ಜಗತ್ತು ಕರೋನಾದ
ತೆಕ್ಕೆಯಲ್ಲಿ ನರಳುತ್ತಿದೆ. ಭಾರತ ಇದಕ್ಕೆ ಹೊರತಾಗಿಲ್ಲ.
ಈ ಅಂಟುಜಾಡ್ಯ ಒಡ್ಡಿದ ಸವಾಲು ಆಡಳಿತಗಾರರ ಧೃತಿಯನ್ನು ಪರೀಕ್ಷಿಸುತ್ತಿದೆ. ಜನತೆ ತಮ್ಮ ಹತ್ತಿರ ರೋಗ ಬರುವವರೆಗೂ
ಅಲಕ್ಷಿಸುತ್ತಿದ್ದಾರೆ. ಬಂದ ನಂತರ ಪ್ರತಿಕ್ರಿಯೆ
ಅಸಾಧ್ಯವೆಂದು ಸರಕಾರದ ಮೊರೆಹೋಗಿದ್ದಾರೆ.
ವಿಶೇಷವಾಗಿ ಎರಡನೆಯ ಅಲೆಯಲ್ಲಿ ಎಲ್ಲರ ಊಹೆಯನ್ನೂ ಮೀರಿ ಕರೋನಾ ಅಬ್ಬರಿಸಿದೆ. ಸಾವಿನ ಸುದ್ದಿ ನಿರಂತರ ಪ್ರಸಾರವಾಗುತ್ತಿದೆ. ಚಿಕಿತ್ಸೆ ಅಸಹನೀಯವಾಗಿದೆ. ಹಾಸಿಗೆಗಳು ದೊರೆಯುತ್ತಿಲ್ಲ. ಪ್ರಾಣವಾಯು ಸಾಕಷ್ಟು ಪ್ರಮಾಣದಲ್ಲಿ
ಸಿಗುತ್ತಿಲ್ಲ. ಆಶಾಕಿರಣವಾದ ಚುಚ್ಚುಮದ್ದು
ದುರ್ಲಭವಾಗಿದೆ. ಕೊನೆಯ ಆಸರೆಯಾದ ರೆಮ್ಡಿಸಿವರ್
ನಂಥ ಔಷಧಗಳು ದೊರೆಯುತ್ತಿಲ್ಲ. ಈ ನಡುವೆ ಹೇಗೋ ಚಿಕಿತ್ಸೆಪಡೆದು ಚಿಕಿತ್ಸಾಲಯದಿಂದ
ಬಿಡುಗಡೆಯಾದವರು, ಚಿಕಿತ್ಸೆಯ ಬಳುವಳಿಯೆಂಬಂತೆ ಕಪ್ಪು-ಶಿಲೀಂದ್ರದಂಥ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಒಟ್ಟಿನಲ್ಲಿ ಬದುಕು ಬರ್ಬರವಾಗಿದೆ.
ಇದಕ್ಕೆಲ್ಲ ಸರಕಾರ ಕಾರಣವೆಂದು ಆರೋಪಿಸುವ ಕಾಯಕ ದೊಡ್ಡದೇನಲ್ಲ. ಆದರೆ
ಪರಿಹಾರಕ್ಕೆ ನಮ್ಮಲ್ಲಿ ಉಪಾಯವಿದೆಯೆಂಬುದನ್ನೂ ಸಾಬೀತುಪಡಿಸಲಾಗಿಲ್ಲ! ಆದ್ದರಿಂದ ಆಪಾದನೆ ಅರ್ಥಹೀನ. ಈ ಮಧ್ಯದಲ್ಲಿ ವ್ಯವಹರಿಸುತ್ತಿರುವ ವಿಕೃತಮನಸ್ಸುಗಳು
ನಾವು ಬದುಕುತ್ತಿರುವ ಕಾಲಘಟ್ಟದ ಕಳಂಕಗಳು.
