Monday, September 28, 2015

Panchagavyam!



“ಪಂಚಗವ್ಯ ವಿಧಾನ”

ಗೋಮೂತ್ರಂ ಗೋಮಯಂ ಕ್ಷೀರಂ ದಧಿ ಸರ್ಪಿಃ ಕುಶೋದಕಮ್ |

ಪಂಚಗವ್ಯಮಿತಿ ಪ್ರೋಕ್ತಂ ಸರ್ವಪಾತಕನಾಶನಮ್ ||

ಪಂಚಗವ್ಯ ಪ್ರಮಾಣ ಕೋಷ್ಠಕ

ಗವ್ಯ ಎಂದರೆ ಹಸುವಿಗೆ ಸಂಬಂಧಿಸಿದುದು, ಪಂಚ ಎಂದರೆ ಐದು. ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ. ಈ ಐದು ವಸ್ತುಗಳನ್ನು ಸೇರಿಸಿದಾಗ ಉಂಟಾಗುವುದೇ ಪಂಚಗವ್ಯ. ಹಸುವಿನ ಹಾಲು ಬುದ್ಧಿಯನ್ನು ವರ್ಧಿಸುತ್ತದೆ. ಮೊಸರು ಬಲವರ್ಧಕ. ತುಪ್ಪದ ಬಳಕೆಯಿಂದ ದೇಹಕಾಂತಿ ಹೆಚ್ಚುತ್ತದೆ. ಗೋಮೂತ್ರ ಚೈತನ್ಯದಾಯಕ. ಗೋಮಯ ಕ್ರಿಮಿನಾಶಕ. ಹೀಗೆ ಮಾನವನ ಉತ್ತರೋತ್ತರ ಅಭಿವೃದ್ಧಿಗೆ ಕಾರಣವಾದ ಗೋವಿನ ಉತ್ಪನ್ನವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಒಟ್ಟುಗೂಡಿಸಿ ಪಂಚಗವ್ಯವನ್ನು ತಯಾರಿಸಲಾಗುತ್ತದೆ.

೧) ಗೋಮೂತ್ರ

ಕಪಿಲೆ, ತಾಮ್ರವರ್ಣ, ಕರಿ ಮತ್ತು ಬಿಳುಪಿನ ಮಿಶ್ರವರ್ಣದ ಆಕಳಿನ ಮೂತ್ರ ಶ್ರೇಷ್ಠವಾದದ್ದು. ಬೆಳಿಗ್ಗೆ ಆಕಳು ಹೊಯ್ಯುವ ಮೊದಲ ಮೂತ್ರವಾದರೆ ಪ್ರಶಸ್ತ. ಈ ಮೂತ್ರವನ್ನು ನಾಲ್ಕು ಮಡಿಕೆ ಮಾಡಿದ ಶುದ್ಧ ಬಟ್ಟೆಯಿಂದ ಸೋಸಿ ಪಂಚಗವ್ಯಕ್ಕೆ ಬಳಸಬೇಕು.


೨) ಗೋಮಯ

ಕಪಿಲೆ, ಬಿಳಿ ಬಣ್ಣ, ಕರಿ ಮತ್ತು ಬಿಳುಪಿನ ಮಿಶ್ರವರ್ಣದ ಆಕಳಿನ ಸಗಣಿ ಶ್ರೇಷ್ಠವಾದದ್ದು. ಶುದ್ಧ ಸ್ಥಳದಲ್ಲಿರುವ ಮತ್ತು ಆಗ ತಾನೇ ಆಕಳಿನಿಂದ ಹೊರಬಂದ ಸಗಣಿ ಪ್ರಶಸ್ತ. ಈ ಸಗಣಿಯನ್ನು ಅದೇ ಪ್ರಮಾಣದ ಗೋಮೂತ್ರದೊಂದಿಗೆ ಬೆರೆಸಿ, (ನೀರಿನಲ್ಲಿ ಬೆರೆಸಿ) ನಾಲ್ಕು ಮಡಿಕೆ ಮಾಡಿದ ಶುದ್ಧ ಬಟ್ಟೆಯಿಂದ ಸೋಸಿ ಪಂಚಗವ್ಯಕ್ಕೆ ಬಳಸಬೇಕು.


