Saturday, October 15, 2022

ದೇವಮಾನವ!

ಮನುಷ್ಯ ದೇವನಾಗಲು ಅನಾದಿ ಕಾಲದಿಂದಲೂ ಪ್ರಯತ್ನಿಸುತ್ತಿದ್ದಾನೆ! ಅದಕ್ಕೆ ವೇದಾಗಮತಂತ್ರಶಾಸ್ತ್ರಗಳಲ್ಲಿ ಹಲವು ನಿದರ್ಶನಗಳು ದೊರೆಯುತ್ತವೆ.
೧) ದೇವೋ ಭೂತ್ವಾ , ದೇವಂ ಯಜೇತ | ಎಂದು ಮಂತ್ರಶಾಸ್ತ್ರದಲ್ಲೂ, ಅವುಗಳ ಪ್ರಯೋಗಗಳಲ್ಲೂ  ಪ್ರಾರಂಭದಲ್ಲೇ ಬರುತ್ತದೆ. ಪರಿಣಾಮವಾಗಿ ಕರನ್ಯಾಸ, ಹೃದಯಾದಿನ್ಯಾಸ ಹೀಗೆ ನ್ಯಾಸ ವಿನ್ಯಾಸಗಳು ವಿಹಿತವಾಗಿವೆ. ಮುಂದೆ ಇವು ವಿಸ್ತರಣೆ ಹೊಂದಿ ಮಹಾನ್ಯಾಸಗಳಾಗಿ ರೂಪುಗೊಂಡಿದ್ದನ್ನೂ ನೋಡುತ್ತೇವೆ. 
೨) ಮಂಡಲೇ ಕರ್ಮಣಾಂ ಸಾಕ್ಷೀ ಕಲಶೇ ಯಜ್ಞರಕ್ಷಕಃ |
ಹೋಮಾಧಿಕರಣಂ ವಹ್ನೌ ಶಿಷ್ಯೇ ಪಾಶವಿಮೋಚಕಃ || ಎಂದು ತಂತ್ರಾಗಮಗಳು ಒತ್ತಿ ಹೇಳಿದ್ದರಿಂದ ಇವುಗಳಲ್ಲಿ ದೇವನನ್ನು ಅರ್ಚಿಸಿ, ಕೊನೆಗೆ ಬ್ರಾಹ್ಮಣ-ಸುಹಾಸಿನೀ-ಕುಮಾರಿಯರಲ್ಲಿ ದೇವನನ್ನು ಆವಾಹಿಸಿ, ಪೂಜಿಸುವುದನ್ನು ಶಾಸ್ತ್ರವೇ ವಿಧಿಸಿದೆ! ಶ್ರೇಯಸ್ಸಿಗಾಗಿ ಇವರಲ್ಲಿ(ಜೀವರಲ್ಲಿ) ದೇವರ ಆವಾಹನೆ ಅನಿವಾರ್ಯವಾಗಿರುವುದು ಕಂಡುಬರುತ್ತದೆ.
೩) ಪರಾರ್ಥವಾಗಿಯೂ, ಆತ್ಮಾರ್ಥವಾಗಿಯೂ ಸಾರ್ಥಕವೆನಿಸಿದ ಪೂಜೆಯನ್ನು ಕೈಗೊಳ್ಳುವಾಗ ಪೂಜಕನ ಮನಸ್ಸು “ದೇವಾ! ನಾನು ನಿನ್ನ ದಾಸ!” ಎನ್ನುವ ದ್ವೈತ ಭಾವನೆಯಿಂದಲೂ; “ನಾನು ಅದು!” ಎಂಬ ವಿಶಿಷ್ಟಾದ್ವೈತ ಭಾವನೆಯಿಂದಲೂ; ಇನ್ನು ಮೂರನೆಯ ಹಂತವಾದ “ನಾನು ನೀನು ಬೇರೆಯಲ್ಲವೆಂಬುದಾಗಿ” ಅದ್ವೈತ ಭಾವನೆಯಿಂದಲೂ ತುಂಬಿಕೊಂಡಿರುತ್ತದೆ.  ದಾಸೋಽಹಮ್ | ತತ್ವಮಸಿ | ಸೋಽಹಮ್ | ಹೀಗೆ ಇವು ಮೂರೂ  ಭಾವಗಳೂ ದೇವತಾರ್ಚನೆಯ ಫಲವಾಗಿವೆ.
೪) ಹೀಗೆ ಸಾಂಖ್ಯವು ಭಾವ ಸಂಗಮವನ್ನು ಸಾರಿ ಹೇಳಿದರೆ, ಸಂಖ್ಯಾ ಶಾಸ್ತ್ರವೇನೂ ಹಿಂದೆಯಿಲ್ಲ! ಸಂಖ್ಯಾ ಶಾಸ್ತ್ರಜ್ಞರು ಬೆಸ ಸಂಖ್ಯೆಗಳು {೧, ೩, ೫,...} ದೇವನನ್ನೂ; ಸಮ ಸಂಖ್ಯೆಗಳು {೨, ೪, ೬,...} ಜೀವನನ್ನೂ ಪ್ರತಿನಿಧಿಸುತ್ತವೆ! ಎನ್ನುತ್ತಾ.... ಇದಕ್ಕೆ ವೈದಿಕ ಮೂಲವನ್ನೂ ಪ್ರತಿಪಾದಿಸುತ್ತಾರೆ. ಯಾವುದೇ ಎರಡು ದೇವ ಅಥವಾ ಜೀವ(ಮಾನವ) ಸಂಖ್ಯೆಗಳು ಸೇರಿದಾಗ ಗಮನಕ್ಕೆ ಬರುವ ಅಂಶವೆಂದರೆ, ದೇವ ಮಾತ್ರ ಮನುಷ್ಯನನ್ನೂ, ದೇವನನ್ನೂ ಹೀಗೆ ಎರಡನ್ನೂ ಸೃಜಿಸಬಲ್ಲ! ಆದರೆ ಮನುಷ್ಯ ದೇವನನ್ನು ಸೃಜಿಸಲಾರ! ಹೀಗಿರುವಾಗ ಜೀವ ತಾನು ತನ್ನ ಸಂಖ್ಯೆಯನ್ನು ಅರಿತು, ಅದರಿಂದ ಭಾಗಿಸಿ ಕೊಂಡರೆ (ನಿಃಶೇಷನಾದರೆ) ಮಾತ್ರ ಇದು ಸಾಧ್ಯ! ಎನ್ನುತ್ತದೆ ಸಂಖ್ಯಾ ಶಾಸ್ತ್ರ. 
೫) ಇವರನ್ನು ದೇವರೆಂದು ಭಾವಿಸಿ.... ಎಂಬುದಾಗಿ ಭಾವ ಪ್ರಬೋಧಕ ಶಾಸ್ತ್ರಗಳೂ ಬಹಳಷ್ಟು ಇವೆ. ಮುಖ್ಯವಾಗಿ ಮಾತೃದೇವೋ ಭವ | ಪಿತೃದೇವೋ ಭವ | ಆಚಾರ್ಯದೇವೋ ಭವ | ಅತಿಥಿದೇವೋ ಭವ | ಎಂಬುದಾಗಿ ಕಾಣಸಿಗುತ್ತವೆ.
ಹೀಗೆ ಸಂಸ್ಕೃತಿಯ ಅಡಿಪಾಯವನ್ನು ಭಾವ ಕೇಂದ್ರದ ಮೇಲೆ ನಿರ್ಮಿಸಿ, ಸ್ವಭಾವವನ್ನು ದೇವ ಭಾವದಲ್ಲಿ ನೆಲೆಯಾಗಿಸುವ ಪ್ರಯತ್ನವೇ ಎಲ್ಲೆಲ್ಲೂ ಕಂಡು ಬರುತ್ತದೆ. ಅದೇ ಶ್ರದ್ಧೆ.... ಅದೇ ಆಚಾರ.... ಅದೇ ಆರಾಧನೆ....
ಈ ಮೇಲಿನ ಎಲ್ಲ ವಿಚಾರಗಳಿಗೆ ಪ್ರತಿಧ್ವನಿಯಾಗಿ ಅಥವಾ ಪ್ರತಿಸ್ಪಂದಿಯಾಗಿ `ಕಾಂತಾರ` ಮಧ್ಯದ ದೈವಾರಾಧನೆಗಳು ನಿಲ್ಲುವವೇ? ಎಂಬುದನ್ನು ವಿಮರ್ಶಿಸ ಬೇಕಾಗಿದೆ....

