Wednesday, December 16, 2015

Bhagavadgita



ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲ ಅಧ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತ ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂಥ  ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ.

ಮಹಾಭಾರತ ಐತಿಹಾಸಿಕ, ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮೂರು ಬಗೆಯಿಂದ ತೆರೆದುಕೊಳ್ಳುತ್ತದೆ. ಭಗವದ್ಗೀತೆ ಮನಃಶಾಸ್ತ್ರೀಯ ಮತ್ತು ತತ್ವಶಾಸ್ತ್ರೀಯವಾಗಿ ಮಹಾಭಾರತದ ಸಾರವನ್ನು ಸೆರೆಹಿಡಿದಿದೆ. ಭಗವದ್ಗೀತೆಯಲ್ಲಿ ನಾವು ನೋಡಬೇಕಾದ ಮುಖ ಇತಿಹಾಸಮಾತ್ರವಲ್ಲ, ಬದಲಿಗೆ ಮನಃಶಾಸ್ತ್ರ ಮತ್ತು ಅಧ್ಯಾತ್ಮ.

ಮಹಾಭಾರತ ತನ್ನ ಎಳುಪಾತ್ರಗಳ ಮೂಲಕ ಹದಿನೆಂಟು ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:
೧. ಧರ್ಮರಾಜ – ಧರ್ಮ.
೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ.
೪. ನಕುಲ – ಶೀಲ.
೫. ಸಹದೇವ – ವಿನಯ.
೬. ದ್ರೌಪದಿ – ವೇದವಿದ್ಯೆ.
೭. ಶ್ರೀಕೃಷ್ಣ ವೇದವೇದ್ಯ.
ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ, ಮನನ ಮತ್ತು ನಿದಿಧ್ಯಾಸನದೊಂದಿಗೆ  ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು.   ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪುವುದೇ ಗೀತೆಯ ಒಟ್ಟು ಸಾರಾಂಶ. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು.

ಭಾರತೀಯ ತತ್ವಶಾಸ್ತ್ರದ ಅತ್ಯಂತ ಮಹತ್ವದ ಸಂಖ್ಯೆ ಹದಿನೆಂಟು. ಇದು ತತ್ವಶಾಸ್ತ್ರದ ಎಲ್ಲ ರಹಸ್ಯವನ್ನು ಬಸಿರಲ್ಲಿ ಬಚ್ಚಿಟ್ಟುಕೊಂಡ ಸಂಖ್ಯೆ. ಮಹಾಭಾರತದಲ್ಲಿ ಕೂಡ ಈ ಸಂಖ್ಯಾ ಚಮತ್ಕಾರವನ್ನು ಕಾಣಬಹುದು. ಮಹಾಭಾರತದಲ್ಲಿ ಒಟ್ಟು ಹದಿನೆಂಟು ಪರ್ವಗಳಿವೆ. ಮಹಾಭಾರತದ ಸಾರವಾದ ಗೀತೆಯಲ್ಲಿ ಹದಿನೆಂಟು ಅಧ್ಯಾಯಗಳಿವೆ. ಮಹಾಭಾರತ ಯುದ್ಧ ನಡೆದಿದ್ದು ಹದಿನೆಂಟು ದಿನ. ಯುದ್ಧದಲ್ಲಿ ಪಾಲ್ಗೊಂಡಿದ್ದು ಹದಿನೆಂಟು ಅಕ್ಷೋಹಿಣಿ ಸೈನ್ಯ.

ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಹೇಳುವುದು  ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವನ್ನಲ್ಲ. ಇದು ನಮ್ಮ ಜೀವನದ, ಮುಖ್ಯವಾಗಿ  ಅಂತರಂಗ ಪ್ರಪಂಚದ ನಿರಂತರ ಹೋರಾಟದ ಚಿತ್ರಣ. ನಮ್ಮ ಜೀವನವೇ ಒಂದು ಸಂಗ್ರಾಮ. ನಮ್ಮ ಹೃದಯರಂಗವೇ ಕುರುಕ್ಷೇತ್ರ. ಅದರೊಳಗೆ ನಮ್ಮನ್ನು ದಾರಿ ತಪ್ಪಿಸುವ  ಕೌರವರಿದ್ದಾರೆ, ಎಚ್ಚರಿಸುವ ಪಾಂಡವರೂ ಇದ್ದಾರೆ. ಹದಿನೆಂಟು ಅಕ್ಷೋಹಿಣಿ ಸೇನೆಯೂ ಇದೆ. ಆದರೆ ನಮ್ಮ ಹೋರಾಟದಲ್ಲಿ  ಪಾಂಡವರು ಸೋತು  ಕೌರವರು ಗೆದ್ದುಬಿಡುವ ಸಂಭವ ಹೆಚ್ಚು. ಆದರೆ ಹಾಗಾಗದೆ ನಮ್ಮಲ್ಲೂ ಪಾಂಡವರೇ ಗೆಲ್ಲಬೇಕು. ಅದಕ್ಕಾಗಿ ನಮ್ಮ ಬಾಳ ರಥದ ಸಾರಥ್ಯವನ್ನು ಆ ಭಗವಂತನ ಕೈಗೊಪ್ಪಿಸಬೇಕು. ಇದೇ ನರ(ಅರ್ಜುನ)ನ ಮೂಲಕ ನಮಗೆ ನಾರಾಯಣನಿತ್ತ ಗೀತೋಪದೇಶ.