೩) ಹಾಲು

ಕಪಿಲೆ, ಬಂಗಾರ ವರ್ಣದ ಆಕಳಿನ ಹಾಲು ಸಿಕ್ಕಿದರೆ ಉತ್ತಮ. ಹಾಲು ಕರೆದು ಅರ್ಧ ಘಂಟೆಯ ಒಳಗೆ ಅದನ್ನು ಸೋಸಿ ಬಳಸುವುದು ಪ್ರಶಸ್ತ. ಇಂಥ ಹಾಲನ್ನು ಮೇಲ್ಕಂಡ ಆಯ್ದ ಪ್ರಮಾಣಗಳಲ್ಲಿ ಪಂಚಗವ್ಯಕ್ಕೆ ಬೆರೆಸಬೇಕು.


೪) ತುಪ್ಪ

ಕಪಿಲೆ, ಕರೀ ಬಣ್ಣದ, ಕೆಂಪು ವರ್ಣದ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಶ್ರೇಷ್ಠ. ನೀರು ಬೆರೆಸದ ಹಾಲಿನಿಂದ ಮೊಸರು ಮಾಡಿ, ಆ ಮೊಸರನ್ನು ಕಡೆದು ಬೆಣ್ಣೆ ತೆಗೆದು ಅಂದೇ ತಯಾರಿಸಿದ ತುಪ್ಪ ಪ್ರಶಸ್ತ. ಮೇಲ್ಕಂಡ ಪ್ರಮಾಣಗಳಲ್ಲಿ ಪಂಚಗವ್ಯಕ್ಕೆ ತುಪ್ಪವನ್ನು ಬಳಸಬೇಕು.


೫) ಮೊಸರು

ಕಪಿಲೆ, ನೀಲಿ ಬಣ್ಣದ, ಬಿಳೀ ವರ್ಣದ ಆಕಳಿನಿಂದ ಪಡೆದರೆ ಶ್ರೇಷ್ಠವೆನಿಸುತ್ತದೆ. ಆಕಳ ಹಾಲಿಗೆ ನೀರು ಬೆರೆಸದೆ ಶುದ್ಧವಾಗಿ ಮಾಡಿದ ಮೊಸರು ಪ್ರಶಸ್ತ. ಈ ಮೊಸರನ್ನು ಆಯಾ ಪ್ರಮಾಣಗಳಲ್ಲಿ ಪಂಚಗವ್ಯಕ್ಕೆ ಬಳಸುವುದು.

೬) ದರ್ಭೆ ನೀರು

ಹಸಿದರ್ಭೆಯನ್ನು ಅರೆದು, ನೀರು ಬೆರೆಸಿ, ಸೋಸುವುದು. ಅಥವಾ ಶುದ್ಧವಾದ ಒಣಗಿದ ದರ್ಭೆಯನ್ನು ನೀರಲ್ಲಿ ನೆನೆಸಿ, ಅದನ್ನು ಪಂಚಗವ್ಯಕ್ಕೆ ಮೇಲ್ಕಂಡ ಯಾವುದಾದರೊಂದು ಪ್ರಮಾಣದಲ್ಲಿ ಬೆರೆಸುವುದು ಯುಕ್ತವೆನಿಸುತ್ತದೆ. ಈ ದರ್ಭೆ ನೀರನ್ನು ಬಳಸಲೇ ಬೇಕೆಂಬ ಅನಿವಾರ್ಯತೆ ಇಲ್ಲ. ಸಿಗುವಂತಿದ್ದರೆ ಬಳಸುವುದು ಉತ್ತಮ.

ಹೀಗೆ ಪಂಚಗವ್ಯವನ್ನು ತಯಾರಿಸಿ, ಕನಿಷ್ಠ ಹತ್ತು ಸಲ ಗಾಯತ್ರೀ ಮಂತ್ರದಿಂದ ಅಭಿಮಂತ್ರಿಸಿ, “ಓಂ” ಎಂದು ಪ್ರಣವ ಮಂತ್ರವನ್ನು ಹೇಳಿ, ಒಬ್ಬನು (೫೦ ರಿಂದ ೧೦೦ಕಿಲೋ ಭಾರವುಳ್ಳವನು) ಅರ್ಧ ಲೋಟದವರೆಗೆ (೫೦ ರಿಂದ ೧೦೦ ಎಂ. ಎಲ್. ವರೆಗೆ) ತೆಗೆದು ಕೊಳ್ಳಬಹುದು.

