ದಯಾ ಕ್ಷಮಾನಸೂಯಾ ಚ
ಶೌಚಾನಾಯಾಸಮಂಗಲಮ್ |
ಅಕಾರ್ಪಣ್ಯಮಸ್ಪೃಹತ್ವಂ
ಸರ್ವಸಾಧಾರಣಾನಿ ಚ ||
1.
ದಯಾ – ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |
ವರ್ತತೇ ಸತತಂ ಹೃಷ್ಟಃ ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ ||
ತನ್ನಂತೆ ಎಲ್ಲರ ಹಿತವನ್ನೂ, ಶುಭವನ್ನೂ ಬಯಸುವವನಾಗಿದ್ದು, ಸದಾ ಸಂತುಷ್ಟನಾಗಿರುವ ಗುಣವಂತನೇ ದಯಾವಂತನಾಗಿದ್ದಾನೆ.
2.
ಕ್ಷಮಾ – ಆಕೃಷ್ಟೋಭಿಹತೋ ವಾಪಿ ನ ಕ್ರೋಶೇನ್ನ ಚ ತಾಡಯೇತ್ |
ಅದುಷ್ಟೋ ವಾಙ್ಮನಃ ಕಾಯೈಃ ಸಾ ತಿತಿಕ್ಷಾ ಕ್ಷಮಾ ಸ್ಮೃತಾ ||
ತನಗೆ ಪೆಟ್ಟು ಕೊಟ್ಟರೂ, ತನ್ನ ಕಷ್ಟಗಳಿಗೆ ಆತನೇ ಕಾರಣವೆಂಬುದು ತಿಳಿದರೂ, ಆತನ ಬಗ್ಗೆ ಮಾತಿನಿಂದ ಮತ್ತು ಶರೀರದಿಂದ ಹಿಂಸೆ ಕೊಡದೇ ಅದನ್ನು ನುಂಗಿ ಕೊಂಡು, ಪ್ರತಿಕ್ರಿಯಾ ಶೂನ್ಯನಾಗಿ ಬದುಕುವ ಸಹನಾ ಮೂರ್ತಿಯೇ ಕ್ಷಮಾವಂತನೆನಿಸುತ್ತಾನೆ.
3.
ಅನಸೂಯಾ – ಯೋ ಧರ್ಮಮರ್ಥಂ ಕಾಮಂ ಚ ಲಭತೇ ಮೋಕ್ಷಮೇವ ಚ |
ನ ದ್ವಿಷ್ಯಾತ್ತಂ ಸದಾ ಪ್ರಾಜ್ಞಃ ಸಾನಸೂಯಾ ಸ್ಮೃತಾ ಬುಧೈಃ ||
ಯಾರು ಧರ್ಮಾರ್ಥಕಾಮಮೋಕ್ಷಗಳನ್ನು ಪಡೆಯಲು ಉದ್ಯುಕ್ತರಾಗಿರುತ್ತಾರೋ, ಅವರು ಇನ್ನೊಬ್ಬರ ಪ್ರಯತ್ನವನ್ನು ನಿಂದಿಸಬಾರದು, ಪರರ ಏಳಿಗೆಯನ್ನು ದ್ವೇಷಿಸದೇ ಇರುವ ಗುಣವೇ ಅನಸೂಯಾ.
4.
ಶೌಚಮ್ – ದ್ರವ್ಯಶೌಚಂ ಮನಃ ಶೌಚಂ ವಾಚಿಕಂ ಕಾಯಿಕಂ ತಥಾ |
ಶೌಚಂ ಚತುರ್ವಿಧಂ ಪ್ರೋಕ್ತಂ ಋಷಿಭಿಸ್ತತ್ವದರ್ಶಿಭಿಃ ||
ಶೌಚವೆಂದರೆ ಶುದ್ಧಿ. ದ್ರವ್ಯ, ಮನಸ್ಸು, ಮಾತು ಮತ್ತು ಶರೀರ ಇವುಗಳ ಶುದ್ಧತೆ ಮತ್ತು ಬದ್ಧತೆಯ ಸಂಪಾದನೆ ಬಹು ಮುಖ್ಯವಾಗಿದ್ದು, ಅದನ್ನು ಸಾಧಿಸಲು ಈ ಗುಣವನ್ನು ಎತ್ತಿ ಹೇಳಿದ್ದಾರೆ.
5. ಅನಾಯಾಸಃ – ಯದಾರಂಭೇ ಭವೇತ್ಪೀಡಾ ನಿತ್ಯಮತ್ಯಂತಮಾತ್ಮನಃ |
ತದ್ವರ್ಜಯೇದ್ಧರ್ಮ್ಯಮಪಿ ಸೋನಾಯಾಸಃ ಪ್ರಕೀರ್ತಿತಃ ||
ಯಾವುದನ್ನು ಮಾಡುವುದರಿಂದ ಶರೀರ, ಬುದ್ಧಿ, ಮನಸ್ಸುಗಳಿಗೆ ಪೀಡೆಯುಂಟಾಗುವುದೋ, ಈ ಪೀಡೆ ನಿರಂತರವಾಗಿ ನಮ್ಮನ್ನು ಕಾಡಲಾರಂಭಿಸಿ, ನಾವು ಬಾಡದಂತೆ, ಶರೀರಾದಿಗಳನ್ನು ಅತಿಯಾಗಿ ಪೀಡಿಸದೇ ಶಿಸ್ತಿನಿಂದಿರುವುದು.
