ಸರ್, ಎಂ. ವಿಶ್ವೇಶ್ವರಯ್ಯ
ಮಾನ್ಯರೇ ಮತ್ತು
ಸಭ್ಯರೇ,
ಜೀವನ ಬಿಸಿ ಚಹಾ
ಇದ್ದಂತೆ! ಅದನ್ನು ಕುಡಿದರೆ ಕುಡಿದು ಬರಿದಾಗುತ್ತದೆ, ಇಟ್ಟರೆ ಅದು ತಣಿದು ಹಾಳಾಗುತ್ತದೆ.
ಹೀಗಿರುವಾಗ ನಾವು ಈ ಜೀವನ ಗತಿಯಲ್ಲಿ ಅನುಸರಿಸ ಬೇಕಾದದ್ದು ಯಾವುದು? ಎಂದು ಕೊಂಡರೆ, ನಮ್ಮ
ಮುಂದಿನ ಜನರಿಗೆ ಹಿತವಾದದ್ದನ್ನು ನಾವು ಮಾಡಬೇಕು! ಎಂಬುದು ಸ್ಪಷ್ಟವಾಗುತ್ತದೆ. ಹೀಗೆ
ಜನಹಿತವನ್ನು ಮಾಡಿದವರಲ್ಲಿ ಪ್ರಮುಖರೂ ಪ್ರಾತಃಸ್ಮರಣೀಯರೂ ಆದ ಸರ್, ಎಂ. ವಿಶ್ವೇಶ್ವರಯ್ಯನವರ
ಕುರಿತು ನನ್ನೆರಡು ಮಾತುಗಳು.
ವಿಶ್ವೇಶ್ವರಯ್ಯನವರು 1860ರ ಸೆಪ್ಟಂಬರ್ ತಿಂಗಳ 15ರಂದು ಆಗಿನ ಮೈಸೂರು ಸಂಸ್ಥಾನದ ಕೋಲಾರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ
ಮುದ್ದೇನಹಳ್ಳಿ ಗ್ರಾಮದಲ್ಲಿ ತಂದೆ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮರ
ಪುತ್ರರಾಗಿ ಜನಿಸಿದರು.
ವಿಶ್ವೇಶ್ವರಯ್ಯನವರ
ಪ್ರಾಥಮಿಕ ಶಿಕ್ಷಣ ಮುದ್ದೇನಹಳ್ಳಿಯಲ್ಲೇ
ನಡೆಯಿತು. ತಂದೆ ಶ್ರೀನಿವಾಸಶಾಸ್ತ್ರಿಗಳು ತೀರ್ಥಯಾತ್ರೆಯ
ನಿಮಿತ್ತ ರಾಯಚೂರಿನಿಂದ ಹಿಂದಿರುಗುವಾಗ ಮಾರ್ಗಮಧ್ಯೆ
ಸ್ವರ್ಗಸ್ಥರಾದರು. ಆಗ
ವಿಶ್ವೇಶ್ವರಯ್ಯನವರ ವಯಸ್ಸು ಕೇವಲ 15
ವರ್ಷ. ತಂದೆಯ ಮರಣದ ನಂತರ ಸೋದರಮಾವ ರಾಮಯ್ಯನವರು ವಿಶ್ವೇಶ್ವರಯ್ಯನವರನ್ನು ಬೆಂಗಳೂರಿಗೆ ಕರೆಯಿಸಿ, (1875 ರಲ್ಲಿ)
ವೆಸ್ಲಿಯನ್
ಮಿಷನ್ ಪ್ರೌಡಶಾಲೆಗೆ
ಸೇರಿಸಿದರು.
ಹೈಸ್ಕೂಲು ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣವನ್ನು ಮುಂದುವರೆಸಿದರು. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಮೆಟ್ರಿಕ್
ಪರಿಕ್ಷೆ ಕಟ್ಟಲೂ ಅವರ ಬಳಿ ಹಣ ಇರಲಿಲ್ಲ. ತಾಯಿಯ ಬಳಿಯೂ ಹಣವಿರಲಿಲ್ಲ, ಮನೆಯಲ್ಲಿದ್ದ ಪಾತ್ರೆಗಳನ್ನು ಅಡವಿಟ್ಟು ಮಗನಿಗೆ 12ರೂ ಗಳನ್ನು ಕೊಟ್ಟು ಕಳುಹಿಸಿದಳು ತಾಯಿ ವೆಂಕಟಲಕ್ಷ್ಮಮ್ಮ. ಹೀಗೆ ಹಣಹೊಂದಿಸುತ್ತಾ ಕಷ್ಟಪಟ್ಟು
ವಿದ್ಯಾಭ್ಯಾಸ ಮಾಡಿದರು.
