Saturday, January 11, 2025

ಶ್ರೀರಾಮನ ಆದರ್ಶಗುಣಗಳ ವ್ಯಾಪ್ತಿ ಮತ್ತು ಎತ್ತರ

ಬಾಲಕ್ರೀಡನಮಿಂದುಶೇಖರಧನುರ್ಭಂಗಾವಧಿ ಪ್ರಹ್ವತಾ |
ತಾತೇ ಕಾನನಸೇವನಾವಧಿ ದಯಾ ಸುಗ್ರೀವಸಖ್ಯಾವಧಿ ||
ಆಜ್ಞಾ ವಾರಿಧಿಬಂಧನಾವಧಿ ಯಶೋ ಲಂಕೇಶನಾಶಾವಧಿ |
ಶ್ರೀರಾಮಸ್ಯ ಪುನಾತು ಲೋಕವಶತಾ ಜಾನಕ್ಯುಪೇಕ್ಷಾವಧಿ || 

(ಅಜ್ಞಾತ ಕರ್ತೃಕನ ಸಂಸ್ಕೃತ ಸಾಹಿತ್ಯದ ಸಾಲುಗಳು) ||


ಶ್ರೀರಾಮನ ವ್ಯಕ್ತಿತ್ವ, ಯುಗಯುಗಗಳೇ ಕಳೆದರೂ ಯಾರೂ ತಲುಪಲಾರದ ಎತ್ತರವನ್ನು ಹೇಗೆ ತಲುಪಿವೆ? ಎಂಬುದನ್ನು ಕವಿ ಸುಂದರವಾಗಿ ಸೂಕ್ಷ್ಮವಾಗಿ ಸೂಚಿಸಿದ್ದಾನೆ. 
೧) ಬಾಲ್ಯದ ಹುಡುಗಾಟಿಕೆ - ಶಿವ ಧನುಸ್ಸನ್ನು ಮುರಿಯುವವರೆಗೆ...
೨) ಪ್ರೌಢಿಮೆ (ಪ್ರಾಯ ಸಂದರ್ಭ) - ತಂದೆಯ ಮಾತಿಗೆ ರಾಜ್ಯ ಬಿಟ್ಟು, ಕಾಡಿಗೆ ಹೋಗುವವರೆಗೆ...
೩) ಸ್ನೇಹ (ದಯೆ) - ಸುಗ್ರೀವನ ಸಖ್ಯ ಸಂಪಾದಿಸುವವರೆಗೆ...
೪) ಆಜ್ಞೆ (ಕೆಲಸವನ್ನು ಪೂರೈಸಬೇಕೆಂಬ ಹಟ (ಛಲ)) - ಸಮುದ್ರಕ್ಕೆ ಸೇತುವೆ ಕಟ್ಟುವವರೆಗೆ...
೫) ಯಶಸ್ಸು (ಕೀರ್ತಿ) - ಲಂಕಾಧಿಪತಿಯಾದ ದಶಕಂಠನ ಸೆದೆಬಡಿಯುವವರೆಗೆ...
೬) ಜನಾನುರಾಗ (ಪ್ರಜಾ ಪ್ರೇಮ) - ಮಡದಿ ಜಾನಕಿಯನ್ನು ಕಾಡಿಗೆ ಬಿಡುವವರೆಗೆ...
ಹೀಗೆ ಹಲವು ಹತ್ತು ವಿಷಯಗಳಲ್ಲಿ ಆಕಾಶದಷ್ಟು ಎತ್ತರಕ್ಕೆ ತಲುಪಿದ ಶ್ರೀರಾಮನ ಆದರ್ಶಗುಣಗಳು ನಮ್ಮನ್ನು ಕಾಪಾಡಲಿ. 

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾದ ಮೊದಲವರ್ಷದ ಸವಿನೆನಪಿಗೆ ಈ ನುಡಿನಮನಗಳು.  
ವಂದನೆಗಳೊಂದಿಗೆ ಪರಮೇಶ್ವರ ಪುಟ್ಟನಮನೆ