ಹಾಸಿಗೆ ದೊರೆಯದಂತೆ ಬಚ್ಚಿಟ್ಟು, ದುಡ್ಡಿಗಾಗಿ ಬಿಚ್ಚಿಡುವ ಪಾಪಿಷ್ಟರು;
ಪ್ರಾಣವಾಯುವನ್ನು
ವಾಮಮಾರ್ಗದಿಂದ ಒದಗಿಸಿ, ಹಣಸಂಪಾದಿಸುವ ಘಾತಕರು; ಚುಚ್ಚುಮದ್ದನ್ನು ವಂಚಿಸಿ ನೀಡಿ, ಹಣಮಾಡುವ
ವೈದ್ಯರು ಇವರೆಲ್ಲ ಮನುಷ್ಯರೇ ? ಅವರಿಗೆ ಆತ್ಮಸಾಕ್ಷಿ ಇಲ್ಲವೋ ? ಇಂಥವರ ಬಗ್ಗೆ ಯಾವ ಕನಿಕರವನ್ನೂ ತೋರದೇ ಕಠಿಣ
ದಂಡನೆಯಾಗಬೇಕು. ಅವರು ಅಕ್ರಮವಾಗಿ ಸಂಪಾದಿಸಿದ ಸಂಪತ್ತೆಲ್ಲವನ್ನೂ ರಾಜ್ಯಕೋಶಕ್ಕೆ ಸೇರಿಸಬೇಕು. ಅವರಿಗಾದ
ಶಿಕ್ಷೆಯನ್ನು ಸಾರ್ವಜನಿಕರು ತಿಳಿಯುವಂತಾಗಬೇಕು. ಅದರಿಂದಲಾದರೂ ಈ ಶನಿಸಂತಾನ ನಿಶ್ಶೇಷವಾಗಲಿ.
ಈ ವ್ಯಾಧಿಯು ನಮ್ಮ ಕೊರತೆಗಳನ್ನೆಲ್ಲ ಬಯಲುಮಾಡಿತು. ಸತ್ತವರ-ಸಂಸ್ಕಾರ ಮಾಡಲು ಸ್ಥಳನೀಡಲಾಗದ ದುರ್ಗತಿ ನಮ್ಮ ಕರ್ನಾಟಕಕ್ಕೆ ಬಂತು. ಶವಗಳನ್ನು ದಹಿಸಲು ಸರತಿಸಾಲಿನಲ್ಲಿ ಕಾಯುವ
ಸ್ಥಿತಿಯನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ. ಅಂತೂ ಕಂದಾಯ ಸಚಿವರು ಶವಸಂಸ್ಕಾರಕ್ಕೆ
ಸ್ಥಳಾವಕಾಶ ಕಲ್ಪಿಸುವ ವ್ಯವಸ್ಥೆ ಮಾಡಿದರು. ನಮ್ಮ ಕರ್ನಾಟಕದಲ್ಲಿ ಅನಾಥರೆಷ್ಟಿದ್ದಾರೆಂಬ ಸತ್ಯವನ್ನು ಈ ಘಟನೆ
ಬೆತ್ತಲು ಗೊಳಿಸಿತು. ಸಾವಿರಕ್ಕೂ ಹೆಚ್ಚು ಶವಗಳನ್ನು ಸಂಸ್ಕಾರಮಾಡಿ ಮುಂದಿನ ಚಿತಾಭಸ್ಮ ವಿಸರ್ಜನೆಗಾಗಿ ಸರಕಾರ ಕಾಯುತ್ತಿದೆ. ಯಾವ ಸಂಬಂಧಿಕರೂ ಬಂದಿಲ್ಲ! ಮುಂದೇನು? ಎಂಬ ’ದಿಗಿಲು’
ಸರ್ಕಾರದ್ದು. ಅದಕ್ಕಾಗಿ ಸರಕಾರದವತಿಯಿಂದಲೇ
“ಅಸ್ಥಿಪ್ರಕ್ಷೇಪ” ಮಾಡಬೇಕೆಂಬ ವಿಚಾರವನ್ನು
ಕಂದಾಯ ಸಚಿವರು ವ್ಯಕ್ತಪಡಿಸಿದ್ದಾರೆ.
