ಆಸ್ತಿಕರು ಕರೋನಾದಿಂದಾಗಿ ನಿಜವಾಗಿಯೂ ಧರ್ಮಸಂಕಟದಲ್ಲಿದ್ದಾರೆ. ವಿಶೇಷವಾಗಿ ಹಿರಿಯರ ಶ್ರಾದ್ಧವನ್ನು ಮಾಡುವುದು ಹೇಗೆ? ಎಂಬ ಸಂದಿಗ್ಧದಲ್ಲಿದ್ದಾರೆ. ಶ್ರಾದ್ಧ ತಾನೇ ? ಬಿಟ್ಟರಾಯಿತು. ಅದರಿಂದೇನು? ಎಂದು ತಟಸ್ಥರಾಗಲು
ಅಂತಃಕರಣವು ಸಿದ್ಧವಾಗಿಲ್ಲ!
ವಿಧಿಯುಕ್ತವಾಗಿ ಶ್ರಾದ್ಧವನ್ನು ಮಾಡಲು ವಿಪ್ರರೇ ದುರ್ಲಭರಾಗಿದ್ದಾರೆ. ಕರೋನಾದ
ಆಡಳಿತದಲ್ಲಿ ವಿಪ್ರರು ಉಳಿದವರಂತೆ ಮನೆಯಿಂದ ಹೊರಬರಲಾರರು. ಕರೋನಾಕ್ಕೆ ವೈದಿಕರು-ಅವೈದಿಕರೆಂಬ
ಭೇದಭಾವವಿಲ್ಲವಷ್ಟೇ? ಯಾರನ್ನಾದರೂ ಆಲಂಗಿಸುತ್ತದೆ. ಆ
ವಿಷಯದಲ್ಲಿ ಕರೋನಾ ನಿಷ್ಪಕ್ಷಪಾತಿಯಾಗಿದೆ. ಆದ್ದರಿಂದ ಏಕಾಂತವೇ ತಾರಕ. ಲೋಕಾಂತ ಮಾರಕ.
ಸಾಮಾಜಿಕ ಅಂತರ ಇಂದಿನ ಅನಿವಾರ್ಯತೆ. ಇಂತಹ
ಪರಿಸ್ಥಿಯಲ್ಲಿ ಶ್ರಾದ್ಧಾಚರಣೆ ಹೇಗೆ?
ಶ್ರಾದ್ಧಕ್ಕೆ ಮೂಲಭೂತವಾಗಿ ಬೇಕಾದದ್ದು ಶ್ರದ್ಧೆ. ಸಾಮಗ್ರಿಗಳೆಲ್ಲ ಇದ್ದು ಶ್ರದ್ಧೆ ಇಲ್ಲದಿದ್ದರೆ ಅದು ಶ್ರಾದ್ಧಾಭಾಸ. ಆದ್ದರಿಂದ
ಧರ್ಮಶಾಸ್ತ್ರದಲ್ಲಿ ಇಂಥ ಅಪರಿಹಾರ್ಯ ಸಂದರ್ಭದಲ್ಲಿ ಶ್ರಾದ್ಧಾಚರಣೆಯ ಪರ್ಯಾಯಮಾರ್ಗವನ್ನು
ತಿಳಿಸಿದ್ದಾರೆ. ಶಾಸ್ತ್ರಕಾರರ ಮುನ್ನೋಟ ನಮ್ಮನ್ನು ಮೂಕರನ್ನಾಗಿಸುತ್ತದೆ. ಕರ್ಮಕಾಂಡದ
ಗಂಧಗಾಳಿಯಿಲ್ಲದವರೂ ನೆರವೇರಿಸಬಹುದಾದ ಸರಳ ಹಾಗೂ ಅರ್ಥಪೂರ್ಣವಾದ ಪರ್ಯಾಯಗಳಿವು.
