ಮಾನವನು ಸದಾ ಆನಂದದ ಹುಡುಕುವಿಕೆಯಲ್ಲಿ
ಅಲೆದಾಡುತ್ತಿರುತ್ತಾನೆ. ಈ ಅಲೆದಾಟದಲ್ಲಿ ಮಹರ್ಷಿಗಳಿಂದ ಯಾವ ತತ್ತ್ವವು ಶೋಧಿತವಾಯಿತೋ, ಅದು ಅಚ್ಚರಿದಾಯಕ ಮಾತ್ರವಲ್ಲ; ಶೋಧನೆಯ ವಸ್ತುವೂ ಹೌದು. ಈ ಶೋಧನೆಯಿಂದ
ತಿಳಿದು ಬಂದಿದ್ದು, ಎಲ್ಲ
ಇಂದ್ರಿಯಗಳೂ ಮನೋವಶವಾಗಿವೆ. ಎಲ್ಲಿಯವರೆಗೆ ಮನಸ್ಸು ಸಾಂಸಾರಿಕವಾಗಿರುತ್ತದೆಯೋ, ಅಲ್ಲಿಯವರೆಗೆ ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ
ಮನಸ್ಸನ್ನು ಸಂಸಾರದ ಪಾತಳಿಯಿಂದ ಮೇಲೆತ್ತುವ ಸಾಹಸಕ್ಕೆ ಮಹರ್ಷಿಗಳು ಕೈ ಹಾಕಿದರು. ಈ ಸಾಹಸ
ಕಾರ್ಯ ಕೆಲವೊಮ್ಮೆ 'ದುಃಸ್ಸಾಧ್ಯ!' ಎಂದು ಅನಿಸುವ ಮಟ್ಟಕ್ಕೆ ಹೋಗುವುದೂ ಉಂಟು.
ಇಂಥ ಅನಿಸಿಕೆಗಳಿಂದ ನಮ್ಮನ್ನು ಸ್ಥಿರತೆಗೆ ಒಯ್ಯಲು ಋಷಿಗಳು ಭದ್ರವಾದ ದಾರಿಯನ್ನು ಮಾಡಿದರು. ಆ
ದಾರಿಯಲ್ಲಿ ಎದ್ದು ನಿಲ್ಲುವ ಎರಡು ತಂಗುದಾಣಗಳು ಅಂದರೆ ರಾಮಾಯಣ ಮತ್ತು ಮಹಾಭಾರತಗಳು.
ಆದಿಕವಿ ವಾಲ್ಮೀಕಿ ಒಮ್ಮೆ ನಾರದರನ್ನು
ಕೇಳುತ್ತಾನೆ “ ಈ ಜಗತ್ತಿನಲ್ಲಿ ಧರ್ಮಜ್ಞನೂ ಮತ್ತು ವೀರನೂ ಶೂರನೂ ಆದವನು ಯಾರಿದ್ದಾನೆ?”
ಅವತ್ತಿನಿಂದ ಇವತ್ತಿನವರೆಗೂ ಒಳ್ಳೆಯವರು ಯಾರಿದ್ದಾರಪ್ಪಾ? ಎಂಬ ಹುಡುಕಾಟ ಸಾಮಾನ್ಯವಾಗಿದೆ. ಅಲ್ಲದೇ
ನಮ್ಮ ಸಮಕಾಲೀನ ಪರಿಸ್ಥಿತಿಯಲ್ಲಿ ಒಳ್ಳೆಯವರನ್ನು ಗುರುತಿಸುವುದೂ ತುಂಬಾ ಕಷ್ಟ ಸಾಧ್ಯ! ಇಂಥ
ಕೆಲಸಕ್ಕೆ ನಾಲ್ಕೂ ದಿಕ್ಕುಗಳಲ್ಲಿ ಪ್ರವಾಸ ಮಾಡುವ ಮುನಿಶ್ರೇಷ್ಠರಾದ ನಾರದರೇ ಸರಿ. ಅವರು
ತೋರಿಸಿದ್ದು ಪ್ರಭು ಶ್ರೀರಾಮನನ್ನು! ಆಗ ವಾಲ್ಮೀಕಿ ಮಹರ್ಷಿ ರಾಮನ ಗುಣಗಳಿಗೆ ಪ್ರಭಾವಿತನಾಗಿ
ಅವನ ಗುಣಗಳನ್ನು ಬಿತ್ತರಿಸುವ ಮತ್ತು ಎತ್ತರಿಸುವ ಸಂಕಲ್ಪ ಮಾಡಿದ. ಅದರ ಪರಿಣಾಮವಾಗಿ ರಾಮಾಯಣ
ಮಹಾಕಾವ್ಯ ಅಥವಾ ಆದಿಕಾವ್ಯ ಇವತ್ತು ನಮ್ಮ ಹೆಮ್ಮೆಯ ಕಾವ್ಯವಾಗಿ, ನಮ್ಮ ಗುಣೋತ್ಕರ್ಷಕ್ಕೆ
ಕಾರಣವಾಗಿ, ಸನಾತನ ಸಂಸ್ಕೃತಿಗೆ ಬೆನ್ನೆಲುಬಾಗಿ ನಿಂತಿದೆ.