ಒಬ್ಬ ವ್ಯಕ್ತಿಯ ಮೃತ್ಯುವಿನೊಂದಿಗೆ ಅವನು ಶೂನ್ಯನಾಗುವುದಿಲ್ಲ. ಅವನ ಯಾತ್ರೆ
ಮುಂದುವರಿಯುತ್ತದೆ. ಇದು ಪುನರ್ಜನ್ಮಸಿದ್ಧಾಂತದ ಆಶಯ.
ಒಬ್ಬ ವ್ಯಕ್ತಿಯು ಮೃತನಾಗುತ್ತಲೇ ಅವನ ಎಲ್ಲ ಆಸೆಗಳು ನಾಶವಾಗುವುದಿಲ್ಲ. ಆತ್ಮ ನಿರಂತರನಾದ್ದರಿಂದ ಆ ಆಸೆಗಳು ಪೂರ್ಣ
ತೃಪ್ತವಾಗದೇ ಆತ್ಮನಲ್ಲಿ ಉಳಿಯುತ್ತವೆ. ಇಂಥ ಅತೃಪ್ತ ಆತ್ಮವನ್ನು ‘ಪ್ರೇತ’ ಎಂದು ಪಾರಿಭಾಷಿಕವಾಗಿ ಸ್ಮೃತಿಗಳು
ಗುರುತಿಸುತ್ತವೆ. ಆ ಆಸೆಗಳ-ತರ್ಪಣ ಶರೀರದ ಮೂಲಕವಾಗಬೇಕು. ಈಗ ಪಡೆದ ಶರೀರ ನಿಶ್ಚೇಷ್ಟಿತವಾಗಿದೆ.
ಇನ್ನೊಂದು ಶರೀರ ರೂಪುಗೊಳ್ಳಬೇಕು. ಅಲ್ಲಿಯವರೆಗೆ
ಪಂಚಭೂತಾತ್ಮಕವಾದ ಕಣ್ಣಿಗೆ ಕಾಣುವ ಶವರೂಪದ ಶರೀರ, ಆತ್ಮನ ಸುಖ-ದುಃಖ ಭೋಗಕ್ಕೆ
ಭಾಜನವಾಗದು. ಆದ್ದರಿಂದಲೇ
ಪಂಚತನ್ಮಾತ್ರಾತ್ಮಕವಾದ ಸೂಕ್ಷ್ಮಶರೀರವನ್ನು
ಆತ್ಮನು ಅವಲಂಬಿಸುತ್ತಾನೆ. ಇದನ್ನು ಕಾರಣಶರೀರವೆಂದು ಹೇಳುತ್ತಾರೆ. ಮೃತವ್ಯಕ್ತಿಯ ಕರ್ಮದ ಆಧಾರದ ಮೇಲೆ ಉತ್ಪತ್ತಿಯಾಗುವ
ಶರೀರ ಈ ಪಂಚತನ್ಮಾತ್ರಗಳನ್ನೇ ಅವಲಂಬಿಸಬೇಕು. ಅತೃಪ್ತಾತ್ಮಗಳ ಆಸೆಗಳು ತೃಪ್ತವಾಗಲು
ಉತ್ತರಕ್ರಿಯಾರೂಪದ ಸಂಸ್ಕಾರಗಳನ್ನು ಮಾಡಬೇಕು. ಇದು
ಮೃತನ ದೃಷ್ಟಿಯಿಂದ ಸಂಸ್ಕಾರದ ಸಾಫಲ್ಯ.