I. ವಿಪ್ರಸ್ಯ
ಅನ್ನಾದೇರ್ವಾ ಅಭಾವೇ ಯಥಾಶಕ್ತಿ ಅನ್ನಮುದ್ಧೃತ್ಯ ಷೋಢಾ ವಿಭಜ್ಯ
1)
ಅಸ್ಮತ್
ಪಿತೃಭ್ಯಃ ಇದಮನ್ನಂ ಸ್ವಧಾ ನ ಮಮ |
2)
ಅಸ್ಮತ್
ಪಿತಾಮಹೇಭ್ಯಃ ಇದಮನ್ನಂ ಸ್ವಧಾ ನ ಮಮ |
3)
ಅಸ್ಮತ್
ಪ್ರಪಿತಾಮಹೇಭ್ಯಃ ಇದಮನ್ನಂ ಸ್ವಧಾ ನ ಮಮ |
4)
ಅಸ್ಮತ್
ಮಾತೃಭ್ಯಃ ಇದಮನ್ನಂ ಸ್ವಧಾ ನ ಮಮ |
5)
ಅಸ್ಮತ್
ಪಿತಾಮಹೀಭ್ಯಃ ಇದಮನ್ನಂ ಸ್ವಧಾ ನ ಮಮ |
6)
ಅಸ್ಮತ್
ಪ್ರಪಿತಾಮಹೀಭ್ಯಃ ಇದಮನ್ನಂ ಸ್ವಧಾ ನ ಮಮ | ಇತಿ ತ್ಯಜೇತ್ | ತದನ್ನಂ ವಿಪ್ರಾಯ, ಗೋಭ್ಯೋ
ವಾ ದೇಯಮ್ | ಜಲಾದೌ ವಾ ತ್ಯಾಜ್ಯಮ್ |
ಶ್ರಾದ್ಧನಿರ್ವಹಿಸುವ ವಿಪ್ರರೇ ದೊರೆಯದಿದ್ದಾಗ ಪಾತ್ರೆಯಲ್ಲಿರುವ ಅನ್ನವನ್ನು ಸಾಧ್ಯವಿದ್ದಷ್ಟು ಎತ್ತಿಕೊಳ್ಳಬೇಕು, ಅದನ್ನು
ಸಮನಾಗಿ ಆರು ಭಾಗಮಾಡಿ ವಿಂಗಡಿಸಬೇಕು. ವಿಂಗಡಿಸಿದ ಈ ಅನ್ನವನ್ನು ಕ್ರಮವಾಗಿ 1. ತಂದೆಗೆ 2. ಅಜ್ಜನಿಗೆ 3. ಮುತ್ತಜ್ಜನಿಗೆ 4. ತಾಯಿಗೆ 5. ಅಜ್ಜಿಗೆ 6. ಮುತ್ತಜ್ಜಿಗೆ
ಎಂದು ಸಮರ್ಪಿಸಬೇಕು. ಹೀಗೆ ಪಿತೃಗಳಿಗೆ ಮೀಸಲಿಟ್ಟ ಅನ್ನವನ್ನು ಗೋವುಗಳಿಗೆ
ಗ್ರಾಸರೂಪವಾಗಿ ನೀಡಬೇಕು. ನಮ್ಮೂರಿನಲ್ಲಿ ನಾವು ಯಾರೂ ಗೋವನ್ನು ಸಾಕಿಲ್ಲ! ಎನ್ನುವವರಿದ್ದರೆ
ಅವರು ಪಿತೃಗಳಿಗೆ ಸಮರ್ಪಿಸಿದ ಅನ್ನವನ್ನು ಜಲದಲ್ಲಿ ಬಿಡಬೇಕು. ಈ ಆರು ಸಾಲು ಮಂತ್ರವನ್ನು ಹೇಳುವುದು
ಅಸಾಧ್ಯವೆನ್ನುವವರು ಏನು ಮಾಡಬೇಕು? ಅದಕ್ಕೂ ಒಂದು ಪರ್ಯಾಯವಿದೆ.
II ಯದ್ವಾ ಶ್ರಾದ್ಧದಿನೇ ಪ್ರಾಪ್ತೇ ಭವೇನ್ನಿರಶನಃ ಪುಮಾನ್ |
ಶ್ರಾದ್ಧದ ದಿನ ಕರ್ತೃವು
ಉಪವಾಸವಿದ್ದರಾಯಿತು. ಶ್ರಾದ್ಧಮಾಡಿದಂತೆಯೇ ಆಗುವುದು!
ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡೋಣ ? ಅದಕ್ಕೂ ಒಂದು ಪರ್ಯಾಯವಿದೆ.
III ತೃಣಾನಿ ವಾ ಗವೇ ದದ್ಯಾತ್ |
ಹಸುಗಳಿಗೆ ಹುಲ್ಲನ್ನು
ನೀಡಿ.
