ಸಂಗೀತಮಪಿ ಸಾಹಿತ್ಯಂ ಸರಸ್ವತ್ಯಾಃ ಸ್ತನದ್ವಯಮ್ |
ಏಕಮಾಪಾತಮಧುರಂ - ಅನ್ಯದಾಲೋಚನಾಮೃತಮ್ || ಸುಭಾಷಿತಮ್
||
ಸಂಗೀತವೆಂದರೆ ಚೆನ್ನಾಗಿ ಹಾಡುವುದು. ಇದರಲ್ಲಿ ಗಾಯನ, ವಾದನ ಮತ್ತು ನರ್ತನ ಎಂಬ ಮೂರು ಅಂಶಗಳು ಮೇಳೈಸಿವೆ. ಹಾಗಾಗಿ ಸಂಗೀತವನ್ನು ತ್ರಿತಯ ಎಂದೂ ಕರೆಯುತ್ತಾರೆ. ಇವು ಮೂರೂ ಪ್ರಕಾರಗಳು (ಹಾಡು, ವಾದ್ಯ ಮತ್ತು ನೃತ್ಯ) ಬೇರೆ ಬೇರೆಯಾಗಿ ಸ್ವತಂತ್ರವೋ ಎಂಬಂತೆ ಇಂದು ಬೆಳೆದು ನಿಂತಿವೆ. ಅದರಂತೆ ಇವು ಪರಸ್ಪರ ಗಾಢವಾಗಿ ಬೆಸೆದು ಕೊಂಡಿವೆ. ಆದರೆ ಇಂದು ಸಂಗೀತ ಶಬ್ದ ಗಾಯನಕ್ಕೆ ಮಾತ್ರ ಸೀಮಿತವಾಗಿ ಬಳಕೆಯಾಗುತ್ತಿದೆ. ಪ್ರಕೃತ ಲೇಖನದಲ್ಲಿ ಸಂಗೀತ ಪದ ತ್ರಿತಯವನ್ನೂ ಪ್ರತಿನಿಧಿಸುತ್ತದೆ.
ಗೀತ, ವಾದ್ಯ ಮತ್ತು ನೃತ್ಯಗಳಲ್ಲಿ (ಸಂಗೀತದಲ್ಲಿ) ನಾದ ಮತ್ತು ಲಯಗಳೆಂಬ ಎರಡು ಅಂಶಗಳು; ಇಡೀ ಸಂಗೀತದ ತ್ರಿತಯಗಳನ್ನು ಪರಸ್ಪರ ಒಂದನ್ನೊಂದು ಬೆಸೆದು ಕೊಳ್ಳಲು ಮತ್ತು ರೂಪುಗೊಳ್ಳಲು ಸಹಕಾರಿಯಾಗಿ ನಿಂತಿವೆ. ಇವು ಸಂಗೀತ ಪ್ರಪಂಚದುದ್ದಕ್ಕೂ ಹಾಸುಹೊಕ್ಕಾಗಿವೆ.
ನಾದ ಮತ್ತು ಲಯ ಸಂಗೀತದ ಉಸಿರು. ಹೇಗೆ
ಪ್ರಾಣಪ್ರಪಂಚಕ್ಕೆ ಎಡ ಮೂಗು ಮತ್ತು ಬಲ ಮೂಗಿನ ಹೊಳ್ಳೆಗಳು ದ್ವಾರಗಳೋ ಹಾಗೆ. ಇಡೀ ಸಂಗೀತ ಪ್ರಪಂಚಕ್ಕೆ ನಾದ ಮತ್ತು ಲಯಗಳು ಇಡಾಪಿಂಗಳಾ ನಾಡಿಗಳಂತೆ ಜೀವನಾಡಿಗಳಾಗಿವೆ.
ಇವುಗಳ ಮೂಲವನ್ನು ಬಗೆದರೆ, ನಾದದ ಮೂಲವೇ ವೇದ ಮತ್ತು ಲಯದ
ಮೂಲವೇ ಛಂದಸ್ಸು ಎಂಬ ಅಂಶಗಳು ಸ್ಫುಟವಾಗುತ್ತವೆ. ಅವು ಪರಸ್ಪರ ಬೇರೆಯೇನಲ್ಲ!
ಛಂದಾಂಸಿ ಜಜ್ಞಿರೇ ತಸ್ಮಾತ್ | ಯಜುಸ್ತಸ್ಮಾದಜಾಯತ
| ಎಂಬ ವೈದಿಕ ಮಾತಿನಂತೆ ಅವು ಪರಸ್ಪರ ಪೂರಕವಾಗಿಯೇ ನಿಂತಿವೆ.
ಎಂಬಲ್ಲಿಗೆ ಸಂಗೀತದ ಬೇರು ವೇದವೆಂಬ ವಿದ್ಯೆಯ ರಾಶಿಯಲ್ಲಿ ಮನೆ ಮಾಡಿದ್ದು ಕಂಡುಬರುತ್ತದೆ.
ಋಗ್ಯಜುಸ್ಸಾಮಭೇದದಿಂದ ಮೂರಾದ ಈ ವಿದ್ಯಾಸಮುದ್ರ ತ್ರಯೀ ಎಂಬ ಅನ್ವರ್ಥವನ್ನೂ
ಪಡೆದಿದೆ. ಇಲ್ಲಿ ಪ್ರತೀ ವೇದಕ್ಕೂ ಉಪವೇದಗಳನ್ನು ನಾವು ನೋಡುತ್ತೇವೆ. ಉಪವೇದವೆಂದರೆ ಈ
ಮೂಲವೇದಕ್ಕೆ ಪೂರಕವೂ, ಅಧ್ಯಯನ ಯೋಗ್ಯವೂ ಆದ ಭಾಗ ಎಂದರ್ಥ ಮಾಡಬೇಕು. ಇದೊಂದು ಬೇರೆ ವೇದವೆಂದು
ಭಾವಿಸಬಾರದು. ಇವು ಮೂಲ ವೇದದ ವಿಕಾಸವಾಗಿ ರೂಪುಗೊಂಡ ವಿದ್ಯೆಗಳಾಗಿವೆ. ಪ್ರಕೃತ ಸಾಮವೇದದ
ಉಪವೇದವಾಗಿ ನಾವು ಗಂಧರ್ವವೇದವನ್ನು ಕಾಣಬಹುದು. ಈ ಗಂಧರ್ವ ವೇದದಲ್ಲಿ ನೃತ್ಯ ಹಾಗೂ ಗಾಯನಕ್ಕೆ
ಸಂಬಂಧಿಸಿದ ಹಲವು ಪ್ರಾಚೀನ ವಿಷಯಗಳನ್ನು ನಾವು ನೋಡಬಹುದು. ರಾಗ, ರಾಗಿಣೀ, ತಾಳ, ಸ್ವರ,
ವಾದ್ಯಗಳು ಮತ್ತು ನೃತ್ಯಗಳ ಭೇದೋಪಭೇದಗಳ ವರ್ಣನೆಗಳು ಇಲ್ಲಿವೆ. ಇನ್ನು ಸಾಮಗಾನದ ಗೇಯಪ್ರಕಾರಗಳು
ಮತ್ತು ಶಾಖೋಪಶಾಖೆಗಳು ಇಂದಿಗೆ ಸರಿಸುಮಾರು ಲುಪ್ತವಾಗಿಹೋಗಿವೆ. ಆದರೂ ಪ್ರಾಚೀನ
ನೃತ್ಯಶಾಸ್ತ್ರಗಳಲ್ಲಿ ಭರತನ
ನಾಟ್ಯಶಾಸ್ತ್ರ, ದತ್ತಿಲಮುನಿಯ ದತ್ತಿಲಮ್, ಶಾರ್ಙದೇವನ ಸಂಗೀತ ರತ್ನಾಕರ ಮತ್ತು ದಾಮೋದರನ ಸಂಗೀತ
ದರ್ಪಣ ಗ್ರಂಥಗಳು ಇಂದಿಗೂ ಆಧಾರವಾಗಿದ್ದು, ನಾಟ್ಯದ ವಿವಿಧರೂಪಗಳು, ರಸಭಾವಗಳು, ಸ್ವರ,
ತಾಳ, ಲಯಗಳ ವಿಸ್ತೃತ ವರ್ಣನೆಗಳನ್ನು ನಾವಿಲ್ಲಿ ಗಮನಿಸಬಹುದು. ಒಟ್ಟಿನಲ್ಲಿ ಸಾಮವೇದದ ಉಪವೇದವಾದ
ಗಂಧರ್ವವೇದದಲ್ಲಿ ಈ ಸಂಗೀತದ ಕುರಿತ ಮೂಲಭೂತವಾದ ವಿಚಾರಗಳು ಮೊದಲು ಬೆಳಕಿಗೆ ಬಂದವು.