ಯತ್ವಗಸ್ಥಿಗತಂ ಪಾಪಂ ದೇಹೇ ತಿಷ್ಠತಿ ಮಾಮಕೇ |
ಪ್ರಾಶನಾತ್ಪಂಚಗವ್ಯಸ್ಯ ದಹತ್ವಗ್ನಿರಿವೇಂಧನಮ್ ||

ಇಂಥ ಪಂಚಗವ್ಯವನ್ನು ೧೫, ೩೦ ಅಥವಾ ೪೫ ದಿನಗಳವರೆಗೆ ಸೇವಿಸುವುದರಿಂದ ಅವನಿಗೆ ಚರ್ಮವ್ಯಾಧಿಗಳು, ಅಸ್ಥಿಗತ ದೋಷಗಳು ಇದ್ದರೆ ಅವು ನಿಃಶೇಷವಾಗಿ ಪರಿಹಾರವಾಗುವವು. ಹೆಚ್ಚಾಗಿ ಕ್ರಿಮಿ ಪೀಡಿತರು, ಮೃತಗರ್ಭರು, ವಂಧ್ಯೆಯರು, ಚರ್ಮರೋಗಿಗಳು, ಅಸ್ಥಿವಾತ ರೋಗಿಗಳು ಇದನ್ನು ಕ್ರಮಬದ್ಧವಾಗಿ ಸೇವಿಸಿ ಗುಣಮುಖರಾಗಿದ್ದಾರೆ. ಒಟ್ಟಿನಲ್ಲಿ ಪಂಚಗವ್ಯ ಸರ್ವಪಾಪ ನಾಶಕವೂ, ರೋಗ ನಿವಾರಕವೂ, ಯಶಃ ಪ್ರದಾಯಕವೂ ಆಗಿದೆ.

ಸಂಗ್ರಾಹಕಃ

ಪರಮೇಶ್ವರ ಪುಟ್ಟನಮನೆ

 ಪಾಪು!


ಪಂಚಗವ್ಯ ಪ್ರಮಾಣಗಳಿಗೆ ನಾನು ಉಪಯೋಗಿಸಿದ ಆಕರ ಶ್ಲೋಕಗಳು...


೧) ಆಯುರ್ವೇದವಿಷಯದಲ್ಲಿ ಶಿರಸಿಯ ಪ್ರಸಿದ್ಧವೈದ್ಯರಾಗಿದ್ದ ಏ. ಎನ್. ಪಟವರ್ಧನರು ಸೂಚಿಸಿದ ಪ್ರಮಾಣವನ್ನು ಇಲ್ಲಿ ನಿರೂಪಿಸಿದ್ದೇನೆ.


೨) ಪ್ರಸ್ಥಪಾದಂ ಘೃತಂ ಪ್ರೋಕ್ತಂ ಗೋಮೂತ್ರಂ ದ್ವಿಗುಣಂ ಭವೇತ್ | ಗೋಮಯಂ ಕುಡಪಂ ಪ್ರೋಕ್ತಂ ದಧಿ ಪ್ರಸ್ಥಸಮನ್ವಿತಮ್ || ಕ್ಷೀರಂ ಪ್ರಸ್ಥದ್ವಯಂ ಪ್ರೋಕ್ತಮ್ ............. || ಭೊಧಾಯನ ಸೂತ್ರೇ ||


೩) ಗೋಮೂತ್ರಂ ದ್ವಿಗುಣಂ ಕ್ಷೀರಾತ್ಕ್ಷೀರಾರ್ಧಂ ದಧಿ ಕಥ್ಯತೇ |  
ತದರ್ಧಂ ಗೋಮಯಂ ಜ್ಞೇಯಂ ಗೋಮಯಾರ್ಧಂ ಘೃತಂ ಭವೇತ್ || ವಾತುಲಾಗಮೇ ||


೪) ಗೋಮೂತ್ರಂ ತು ಪಲಂ ಗ್ರಾಹ್ಯಮಂಗುಷ್ಠಾರ್ಧಂ ತು ಗೋಮಯಮ್ |  
ಪಯಸ್ತ್ರಿಪಲಮೇವಂ ಸ್ಯಾದ್ದಧಿ ದ್ವಿಪಲಮುಚ್ಯತೇ ||

ಘೃತಂ ಕುಶೋದಕಂ ಚೈವ ಪಲೇನೈಕೇನ ಸಮ್ಮಿತಮ್ | ಪ್ರಯೋಗಕಾರಿಕಾಯಾಮ್ ||


೫) ಗೋಮೂತ್ರಭಾಗಸ್ತಸ್ಯಾರ್ಧಂ ಶಕೃತ್ಕ್ಷೀರಸ್ಯ ಚ ತ್ರಯಮ್ | 
ದ್ವಯಂ ದಧ್ನೋ ಘೃತಸ್ಯೈಕಮೇಕಶ್ಚ ಕುಶವಾರಿಜಃ || ಸ್ಕಾಂದಪುರಾಣೇ ||

papu!

1 comment:

  1. ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete