ಜೀವ-ನ ಬದುಕಿಗೆ
ದಾರಿ ನೂರೆಂಟು. ಅವುಗಳಲ್ಲಿ ಹೆದ್ದಾರಿಗಳನ್ನು ಎರಡು ತೆರನಾಗಿ ಗುರುತಿಸುತ್ತಾರೆ. ದೇವರಿಗೆ ಅಭಿಮುಖವಾಗಿ
ಬದುಕುವುದು ಒಂದು. ದೇವರಿಗೆ ಬೆನ್ನುಮಾಡಿ ಬದುಕುವುದು ಇನ್ನೊಂದು. ಇವೆರಡಕ್ಕೂ ದೇವರೇ
ಕೇಂದ್ರವಾದದ್ದು ಸೋಜಿಗ! ಹಾಗಾಗಿ `ಜೀವ’ನ ಕೇಂದ್ರವಾದ ದೇವನ ಉಪಾಸನೆ ಮಾನವನಿಗೆ
ಅನಿವಾರ್ಯ. ಅದನ್ನೇ ದೇವತಾರ್ಚನೆ,
ದೇವವಂದನೆ, ದೇವತಾರಾಧನೆ, ದೇವಪೂಜೆ ಎಂಬುದಾಗಿ ಕರೆದಿದ್ದಾರೆ. ಪೂಜೆಗೆ ಅತೀಮುಖ್ಯವಾಗಿ ಬೇಕಾಗಿರುವವು
ಪೂಜ್ಯ ಮತ್ತು ಪೂಜಕರು. ಈ ಕಾರಣಕ್ಕಾಗಿಯೇ ತಂತ್ರ ಸಮುಚ್ಚಯವೆಂಬ ಆಗಮ ಗ್ರಂಥ ದೇವಾಲಯ ಮತ್ತು
ದೇವತಾ ಪ್ರತಿಷ್ಠೆಗಳನ್ನು ಮೊದಲು ಹೇಳಿ, ಆಮೇಲೆ ಅಥಾಖಿಲೇಶಾರ್ಚನಮುಚ್ಯತೇಽಧುನಾ ಎಂದು ಪೂಜಾ ಪಟಲವನ್ನು ಆರಂಭಿಸುತ್ತದೆ.
ಪ್ರತಿಯೊಬ್ಬನೂ
ನಿರ್ಗುಣ ಬ್ರಹ್ಮನಿಂದ ಬೇರೆ ಬೇರೆಯದೇ ಆದ ವಿಶಿಷ್ಟಗುಣಗಳನ್ನು ಪ್ರತಿಫಲಿಸುತ್ತಿರುತ್ತಾನೆ. ಆದ ಕಾರಣ ಪ್ರತಿಯೊಬ್ಬನಿಗೂ ಪರಬ್ರಹ್ಮನೊಂದಿಗೆ ಸಂಪರ್ಕ ಬೆಳೆಸಲು 'ತಮ್ಮ ಗುಣಗಳಿಗೆ
ಹತ್ತಿರವಾದ ದೈವೀಶಕ್ತಿ' ಪೂರಕವಾಗಿ ಕೆಲಸ
ಮಾಡುತ್ತಿರುತ್ತದೆ. ಅದಕ್ಕೆಂದೇ ಆಗಮಗಳು ನೂರಾರು ವಿಭಿನ್ನ ಗುಣಗಳ ದೇವತೆಗಳನ್ನು ಪ್ರಕಲ್ಪಿಸಿವೆ. ನಿರ್ಗುಣನೂ ನಿರಾಕಾರನೂ ಆದ ಪರಮಾತ್ಮನನ್ನು
ಧ್ಯಾನಿಸಲು ಅಥವಾ ಉಪಾಸನೆ ಮಾಡಲು, ನಿರ್ವಿಕಾರ ಭಾವನೆ ಅತ್ಯಗತ್ಯ. ಮನಸ್ಸಿನ ಸಮಾಹಿತ ಸ್ಥಿತಿಯಿಲ್ಲದೇ ನಿರಾಕಾರನನ್ನು ಉಪಾಸನೆಮಾಡುವುದು
ಕಷ್ಟ! ಚಿತ್ತೈಕಾಗ್ರತೆ ಇಲ್ಲದ ಮನಸ್ಸು ಉಪಾಸನೆಯಲ್ಲೂ ನೆಲೆ ಕಾಣಲಾರದು.