6. ಮಂಗಲಮ್ – ಪ್ರಶಸ್ತಾಚರಣಂ ನಿತ್ಯಮಪ್ರಶಸ್ತವಿವರ್ಜನಮ್ |
ಏತದ್ಧಿ ಮಂಗಲಂ ಪ್ರೋಕ್ತಂ ಮುನಿಭಿಸ್ತತ್ವದರ್ಶಿಭಿಃ ||
ವಿಹಿತವಾದದ್ದನ್ನು ಮಾಡುವುದು, ಕೆಟ್ಟದ್ದನ್ನು ಬಿಡುವುದು ಹೀಗೆ ಪ್ರಶಸ್ತಕರ್ಮದಲ್ಲಿ ನಿರತನಾಗಿರುವುದೇ ಮಂಗಲ ಅಥವಾ ಶುಭಾಚರಣೆ ಎಂದೆನಿಸುತ್ತದೆ. ಅಂದರೆ ಕೇಡನ್ನು ಬಿಟ್ಟು ಒಳಿತಿನಿಂದ ಕೂಡಿದ ಆಚರಣೆ ಮಾಡುವುದು.
7. ಅಕಾರ್ಪಣ್ಯಮ್ – ಆಪದ್ಯಪಿ ಚ ಕಷ್ಟಾಯಾಂ ಭವೇದ್ದೀನೋ ನ ಕಸ್ಯಚಿತ್ |
ಸಂವಿಭಾಗರುಚಿಶ್ಚ ಸ್ಯಾತ್ತದಕಾರ್ಪಣ್ಯಮುಚ್ಯತೇ ||
ಎಂಥಾ ಆಪತ್ತು ಎದುರಾದರೂ ಬೇರೆಯವರಲ್ಲಿ ಬೇಡುವುದನ್ನು ಬಿಟ್ಟು, ಹಂಚಿಕೊಂಡು
ಬಾಳುವುದರಲ್ಲಿ ವಿಶ್ವಾಸವಿಟ್ಟು, ಮನಃಪೂರ್ವಕವಾಗಿ ವಿತರಣಾ ಬುದ್ಧಿಯನ್ನು ಹೊಂದುವುದು..
8. ಅಸ್ಪೃಹಾ – ವಿವರ್ಜಯೇದಸಂತೋಷಂ ವಿಷಯೇಷು ಸದಾ ನರಃ |
ಪರದ್ರವ್ಯಾಭಿಲಾಷಂ ಚ ಸಾಸ್ಪೃಹಾ ಕಥ್ಯತೇ ಬುಧೈಃ ||
ಅಸಮಾಧಾನವನ್ನು ಬಿಟ್ಟು, ಪರರ ವಸ್ತುವಿಗೆ ಆಸೆಪಡದೆ, ಇಂದ್ರಿಯಗಳನ್ನು ನಿಗ್ರಹಿಸಿ, ತೃಪ್ತಿಯಿಂದಿರುವುದನ್ನೇ ಅಸ್ಪೃಹಾ ಎನ್ನುವರು.
ಈ ಎಂಟು ಆತ್ಮಗುಣಗಳನ್ನು ಗೌತಮರು ಎತ್ತಿ ಹೇಳಿದ್ದಾರೆ. ಅತೀ ಮುಖ್ಯ ವಿಷಯವೇನೆಂದರೆ, ವೇದೋಕ್ತ ಸಂಸ್ಕಾರಗಳನ್ನು ಮಾಡಿಯೂ
ವ್ಯಕ್ತಿಯಲ್ಲಿ ಮೇಲಿನ ಎಂಟು ಗುಣಗಳು ಪ್ರಕಟವಾಗದಿದ್ದರೆ ಆ ಸಂಸ್ಕಾರಗಳು ವ್ಯರ್ಥವೆಂದೇ
ತಿಳಿಯಬೇಕು. ಒಂದು ವೇಳೆ ಸಂಸ್ಕಾರಗಳಲ್ಲಿ ಕೆಲವನ್ನು ಮಾತ್ರ ಮಾಡಿದ್ದರೂ, ಈ ಗುಣಗಳು ವ್ಯಕ್ತಿಯ
ವ್ಯಕ್ತಿತ್ವದಲ್ಲಿ ಕಂಡು ಬಂದರೆ ಆತನು ಪೂರ್ಣವಾಗಿ ಸುಸಂಸ್ಕೃತನೆಂದು ತಿಳಿಯಬೇಕು. ಹೀಗೆ ತಾಳೆಯನ್ನು
ನೋಡಬೇಕೆಂದು ಋಷಿಗಳು ಒತ್ತಿ ಹೇಳಿದ್ದಾರೆ. ಸಮಾಜದ ಯಾವುದೇ ಕ್ರಿಯಾ ಕಲಾಪಗಳು ವ್ಯರ್ಥವಾಗಿಯೂ,
ಬೂಟಾಟಿಕೆಯಾಗಿಯೂ ಆಗಿರುವುದು ಹಿರಿಯರಿಗೆ ಇಷ್ಟವಾಗಿರಲಿಲ್ಲ!
ಯಸ್ಯ ಖಲು ಸಂಸ್ಕಾರಾಣಾಂ ಏಕದೇಶೋಪಿ ಅಷ್ಟೌ
ಆತ್ಮಗುಣಾಃ ಅಥ ಸ ಬ್ರಹ್ಮಣಃ ಸಾಯುಜ್ಯಂ ಸಾಲೋಕ್ಯಂ ಚ ಗಚ್ಚತಿ ||