ಹಸುದೊರೆಯುವುದೇ ದುರ್ಲಭವೆಂದೆವಲ್ಲ? ಆಗೇನು ಗತಿ ? ಅದಕ್ಕೂ ಇದೆ ಪರ್ಯಾಯ.
IV. ತೃಣಭಾರಂ
ದಹೇತ್ |
ಒಂದು ಹೊರೆ ಹುಲ್ಲನ್ನು
ಸುಡಬೇಕು.
ಇನ್ನೇನು ಹೇಳೋಣ ಇದೊಂದು ಅಂತಿಮ ಪರ್ಯಾಯ.
V.
ಸರ್ವಾಭಾವೇ
ವನಂ ಗತ್ವಾ ಊಧ್ರ್ವಬಾಹುಃ ಕಕ್ಷಂ ದರ್ಶಯನ್ನಿದಂ
ಪಠೇತ್ |
ನ ಮೇಽಸ್ತಿ
ವಿತ್ತಂ ನ ಧನಂ ನ ಚಾನ್ಯತ್-ಶ್ರಾದ್ಧೋಪಯೋಗಿ ಸ್ವಪಿತೄನ್ನತೋಽಸ್ಮಿ |
ತೃಪ್ಯಂತು
ಭುಕ್ತ್ವಾ ಪಿತರೌ ಮಯೈತೌ ಭುಜೌ ಕೃತೌ ವರ್ತ್ಮನಿ ಮಾರುತಸ್ಯ ||
ಏನೂ ಇಲ್ಲದ ಅಸಹಾಯಕ ಸ್ಥಿತಿಯಲ್ಲಿ ಕಾಡಿಗೆ ಹೋಗಿ ಎರಡೂ ಕೈಯನ್ನು ಮೇಲೆತ್ತಿ ಈ ಶ್ಲೋಕವನ್ನು ಹೇಳಿ. ಶ್ಲೋಕ ಹೇಳಲು
ಬಾರದಿದ್ದರೆ ಅದರ ಅರ್ಥವನ್ನು ಅನುಸಂಧಾನ ಮಾಡಿಕೊಳ್ಳಿ. ನನ್ನಲ್ಲಿ ಶ್ರಾದ್ಧಮಾಡಲು ಬೇಕಾದ
ಸಂಪತ್ತಿಲ್ಲ, ಹಣವಿಲ್ಲ, ಮತ್ತೇನೂ
ಇಲ್ಲ. ಪಿತೃಗಳಿಗೆ ನಮಿಸುತ್ತೇನೆ. ನನ್ನ ಈ ಎರಡೂ ಬಾಹುಗಳನ್ನು ಅಸಹಾಯಕತೆಯಿಂದ ಎತ್ತಿ
ನಿಂತಿದ್ದೇನೆ. ಇದರಿಂದ ಪಿತೃಗಳು ತೃಪ್ತರಾಗಲಿ. ಹೀಗೆ ಧರ್ಮಶಾಸ್ತ್ರವು ಉದಾರವಾಗಿ ಅನೇಕ
ಪರ್ಯಾಯಗಳನ್ನು ಸೂಚಿಸಿದೆ. ಇವೆಲ್ಲ ಧರ್ಮಸಿಂಧು ಗ್ರಂಥದ ಮೂರನೆಯ ಪರಿಚ್ಛೇದದ
ಉತ್ತರಾರ್ಧದಲ್ಲಿ ಉಲ್ಲಿಖಿತವಾದ ಶ್ರಾದ್ಧದ ಪರ್ಯಾಯ ವಿಧಾನಗಳು. ಆದ್ದರಿಂದ ಆಸ್ತಿಕರು
ಕರೋನಾಡಳಿತಕ್ಕೂ ಜಗ್ಗದೇ ಧರ್ಮಮಾರ್ಗದಲ್ಲಿ ನಡೆಯಲು ಸಾಧ್ಯ.
೨೮ ಮೇ ೨೦೨೧
ಶುಕ್ರವಾರ ವಿದ್ವಾನ್ ಗಂಗಾಧರ ಭಟ್ಟ ಅಗ್ಗೆರೆ
(ಶ್ರೀಯುತರು ನಮ್ಮ ವಿದ್ಯಾಗುರುಗಳು, ಧೀಮಂತರು, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ ಸಹೃದಯ ವಿದ್ವಾಂಸರು.)
ಪರಮೇಶ್ವರ ಪುಟ್ಟನ್ಮನೆ