ಅದಕ್ಕೆಂದೇ ಪ್ರಾಜ್ಞರು ಉಪಾಸನೆಗೆ ಮನಸ್ಸುನ್ನು ಕೇಂದ್ರಗೊಳಿಸಲು ಧ್ಯೇಯನಾದ ಭಗವಂತನಿಗೆ
ವಿಗ್ರಹಗಳನ್ನು ಮಾಡಿದ್ದಾರೆ. ಶಬ್ದವೇ ಹೇಳುವಂತೆ
ಅಮೂರ್ತನಾದ ಭಗವಂತನನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕಾರಿಯಾದದ್ದೇ ಈ ವಿ-ಗ್ರಹ. ಇದು
ಭಗವಂತನ ಮಹಿಮೆ, ಭಗವಂತನಿಗೆ ಮಾಧ್ಯಮ, ಭಗವಂತನ ಮೂರ್ತಿ, ಭಗವದ್ವಸ್ತು, ಧ್ಯೇಯ ವಸ್ತು ... ಅಷ್ಟೇ
ಏಕೆ? ಇದು ನಮ್ಮ ಭಾವ ಕೇಂದ್ರವೇ ಆಗಿದೆ. ಆದ್ದರಿಂದಲೇ ವಿಗ್ರಹಗಳಿಗೆ, ಪ್ರತಿಮೆಗಳಿಗೆ
ನಿರ್ದಿಷ್ಟವಾದ ಮತ್ತು ನಿರ್ದುಷ್ಟವಾದ ಪವಿತ್ರ ಉದ್ದೇಶಗಳಿವೆ.
ಮಂಡಲೇ ಕರ್ಮಣಾಂ
ಸಾಕ್ಷೀ ಕಲಶೇ ಯಜ್ಞರಕ್ಷಕಃ |
ಹೋಮಾಧಿಕರಣಂ
ವಹ್ನೌ ಶಿಷ್ಯೇ ಪಾಶವಿಮೋಚಕಃ ||
ಸ್ವಾತ್ಮನ್ಯನುಗೃಹೀತೇತಿ ಪಂಚಾಧಾರೋಽಯಮೀಶ್ವರಃ ||
ಎಂದು ಸೋಮಶಂಭುಪದ್ಧತಿಯೆಂಬ ಆಗಮ ಗ್ರಂಥ ಸಾರಿ ಹೇಳಿದೆ. [ದೇವನು ಈ ಐದು ಮನೆಗಳಲ್ಲಿ ಐದು ಉದ್ದೇಶದೊಂದಿಗೆ
ಇರಬಲ್ಲನು! ಮಂಡಲದಲ್ಲಿ ಸಾಕ್ಷಿಯಾಗಿಯೂ, ಕಲಶದಲ್ಲಿ ರಕ್ಷಕನಾಗಿಯೂ, ಅಗ್ನಿಯಲ್ಲಿ ಕರ್ಮದ
ಬೆನ್ನೆಲುಬಾಗಿಯೂ, ತನ್ನೊಳಗೆ ಅನುಗ್ರಹಕಾರಕನಾಗಿಯೂ, ಉಳಿದಂತೆ ಶಾಸ್ತ್ರ ತಿಳಿಸಿದ ಹಾಗೆ - ಪಂಚ
ಭೂತಗಳಲ್ಲಿ, ಮರ ಗಿಡಗಳಲ್ಲಿ, ನದೀ ನದಗಳಲ್ಲಿ, ಪವಿತ್ರ ಕ್ಷೇತ್ರಗಳಲ್ಲಿ ಮೋಹ, ಆಲಸ್ಯ,
ವಿಘ್ನಗಳೆಂಬ ಪಾಶಗಳನ್ನು ಹೋಗಲಾಡಿಸುವವನಾಗಿಯೂ... ಆಗಿರುತ್ತಾನೆ.]