ಆದಿಕಾವ್ಯ ರಾಮಾಯಣದಲ್ಲಿ ಬ್ರಾಹ್ಮಣರೇ
ಧರ್ಮದ ಹಾದಿತಪ್ಪಿಸಲು, ರಾಮನನ್ನು ಪರೀಕ್ಷಿಸಲು ಪ್ರಯತ್ನ ಮಾಡುತ್ತಾರೆ. ಅದರಲ್ಲಿ (ಈ
ಪರೀಕ್ಷೆಯಲ್ಲಿ) ರಾಮ ತೇರ್ಗಡೆಯಾದದ್ದು ಅವನ ಗುಣರಾಶಿಗೆ ಹಿಡಿದ ಕನ್ನಡಿಯಾಗಿದೆ. ಹಾಗಾದರೆ
ಪ್ರಕೃತದಲ್ಲಿ ಆ ಸಂದರ್ಭವನ್ನೊಮ್ಮೆ ಪರಿಶೀಲಿಸೋಣ. ತಂದೆಯಾದ ದಶರಥನು ತಾಯಿ ಕೈಕೇಯಿಗೆ ಕೊಟ್ಟ
ಮಾತಿನಂತೆ ಭರತನಿಗೆ ಸಿಂಹಾಸನ ಮತ್ತು ರಾಮನಿಗೆ ವನವಾಸ ಎಂಬ ಎರಡು ಅಂಶಗಳನ್ನು ಎತ್ತಿ ಹಿಡಿದು
ರಾಮ ಕಾಡಿಗೆ ಹೋಗುತ್ತಾನೆ. ಇದನ್ನು ಪುನರ್ವಿಮರ್ಶಿಸಲು ಭರತ ಕಾಡಿಗೆ ಬಂದು ಅಣ್ಣನಲ್ಲಿ
ಕೇಳಿಕೊಳ್ಳುತ್ತಾನೆ. ’ಅಣ್ಣ ತಂದೆಯ ಮನಸ್ಸನ್ನು ಅರಿತು, ನಾಡಿನ ಭವಿಷ್ಯವನ್ನು ಗಮನಿಸಿ,
ಅಯೋಧ್ಯೆಯ ಜನರಿಗೆ ನ್ಯಾಯ ಒದಗಿಸಬೇಕು. ನೀನೇ ಅಯೋಧ್ಯೆಯ ನಾಡಿಗೆ ಅಧಿಪತಿಯಾಗಿದ್ದೀಯಾ! ಬಂದು
ರಾಜನಾಗಿ ಪ್ರಜೆಗಳನ್ನು ಪಾಲಿಸಬೇಕು.” ಅದಕ್ಕೆ ಶ್ರೀರಾಮನು “ನೀನು ಅಯೋಧ್ಯೆಯ ರಾಜ್ಯಭಾರವನ್ನು
ನೋಡಿಕೋ, ನಾನು ದಂಡಕಾರಣ್ಯವಾಸಿಯಾಗಿ ವನವಾಸಿಗಳ ಮನಸ್ಸನ್ನು ಗೆಲ್ಲುತ್ತೇನೆ, ಒಟ್ಟಿನಲ್ಲಿ
ಎಲ್ಲೆಡೆಯೂ ಧರ್ಮದ ಆಡಳಿತ ವಿಸ್ತರಿಸಲಿ. ನೀನು ಮರುಕಪಡುವ ಅಗತ್ಯವಿಲ್ಲ!” ಎಂದು ಸಮಾಧಾನವನ್ನು
ಮಾಡುತ್ತಾನೆ.
ಈ ಸಂದರ್ಭದಲ್ಲಿ ಬ್ರಾಹ್ಮಣ ಶ್ರೇಷ್ಠನಾದ ಜಾಬಾಲಿಯು “ತಂದೆ ಯಾರು? ತಾಯಿ ಯಾರು? ಅವರ ಮಾತೇನು? ಇವುಗಳಿಗೆ ಕಟ್ಟಿ ಬಿದ್ದು ಪ್ರಜೆಗಳನ್ನು ಕಾಪಾಡುವ ಮಹತ್ಕಾರ್ಯದಿಂದ ದೂರಾಗುವುದು, ಅದರಲ್ಲೂ ವನವಾಸಕ್ಕೆ ಹೊಂದಿಕೊಳ್ಳುವುದು ಹುಚ್ಚುತನದ ಪರಮಾವಧಿಯಾಗಿದೆ!” ಎಂಬುದಾಗಿ ಹೇಳುತ್ತಾ; ಇಹ - ಪರಗಳಲ್ಲಿ ಇಹವೇ ಪ್ರಧಾನವೆಂದೂ, ಆಡಳಿತ ಮತ್ತು ಅಧಿಕಾರಗಳನ್ನೇ ಜೀವಾಳವೆಂದೂ ಎತ್ತಿ ಹಿಡಿಯುತ್ತಾನೆ. ಇಂಥ ಜಾಬಾಲಿಯನ್ನು ಉದ್ದೇಶಿಸಿ ಶ್ರೀರಾಮ ಹೇಳುತ್ತಾನೆ.
“ನೀವು ನನ್ನನ್ನು ಸಂತೋಷ ಪಡಿಸ ಬೇಕೆಂದು
ಮಾತನಾಡುತ್ತಿದ್ದೀರಿ. ಆದರೆ ಅದು ಹಾಗಲ್ಲ! ತಂದೆ ಕೊಟ್ಟ ಭಾಷೆ ನನಗೆ ಗೊತ್ತು, ತಾಯಿ ಕೇಳಿದ
ವರಗಳು ನನಗೆ ಸ್ಪಷ್ಟವಾಗಿವೆ. ಹೀಗಿರುವಾಗ ನಾನು ಅಧಿಕಾರಕ್ಕೆ ಓ ಗೊಟ್ಟರೆ, ರಾಜ್ಯಕ್ಕೆ ಕಟ್ಟು
ಬಿದ್ದರೆ ಅದು ಸತ್ಯಮಾರ್ಗವಲ್ಲ! ಸತ್ಯ ಮತ್ತು ದಯೆಗಳೇ ರಾಜನ ನಿಜವಾದ ಗುಣಗಳು. ಅದನ್ನೇ ನಾನು ಮರೆತರೆ
ಸನಾತನ ಧರ್ಮವನ್ನು ಪಾಲಿಸಿದ ಹಾಗಾಗುವುದಿಲ್ಲ!”
ಋಷಯಶ್ಚೈವ ದೇವಾಶ್ಚ
ಸತ್ಯಮೇವ ಹಿ ಮೇನಿರೇ |
ಸತ್ಯವಾದೀ ಹಿ ಲೋಕೇಽಸ್ಮಿನ್ಪರಂ ಗಚ್ಛತಿ
ಚಾಕ್ಷಯಮ್ || ಋಷಿಗಳು ಮತ್ತು
ದೇವತೆಗಳು ಕೂಡ ಇಹದಲ್ಲಿ ಸತ್ಯವನ್ನೇ ಶ್ರೇಷ್ಠವೆಂದು ಎತ್ತಿ ಹಿಡಿದಿದ್ದಾರೆ. ಇನ್ನು ಪರದಲ್ಲಿ
ಸತ್ಯವಾದಿಗಳಿಗೆ ಅಕ್ಷಯವಾದ ಸುಖವನ್ನೂ ಕೊಂಡಾಡಿದ್ದಾರೆ. ಮನುಷ್ಯರಲ್ಲೂ ಸುಳ್ಳಿನ ಸಹಾಯದಿಂದ
ಬದುಕುವವನನ್ನು ಹಾವಿನಂತೆ ಜನ ದೂರವಿಡುತ್ತಾರೆ. ಸುಳ್ಳುಗಾರನಿಗೆ ಇಲ್ಲಿ ಕಿಂಚಿತ್ತೂ
ಬೆಲೆಯಿಲ್ಲ. ಅಲ್ಲದೇ ಆತನಿಂದ ಜನ ಹೆದರುತ್ತಾರೆ, ಅದೇ ಸತ್ಯದಲ್ಲಿರುವವನಿಗೆ ಧಾರ್ಮಿಕನೆಂದು ಜನ
ಪ್ರೀತಿಸುತ್ತಾರೆ. ಅವನ ಸಮೀಪಕ್ಕೆ ಬಂದು ಅವನಿಗೆ ಸಹಾಯ ಹಸ್ತವನ್ನು ನೀಡುತ್ತಾರೆ.