ಪುತ್ರ, ಪೌತ್ರ, ಬಂಧು-ಬಾಂಧವರು ಆ ವ್ಯಕ್ತಿಯ ಒಡನಾಟದಲ್ಲಿದ್ದು ಒಂದಿಲ್ಲೊಂದು ಬಗೆಯಿಂದ
ಉಪಕೃತರಾಗಿರುತ್ತಾರೆ. ಆ ಋಣದಿಂದ ಮುಕ್ತರಾಗಲು
ಇರುವ ಒಂದೇ ಒಂದು ಅವಕಾಶ ಉತ್ತರಕ್ರಿಯೆಯಲ್ಲಿ ಭಾಗಿಯಾಗುವುದು. ಆದ್ದರಿಂದ ಸುಭದ್ರ ಸಮಾಜದಲ್ಲಿ ಅನಾಥಶವಕ್ಕೆ ಆಸ್ಪದವೇ ಇರಬಾರದು. ನಮ್ಮ
ದೌರ್ಭಾಗ್ಯ, ಕರ್ನಾಟಕ ರಾಜ್ಯವೊಂದರಲ್ಲಿ ಬಹುಶಃ
ಬೆಂಗಳೂರೊಂದರಲ್ಲಿ ಸಾವಿರ ಸಂಖ್ಯೆಗೂ ಮೀರಿದ ಅನಾಥಶವಗಳಿವೆ! ಎಂಬುದು ನಮ್ಮ ಅಭದ್ರ ಸಮಾಜದ
ಅಭಿವ್ಯಕ್ತಿಯಾಗಿದೆ. ಮಾನ್ಯ ಕಂದಾಯಸಚಿವರಾದ ಶ್ರೀ ಆರ್. ಅಶೋಕರವರು ಮೃತರ
ಚಿತಾಭಸ್ಮವನ್ನು ಪವಿತ್ರಜಲದಲ್ಲಿ ವಿಸರ್ಜಿಸುವ ಸಿದ್ಧತೆಯಲ್ಲಿದ್ದಾರೆ. ಇದು ರಾಜಧರ್ಮ. ಯಾರ ಮತದ ಬಲದಿಂದ ಆಯ್ಕೆಗೊಂಡು ಜನತೆಯ
ಪ್ರತಿನಿಧಿಗಳಾಗಿರುವರೋ ಅವರ ಪ್ರಾತಿನಿಧ್ಯವನ್ನು ವಹಿಸುವುದು ವಿಹಿತವಾಗಿದೆ. ಮಕ್ಕಳಿಲ್ಲದವರಿಗೆ ಮತ್ತು ಮಕ್ಕಳಿದ್ದೂ
ಕರ್ತವ್ಯಭ್ರಷ್ಟರಾಗಿ ಇಲ್ಲದಂತಾದವರಿಗೆ ಮಕ್ಕಳೇ ಆಗುವುದು ರಾಜನ
ನಿಷ್ಠೆ. ಹಾಗೆಯೇ ತಂದೆ
ತಾಯಿಯಿಲ್ಲದ, ಇದ್ದೂ ಕರ್ತವ್ಯಭ್ರಷ್ಟರಾಗಿ
ಇಲ್ಲದಂತಾದವರಿಗೆ ತಂದೆಯಾಗಿ ವ್ಯವಹರಿಸುವುದು ರಾಜನೀತಿ. ಇದು ಭಾರತೀಯ ರಾಜನೀತಿಯ ಆದರ್ಶ. ಈ ಆದರ್ಶವನ್ನು ಅನುಷ್ಠಾನಮಾಡಲು ಮುಂದಾಗಿರುವುದು
ಪ್ರಶಂಸಾರ್ಹ. ಆಕ್ಷೇಪಶೀಲರು ಇದನ್ನು ಆಕ್ಷೇಪಿಸುತ್ತಾರೆ. ಅದು ಅವರ ಚಿತ್ತಮಲದ ಅಭಿವ್ಯಕ್ತಿ. ಅದನ್ನು
ಆಘ್ರಾಣಿಸಬಾರದು. ಇಂಥ ಕೃತ್ಯಕ್ಕೆ ಸನಾತನಧರ್ಮಗ್ರಂಥಗಳ ಬೆಂಬಲವಿದೆ. ಗರುಡಪುರಾಣದಲ್ಲಿ ಬಭ್ರುವಾಹನ ಎಂಬ ರಾಜನು ಇಂಥ
ಅನಾಥಶವಗಳ ಉತ್ತರಕ್ರಿಯೆ ಮಾಡಿದ ಉಲ್ಲೇಖವಿದೆ. ಕಾಡಿನಲ್ಲಿ
ಕಂಡ ಪ್ರೇತದ ಧ್ವನಿಯಿದು.