ಅರ್ಜುನನ ಮನಸ್ಸಿನ ಗೊಂದಲಕ್ಕೆ ಶ್ರೀಕೃಷ್ಣ ಪರಿಹಾರದ ಉಪದೇಶ ಕೊಟ್ಟ, ಆದರೆ ದುಷ್ಟ ದುರ್ಯೋಧನ ಗೊಂದಲದಿಂದಲೇ ಸತ್ತ. ಆದ್ದರಿಂದ ಮೊದಲ ಅಧ್ಯಾಯವನ್ನು ನಾವು ಐತಿಹಾಸಿಕ ದೃಷ್ಟಿಯಿಂದ ಕಾಣದೆ ಇಲ್ಲಿರುವ ಮನಃಶಾಸ್ತ್ರವನ್ನು ಅರಿಯಲು ಪ್ರಯತ್ನಿಸಬೇಕು. ಇಲ್ಲಿ ಹೇಳಿರುವ ಮನಃಶಾಸ್ತ್ರ ಕೇವಲ ಯುದ್ಧಭೂಮಿಯಲ್ಲಿ ನಿಂತವರಿಗೆ ಮಾತ್ರ ಸಂಬಂಧಪಟ್ಟಿದ್ದಲ್ಲ. ಇದು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಪಟ್ಟಿದ್ದು. ಭಗವದ್ಗೀತೆ ಪ್ರಾರಂಭವಾಗುವುದು ಧೃತರಾಷ್ಟ್ರನ ಪ್ರಶ್ನೆಯಿಂದ. ಧೃತರಾಷ್ಟ್ರ ಎಂದರೆ ರಾಷ್ಟ್ರವನ್ನು(ಪುರವನ್ನು) ಧಾರಣೆ ಮಾಡಿದವ ಎಂದರ್ಥ. ಅಂದರೆ ಸತ್ಯದ ಬಗ್ಗೆ ಕುರುಡಾಗಿ ಕಣ್ಮುಚ್ಚಿ ಮಲಗಿರುವ ಜೀವವೇ ಧೃತರಾಷ್ಟ್ರ. ದುರ್ಯೋಧನ ಎನ್ನುವುದು ನಮ್ಮೊಳಗಿರುವ ದುಷ್ಟತನದ ಪರಾಕಾಷ್ಠೆಯ ಸಂಕೇತ. ಭೀಷ್ಮ-ದ್ರೋಣ-ಕೃಪಾ-ಶಲ್ಯ-ಕರ್ಣ-ಇವರೆಲ್ಲರೂ ನಮ್ಮ ಇಂದ್ರಿಯಗಳಂತೆ. ನಮ್ಮ ಮನಸ್ಸಿನಲ್ಲಿರುವ ಕೆಟ್ಟತನದಿಂದ ನಾವು ನಮ್ಮಲ್ಲಿರುವ ಅಮೂಲ್ಯವಾದ ಇಂದ್ರಿಯಗಳನ್ನು ಕೆಟ್ಟ ಕಾರ್ಯಕ್ಕೆ ಬಳಸುತ್ತೇವೆ. ವಸ್ತುತಃ ಇಂದ್ರಿಯಗಳು ಕೆಟ್ಟವಲ್ಲ. ಆದರೆ ಕೆಟ್ಟದ್ದರ ಜೊತೆ ಸೇರಿ ಕೆಟ್ಟದ್ದನ್ನು ಮಾಡುತ್ತವೆ. ಈ ರೀತಿ ಗೀತೆಯ ಪ್ರತಿಯೊಂದು ಶ್ಲೋಕದಲ್ಲಿ, ಮಹಾಭಾರತದ ಪ್ರತಿಯೊಂದು ಪಾತ್ರದಲ್ಲಿ ಅತ್ಯಮೂಲ್ಯವಾದ ಹಾಗು ಗುಹ್ಯವಾದ ಅರ್ಥ ಅಡಗಿದೆ.