ಧ್ಯಾನಕ್ಕೆ ವಸ್ತುವಾಗುವ ವಿಗ್ರಹಗಳು ಉಪಾಸಕನ ಅಂತರಂಗದ
ತಿಳಿವನ್ನು ಪ್ರತಿನಿಧಿಸುವುದರ ಜೊತೆಗೆ ಜಗದ್ವ್ಯಾಪಿಯಾದ ಪರಮಾತ್ಮನನ್ನೂ ಅರ್ಥೈಸುವಲ್ಲಿ ಸಮರ್ಥ
ಸಂಕೇತವಾಗಬೇಕು. ಪ್ರತಿಯೊಬ್ಬ ಮಾನವನ ಹೃತ್ಕಮಲವನ್ನು ಅರಳಿಸುವಂತೆಯೂ, ಒಳ್ಳೆಯ ನೆನಪಿನ ಪರಿಮಳವನ್ನು
ಸೂಸುವಂತೆಯೂ, ಮಾಡುವ ದೈವಿಕ ಹಿನ್ನೆಲೆ ಈ ವಿಗ್ರಹಕ್ಕೆ ಇರಲೇ ಬೇಕು. ಏಕೆಂದರೆ ವಿಗ್ರಹ ಧ್ಯಾನ
ಕೇಂದ್ರ ತಾನೆ? ಪ್ರತೀಕೋಪಾಸನೆಯಲ್ಲಿ ಮೂರ್ತಿಯ
ವಿಶೇಷಗಳನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅದರಲ್ಲಿ ಲೀನವಾಗುವುದೇ ಧ್ಯಾನ.
ಧ್ಯಾನದಲ್ಲಿ ದೇವತಾಸ್ತುತಿಯು ತೈಲಧಾರೆಯಂತೆ ಒಂದೇ ಸಮನೆ ಹರಿಯುತ್ತಿರಬೇಕು. ಉಪಾಸಕನ ಮೊದಲ
ಹೆಜ್ಜೆ ಮತ್ತು ಉಪಾಸನೆಯ ಪ್ರಥಮ ಉಪಚಾರವೂ ಧ್ಯಾನವೇ ಆಗಿದೆ. ಉದಾಹರಣೆಗೆ
ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್ |
ಪಾಶಾಂಕುಶಧರಂ ದೇವಂ ಧ್ಯಾಯೇತ್ಸಿದ್ಧಿವಿನಾಯಕಮ್ ||
ಗಣೇಶ ಚೌತಿಯಲ್ಲಿ ಆರಾಧ್ಯನಾದ ಭಗವಂತ ಶ್ರೀಸಿದ್ಧಿವಿನಾಯಕನ
ಧ್ಯಾನ ವ್ರತರಾಜ ಗ್ರಂಥದಲ್ಲಿ ಹೀಗಿದೆ. ಒಂದು ಹಲ್ಲಿನ, ಮೊರದ ಕಿವಿಗಳ ಆನೆ ಮೊಗದವಗೆ ನಾಲ್ಕು
ಕೈಗಳಿವೆ. ಅವುಗಳಲ್ಲಿ ಪಾಶ, ಅಂಕುಶ ಪಿಡಿದ ಶ್ರೀ ಸಿದ್ಧಿವಿನಾಯಕನು ನಮಗೆ ಧ್ಯೇಯನಾಗಿಹನು. ಮೇಲಿನ ಬಲಗೈಯ್ಯಲ್ಲಿ ಪಾಶವನ್ನೂ, ಎಡಗೈಯ್ಯಲ್ಲಿ
ಅಂಕುಶವನ್ನೂ ಕೆಳಗಿನ ಬಲಗೈಯ್ಯಲ್ಲಿ ವರಪ್ರದನಾಗಿಯೂ, ಎಡಗೈಯ್ಯಲ್ಲಿ ಮುರಿದ ತನ್ನ ಎಡದಂತದ ಚೂರನ್ನು