ಮಮ ವೈ
ಸಂತತಿರ್ನಾಸ್ತಿ ನ ಸುಹೃನ್ನ ಚ ಬಾಂಧವಾಃ |
ನ ಚ ಮಿತ್ರಂ
ಹಿ ಮೇ ತಾದೃಗ್ಯಃ ಕುರ್ಯಾದೌರ್ಧ್ವದೈಹಿಕಮ್ ||
ನನಗೆ ಸಂತಾನವಿಲ್ಲ. ಸಹೃದಯರಿಲ್ಲ. ಬಂಧುಗಳಿಲ್ಲ. ಗೆಳೆಯರಿಲ್ಲ. ನನ್ನ ಉತ್ತರಕ್ರಿಯೆಯನ್ನು ಯಾರು ತಾನೇ ಮಾಡುತ್ತಾರೆ?
ಇದೇ ಪ್ರಶ್ನೆಯನ್ನು ಈಗಲೂ ಕೇಳುತ್ತಿದ್ದಾರೆ. ಕಾಡಿನಲ್ಲಲ್ಲ, ನಡುನಾಡಿನಲ್ಲಿ - ಬೆಂಗಳೂರಿನಲ್ಲಿ. ಇದು ಒಂದು ಪ್ರೇತದ ಪ್ರಶ್ನೆಯಲ್ಲ.
ಸಾವಿರಾರು ಅನಾಥ ಪ್ರೇತಗಳ ಪ್ರಶ್ನೆ. ಇವುಗಳನ್ನು ಕೇಳಿಸಿಕೊಂಡ ಸಹೃದಯನ
ಪ್ರತಿಕ್ರಿಯೆಯನ್ನು ಮಾನ್ಯ ಕಂದಾಯ ಸಚಿವರು
ನೀಡಿದ್ದಾರೆ. ಅವರ
ಧೋರಣೆಗೆ ಸಜ್ಜನರ ಬೆಂಬಲವಿದೆ.
ಕಾರ್ಯರೂಪಕ್ಕೆ ತರಲಿ.
25.05.2021
ಮಂಗಳವಾರ
ವಿದ್ವಾನ್ ಗಂಗಾಧರ ಭಟ್ಟ, ಅಗ್ಗೆರೆ
(ಶ್ರೀಯುತರು ನಮ್ಮ
ವಿದ್ಯಾಗುರುಗಳು, ಧೀಮಂತರು, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ ಸಹೃದಯ ವಿದ್ವಾಂಸರು. ಮಾನ್ಯ ಕಂದಾಯ
ಮಂತ್ರಿಗಳ ಮಾತನ್ನು ಕೇಳಿ, ಕೂಡಲೇ ತಮ್ಮ ಮೆಚ್ಚುಗೆಯನ್ನು ಈ ಮೂಲಕ ತಿಳಿಯ ಪಡಿಸಿದ್ದಾರೆ. ಅವರ ಒಪ್ಪಿಗೆಯ
ಮೇರೆಗೆ ಈ ಮೇಲಿನ ಅಂಶಗಳನ್ನು ನಾನು ಪ್ರಕಟ ಪಡಿಸಿರುತ್ತೇನೆ. ಪರಮೇಶ್ವರ ಪುಟ್ಟನ್ಮನೆ)
No comments:
Post a Comment