ಭಗವದ್ಗೀತೆ ಹೊಡೆದಾಟ, ವೈರತ್ವದ ಪಾಠವಲ್ಲ. ಅರ್ಜುನನು ಧೃತಿಗೆಟ್ಟು ನನ್ನ ಸ್ವಂತ ಸಂಬಂಧಿಕರನ್ನು, ಗುರು ಹಿರಿಯರ ಜೊತೆ ತಾನು ಹೇಗೆ ತಾನೆ ಹೋರಾಡಲಿ ಎಂದು ನಡುಗಿದಾಗ ಅವನಲ್ಲಿ ಆತ್ಮ ಸ್ಥೈರ್ಯ ಮೂಡಿಸಿದ, ಸರಿ-ತಪ್ಪು, ಧರ್ಮ-ಅಧರ್ಮದ ಬಗ್ಗೆ, ನ್ಯಾಯ-ಅನ್ಯಾಯದ ಬಗ್ಗೆ ಬೋಧಿಸುವ ಪವಿತ್ರ ಗ್ರಂಥ -  ಜ್ಞಾನ ಭಂಡಾರ. ಗೀತೆ ಕೇವಲ ಮಹಾಭಾರತದ ಪಾತ್ರನಾದ ಪಾರ್ಥನಿಗೆ ಮಾತ್ರ ಅನ್ವಯಿಸುತ್ತದಾ? ಎಂದು ಕೇಳಿದರೆ ಅದಕ್ಕೆ ಉತ್ತರ ಚುಟುಕಾಗಿ ಹೇಳಬಹುದಾದರೆ, ನಮ್ಮ ಮಹಾನ್ ಭಾರತದ ಪ್ರತಿ ಮನುಷ್ಯನಲ್ಲೂ ಅಡಗಿಕೊಂಡಿರುವ ಪಾರ್ಥನ ಪಾತ್ರಕ್ಕೂ ಗೀತೆಯ ಪ್ರಸಕ್ತತೆ ಎದ್ದು ತೋರುತ್ತದೆ.
ಪ್ರಸ್ತುತ ವಿದ್ಯಮಾನಗಳನ್ನು ಗಮನಿಸೋಣ. ಪಾಕಿಸ್ತಾನದದಿಂದಲೇ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ ಎಂದು ತಿಳಿದಿದೆ. ಉತ್ತರದ, ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರನ್ನು, ಜನಸಾಮಾನ್ಯರನ್ನು, ಅಮಾಯಕರನ್ನು ಕೊಲ್ಲಲಾಗುತ್ತಿದೆ. ಪೂರ್ವದಲ್ಲಿ ಬಾಂಗ್ಲಾದೇಶದಿಂದ ನುಸುಳುಕೋರರು ಬಂಗಾಳವನ್ನು, ಈಶಾನ್ಯ ರಾಜ್ಯಗಳನ್ನು ಪ್ರವೇಶಿಸಿ ಅಲ್ಲಿನ ಶಾಂತಿ ಕದಡುತ್ತಿದ್ದಾರೆ. ನಮ್ಮ ಸಂಪನ್ಮೂಲಗಳನ್ನು ಅನುಭವಿಸುತ್ತಾ ನಮ್ಮ ದೇಶದ ಜನರಿಗೆ ತೊಂದರೆಗಳನ್ನು ನೀಡುತ್ತಿರುವುದು ಜನಜನಿತ ವಿಷಯ. ಚೀನಾ ಅರುಣಾಚಲ ಪ್ರದೇಶದಲ್ಲಿ ನುಗ್ಗುವುದಲ್ಲದೇ, ಲಢಾಕ್ ನಿಂದಲೂ ನುಗ್ಗಲು ಹವಣಿಸುತ್ತಿದೆ. ಶ್ರೀಲಂಕಾ ಜೊತೆ ಸೇರಿ ದಕ್ಷಿಣ ದಿಕ್ಕಿನಿಂದಲೂ ನಮ್ಮ ದೇಶಕ್ಕೆ ಆಪತ್ತು ತರಬಹುದೆಂದು ಭಾರತೀಯ ಬೇಹುಗಾರಿಕೆ ಇಲಾಖೆ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಹಾಗಾಗಿ ನಮ್ಮ ದೇಶ ಭಾರತಕ್ಕೆ  ನೆರೆಹೊರೆಯವರಿಂದ ಆಪತ್ತು. ಹಾಗೆ ನಮ್ಮ ದೇಶದ ಗಡಿಗಳಲ್ಲಿ ಹೋರಾಡುವ ಯೋಧರಿಗೆ ಯಾವ ನೀತಿಯ ಪಾಠವನ್ನು ಯುದ್ಧವೇ ಮಹಾ ಪಾಪ! ಎಂದು ಬಡಬಡಾಯಿಸುವವರು ಬೋಧಿಸುತ್ತಾರೆಂದರೆ ಇವರುಗಳ ವಿದ್ವತ್ತನ್ನೇ ಪ್ರಶ್ನಿಸಬೇಕಾಗುತ್ತದೆ. ಅಲ್ಲದೆ ದೇಶದಲ್ಲಿನ ಇತರೆ ಸಮಸ್ಯೆಗಳಿಗೂ "....ಹೋಗ್ಲಿ ಬಿಡಪ್ಪಾ... " ಅನ್ನುವ ಉತ್ತರ ಉತ್ತರಪುರುಷನಿಗಷ್ಟೇ ಸರಿಹೋಗಬಹುದು.