ಹಿಡಿದ್ವನಾಗಿಯೂ, ಇಲಿಯ ಧ್ವಜದೊಂದಿಗೆ ಭಕ್ತರಿಗೆ ಕಾಣಿಸಿ ಕೊಂಡಿದ್ದಾನೆಂದು ಉಪನಿಷತ್ತಿನ
ಋಷಿಗಳು ಇನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಏಕದಂತಂ ಚತುರ್ಹಸ್ತಂ ಪಾಶಮಂಕುಶ ಧಾರಿಣಮ್ |
ರದಂ ಚ ವರದಂ ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್ ||
ಹೀಗೆ ಇಷ್ಟು ಸ್ಪಷ್ಟವಾಗಿ ನಮ್ಮ ಋಷಿಗಳು ಹೇಳಿದರೂ,
ಇವತ್ತು ನಾನಾ ವ್ಯಂಗ್ಯಗಳಿಂದ ಕೂಡಿದ ಗಣಪತಿಯ ಕಲಾ ಮೂರ್ತಿಗಳನ್ನು ನಾವು ನೋಡುತ್ತಿದ್ದೇವೆ! ಇವು
ಸರ್ವಥಾ ಸರಿಯಲ್ಲ! {ಕಲೆಯಾಗಿ ಪ್ರದರ್ಶನಕ್ಕೆ ಸರಿಯೆನಿಸಿದರೂ, ಧಾರ್ಮಿಕ ಆಚರಣೆಯ
ದೃಷ್ಟಿಯಲ್ಲಿ, ವ್ರತ ನಿಯಮಗಳಿಗೆ ಒಪ್ಪಿತವಾದ ಧ್ಯೇಯ ಮೂರ್ತಿಯಾಗಿ ಇದು ಸರಿಯಲ್ಲ!} ನಟರೋ,
ಆಟಗಾರರೋ, ಇನ್ನಾರೋ... ನಮಗಿಂದು ಆದರ್ಶವಾಗಿ ನಮ್ಮ ಪರಮ ಧ್ಯೇಯನಾದ ಶ್ರೀ ಸಿದ್ಧಿವಿನಾಯಕನನ್ನೇ
ನಾವು ವಿರೂಪಗೊಳಿಸಿದ್ದೇವೆ. ಇದರಿಂದ ಧ್ಯೇಯಭಂಗ ಎಂಬ ದೋಷ ನಮ್ಮ ಸಮಕಾಲದಲ್ಲಿ ಸಂಭವಿಸುತ್ತಿದೆ.
ನಮ್ಮ ಹಿರಿಯರು ನಮಗೆ (ಆಗ ಕಿರಿಯರಾದ ನಮಗೆ) ಆದರ್ಶಗಳನ್ನು ವೇದ, ವೇದಾಂಗಗಳ ರೂಪದಲ್ಲಿ, ಪುರಾಣ
ಕಥೆಗಳ ನಿಟ್ಟಿನಲ್ಲಿ, ರಾಮಾಯಣ ಮಹಾಭಾರತಗಳಂಥ ಇತಿಹಾಸಗಳ ಸ್ಮರಣಿಕೆಗಳಲ್ಲಿ ಮತ್ತು ವ್ರತ-ನಿಯಮಗಳ
ಆಚರಣೆಯ ತಳಹದಿಯಲ್ಲಿ ಸರಿಯಾಗಿಯೇ ಉಳಿಸಿ, ಬೆಳೆಸಿ ಕೊಟ್ಟಿದ್ದಾರೆ. ಅದನ್ನು ಮುಂದುವರಿಸಲು
(ಮುಂದಿನ ಮಕ್ಕಳಿಗೆ ವರ್ಗಾಯಿಸಲು) ನಾವು ಎಡವಿದ್ದೇವೆಂಬುದು ಅತ್ಯಂತ ಖೇದಕರ ಅಂಶವಾಗಿದೆ. ಇರಲಿ ಪ್ರಕೃತ ದೇವಪೂಜೆಯ ಉದ್ದೇಶಗಳನ್ನು ನೋಡೋಣ.