1 comment:

  1. ವಿಜ್ಞಾನಿಯೊಬ್ಬರು ಏನನ್ನೋ ಸಂಶೋಧನೆ ಮಾಡುತ್ತಾರೆ. ಕವಿಯೊಬ್ಬರು ಅಪರೂಪದ ಸಾಲುಗಳನ್ನು ಜೋಡಿಸಿ ಬರೆಯುತ್ತಾರೆ. ಕಲಾವಿದರು ನಿರೀಕ್ಷೆಗೂ ಮೀರಿ ಕಲೆಯನ್ನು ಹೊರಹೊಮ್ಮುತ್ತಾರೆ. ಹೀಗೆ ಆಯಾ ವ್ಯಕ್ತಿಗಳ ಅರಿವಿಗೆ ಬಾರದಂತೆ, ಅವರೇ ಅಚ್ಚರಿಗೊಳ್ಳುವಂತೆ ಇದು ನಡೆಯುತ್ತದೆ... ಇದೇ ದೈವೀ ಪ್ರೇರಣೆ, ದೈವಾನುಗ್ರಹ.... ಎಂದೆನಿಸುತ್ತದೆ!
    ಇದೇ ರೀತಿ ಯಾವುದೋ ಒಂದು ಪರಿಸರ, ಮನೋ ಸ್ಥಿತಿ, ಅವಸ್ಥೆ ಅಥವಾ ಸನ್ನಿವೇಶದಲ್ಲಿ ಆತ (ವ್ಯಕ್ತಿಯೊಬ್ಬ ಹೇಳಿದ್ದು ) ಆಡಿದ್ದು ಸತ್ಯವಾಗುತ್ತದೆ ಅಥವಾ ಅದನ್ನೇ ಪ್ರಕೃತಿ ನಿಜವಾಗಿಸುತ್ತದೆ. ಇದು ದೈವದ ಇರುವಿಗೆ ಪ್ರತೀಕವೋ, ಮಾನವನ ಮನಸ್ಸಿಗೆ ಅತೀತವಾದ ಅಂಶವೋ ಗೊತ್ತಿಲ್ಲ!

    ReplyDelete