ಯಜ್ಞಸಂಸ್ಕೃತಿಯ
ಸದಸ್ಯರಾದ ನಮಗೆ ಅಪರ ಸಂಸ್ಕಾರ ಮಾಡುವಾಗ ಅಗ್ನಿ ಮತ್ತು ಸೋಮರು ಬೇಕು! ಅಗ್ನಿ ಆಹುತಿ ತೆಗೆದು
ಕೊಂಡರೆ ಸೋಮ ಆಹುತಿಯಾಗುವ ತತ್ವವಾಗಿದೆ. ಇವೆರಡನ್ನೂ ಒಳಗೊಂಡಿದ್ದು ನಮ್ಮ ಯಜ್ಞಪ್ರಕ್ರಿಯೆ.
ಪ್ರಕೃತ ಶವದಹನ ಸಂದರ್ಭಕ್ಕೆ ಬಂದಾಗ ಶವ ದೊರೆತು ಮಾಡುವ ಸಂಸ್ಕಾರ ಮತ್ತು ಶವ ದೊರೆಯದೇ ಮಾಡುವ
ಸಂಸ್ಕಾರ ಎಂಬ ಎರಡು ವಿಭಾಗಗಳು ಸ್ಪಷ್ಟವಾಗಿವೆ.
ಮೊದಲ
ವಿಭಾಗದಲ್ಲಿ ದೊರೆತ ಶವ ಹವಿಸ್ಸಾಗಲು ಯೋಗ್ಯವೇ? ಅಯೋಗ್ಯವೇ? ಎಂಬ ಎರಡು ಕವಲುಗಳಿವೆ. ಅಯೋಗ್ಯವಾದ
ರೋಗರುಜಿನ ಪೀಡಿತವಾದ ಶವವನ್ನು ಯೋಗ್ಯಗೊಳಿಸಿ, ಅಂತ್ಯೇಷ್ಟಿ ಹೋಮ ಸಂಪಾದಿಸಬೇಕು. ಅದಕ್ಕೆ ಸ್ಮೃತಿಕಾರರು
ಹೇಳಿದ ಎಣ್ಣೆಯಲ್ಲಿಡುವುದು ಅಥವಾ ಮಧು ಆಜ್ಯದಿಂದ ಆಯಾ ಅಂಗಗಳನ್ನು ತೊಳೆಯುವುದು ಇತ್ಯಾದಿಯಾಗಿ
ಕಂಡುಬರುತ್ತದೆ. ಇನ್ನು ಬೋಧಾಯನರು ಹೇಳುವಂತೆ “ಅಥಾಸ್ಯ
ದಕ್ಷಿಣಂ ಕುಕ್ಷಿಮಪಾವೃತ್ಯ ನಿಷ್ಪುರೀಷಂ ಕೃತ್ವಾ, ಅದ್ಭಿಃ ಪ್ರಕ್ಷಾಳ್ಯ,” ಎಂದು ಪ್ರತಿ
ಶವವನ್ನೂ ಹೋಮಿಸುವ ಮೊದಲು ಮಲಚೀಲ ಬೇರ್ಪಡಿಸುವುದನ್ನು ನೋಡುತ್ತೇವೆ! ಈ ಎಲ್ಲ ಪ್ರಕ್ರಿಯೆಗಳಿಂದ
ನಾವು ಬಹುದೂರ ಬಂದು ಶವದ ಕ್ಷೌರವೋ, ಉಗುರು ತೆಗೆಯುವುದೋ ಮಾಡಲಾಗದೆ; ಬಟ್ಟೆಗಳನ್ನೂ
ಬೇರ್ಪಡಿಸಲಾಗದೇ ಹೋಮಿಸುವ ಹಂತಕ್ಕೆ ಬಂದಿದ್ದೇವೆ! ಬಹುಶಃ ಇನ್ನು ಮುಂದೆ ಶವವನ್ನು ಸಾಗಿಸಲು
ತಳ್ಳುಗಾಡಿಯ ಅವಶ್ಯಕತೆ ಎದ್ದು ಕಾಣುತ್ತಿದೆ. ಹೀಗಿರುವಾಗ ಕಾಲಕಾಲಕ್ಕೆ ಬದಲಾಗುತ್ತಿರುವ
ವ್ಯವಸ್ಥೆಯನ್ನು ಪರಿಶೀಲಿಸಿ, ಶವಸಂಸ್ಕಾರವನ್ನು ಮಾಡುವುದು ಅನಿವಾರ್ಯವಾಗಿದೆ. ಇನ್ನು ಎರಡನೆಯ
ವಿಭಾಗದಂತೆ ಶವ-ಅಪ್ರಾಪ್ತವಾದಾಗ ಅಸ್ಥಿ ಸಂಸ್ಕಾರವೋ, ಶಾಖಾ ಸಂಸ್ಕಾರವೋ ನಮಗೆ
ಅನಿವಾರ್ಯವಾಗಿರುತ್ತದೆ.