ದೇವಪೂಜೆಯನ್ನು ದುರಿತಕ್ಷಯಕ್ಕಾಗಿಯೂ, ಪುಣ್ಯಸಂಚಯನಕ್ಕಾಗಿಯೂ ಮಾಡುತ್ತಾರೆ. ದೇವತೆಗಳು ಕೊಡುವವರು, ಬೇಡುವವರು ನಾವು. ಬೇಡುವ ರೀತಿಯನ್ನೇ ಉಪಾಸನೆ ಎಂಬುದಾಗಿ ಋಷಿಗಳು ಕ್ರಮಗೊಳಿಸಿರುವರು. ಮನೆಯಲ್ಲಿ ಮಾಡುವ ಪೂಜೆ ಸ್ವಹಿತಕ್ಕೆ ಕಾರಣವಾಗಿರುವುದು. ಇದರಲ್ಲಿ ತನ್ನ ಮತ್ತು ತನ್ನವರ ಕ್ಷೇಮ, ಸ್ಥೈರ್ಯ, ಜಯ, ಆಯುರಾರೋಗ್ಯಗಳು ಸೇರಿಕೊಂಡಿವೆ. ಊರಿನಲ್ಲಿ ಮತ್ತು ಗುಡಿಗಳಲ್ಲಿ ಮಾಡುವ ಪೂಜೆಯು ಪರಾರ್ಥ ವಾಗಿರುವುದು. ಇವು ಊರಿನವರ ಮತ್ತು ಒಡೆಯರ ಪೀಡಾ ಪರಿಹಾರವಾಗಿಯೂ, ಗ್ರಾಮಕ್ಕೆ ಬಂದಿರುವ ಮತ್ತು ಒದಗಬಹುದಾದ ಆಪತ್ತು, ಆತಂಕಗಳ ನಿವಾರಣೆಗಾಗಿಯೂ, ಲೋಕಕಲ್ಯಾಣಕ್ಕೆ ಒತ್ತುನೀಡುವ ರೀತಿಯಲ್ಲಿಯೂ ಇರುತ್ತವೆ. ಒಟ್ಟರ್ಥದಲ್ಲಿ ಆತ್ಮಾರ್ಥವಾಗಿಯೂ ಪರಾರ್ಥವಾಗಿಯೂ ಸಾರ್ಥಕವೆನಿಸಿದ ಪೂಜೆಯನ್ನು ಕೈಗೊಳ್ಳುವಾಗ ಪೂಜಕನ ಮನಸ್ಸು “ದೇವಾ! ನಾನು ನಿನ್ನ ದಾಸ!” ಎನ್ನುವ ದ್ವೈತ ಭಾವನೆಯಿಂದಲೂ; “ನಾನು ಅದು!” ಎಂಬ ವಿಶಿಷ್ಟಾದ್ವೈತ ಭಾವನೆಯಿಂದಲೂ; ಇನ್ನು ಮೂರನೆಯ ಹಂತವಾದ “ನಾನು ನೀನು ಬೇರೆಯಲ್ಲವೆಂಬುದಾಗಿ” ಅದ್ವೈತ ಭಾವನೆಯಿಂದಲೂ ತುಂಬಿಕೊಂಡಿರುತ್ತದೆ. ಇವು ಮೂರೂ ಭಾವಗಳೂ ದೇವತಾರ್ಚನೆಯ ಫಲವಾಗಿವೆ. ಹಾಗೆಂದೇ ಶಂಕರರು ’’ಚಿತ್ತಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ” ಎಂದು ಘಂಟಾಘೋಷವಾಗಿ ಕಟುವಾಸ್ತವವನ್ನು ಎತ್ತಿ ಹಿಡಿದಿದ್ದಾರೆ.
ವಾಸ್ತವವಾಗಿ ಎಲ್ಲ ಇಂದ್ರಿಯಗಳೂ
ಮನೋವಶವಾಗಿವೆ. ಎಲ್ಲಿಯವರೆಗೆ ಮನವು ಸಾಂಸಾರಿಕವಾಗಿರುತ್ತದೆಯೋ; ಅಲ್ಲಿಯವರೆಗೆ
ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ ಮನಸ್ಸನ್ನು ಸಂಸಾರ
ಪಾತಳಿಯಿಂದ ಮೇಲೆತ್ತುವ ಸಾಹಸವೇ ಅರ್ಚನೆ! ಅದನ್ನು “ಅನುಶಾಸನ ಬದ್ಧರಾಗಿ
ಪ್ರೇಮದಿಂದ ಆಚರಿಸಿರಿ...” ಎಂದು ವೇದವೂ ಸಾರಿ ಹೇಳುತ್ತಿದೆ. ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ ||
ಪರಮೇಶ್ವರ ಪುಟ್ಟನಮನೆ
No comments:
Post a Comment