೋಷಣೆಗೆ ಒಳಪಡುವವ, ಇನ್ನೊಬ್ಬ ಶೋಷಣೆ ಮಾಡುವವ. ಶೋಷಣೆ ಮಾಡುವವನನ್ನು ತಿದ್ದುವುದಾದರೆ; ಅದು ಉತ್ತಮ ಶಿಕ್ಷಣದಿಂದ ಅಥವಾ ಜೀವನ ಮೌಲ್ಯವನ್ನು ಅರ್ಥಮಾಡಿ ಕೊಳ್ಳುವುದರಿಂದ ಮಾತ್ರ ಸಾಧ್ಯ. ಪ್ರಕೃತ ವಿಷಯವನ್ನು ನೋಡಿದಾಗ ಇಲ್ಲಿ ಶೋಷಣೆಗೆ ಒಳಪಡುವವನ ನ್ಯೂನತೆ ಅಥವಾ ಕೊರತೆಗಳ ಕಡೆಗೆ ಗಮನ ಹರಿಸಿದ್ದಾರೆ. ಅಲ್ಲದೇ ಅದನ್ನು ತಿದ್ದುವ ಪ್ರಯತ್ನಕ್ಕೇ ಹೆಚ್ಚು ಒತ್ತು ಕೊಡಲಾಗಿದೆ. ಹಾಗಾದರೆ ಸಮಾಜದ ಒಬ್ಬ ವ್ಯಕ್ತಿಗೆ ಬರಬಹುದಾದ ಕೊರತೆಯಾದರೂ ಯಾವುದು? ಅದನ್ನೇ ಪಟ್ಟಿಮಾಡಿ ಹೇಳಬೇಕೆಂದರೆ: ಆಹಾರದ ಕೊರತೆ, ಬಟ್ಟೆಯ ಕೊರತೆ ಅಂದರೆ ಮರ್ಯಾದೆಯಾಗಿ ಬದುಕಲು ಬೇಕಾದ ಸಾಮಗ್ರಿಗಳ ಕೊರತೆ, ಉದ್ಯೋಗ ಅವಕಾಶಗಳ ಕೊರತೆ, ಆರೋಗ್ಯದ ಕೊರತೆ ಮತ್ತು ವಿದ್ಯೆಯ ಕೊರತೆ. ಇಲ್ಲಿ ಕೊನೆಯೆರಡು ಕೊರತೆಗಳನ್ನು ಬಿಟ್ಟರೆ ಮೊದಲಿನ ಎಲ್ಲ ಕೊರತೆಗಳೂ ಆರ್ಥಿಕ ಸ್ಥಿರತೆಯಿಂದ ದೂರವಾಗುವಂಥವು. ಹೀಗಾಗಿ ಆರ್ಥಿಕ ಸ್ಥಿರತೆಯನ್ನು ಜನರು ಕಂಡು ಕೊಂಡರೆ ಸಮಾಜದ ಬಹುತೇಕ ಶೋಷಣೆಗಳು ದೂರಾಗುತ್ತವೆ. ಅಂತೂ “ಶೋಷಣೆ ಎಂಬ ರೋಗಕ್ಕೆ ತುತ್ತಾಗುವವರಲ್ಲಿ ಅರ್ಧದಷ್ಟು ಜನರನ್ನು ಈ ರೋಗದಿಂದ ದೂರಗೊಳಿಸಬಹುದು” ಎಂಬುದು ನಮಗೆ ಸ್ಪಷ್ಟವಾಯಿತು. ಅದು ಆರ್ಥಿಕ ಸಬಲೀಕರಣದಿಂದ ಸಾಧ್ಯ. ಇದು ಸಹಕಾರೀ ತತ್ವದ ಪರಮಧ್ಯೇಯವೂ ಆಗಿದೆ. ಹಾಗಾಗಿ ’ಸಮಾಜದಲ್ಲಿ ಹರಡಿರುವ ಶೋಷಣೆ ಎಂಬ ರೋಗಕ್ಕೆ ಸಹಕಾರೀ ತತ್ವ ಒಂದು ಪರಿಣಾಮಕಾರೀ ಔಷಧ’ ಎಂಬಲ್ಲಿ ಎರಡು ಮಾತಿಲ್ಲ!

ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು ಕ್ರಿ. ಶ. ೧೯೦೪ರಿಂದಲೇ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ. ಭಾರತದಲ್ಲಿ ಒಂದು ನೂರು ವರ್ಷಗಳನ್ನು ಪೂರೈಸಿರುವ ಸಹಕಾರಿ ರಂಗವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮತ್ತು ರೈತರ ಅಭಿವೃದ್ಧಿಯಲ್ಲಿ ಅಚ್ಚರಿಯ ಕೊಡುಗೆಯನ್ನು ನೀಡಿರುತ್ತದೆ.

ಕರ್ನಾಟಕ ಸರ್ಕಾರದಲ್ಲಿ ಸಹಕಾರ ಇಲಾಖೆಯು ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. ಈ ಇಲಾಖೆಯು ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ವಿವಿಧ ಇತರೆ ಇಲಾಖೆಗಳ ಸಂಪೂರ್ಣ ಸಹಕಾರ ಹಾಗೂ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಇಲಾಖೆಯು ವಿವಿಧ ಸಹಕಾರ ಸಂಸ್ಥೆಗಳ ಆಡಳಿತ ಮತ್ತು ಕಾರ್ಯವ್ಯವಹಾರವನ್ನು ನೋಡಿಕೊಳ್ಳುತ್ತದೆ. ಜವಳಿ, ರೇಷ್ಮೆ, ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಕ್ಕರೆ ತೋಟಗಾರಿಕೆ, ಕೃಷಿ ಮತ್ತು ನೀರಾವರಿ ಇಲಾಖೆಗಳು, ಅದಕ್ಕೆ ಸಂಬಂಧಿಸಿದ ಸಂಘಗಳ ಕಾರ್ಯನಿರ್ವಹಣೆಗೆ ಹಣಕಾಸಿನ ನೆರವನ್ನು ನೀಡುವುದರ ಜೊತೆಗೆ, ಆಯಾ ವಿಭಾಗದ ತಾಂತ್ರಿಕ ಮಾರ್ಗದರ್ಶನಗಳನ್ನೂ ನೀಡುತ್ತವೆ.

ಸಾಲ ಮತ್ತು ಸಾಲೇತರ ಕ್ಷೇತ್ರಗಳಲ್ಲಿ ಸಹಕಾರ ಸಂಸ್ಥೆಗಳು ಅಣಬೆಗಳಂತೆ ಬೆಳೆದಿವೆ. ಸಾಲ ಮತ್ತು ಸಾಲೇತರ ಸಹಕಾರ ಸಂಸ್ಥೆಗಳೆರಡೂ ಸಹ ಪ್ರಾಥಮಿಕ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಹಂತದ ಕಾರ್ಯಭಾರವನ್ನು ನಿರ್ವಹಿಸುತ್ತದೆ. ಅದು ಪ್ರಾಥಮಿಕ, ಮಾಧ್ಯಮಿಕ ಮತ್ತು ನಡುವಣ ಹಂತದ ಕ್ಷೇತ್ರಗಳಲ್ಲಿ; ಅರ್ಥ ವ್ಯವಸ್ಥೆಯ ಎಲ್ಲಾ ಮಜಲುಗಳಲ್ಲೂ ಸಹ ಭಾರಿ ಪ್ರಮಾಣದ ವಿಭಿನ್ನ ಚಟುವಟಿಕೆಗಳನ್ನು ಹೊಂದಿದೆ. ಇದರ ಪರಿಣಾಮವಾಗಿ ಇಂದು ಆರ್ಥಿಕ ಸಬಲೀಕರಣ ಸಾಧ್ಯವಾಗಿದೆ. ಆದರೆ ಈ ಯಶಸ್ಸು ಕೇವಲ ಸಹಕಾರೀ ತತ್ವದಿಂದ ಮಾತ್ರ ಸಾಧ್ಯವಾಗಿದೆಯೆಂದಲ್ಲ! ಬದಲಾಗಿ ದೇಶದ ಆರ್ಥಿಕತೆಗೆ ಸವಾಲಾಗಿರುವ ಭ್ರಷ್ಟಾಚಾರಕ್ಕೆ ಇದು ಅಲ್ಲಲ್ಲಿ ಆಶ್ರಯವನ್ನು ನೀಡಿದೆ ಮತ್ತು ದುಷ್ಟ ರಾಜಕಾರಣಿಗಳಿಗೆ ತಮ್ಮ ಮುಖ ಮುಚ್ಚಿ ಕೊಳ್ಳಲೂ ಅವಕಾಶ ನೀಡಿದ್ದು, ಜನಸಾಮಾನ್ಯರ ಹಣದ ಒಂದಿಷ್ಟು ಪಾಲಿನ ದುರ್ಬಳಕೆಯೂ ಆಗಿದೆಯೆಂಬುದು, ಅಪ್ರಿಯವೆನಿಸಿದರೂ ಸತ್ಯದ ಮಾತಾಗಿದೆ.

ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿರದೆ ಹಲವಾರು ಸಂಗತಿಗಳ ಸಮ್ಮಿಲಿತದ ಫಲವಾಗಿರುತ್ತದೆ. ಉದಾಹರಣೆಗೆ: ಗಾಳಿಯಲ್ಲದೆ ಉಸಿರಾಡಲಾರೆವು! ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ಉಸಿರಾಡಲಾಗುವುದಿಲ್ಲವಲ್ಲ! ಸಾಮಾಜಿಕ ಜೀವನಕ್ಕೂ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಆಗ ಪರಿಣಾಮಕಾರೀ ಪ್ರಯೋಜನವನ್ನು ಪಡೆಯುತ್ತೇವೆ.
ಪ್ರದತ್ತ ವಿಷಯದಲ್ಲಿ ಶೋಷಣೆಯ ಪರಿಹಾರಕ್ಕೆ ಈ ಸಹಕಾರೀ ತತ್ವ, ಒಂದು ಪರಿಣಾಮಕಾರೀ ಔಷಧ ಎಂಬುದು ನಿರ್ವಿವಾದ. ಆದರೆ ಅದೊಂದೇ ಸಾಧನ ಎನ್ನುವುದು ಅತಿರೇಕ ಅಥವಾ ಅತಿಶಯದ ಮಾತಾದೀತು!?

ಇನ್ನು ನಿರ್ಮೂಲನ ಎಂಬ ಶಬ್ದದ ಬಗ್ಗೆ ನೋಡಿದರೆ ನಮಗೆ ವಿಷಯ ಮನವರಿಕೆಯಾಗುತ್ತದೆ. ಮೂಲ ಎಂಬ ಪದದಿಂದ ತಳ, ಬುಡ, ಬೇರು, ಆಧಾರ ಎಂಬ ಅರ್ಥಗಳು ಹೊರಹೊಮ್ಮುತ್ತವೆ.  ಈಗ ನಿರ್ಮೂಲನವೆಂದರೆ ಬೇರುಸಹಿತ ಕೀಳುವುದು, ತಳದಿಂದ ಪರಿಹರಿಸುವುದು, ಬುಡದಿಂದ ಸರಿ ಪಡಿಸುವುದು ಎಂದು ಅರ್ಥವಾಗುತ್ತದೆ. ಶೋಷಣೆಯ ಬುಡವನ್ನೇ ಇಲ್ಲವಾಗಿಸಿದರೆ ನಿರ್ಮೂಲ ಗೊಳಿಸಿದಂತಾಗುತ್ತದೆ ತಾನೆ? ಆದರೆ ನಾನು ಮೊದಲೇ ಹೇಳಿದಂತೆ ಶೋಷಣೆಗೆ ಒಳಪಡುವವರ ಆರ್ಥಿಕ ಸಬಲೀಕರಣದಿಂದ ಶೋಷಣೆಗೆ ಒಳಪಡುವ ಅರ್ಧ ಭಾಗಕ್ಕೆ ಮಾತ್ರ ಪರಿಹಾರ ಸಿಕ್ಕಂತಾಗುತ್ತದೆ. ಇದು ನಿರ್ಮೂಲಗೊಳಿಸಿದಂತಲ್ಲ! ಏಕೆಂದರೆ ಉಳಿದರ್ಧ ಭಾಗವಾದ ಶೋಷಣೆ ಮಾಡುವ ಬಲವಂತರಿಂದ, ರಾಕ್ಷಸರಿಂದ, ಮರ್ಯಾದೆಯ ಸೋಗು ಹಾಕಿರುವ ಸೋಗಲಾಡಿಗಳಿಂದ ಇಲ್ಲಿ ಪರಿಹಾರವಿಲ್ಲ! ಬದಲಾಗಿ ಅವರನ್ನೇ ಬೆಳೆಸುವ, ಅವರ ದುಷ್ಟತನವನ್ನೇ ಮುಚ್ಚಿಸುವ, ಭ್ರಷ್ಟಾಚಾರವನ್ನೇ ಶಿಷ್ಟಾಚಾರವಾಗಿಸುವ ಅಪಾಯವೂ ಈ ಸಹಕಾರೀ ತತ್ವದಲ್ಲಿ ಅಡಗಿಕೊಂಡಿದೆ.
 