ಭಗವದ್ಗೀತೆಯ ಗುರಿಯು ಮಾನವ ಕುಲವನ್ನು ಐಹಿಕ ಅಸ್ತಿತ್ವದ ಅಜ್ಞಾನ ದಿಂದ ಉದ್ಧರಿಸುವುದು. ಕುರುಕ್ಷೇತ್ರ ಯುದ್ಧದಲ್ಲಿ ಹೋರಾಡಬೇಕಾಗಿ ಬಂದು ಅರ್ಜುನನು ಕಷ್ಟದಲ್ಲಿದ್ದಂತೆ, ಪ್ರತಿಯೊಬ್ಬನೂ ಹಲವಾರು ಬಗೆಯ ಕಷ್ಟದಲ್ಲಿರುತ್ತಾನೆ. ಅರ್ಜುನನು ಕೃಷ್ಣನಿಗೆ ಶರಣಾಗತನಾದನು. ಇದರಿಂದಾಗಿ ಗೀತೆಯ ಉಪದೇಶವಾಯಿತು.
ಅರ್ಜುನನು ಮಾತ್ರವೇ ಅಲ್ಲ, ನಮ್ಮಲ್ಲಿ ಪ್ರತಿಯೊಬ್ಬನೂ ಐಹಿಕ ಅಸ್ತಿತ್ವದಿಂದಾಗಿ ಆತಂಕದಿಂದ ತುಂಬಿಹೋಗಿರುತ್ತಾನೆ. ನಮ್ಮ ಅಸ್ತಿತ್ವವೇ ಅಸ್ತಿತ್ವರಹಿತ ವಾತಾವರಣದಲ್ಲಿದೆ. ವಾಸ್ತವವಾಗಿ ಅಸ್ತಿತ್ವರಾಹಿತ್ಯದ ಭಯ ನಮಗಿರಬಾರದು. ನಮ್ಮ ಅಸ್ತಿತ್ವವು ನಿತ್ಯವಾದದ್ದು. ಆದರೆ ಹೇಗೋ ಏನೋ ನಾವು ಅಸತ್ತಿನಲ್ಲಿ ಸಿಕ್ಕಿಕೊಂಡಿದ್ದೇವೆ. ಅಸತ್ ಎಂದರೆ ಯಾವುದು ಅಸ್ತಿತ್ವದಲ್ಲಿಲ್ಲವೋ ಅದು.
ಕಷ್ಟದಲ್ಲಿರುವ ಅಸಂಖ್ಯಾತ ಮನುಷ್ಯರಲ್ಲಿ ತಮ್ಮ ಸ್ಥಿತಿಯನ್ನು ಕುರಿತು ಪ್ರಶ್ನಿಸುವವರು ಕೆಲವರಿದ್ದಾರೆ; ತಾವು ಯಾರು? ತಾವು ಈ ತೊಡಕಿನ ಸ್ಥಿತಿಯಲ್ಲಿರುವುದಕ್ಕೆ ಕಾರಣವೇನು? ಮುಂತಾಗಿ ಕೇಳಿಕೊಳ್ಳುತ್ತಾರೆ. ವ್ಯಕ್ತಿಯು ಸಂಕಟವನ್ನು ಕುರಿತು ಪ್ರಶ್ನೆ ಮಾಡುವ ಈ ಸ್ಥಿತಿಗೆ ಬರದಿದ್ದರೆ, ಸಂಕಟ ಬೇಡ, ಆದರೆ ಎಲ್ಲ ಸಂಕಟಕ್ಕೆ ಪರಿಹಾರ ಬೇಕು! ಎಂಬುದನ್ನು ಅರಿತುಕೊಳ್ಳದಿದ್ದರೆ, ಅವನನ್ನು ಪರಿಪೂರ್ಣ ಮನುಷ್ಯ! ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಪ್ರಶ್ನೆಯು ಮನಸ್ಸಿನಲ್ಲಿ ಜಾಗ್ರತವಾದಾಗ ಮಾನವಕುಲ ಪ್ರಾರಂಭವಾಗುತ್ತದೆ. ಪರಾತ್ಪರದ ಸ್ವರೂಪವನ್ನು ಕುರಿತು ಮನುಷ್ಯನು ಪ್ರಶ್ನೆ ಮಾಡದಿದ್ದರೆ ಅವನ ಎಲ್ಲ ಬಗೆಯ ಕ್ರಿಯೆಗಳನ್ನೂ ವಿಫಲವೆಂದೇ ಭಾವಿಸಬೇಕಾಗುತ್ತದೆ.
ಆದುದರಿಂದ, ನಮ್ಮ ನಿತ್ಯದ ಗತಿವಿಧಿಗಳಲ್ಲಿ ನಮ್ಮನ್ನು ತಿದ್ದಿಕೊಳ್ಳಲು, ನಮಗೆ ಮಾರ್ಗದರ್ಶನ ಗೈಯ್ಯಲು ಭಗವದ್ಗೀತೆ ಉತ್ತಮ ಪಾತ್ರ ವಹಿಸುತ್ತದೆ. ಇದು ಇಂದು, ಮುಂದು, ಎಂದೆಂದೂ ಮಾನವ ಬಾಳಿನ ಕೈದೀವಿಗೆಯಾಗಿದೆ.
 
Parameshwar - puttanmane
papu...!