ಗಣಿತ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ
ಪಡೆದಿದ್ದ ವಿಶ್ವೇಶ್ವರಯ್ಯನವರು
1881ರಲ್ಲಿ
ಬಿ. ಎ. ಪರೀಕ್ಷೆಯಲ್ಲಿ ಉನ್ನತ ಶ್ರೇಣೀಯಲ್ಲಿ
ತೇರ್ಗಡೆಯಾದರು. ಉನ್ನತವ್ಯಾಸಂಗಕ್ಕಾಗಿ ಮೈಸೂರು
ಸರ್ಕಾರ ನೀಡುವ ವಿದ್ಯಾರ್ಥಿ
ವೇತನ ಪಡೆದು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ
ವಿಶ್ವೇಶ್ವರಯ್ಯನವರು ಪುಣೆಗೆ ತೆರಳಿದರು. ಕೇವಲ ತಮ್ಮ
23 ನೆ ವಯಸ್ಸಿನಲ್ಲಿ L.C.E ಮತ್ತು E.C.E.L ಪರೀಕ್ಷೆಯಲ್ಲಿ
ಇಡೀ ಬೊಂಬಾಯಿ ಪ್ರಾಂತ್ಯಕ್ಕೆ ಮೊದಲ ಶ್ರೇಣೀಯಲ್ಲಿ ಪ್ರಥಮ ಸ್ಥಾನಗಳಿಸಿ ಪಾಸಾದರು. ಇದು ಈಗಿನ ಬಿ. ಇ. ಡಿಗ್ರಿಗೆ ಸಮ. ನಂತರ ಬೊಂಬಾಯಿ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು
ಪ್ರಾರಂಭಿಸಿ,
ಸತತ 24 ವರ್ಷಗಳಷ್ಟು ಕಾಲ ಇಂಜಿನಿಯರಿಂಗ್ ವಿಭಾಗದ ಎಲ್ಲ ಉನ್ನತ ಹುದ್ದೆಗಳಿಗೂ, ತಮ್ಮ ಸಾಮರ್ಥ್ಯ ಮತ್ತು ದಕ್ಷತೆಗಳಿಂದ ಮೇಲೇರಿದರು.
ಇವರ ಸಾಮರ್ಥ್ಯ, ಬುದ್ಧಿವಂತಿಕೆ, ಕಾಲಕ್ಷಮತೆ, ಪ್ರಾಮಾಣಿಕತೆ ಇವುಗಳನ್ನ ಗಮನಿಸಿ ಸರ್ಕಾರ 18 ಆಂಗ್ಲ
ಅಧಿಕಾರಿಗಳ ಮೇಲೆ ಭಡ್ತಿ
ನೀಡಿತು.
ಆಗಿನ ಕಾಲದಲ್ಲಿ ಚೀಫ್
ಇಂಜಿನಿಯರ್ ಸ್ಥಾನ ಆಂಗ್ಲರಿಗೆ ಮೀಸಲಾಗಿತ್ತು. ನ್ಯಾಯ ಸಮ್ಮತವಾಗಿ ತಮಗೆ ಸಿಗಬೇಕಿದ್ದ ಸ್ಥಾನ
ಸಿಗಲಿಲ್ಲ ಅದಕ್ಕಾಗಿ ಆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು.
ಅದನ್ನು ಹಿಂತೆಗೆದುಕೊಳ್ಳುವಂತೆ ಗೌರ್ವನರ್ ಮನವಿ ಮಾಡಿಕೊಂಡರೂ ವಿಶ್ವೇಶ್ವರಯ್ಯನವರು "ಭಾರತೀಯರ ಸಾಮರ್ಥ್ಯ ಕಡೆಗಣಿಸುವ
ದುರಭಿಮಾನಕ್ಕೆ ತಲೆಬಾಗಲಾಗದು" ಎಂದು ತಮ್ಮ
ನಿಲುವನ್ನು ಸಡಿಲಿಸದೆ 1908ನೆ ಮೇ ತಿಂಗಳಲ್ಲಿ ಬೊಂಬಾಯಿ ಸರ್ಕಾರದ
ಕೆಲಸದಿಂದ
ನಿವೃತ್ತಿ ಹೊಂದಿ, ಲಂಡನ್ ಪ್ರವಾಸ ಕೈಗೊಂಡರು. ಅಲ್ಲಿ ಅನೇಕ
ಕಾರ್ಖಾನೆಗಳಿಗೆ ಭೇಟಿ ನೀಡಿ ನಮ್ಮ
ದೇಶಕ್ಕೆ ಬೇಕಾಗುವ ಎಲ್ಲ ತಂತ್ರಜ್ಞಾನ,
ಮಾಹಿತಿಯನ್ನು
ಪಡೆದುಕೊಂಡರು. ಅಲ್ಲಿಂದ ಬಂದ ಮೇಲೆ ಮೈಸೂರಿನಲ್ಲಿ ಅನೇಕ ಕೆರೆಕಟ್ಟೆ , ಕಾಲುವೆ, ಜಲಾಶಯದ ಯೋಜನೆಗಳನ್ನು ಅಚ್ಚುಕಟ್ಟಾಗಿ ಕಟ್ಟಿದರು. ಅವರ ಈ ಕೆಲಸಗಳಿಂದ ಸಂತೃಪ್ತರಾದ ಮಹಾರಾಜರು ಅವರನ್ನು ದಿವಾನರನ್ನಾಗಿ ನೇಮಿಸಿದರು. ಆನಂತರ ಇವರು ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಗೆ ತಂದರು.