ಹಾಗಾಗಿ ನಾನು ನೇರ ನುಡಿಗಳಲ್ಲಿ ಹೇಳುವುದೇನೆಂದರೆ: ನನ್ನ ವಿರೋಧೀ ಮಿತ್ರರ ಮಾತು ಮತ್ತು ಸತ್ಯಾಂಶಗಳಿಗೆ; ಕಡಿಮೆಯೆಂದರೂ ಕುಮುಟಾದಿಂದ ಕಾಶಿಗೆ ಇರುವಷ್ಟು ದೂರವಾಗಿದ್ದು; ಪ್ರಕೃತ ವಿಷಯದಲ್ಲಿ ಶೋಷಣೆಯ ನಿರ್ಮೂಲನೆ ಅಂದರೆ ಬುಡಸಹಿತ ಪರಿಹಾರ ಈ ಸಹಕಾರೀ ತತ್ವದಿಂದೆಲ್ಲ ಸಿಗುವಂಥದ್ದಲ್ಲ. ಮತ್ತು ವಿಷಯದಲ್ಲಿ ಹೇಳಿರುವ ಸಹಕಾರಿ ತತ್ವವೊಂದೇ ಎಂಬ ಅಂಶವೂ ಅತಿಶಯೋಕ್ತಿಯೇ ವಿನಹ ವಾಸ್ತವಕ್ಕೆ ನಿಲುಕುವುದಲ್ಲ! ಅಂದರೆ ನಿರ್ಮೂಲನೆ ಮತ್ತು ಒಂದೇ ಎಂಬ ಅಂಶಗಳು ನನಗೆ ಸಮ್ಮತವಿಲ್ಲ. ಸಹಕಾರೀ ತತ್ವ ಅತ್ಯುತ್ತಮವಾದದ್ದು, ಇದರಿಂದ ಆರ್ಥಿಕ ಸಬಲತೆ ದೊರೆತಿದೆ, ಪರಿಣಾಮವಾಗಿ ಸಮಾಜದ ಶೋಷಣೆ ಅರ್ಧದಷ್ಟು ಪರಿಹಾರವಾಗಿದೆ ಎನ್ನಬಹುದು. ಪ್ರದತ್ತ ವಿಷಯದಲ್ಲಿ ಸಮಾಜದ ಶೋಷಣೆ ದೂರಮಾಡಲು ಸಹಕಾರೀ ತತ್ವ ತುಂಬಾ ಸಹಕರಿಸಿದೆ ಎನ್ನುವುದು ನಿರ್ವಿವಾದವಾದ ಅಂಶ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ |
’ನಮ್ಮ ಅಭಿಪ್ರಾಯಗಳು ಒಂದಾಗಿ ಸಾಗಿ ಈ ಸಮಾಜ ಶೋಷಣೆಗೆ ಒಳಪಡದೆ ಆರೋಗ್ಯದಿಂದ ಸಾಗುವಂತಾಗಲಿ.’ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
|| ಜೈ ಹಿಂದ್ ||
ಪರಮೇಶ್ವರ ಪುಟ್ಟನಮನೆ





No comments:

Post a Comment