Monday, November 09, 2015

ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಸಂಸ್ಕೃತ ಸಾಧನ



ಮಾನ್ಯರೇ,
ವ್ಯಕ್ತಿತ್ವ-ವಿಕಸನ ಎಂಬ ವಿಷಯದ ಬಗ್ಗೆ ಮನುಷ್ಯರಾದ ನಾವು ಯೋಚಿಸುವಂತೆ ಪಶು-ಪಕ್ಷಿಗಳಾಗಲೀ ಹುಳ-ಹುಪ್ಪಡಿಗಳಾಗಲೀ ಯೋಚಿಸುವುದೂ ಇಲ್ಲ, ಚಿಂತಿಸುವುದೂ ಇಲ್ಲ. ಏಕೆಂದರೆ ಅವುಗಳಿಗೆ ಅದರ ಅಗತ್ಯವಿಲ್ಲ. ಅವುಗಳ ವಿಕಾಸ (ಬೆಳವಣಿಗೆ) ಅನಾಯಾಸವಾಗಿ ಆಗುತ್ತಲೇ ಇರುತ್ತದೆ. ಆದರೆ ಮನುಷ್ಯನ ಬದುಕಿನ ರೀತಿಯೇ ಬೇರೆ. ಅವನು ನೆಲದಲ್ಲಿ ನೆಲೆಸುವಂತೆ ನೀರಿನಲ್ಲೂ ಬದುಕಬಲ್ಲ. ಆಕಾಶದಲ್ಲೂ ಹಾರಾಡಬಲ್ಲ. ಮಾಂಸ ತಿಂದು ಅರಗಿಸಬಲ್ಲ. ಹುಲ್ಲು ತಿಂದೂ ಬದುಕಬಲ್ಲ. ಈತ ತ್ಯಾಗಿಯೂ ಆಗ ಬಲ್ಲ, ಭೋಗಿಯೂ ಆಗಬಲ್ಲ. ಪ್ರಾಣ ಕೊಡಬಲ್ಲ, ಪ್ರಾಣ ಕೊಳ್ಳಬಲ್ಲ. ತನ್ನ ಜೀವನವನ್ನು ರೂಪಿಸಬಲ್ಲನಷ್ಟೇ ಅಲ್ಲ, ತನಗೆ ಬೇಕಾದ ಜಗತ್ತನ್ನೂ ನಿರ್ಮಿಸಬಲ್ಲ, ಕಟ್ಟಬಲ್ಲ, ಕೆಡವಬಲ್ಲ. ಇದು ಮನುಷ್ಯಜೀವನಕ್ಕೆ ಸಂಬಂಧಿಸಿದ ಸತ್ಯಸಂಗತಿ. ಇದನ್ನು ಭಾರತೀಯ ಋಷಿ-ಮುನಿಗಳು ಸಾವಿರಾರು ವರುಷಗಳ ಹಿಂದೆಯೇ ಕಂಡುಕೊಂಡರು. ಈ ಸತ್ಯವನ್ನಲ್ಲದೇ ನಮ್ಮ ಪೂರ್ವಜರು ಇನ್ನೊಂದು ಐತಿಹಾಸಿಕ ಸತ್ಯವನ್ನೂ ಅರಿತುಕೊಂಡರು. ಅದೆಂದರೆ ವಿಶ್ವದ ಆರಂಭದಿಂದಲೂ ಇಡಿಯ ಜಗತ್ತಿನ ಆಗುಹೋಗುಗಳಿಗೆ ಮನುಷ್ಯನೇ ಕಾರಣ. ಜಗತ್ತಿನಲ್ಲಿ ಹಿಂದೆ ಆಗಿಹೋದ, ಇಂದಾಗುತ್ತಿರುವ, ಮುಂದೆ ಆಗಬಹುದಾದ ಉನ್ನತಿ-ಅವನತಿಗಳಿಗೆಲ್ಲಾ ಮನುಷ್ಯನೇ ಕಾರಣ. ಅದಕ್ಕಾಗಿಯೇ ಪೂರ್ವಜರು-ಭಾರತೀಯರು-ಮಾನವರು ದಾನವತ್ವದ ಕಡೆ ಹೊರಳದೇ, ದೇವತ್ವದ ಕಡೆ ಮುನ್ನಡೆಯುವಂತೆ ಅವನ ಬೆಳವಣಿಗೆಯ ಅಂದರೆವ್ಯಕ್ತಿತ್ವ ವಿಕಸನದ ರಾಜಮಾರ್ಗ ಕಂಡುಹಿಡಿದರು. ಅದರ ಪರಿಚಯವನ್ನು ಈಗ ಮಾಡಿ ಕೊಳ್ಳೋಣ.