ಈ
ಸಂದರ್ಭಕ್ಕೆ ವೇದದ “ಯೇ ಅಗ್ನಿದಗ್ಧಾ ಯೇ ಅನಗ್ನಿದಗ್ಧಾಃ – ಮಧ್ಯೇ ದಿವಃ ಸ್ವಧಯಾ ಮಾದಯಂತೇ |
” ಎಂಬ ಮಾತು ತುಂಬಾ ಅರ್ಥವತ್ತಾಗಿ ಕಾಣುತ್ತದೆ. ಆಚಾರ್ಯ ಸಾಯಣರು “ಯೇ ಪಿತರಃ
ಅಗ್ನಿದಗ್ಧಾಃ ಅಗ್ನಿನಾ ಭಸ್ಮೀಕೃತಾಃ | ಶ್ಮಶಾನಂ ಪ್ರಾಪ್ತಾಃ ಇತ್ಯರ್ಥಃ | ಯೇ ಚ ಪಿತರಃ
ಅನಗ್ನಿದಗ್ಧಾಃ ಶ್ಮಶಾನಕರ್ಮ ನ ಪ್ರಾಪ್ತಾಃ” ಎಂದು ಅರ್ಥೈಸಿದ್ದಾರೆ. ಹೀಗೆ ಈ ಎರಡೂ
ಪ್ರಕಾರದ ಪಿತೃಗಳು ನಾವು ನೀಡುವ ಸ್ವಧಾಕಾರದ ಹವಿಸ್ಸಿನಿಂದ ತೃಪ್ತಿಗೊಳ್ಳಲಿ.
ಪ್ರಕೃತ
ಪರಿಸ್ಥಿತಿಯಲ್ಲಿ ಅಪರ ಸಂಸ್ಕಾರಕುರಿತು ಎರಡು ಮುಖ್ಯ ಪ್ರಶ್ನೆಗಳು
ನಮ್ಮನ್ನು ಕಾಡುತ್ತಿವೆ.
- ಲೊಕ್ ಡೌನ್ ಮತ್ತು ಸೀಲ್ ಡೌನ್ ಆದ ಸಂದರ್ಭದಲ್ಲಿ ಅಪರ ಸಂಸ್ಕಾರಗಳ ಪರಿ ಹೇಗೆ?
- ಅಪರ ಸಂಸ್ಕಾರ ಮಾಡುವ ಅಧಿಕಾರಿಗೇ ಕರೋನಾ ಜ್ವರ ಅಥವಾ ೧೪ ದಿನಗಳ ಸ್ವನಿಯಂತ್ರಣ ವ್ರತವಿದ್ದಾಗ ನಿರ್ವಹಿಸುವುದು ಹೇಗೆ?
ನಮ್ಮ
ಬದುಕಿಗೆ ಶಿಸ್ತು ಬದ್ಧತೆ ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಕಾನೂನು ಕಾಪಿಡುತ್ತದೆ.
ಹಾಗಿರುವಾಗ ಅದನ್ನು ಪಾಲಿಸಬೇಕಾದ್ದು ನಮ್ಮ ಪ್ರಜಾಪ್ರಭುತ್ವದ ರಾಜಧರ್ಮ. ಹೀಗಿರುವಾಗ ಮೊದಲಿನ ಸಮಸ್ಯೆಯನ್ನು ನೋಡಿದರೆ ಅದನ್ನು
ಎರಡು ರೀತಿಯಲ್ಲಿ ನಾವು ಬಗೆಹರಿಸಿ ಕೊಳ್ಳಬಹುದು.
1.
ಮನೆಯಲ್ಲಿ ಅಥವಾ ಸಮೀಪದಲ್ಲಿ ವೈದಿಕ ಅಭ್ಯಾಸಿಗಳಿದ್ದಾಗ ಶಾಂತವಾಗಿ ಯಾವುದೇ ಗೌಜು
ಗಲಾಟೆಗಳಾಗದಂತೆ ದಶಗಾತ್ರವಿಧಿಯನ್ನೂ ಉಳಿದಂತೆ ಸಪಿಂಡಿಕರಣಾಂತವಾಗಿ ಎಲ್ಲ ಸಂಸ್ಕಾರಗಳನ್ನೂ
ನಿರ್ವಹಿಸಲು ತೊಂದರೆಯಿಲ್ಲ. ಇವಿಷ್ಟಕ್ಕೆ ಬಹು ಸಂಖ್ಯೆಯಲ್ಲಿ ವೈದಿಕರೇನೂ ಬೇಕಾಗುವುದಿಲ್ಲ.
2.
ಇನ್ನು ವೈದಿಕರು ದೂರದಿಂದ ಬರಬೇಕಾದಾಗ ಕಾನೂನು ಕ್ರಮವನ್ನನುಸರಿಸಿ, ಈ .....ಡೌನ್-ಗಳು
ಮುಗಿದ ಮೇಲೆ ದಿನಗಳನ್ನು ಎಣಿಸದೇ ಶೀಘ್ರಾತಿಶೀಘ್ರವಾಗಿ ಅಸ್ಥಿಯನ್ನು ಆಶ್ರಯಿಸಿ ಸಂಸ್ಕಾರ
ಮಾಡಬಹುದಾಗಿದೆ.