ಬೆಳಕಿನ ದೇಶ ಭಾರತ. ತಾನು ಬೆಳಕನಲ್ಲಿ ಬಾಳಿ, ಬೆಳಕನ್ನೇ ನಂಬಿ,
ಜಗತ್ತಿಗೆ ಜ್ಞಾನದೀವಿಗೆಯಾಗಿ ನಿಂತಿರುವ ಭಾರತ ನಮಗೆ ತಾಯಿ. ವಿದ್ಯಾವಾರಿಧಿಯಂತಿರುವ ವೇದಗಳನ್ನು
ಜಗತ್ತಿಗೆ ನೀಡಿದ ಭಾರತ, ಜ್ಞಾನನಿಧಿಯಾಗಿದೆ. ಸಂಗೀತ, ಸಾಹಿತ್ಯಗಳನ್ನು ವೇದಕಾಲದಿಂದಲೂ ನಮಗೆ
ಉಣಿಸಿದ ಮಾತೆಯಾಗಿದ್ದಾಳೆ. ವೇದಮಾತೆಯನ್ನು ಗಾಯತ್ರಿಯಾಗಿಯೂ, ಸಾವಿತ್ರಿಯಾಗಿಯೂ ಮತ್ತು
ಸರಸ್ವತಿಯಾಗಿಯೂ ಕಂಡ ನಮ್ಮ ಋಷಿಗಳು; ಆಕೆ ತನ್ನ ಎದೆಯಲ್ಲಿ ಸಂಗೀತ ಮತ್ತು ಸಾಹಿತ್ಯಗಳನ್ನು
ತಾಯಿಹಾಲಿನಂತೆ ತುಂಬಿ ಕೊಂಡಿದ್ದಾಳೆ. ಅಲ್ಲದೇ ನಮ್ಮನ್ನು ಎದೆ ಹಾಲುಣಿಸಿ, ಹರಸಿದ್ದಾಳೆಂದು ಕೊಂಡಾಡಿದ್ದಾರೆ. ಒಂದು ಎದೆಯಲ್ಲಿ ಸಂಗೀತವನ್ನೂ,
ಇನ್ನೊಂದರಲ್ಲಿ ವೇದವಾಙ್ಮಯವನ್ನೂ ಅಂದರೆ ಸಾಹಿತ್ಯವನ್ನೂ ತುಂಬಿಕೊಂಡಿದ್ದಾಳೆ. ಇದರಿಂದ
ಭಾರತೀಯರಿಗೆ ಅಮೃತದ ಅರಿವಾಗಿದೆ. ಸಂಗೀತಾಮೃತದಿಂದ ರಸ ಮಾಧುರ್ಯವನ್ನೂ, ಸಾಹಿತ್ಯಾಮೃತದಿಂದ
ವಿಚಾರ ವೈಶಾಲ್ಯವನ್ನೂ (ನಾವು ಸಣ್ಣವರಿದ್ದಾಗಲೇ) ನಮಗೆ ನೀಡಿ, ನಮ್ಮ ಮನೋ ವೇದಿಕೆಗಳಾದ
ಭಾವ ಮತ್ತು ಬುದ್ಧಿಗಳನ್ನು ವಿಕಾಸಗೊಳಿಸಿದೆ.
ಅದಕ್ಕೆ ಭಾರತೀಯರಾದ ನಾವು ಧನ್ಯರು.