’ ಭಾರತಸ್ಯ ಪ್ರತಿಷ್ಠೇ ದ್ವೇ ಸಂಸ್ಕೃತಂ ಸಂಸ್ಕೃತಿಸ್ತಥಾ ’ ಎಂಬ ಆರ್ಯೋಕ್ತಿಯಂತೆ ಸಂಸ್ಕೃತ ನಮ್ಮ ದೇಶಕ್ಕೆ ಗೌರವ ತಂದು ಕೊಟ್ಟ ಭಾಷೆ. ಅದು ನಮ್ಮ ರಾಷ್ಟ್ರಿಯ ಸಂಪತ್ತು. ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭಾಷೆ ಭರತ ಖಂಡದ ಜೀವನಾಡಿ; ಸಂಸ್ಕೃತಿಯ ವಾಹಿನಿ. ರಾಷ್ಟ್ರಕವಿ ಕುವೆಂಪು ಅವರು ’ಸಂಸ್ಕೃತ ಮಾತೆ’ ಎಂಬ ತಮ್ಮ ಕವನ ಸಂಕಲನದಲ್ಲಿ ಸಂಸ್ಕೃತದ ಪ್ರಾಚೀನತೆ ಮತ್ತು ಮಹತ್ವಗಳ ಕುರಿತು ಹೀಗೆ ಹಾಡುತ್ತಾರೆ.
“ಪೃಥ್ವಿಯಾ ಪ್ರಥಮ ಪ್ರಭಾತದಲಿ, ಇತಿಹಾಸ ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ
ಚಿರಧವಲ ಹಿಮಕಿರಣ ಪೃಥುಲೋರು ಪ್ರೇಂಖದಲಿ, ನವಜಾತ ಶಿಶುವಾಗಿ ನಲಿದ ಮಂಗಲಮಾಯೀ”
ಇತಿಹಾಸ ತಜ್ಞರಿಗೂ ನಿಲುಕದ ಸೃಷ್ಟಿಯ ಆರಂಭದಲ್ಲಿ, ಅತಿ ಪ್ರಾಚೀನ ಕಾಲದಲ್ಲಿ, ಹಿಮಗಿರಿಯ ಕಂದರಗಳಲ್ಲಿ ಮೊಳಗಿದ ಭಾಷೆಯಿದು. ಇದು ಕೇವಲ ಪ್ರಾಚೀನ ಮಾತ್ರವಲ್ಲ, ಸತ್ವಯುತ ಭಾಷೆಯೂ ಹೌದು. ಈ ರಾಷ್ಟ್ರದ ತಂದೆ, ’ಬಾಪೂಜಿ’ ಎಂದು ಗೌರವಿಸುವ ಗಾಂಧಿಯವರು “The education of any Hindu child is incomplete, unless he has got some knowledge of Sanskrit.” ಅಂದರೆ ಹಿಂದೂಸ್ಥಾನದ ಪ್ರತಿಮಗುವಿನ ವಿದ್ಯಾಭ್ಯಾಸ ಸಂಸ್ಕೃತದ ಪರಿಚಯವಿಲ್ಲದಿರೆ ಅಪರಿಪೂರ್ಣ. ಹಾಗಾಗಿ ’ಸಂಸ್ಕೃತದಲ್ಲಿ ನಮ್ಮ ವ್ಯಕ್ತಿತ್ವವನ್ನು ಸಂಸ್ಕರಿಸಬಲ್ಲ, ನಮ್ಮ ಬದುಕಿಗೆ ಹೊಸ ಆಯಾಮವನ್ನು ಕೊಡಬಲ್ಲ, ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲ ಅಪೂರ್ವ ಶಕ್ತಿಯಿದೆ.’ ಎಂಬುದು ಸ್ಪಷ್ಟ. ಈ ಮಾತಿಗೆ ಪೂರಕವಾಗಿ ಸಂಸ್ಕೃತ ಸಾಹಿತ್ಯದಲ್ಲಿ ಬರುವ ಕೆಲವೇ ಕೆಲವು ಸಂದರ್ಭ ಸೂಕ್ತಿಗಳನ್ನು ಇಲ್ಲಿ ಗಮನಿಸೋಣ.