“ನಾಶಕ್ಯೇ
ಧರ್ಮಚೋದನಾ”
ಅಸಾಧ್ಯವಾದದ್ದನ್ನು ಯಾವತ್ತೂ ನಮ್ಮ ಧರ್ಮಶಾಸ್ತ್ರಗಳು ಹೇಳಿಯೇ ಇಲ್ಲ! ಏಕೆಂದರೆ ಧರ್ಮಾಚರಣೆ
ಸರ್ಕಸ್ ಅಲ್ಲವಲ್ಲ! ಅಧಿಕಾರಿ ಯೋಗ್ಯನಾಗಿರುವಾಗ ಎಲ್ಲ ಸಂಸ್ಕಾರಗಳೂ ಅರ್ಥವತ್ತಾಗಿರುತ್ತವೆ.
ಹೀಗಿರುವಾಗ ಆರೋಗ್ಯ ಮತ್ತು ದೇಹಧರ್ಮವನ್ನು ನಾವು ಪಾಲಿಸಲೇ ಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ
ಎರಡನೇ ಪ್ರಶ್ನೆಗೂ ಎರಡು ರೀತಿ ಪರಿಹಾರವನ್ನು ಕಂಡು ಕೊಳ್ಳಬಹುದು.
1.
ಒಂದು ವೇಳೆ ಹನ್ನೊಂದನೆಯ ದಿನಕ್ಕೆ ಮುಖ್ಯ ಕರ್ತನು ಸ್ವನಿಯಂತ್ರಣದಿಂದ ಅಥವಾ
ಪ್ರಾಪ್ತ ಜ್ವರಬಾಧೆಯಿಂದ ಹೊರಬರುವುದು ಖಚಿತವಾಗಿದ್ದರೆ, “ಕಾಮ್ಯೇ ಪ್ರತಿನಿಧಿರ್ನಾಸ್ತಿ
ನಿತ್ಯನೈಮಿತ್ತಿಕೇ ಹಿ ಸಃ” ಎಂಬ ಮಾಧವೀಯ ವಚನವನ್ನನುಸರಿಸಿ, ದಶಗಾತ್ರವಿಧಿಯನ್ನು ಕುಟುಂಬದ
ಹತ್ತಿರದ ಅಧಿಕಾರಿಗೆ ವಹಿಸುವುದು ತದನಂತರ ಹನ್ನೊಂದನೇ ದಿನದ ಕಾರ್ಯಕ್ರಮಗಳಿಗೆ ತಾನೇ ಭಾಗಿಯಾಗಿ
(ಪಾಥೇಯ ಧಾರಿಯಾಗಿ) ಅಪರಕರ್ಮ ಪೂರೈಸುವುದು.
2.
ಹನ್ನೊಂದು ದಿನಗಳು ಕಳೆದರೂ ಮುಖ್ಯ ಕರ್ತನು ಅನುಪಲಬ್ಧನಾಗಲು, ಅವನು
ಪೂರ್ಣಗುಣಮುಖನಾದ ಮೇಲೆ ಅಸ್ಥಿಯನ್ನು ಆಶ್ರಯಿಸಿ ದಶಗಾತ್ರವಿಧಿಯೇ ಮೊದಲಾದ ಯಾವತ್ತೂ
ಔರ್ಧ್ವದೈಹಿಕಕರ್ಮಗಳನ್ನು ಪೂರೈಸುವುದು.
ಈ
ಸಂದರ್ಭಗಳಲ್ಲಿ ಉಳಿದ ಎಲ್ಲ ಜ್ಞಾತಿಗಳಿಗೂ ೧೧ನೇ ದಿನ ಆಶೌಚದಿಂದ ಶುದ್ಧಿಯನ್ನೂ, ಕರ್ತೃ ಮತ್ತು
ಆತನ ಮನೆಯವರಿಗೆ (ಸ್ವಕೀಯರಾದವರಿಗೆ) ಮತ್ತು ಅವನ ಅನ್ನ ಸೇವಿಸುತ್ತಿರುವವರಿಗೆ ಸಪಿಂಡೀಕರಣಾಂತ
ಕರ್ಮದಿಂದ ಶುದ್ಧಿಯನ್ನೂ ಹೇಳುವುದು ಸಮ್ಮತವಾಗಿದೆಯಲ್ಲವೇ? ಇನ್ನು ಈ ಅಪರ ಸಂಸ್ಕಾರವನ್ನು ಆಯಾ
ಮನೆಯ ಯಾವತ್ತೂ ಗೃಹಸ್ಥ ಅಧಿಕಾರಿಗಳ ಸಹಕಾರವನ್ನು ಪಡೆದು ಅತಿಯಾದ ವೈದಿಕ ಆಡಂಬರಗಳಿಲ್ಲದೇ
ನಿರ್ವಹಿಸುವುದು ಉತ್ತಮವೆನಿಸುತ್ತದೆ.
ಪರಮೇಶ್ವರ
ಪುಟ್ಟನ್ಮನೆ
No comments:
Post a Comment