Thursday, January 09, 2025

ಪರಾಶರರ ವಿಚಾರ

ಪರಾಶರರ ವಿಚಾರವನ್ನು ತಳ್ಳಿಹಾಕಿದ್ದಾರಾ!? ಯದ್ಯಪಿ ಕಲಿ ಧರ್ಮವನ್ನೇ ಹೇಳಲು ಉಪಕ್ರಮಿಸಿದ ಪರಾಶರರ ಮಾತನ್ನು ಈ ಸಂಪ್ರದಾಯವಾದಿಗಳು ಗೌರವದಿಂದ ಹೇಗೆ ಅಲ್ಲಗಳೆದಿದ್ದಾರೆ? ಎಂಬುದನ್ನು ಗಮನಿಸಿದರೆ, ಪರಾಶರರ ವಿಚಾರಕ್ಕೆ ಹಿಂದಿನ ಜನರೇ ಅನ್ಯಾಯವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

 

ನಷ್ಟೇ ಮೃತೇ ಪ್ರವ್ರಜಿತೇ

ಕ್ಲೀಬೇ ಚ ಪತಿತೇ ಪತೌ |

ಪಂಚಸ್ವಾಪತ್ಸು ನಾರೀಣಾಂ

ಪತಿರನ್ಯೋ ವಿಧೀಯತೇ ||

 

ಆಪತ್ತಿನ ಸಂದರ್ಭದಲ್ಲಿ ಮಹಿಳೆಗಾದ ಅನ್ಯಾಯವನ್ನು ಸರಿಪಡಿಸುವ ಮಹತ್ತರ ಹೆಜ್ಜೆಯನ್ನಿಟ್ಟ, ದಿಟ್ಟ ಮತ್ತು ಕರುಣಾಳುಗಳಾದ ಪರಾಶರರು ಈ ಐದು ಸಂದರ್ಭಗಳಲ್ಲಿ ಸ್ತ್ರೀಯರಿಗೆ ಪುನರ್ವಿವಾಹವನ್ನು ಪ್ರತಿಪ್ರಸವ ಮಾಡಿರುತ್ತಾರೆ. ಇಂಥ ಸಂದರ್ಭದಲ್ಲಿ ಪುನರ್ವಿವಾಹ ದೋಷವಲ್ಲ! ಎಂಬುದಷ್ಟೇ ಅವರ ವಿಚಾರವಾಗಿದೆ. ಹೊರತು... ಪುನರ್ವಿವಾಹ ಅನಿವಾರ್ಯ ಎಂಬುದಾಗಲೀ, ಅದು ಕಲಿಧರ್ಮ ಎಂಬುದಾಗಲೀ ಅವರ ತಾತ್ಪರ್ಯ ಅಲ್ಲ! ಹೀಗಿರುವಾಗ ಇದನ್ನು ಯುಗಾಂತರ ವಿಷಯ ಎಂದು ತಳ್ಳಿಹಾಕಲು ಕಾರಣವೇನು? ಅಲ್ಲದೇ ಇದನ್ನು ಸಪ್ತಪದ ಕ್ರಮಣಕ್ಕೆ ಮುಂಚಿತವಾಗಿ ಅನುಸರಿಸಬೇಕಾದ್ದು, ತದನಂತರದಲ್ಲಿ ಈ ಮಾತಿಗೆ ಅರ್ಥವಿಲ್ಲ! ಎಂದು ಹೇಳಿ ಸೀಮಿತ ವ್ಯವಸ್ಥೆಗೆ ಅಣಿಗೊಳಿಸಲು ಕಾರಣವೇನು? ಎಂಬುದು ಅರ್ಥವಾಗುತ್ತಿಲ್ಲ! ಹಾಗಂತ ಧರ್ಮಶಾಸ್ತ್ರ ನಿಬಂಧಕಾರರೂ ಕೂಡ ಸಂಪ್ರದಾಯ ಪ್ರವರ್ತಕರೂ, ಜನಾನುರಾಗಿಗಳೂ, ಧರ್ಮ ಮಾರ್ಗ ಪೋಷಕರೂ, ಕರುಣಾಳುಗಳೂ ಆಗಿದ್ದಾರೆ. ಹೀಗಿರುವಾಗ ಋಷಿವಚನಕ್ಕೂ ಋಷಿಸದೃಶರ (ಸಂಪ್ರದಾಯ ವಾದಿಗಳ, ನಿಬಂಧ ಕಾರರ) ವಚನಕ್ಕೂ ವಿರೋಧ ಬಂದಾಗ ಯಾವುದು ಗ್ರಾಹ್ಯ? ಎಂಬುದನ್ನು ಪ್ರಸ್ತುತ ನಾವು ವಿಮರ್ಶಿಸಬೇಕಾಗಿದೆ...