ಸಂಸ್ಕೃತ ಸಾಹಿತ್ಯದ ಅತ್ಯಂತ ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ರಾಷ್ಟ್ರಿಯ ಭಾವೈಕ್ಯವನ್ನು “ ಸಮಾನೀವ ಆಕೂತಿಃ ಸಮಾನಾ ಹೃದಯಾನಿ ವಃ “ ಮತ್ತು “ ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ “ ಎಂದು ಹೇಳುವುದರ ಮುಖೇನ ನಮ್ಮ ಯೋಚನೆ, ನಮ್ಮ ಭಾವನೆ, ನಮ್ಮ ಹೃದಯ, ನಮ್ಮ ಮನಸ್ಸು ಎಲ್ಲ ಒಂದಾಗಿ; ನಾವೆಲ್ಲರೂ ಒಟ್ಟಿಗೆ ಮುಂದೆ ಸಾಗೋಣ; ಬಲಿಷ್ಠ ರಾಷ್ಟ್ರ ಕಟ್ಟೋಣ.“ ಎಂದು ಕರೆ ನೀಡುತ್ತದೆ. ಅಥರ್ವವೇದವಂತೂ ಇನ್ನೂ ಮುಂದೆ ಸಾಗಿ “ವಿಶ್ವಂ ಭವತ್ಯೇಕ ನೀಡಮ್.“ ಎನ್ನುತ್ತಾ ಇಡೀ ಜಗತ್ತೇ ಹಕ್ಕಿಯ ಗೂಡಾಗಬೇಕೆಂದು ಸಾರುತ್ತದೆ. ನಮ್ಮ ನಡುವೆಯಿರುವ ಜಾತಿ, ಮತ, ಪಂಥಗಳ ಅಡ್ಡಗೋಡೆಗಳನ್ನು ಕುಟ್ಟಿ ಕೆಡುಹಿ, ಇಡೀ ಜಗತ್ತನ್ನೇ ಒಂದು ಗೂಡಾಗಿಸಬೇಕು; ಅಂಥ ಜಗದ ಲವಲವಿಕೆಯ ಹಕ್ಕಿಗಳು ನಾವಾಗಬೇಕು. ಎಂಬ ಕಲ್ಪನೆ ನಮ್ಮ ಮನೋಭಾವವನ್ನು ವಿಸ್ತರಿಸಿ, ವಿಶ್ವಮಾನವರನ್ನಾಗಿ ಮಾಡುತ್ತದೆ. ಮತ್ತದೇ ಋಗ್ವೇದದಲ್ಲಿ ’ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ.’ ‘Let the noble thoughts come from every side.’ ಎಂದು ಹೇಳಿದೆ. ಹೇಗೆ ಒಂದು ಕೊಠಡಿಯ ಕಿಟಕಿ, ಬಾಗಿಲುಗಳನ್ನು ತೆರೆದಾಗ ಗಾಳಿ, ಬೆಳಕುಗಳು ಕೊಠಡಿಯ ತುಂಬ ಪಸರಿಸುವವೋ; ಹಾಗೆ ನಮ್ಮ ಹೃದಯ, ಮನಸ್ಸುಗಳ ಕದವನ್ನು ತೆರೆದಾಗ ಒಳ್ಳೆಯ ವಿಚಾರಗಳು ನಮ್ಮನ್ನು ಆವರಿಸುತ್ತವೆ. ಇಂಥ ವಿಚಾರಗಳನ್ನು ಮುಕ್ತಮನಸ್ಸಿನಿಂದ ಸ್ವಾಗತಿಸೋಣ. ಇದೇ ರೀತಿ ’ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ, ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ.’ ಎಂಬಂತೆ ’ಕಿವಿ, ಕಣ್ಣುಗಳಿಂದ ಒಳಿತನ್ನು ಕಂಡುಂಡು ನೂರ್ಕಾಲ ಬಾಳೋಣ.’ ಎಂದು ಸಂಸ್ಕೃತ ಸಾಹಿತ್ಯದ ಮೂಲ ಸ್ತಂಭಗಳಾದ ವೇದಗಳು ನಮ್ಮ ವ್ಯಕ್ತಿತ್ವವನ್ನು ಉದಾತ್ತಗೊಳಿಸಲು ಕರೆ ನೀಡುತ್ತವೆ.

ವ್ಯಕ್ತಿತ್ವ-ವಿಕಸನ ಎಂಬುದನ್ನು ತಿಳಿಯಬೇಕಾದರೆ ವ್ಯಕ್ತಿತ್ವ ಎಂಬುದರ ಅರ್ಥ ತಿಳಿಯ ಬೇಕಾಗುತ್ತದೆ. ಮನುಷ್ಯನ ವ್ಯಕ್ತಿತ್ವದಲ್ಲಿ ಪ್ರಮುಖವಾಗಿ ಮೂರು ಅಂಗಗಳು ಕೂಡಿಕೊಂಡಿವೆ. ಅವುಗಳೆಂದರೆ ಬುದ್ಧಿ, ಮನಸ್ಸು ಮತ್ತು ಇಂದ್ರಿಯಗಳುಳ್ಳ ದೇಹ. ಇವುಗಳಲ್ಲಿ ಬುದ್ಧಿ ಒಂದೆಡೆಯಿದ್ದರೆ ಇಂದ್ರಿಯಗಳು ಇನ್ನೊಂದು ಕಡೆ ಇವೆ. ಬುದ್ಧಿಯಲ್ಲಿ ಅರಿವು ತುಂಬಿ ಅದು ಪ್ರಬಲವಾದರೆ, ಅದರಂತೆ ಮನಸ್ಸು-ಇಂದ್ರಿಯಗಳು ಕಾರ್ಯಪ್ರವೃತ್ತವಾಗುತ್ತವೆ. ಹೀಗಾದಾಗಲೇ ಮಾನವನು ದೇವನಾಗುವ (ಒಳ್ಳೆಯವನಾಗುವ) ಸಾಧ್ಯತೆ ಅಧಿಕವಾಗುತ್ತದೆ. ತದ್ವಿರುದ್ಧವಾಗಿ, ಇಂದ್ರಿಯಗಳು ಬಲಶಾಲಿಯಾಗಿ ಅವುಗಳ ಇಚ್ಛೆಯಂತೆ ಮನಸ್ಸು-ಬುದ್ಧಿಗಳೆರಡೂ ಕೆಲಸ ಮಾಡತೊಡಗಿದರೆ ಮಾನವನು ದಾನವನಾಗುವ (ಕೆಟ್ಟವನಾಗುವ) ಸಂಭವ ಬಲಿಯುತ್ತದೆ. ಶಾರೀರಿಕ ಅಂಗವೈಕಲ್ಯದಿಂದ ಮನುಷ್ಯನು ವಿಕಲಾಂಗನಾಗುವುದಿಲ್ಲ. ಆದರೆ ಬೌದ್ಧಿಕ ವೈಕಲ್ಯದಿಂದ ಸಂಪೂರ್ಣ ವಿಕಲಾಂಗನಾಗಿ ಪಶುವೇ ಆಗಿಬಿಡುತ್ತಾನೆ. ಆದುದರಿಂದ ಹಿತಕಾರಕ ವ್ಯಕ್ತಿತ್ವ ವಿಕಸನವಾಗಬೇಕಾದರೆ ಬುದ್ಧಿ ಬಲಶಾಲಿಯಾಗುವಂತೆ ಪ್ರಯತ್ನವಾಗಬೇಕು. ಒಳಿತು-ಕೆಡುಕುಗಳ ಅರಿವನ್ನು ತುಂಬಿದ ಬುದ್ಧಿಗೇ ವಿವೇಕವೆನ್ನುವರು. ಇಂತಹ ವಿವೇಕೋದಯಕ್ಕೆ ಒಳ್ಳೆಯ ಆಲೋಚನೆಯ ಜೊತೆಗೆ ಉತ್ತಮ ಪ್ರಾರ್ಥನೆಯೂ ಬೇಕು. ಅದಕ್ಕಾಗಿ ಪೂರ್ವಜರು “ಧಿಯೋ ಯೋ ನಃ ಪ್ರಚೋದಯಾತ್.“ ಎಂದು ಪ್ರಾರ್ಥಿಸಿದರು.