ಉದ್ವಿಜಂತೇ ಯಥಾ ಸರ್ಪಾನ್ನರಾದನೃತವಾದಿನಃ |
ಧರ್ಮಃ ಸತ್ಯಂ ಪರೋ ಲೋಕೇ ಮೂಲಂ ಸ್ವರ್ಗಸ್ಯ
ಚೋಚ್ಯತೇ ||
ಶ್ರೀರಾಮಚಂದ್ರನ ಈ ಮಾತು ಇಂದಿಗೂ ಅಕ್ಷರಶಃ ಸತ್ಯವಾಗಿದೆ. ಅಂದಿನ
ಸಮಾಜ ಸತ್ಯವಂತರ ಪರವಾಗಿ ನಿಲ್ಲುತ್ತಿತ್ತು, ಎಂಬ ಅಂಶವೂ ಇಲ್ಲಿ ಬೆಳಕಿಗೆ ಬಂದಿದೆ. ಇವತ್ತು
ನಾವು ಸತ್ಯವನ್ನು ಗೌರವಿಸ ಬೇಕೆಂಬ ಸಂದೇಶವೂ ಇದರಲ್ಲಿ ಅಡಗಿದೆ! ಸತ್ಯವೇ ಧರ್ಮ ಮತ್ತು ಸತ್ಯವೇ
ಸ್ವರ್ಗಕ್ಕೆ ಸೋಪಾನ ಎಂದು ಯಾವ ಕಾಲದಿಂದಲೂ ನಮ್ಮಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೂ
ಸುಳ್ಳಿಗೆ ಬಹುಮತ ಇದೆ! ಇದು ಹೇಗೆ?
ನೋಡಿ, ಸತ್ಯದಿಂದ ಇದ್ದವನಿಗೆ ಒಂದು ವೇಳೆ ವಿಶೇಷ ಫಲ
ದೊರೆಯದಿದ್ದರೂ, ತಾನು ಸತ್ಯಮಾರ್ಗದಲ್ಲಿ ಸಾಗಿದ ಹೆಮ್ಮೆ ಮತ್ತು ವಿಶ್ವಾಸ ಅವನನ್ನು ಕಳೆಗುಂದದೆ
ಇರಲು ಸಹಾಯ ಮಾಡುತ್ತದೆ. ಸತ್ಯ ಆತನ ಪಾಲಿನ ಬಾಳಿಗೆ ಬೆಳಕಾಗಿಯೂ, ಬಲವಾಗಿಯೂ ಪರಿಣಮಿಸುತ್ತದೆ.
ಅದೇ ಸುಳ್ಳಿನ ಮಾರ್ಗದಿಂದ ವಿಶೇಷ ಪ್ರಾಪ್ತಿಯುಂಟಾದರೂ, ಒಳಗಿನ ಸಾಕ್ಷ್ಯ (ಅಂತಃ ಸಾಕ್ಷ್ಯ) ಇದು
ಸುಳ್ಳಿನ ತಳಹದಿಯದ್ದು ಎಂಬುದಾಗಿ ಕೊರಗನ್ನು ಕೂಡಿಕೊಂಡು ಹೊರಗಿನ ಮತ್ತು ಒಳಗಿನ ಬದುಕನ್ನು ನಾಶಮಾಡುತ್ತದೆ.
ಒಂದು ವೇಳೆ ಸುಳ್ಳು ತನಗೂ ತಮ್ಮವರಿಗೂ ಪ್ರಿಯವಾಗಿದ್ದರೂ; ಅದನ್ನು ಹೇಳಬಾರದು! ಎಂದು
ಮನುಧರ್ಮಶಾಸ್ತ್ರ ನಮ್ಮನ್ನು ಎಚ್ಚರಿಸಿದೆ. ’ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮಃ ಸನಾತನಃ’
| ಹೀಗೆ ಸುಳ್ಳನ್ನು ಬಲವಾಗಿ ನಿಂದಿಸಿದ ನಮ್ಮ ಧರ್ಮಶಾಸ್ತ್ರ, ಒಂದು ಸಮಾಜವೇ ನಾಶ
ಹೊಂದುತ್ತದೆ ಎಂಬ ಸಂದರ್ಭ ಒದಗಿ ಬಂದರೆ ಅಲ್ಲಿ ಸುಳ್ಳು ಹೇಳಿದರೆ ತಪ್ಪಿಲ್ಲ! ಎಂದು ಅಪವಾದ
ಶಾಸ್ತ್ರವನ್ನೂ ಹೇಳಿದೆ. ’ವರ್ಣಿನಾಂ ಹಿ ವಧೋ ಯತ್ರ ತತ್ರ ಸಾಕ್ಷ್ಯನೃತಂ ವದೇತ್ ’|
ಇಷ್ಟಕ್ಕೂ ಸುಳ್ಳು ಹೇಳುವ ಅಥವಾ ಸುಳ್ಳು ಮಾಡುವ ಅನಿವಾರ್ಯತೆ
ಬಾಳಿಗನಿಗೆ ಏಕೆ ಬರುತ್ತದೆ? ಎಂದರೆ ಉತ್ತರ ಒಂದೇ - ಅದು ಸ್ವಾರ್ಥ! ಇಲ್ಲ ನಾನು
ಪರಾರ್ಥಕ್ಕೂ ಸುಳ್ಳು ಹೇಳುವ ಸನ್ನಿವೇಶ ಬಂದಿದೆ! ಎಂದರೆ ಅದರ ಕುರಿತು ನಮ್ಮ ಹಿರಿಯರು ಗಮನಿಸಿ
ಹೇಳಿದ್ದಾರೆ.
ಪಂಚ
ಕನ್ಯಾನೃತೇ ಹಂತಿ ದಶ ಹಂತಿ ಗವಾನೃತೇ |
ಶತಮಶ್ವಾನೃತೇ
ಹಂತಿ ಸಹಸ್ರಂ ಪುರುಷಾನೃತೇ ||
ಸಾವಿರ
ಸುಳ್ಳನ್ನು ಹೇಳಿಯಾದರೂ ಮದುವೆ ಮಾಡು ಎಂದು ಗಾದೆ ಹೇಳುತ್ತದೆ. ಇಲ್ಲಿ ಬದುಕನ್ನು
ಕಟ್ಟಿ ಕೊಡುವುದು ಅತೀ ಮುಖ್ಯವಾಗಿದೆ! ಎಂಬುದು ಸ್ಪಷ್ಟ. ಆದರೂ ಹೇಳಿದರು - ನಿನ್ನ ಮಗಳ ಬಗ್ಗೆ
ಆಡಿದ ಸುಳ್ಳು ನಿನ್ನ ವ್ಯಕ್ತಿತ್ವದ ಐದು ಅಂಕಗಳನ್ನು ನಾಳೆ ನುಂಗಿ ಹಾಕುತ್ತದೆ. ಅದೇ ನಿನ್ನ
ಮನೆಯ ಬಗ್ಗೆ ಆಡಿದ ಸುಳ್ಳು ನಿನ್ನ ಬದುಕಿನ ಹತ್ತು ಅಂಕಗಳನ್ನು ನಾಶಮಾಡುತ್ತದೆ. ರಾಜ್ಯದ ಮತ್ತು
ರಕ್ಷಣೆಯ ವಿಷಯದಲ್ಲಿ ಆಡಿದ ಸುಳ್ಳು ನಿನ್ನ ನೂರು ಗುಣಗಳನ್ನೂ ತಿಂದು ಹಾಕುತ್ತದೆ. ಮನುಷ್ಯರಿಗೆ (ಮನುಷ್ಯತ್ವಕ್ಕೆ) ಮಾಡಿದ ಸುಳ್ಳು
ಸಾವಿರ ಸಂಖ್ಯೆಯಲ್ಲಿ ತಿರುಗಿ ಅವನತಿಯನ್ನುಂಟು ಮಾಡುತ್ತದೆ.
ಒಟ್ಟಿನಲ್ಲಿ
ಸುಳ್ಳು ಒಳ್ಳೆಯದಲ್ಲ! ಇದನ್ನು ಬಿಡಬೇಕೆಂಬ ಮನುಷ್ಯನ ಪ್ರಯತ್ನ ಇಂದು ನಿನ್ನೆಯದಲ್ಲ! ರಾಮಾಯಣ
ಕಾಲದಿಂದಲೂ ಇದು ಮಾನವನ ಪ್ರಯತ್ನಕೋಟಿಯಲ್ಲೇ ವಿರಾಜಮಾನವಾಗಿದೆ. ಒಂದಂತೂ ಸತ್ಯ - ಬಿಡಲಾಗದ
ಸುಳ್ಳು ಬೆಂಬಿಡದೆ ಕಾಡುತ್ತದೆ. ಬಯಲಾದರೂ ಸತ್ಯ ತಂಪನ್ನು ಕೊಡುತ್ತದೆ. ಸುಖ-ದುಃಖಗಳ
ಆಚೆಗಿನ ಆನಂದಕ್ಕೆ ಸತ್ಯವೇ ಭದ್ರ ಬುನಾದಿ.
ಪರಮೇಶ್ವರ ಪುಟ್ಟನ್ಮನೆ
No comments:
Post a Comment