ಅಸ್ಪೃಶ್ಯರ
ಮತ್ತು ಹಿಂದುಳಿದವರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಮಾಡಿದರು. ಸ್ತ್ರೀ
ಶಿಕ್ಷಣಕ್ಕೆ ಗಮನ ಹರಿಸಿದರು. ಭದ್ರಾವತಿ ಕಬ್ಬಿಣ ಕಾರ್ಖಾನೆಯ ಸ್ಥಾಪನೆ, ಕನ್ನಂಬಾಡಿ ಅಣೆಕಟ್ಟೆಯ ಸ್ಥಾಪನೆ,
ಕೋಲಾರದ
ಚಿನ್ನದ ಗಣಿಗೆ ಮೊಟ್ಟ ಮೊದಲಬಾರಿಗೆ ವಿದ್ಯುತ್ ಪೂರೈಕೆ, ಗಂಧದ ಎಣ್ಣೆ ಕಾರ್ಖಾನೆ ಮತ್ತು ಸಾಬೂನು
ಕಾರ್ಖಾನೆಯ ಸ್ಥಾಪನೆಗಳೇ ಮೊದಲಾದ ಅಭಿವೃದ್ಧಿಪರ ಯೋಜನೆಗಳನ್ನು ರೂಪಿಸಿ, ಸಕ್ರಿಯವಾಗಿ
ಅವುಗಳನ್ನು ಪೂರೈಸಿದರು.
ಇಷ್ಟೆಲ್ಲ ಕೆಲಸಗಳನ್ನು ಮಾಡಿ, 102 ವರ್ಷಗಳ
ಕಾಲ ಸ್ವಚ್ಚ ಸುಂದರ ಬದುಕನ್ನು ನಡೆಸಿದ ಅದ್ವೀತಿಯ, ಅಪ್ರತಿಮ, ದೇಶಭಕ್ತ, ಚತುರ
ಇಂಜಿನಿಯರ್, ದಕ್ಷ ಆಡಳಿತಗಾರ, ಪ್ರಾಮಾಣಿಕ, ಸಹೃದಯಿ, ದಯಾಮಯಿ ಅವರ 155ನೆಯ
ಹುಟ್ಟು ಹಬ್ಬದ ಸಂದರ್ಭದಲ್ಲಿ
ಮಾತಿನಿಂದ
ವಂದಿಸುತ್ತಾ. “ನಾವು ಇಂದು ಪಡೆದಿರುವ ಸೌಲಭ್ಯ, ಸೌಕರ್ಯ, ಶಿಕ್ಷಣ, ಪರಿಣತಿ, ಅಭಿವೃದ್ಧಿ
- ನಮ್ಮ ಹಿಂದಿನ ಅನೇಕರ ತ್ಯಾಗ, ಬಲಿದಾನ, ಕಾಳಜಿ, ಮತ್ತು ಶ್ರಮದ ತಳಹದಿಯನ್ನು
ಅವಲಂಬಿಸಿದೆ.” ಎಂಬುದನ್ನು ಮರೆಯದೇ
ನೆನೆಪಿಸಿ ಕೊಳ್ಳುತ್ತಾ, ಇಂಥ ಮಹಾತ್ಮರ ಸ್ಮರಣೆಯಿಂದ, ನಮಗೆ ’ನಮ್ಮ ಮುಂದಿನ ಜನರ ಹಿತಕ್ಕಾಗಿ
ದುಡುಯುವ, ಅವಕಾಶ ಭಾಗ್ಯಗಳು ಪದೇ ಪದೇ ಬರಲಿ.’ ಎಂದು ಹಾರೈಸುತ್ತಾ, ನನ್ನ ಮಾತಿಗೆ ಮಂಗಳ
ಹೇಳುತ್ತೇನೆ.
ಅಕ್ಕಿಯೊಳಗನ್ನವನು ಮೊದಲಾರು ಕಂಡವರು | ಅಕ್ಕರದ ಬರಹಕ್ಕೆ ಮೊದಲಿಗದನಾರು || ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ | ದಕ್ಕುವುದೇ ಜಸ ನಿನಗೆ -ಮಂಕುತಿಮ್ಮ ||
No comments:
Post a Comment