ಹೀಗೆ ಮನಸ್ಸು ಬುದ್ಧಿಗಳಿಗೆ ಉತ್ತಮ ಆಹಾರವನ್ನು ಸಂಸ್ಕೃತ ಸಾಹಿತ್ಯ ಮಾನವ ಸಮಾಜಕ್ಕೆ ನೀಡಿದೆ. ಜೊತೆಗೆ ಶಾರೀರಿಕ ದೃಢತೆಗೂ ಈ ಸಾಹಿತ್ಯದಲ್ಲಿ ವಿಪುಲ ಸಂಗ್ರಹಗಳಿವೆ. ಉದಾಹರಣೆಯಾಗಿ ಧನ್ವಂತರಿಯು ವೈದ್ಯಶ್ರೇಷ್ಠರಾದ ವಾಗ್ಭಟರಲ್ಲಿ “ಕೋರುಕ್ ?” ಅಂದರೆ ಯಾರು ರೋಗ ಬಾರದವರು? ಎಂದು ಪ್ರಸ್ನಿಸಿದಾಗ ಅವರು ’ಹಿತಭುಕ್, ಮಿತಭುಕ್, ಶಾಕಭುಕ್.’ ಎಂದು ಹೇಳಿದರು.  ಅದರರ್ಥ “ ಯಾರು ಹಿತಮಿತವಾಗಿ ಆಹಾರವನ್ನು ಸೇವಿಸುತ್ತಾ, ಕಾಯಿಪಲ್ಲೆಗಳನ್ನೇ ಹೆಚ್ಚು ಹೆಚ್ಚಾಗಿ ಉಪಯೋಗಿಸುವರೋ ಅವರೇ ಆರೋಗ್ಯವಂತರು.” ಎಂದು. ಇದೇ ರೀತಿ ಆಯುರ್ವೇದ, ಯೋಗಶಾಸ್ತ್ರಗಳಲ್ಲಿ ದೇಹಾರೋಗ್ಯವನ್ನು ಚೆನ್ನಾಗಿಡುವ ಕುರಿತು ಸಾರ್ವಕಾಲಿಕವೂ, ಸಾರ್ವಜನೀನವೂ ಆದ ಮಾರ್ಗವನ್ನು ಹೇಳಿದೆ.

ಒಟ್ಟಿನಲ್ಲಿ ಸಮಗ್ರ ಸಂಸ್ಕೃತ ಸಾಹಿತ್ಯ ನಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳಲು ಬೇಕಾದ ಮನೋಬಲ, ಬುದ್ಧಿಬಲ, ಶರೀರಬಲ, ಆತ್ಮಬಲಗಳನ್ನು ಒದಗಿಸಿ ಕೊಡುತ್ತದೆ. ಮನುಷ್ಯರಾದ ನಾವು ”ಉದ್ಧರೇದಾತ್ಮನಾತ್ಮಾನಮ್.” ಎಂಬಂತೆ ನಮ್ಮ ಬಾಳಿಗೆ ನಾವೇ ಶಿಲ್ಪಿಗಳು. ಎಂದರಿತು, ಸಂಸ್ಕೃತವನ್ನಾಶ್ರಯಿಸಿ, ನಮ್ಮ ವ್ಯಕ್ತಿತ್ವವನ್ನು ನಾವು ರೂಪಿಸಿ ಕೊಳ್ಳೋಣ. 

ಸಂಗ್ರಾಹಕಃ
ಪರಮೇಶ್ವರ ಪುಟ್ಟನ್ಮನೆ