Thursday, December 21, 2017

ಸಾಮಾಜದ ಶೋಷಣೆ ನಿರ್ಮೂಲನೆಗೆ ಸಹಕಾರ ತತ್ವವೊಂದೇ ಪರಿಣಾಮಕಾರೀ ಸಾಧನ! (ಒಂದು ಚರ್ಚೆ)


ಸಭ್ಯರೇ ಹಾಗೂ ಸಭಾಸದರೇ,
ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಮ್ |
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
ದೇವತೆಗಳು ಹೇಗೆ ನಾವು ನೀಡಿದ ಹವಿಸ್ಸನ್ನು ಸಮವಾಗಿ (ಒಟ್ಟಾಗಿ) ಸ್ವೀಕರಿಸುವರೋ ಹಾಗೆಯೇ ನಾವೂ ಕೂಡ ದೇವರು ದಯಪಾಲಿಸಿದ ಸಂಪತ್ತನ್ನು ಒಟ್ಟಾಗಿ ಅನುಭವಿಸೋಣ. ನಮ್ಮ ನಡೆ, ನುಡಿ ಅಷ್ಟೇ ಏಕೆ? ನಮ್ಮೆಲ್ಲರ ಮನಸ್ಸೂ ಕೂಡ  ಒಂದಾಗಿ ಸಾಗಲಿ. ಎಂದು ಬಯಸಿದ ನಮ್ಮ ಪೂರ್ವಜರು ಒಂದು ಉದಾತ್ತ ಸಮಾಜದ ಕನಸನ್ನು ಹೊತ್ತಿದ್ದರು.
  
ಈ ’ಸಮಾಜ’ ಎನ್ನುವ ಪದ ತುಂಬಾ ವಿಶಿಷ್ಟವಾದದ್ದು ಮತ್ತು ವ್ಯಾಪಕ ಅರ್ಥವುಳ್ಳದ್ದಾಗಿದೆ. ಮಾನವೀಯ ಮೌಲ್ಯಗಳನ್ನು ಮತ್ತು ಆದರ್ಶಗಳನ್ನು ಮೈಗೂಡಿಸಿ ಕೊಂಡಿರುವ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಒಟ್ಟಾಗಿ ಸಮಾಜ ಎಂದು ಹಿರಿಯರು ಗುರುತಿಸಿದ್ದಾರೆ. ಅಲ್ಲದೇ ಸುಸಂಸ್ಕೃತರ ಅಂದರೆ ಗುಣವಂತರ ಸಂಬಂಧ ಮತ್ತು ಸಮುದಾಯಗಳನ್ನು ನಾವು ಸಮಾಜವೆಂದು ಕರೆಯುತ್ತೇವೆ. ಇಂಥ ಸಮಾಜದಲ್ಲಿ ಶೋಷಣೆ ಒಂದು ರೋಗದಂತೆ ಕಂಡು ಬರುತ್ತದೆ. ಈ ರೋಗಕ್ಕೆ ಮದ್ದನ್ನು ಕಂಡು ಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ.

ಜನ ಸಮುದಾಯದಲ್ಲಿ ಅಥವಾ ಪ್ರತ್ಯೇಕ ಜನರಲ್ಲಿ ಇರುವ ನ್ಯೂನತೆಗಳನ್ನನುಸರಿಸಿ ಮತ್ತು ತಮಗೆ ದೊರೆತ ಸ್ಥಾನ, ಮಾನ ಮತ್ತು ಬಲಗಳ ಮದದಿಂದ ಒಬ್ಬರು ಮತ್ತೊಬ್ಬರನ್ನು ಶೋಷಿಸುವುದು ಕಂಡು ಬರುತ್ತದೆ. ಎಂಬಲ್ಲಿಗೆ ಶೋಷಣೆ ಎಂಬ ರೋಗಕ್ಕೆ ಎರಡು ಜನ ಬೇಕೆಂಬುದು ಸ್ಪಷ್ಟವಾಯಿತು. ಒಬ್ಬ ಶೋಷಣೆಗೆ ಒಳಪಡುವವ, ಇನ್ನೊಬ್ಬ ಶೋಷಣೆ ಮಾಡುವವ. ಶೋಷಣೆ ಮಾಡುವವನನ್ನು ತಿದ್ದುವುದಾದರೆ; ಅದು ಉತ್ತಮ ಶಿಕ್ಷಣದಿಂದ ಅಥವಾ ಜೀವನ ಮೌಲ್ಯವನ್ನು ಅರ್ಥಮಾಡಿ ಕೊಳ್ಳುವುದರಿಂದ ಮಾತ್ರ ಸಾಧ್ಯ. ಪ್ರಕೃತ ವಿಷಯವನ್ನು ನೋಡಿದಾಗ ಇಲ್ಲಿ ಶೋಷಣೆಗೆ ಒಳಪಡುವವನ ನ್ಯೂನತೆ ಅಥವಾ ಕೊರತೆಗಳ ಕಡೆಗೆ ಗಮನ ಹರಿಸಿದ್ದಾರೆ. ಅಲ್ಲದೇ ಅದನ್ನು ತಿದ್ದುವ ಪ್ರಯತ್ನಕ್ಕೇ ಹೆಚ್ಚು ಒತ್ತು ಕೊಡಲಾಗಿದೆ. ಹಾಗಾದರೆ ಸಮಾಜದ ಒಬ್ಬ ವ್ಯಕ್ತಿಗೆ ಬರಬಹುದಾದ ಕೊರತೆಯಾದರೂ ಯಾವುದು? ಅದನ್ನೇ ಪಟ್ಟಿಮಾಡಿ ಹೇಳಬೇಕೆಂದರೆ: ಆಹಾರದ ಕೊರತೆ, ಬಟ್ಟೆಯ ಕೊರತೆ ಅಂದರೆ ಮರ್ಯಾದೆಯಾಗಿ ಬದುಕಲು ಬೇಕಾದ ಸಾಮಗ್ರಿಗಳ ಕೊರತೆ, ಉದ್ಯೋಗ ಅವಕಾಶಗಳ ಕೊರತೆ, ಆರೋಗ್ಯದ ಕೊರತೆ ಮತ್ತು ವಿದ್ಯೆಯ ಕೊರತೆ. ಇಲ್ಲಿ ಕೊನೆಯೆರಡು ಕೊರತೆಗಳನ್ನು ಬಿಟ್ಟರೆ ಮೊದಲಿನ ಎಲ್ಲ ಕೊರತೆಗಳೂ ಆರ್ಥಿಕ ಸ್ಥಿರತೆಯಿಂದ ದೂರವಾಗುವಂಥವು. ಹೀಗಾಗಿ ಆರ್ಥಿಕ ಸ್ಥಿರತೆಯನ್ನು ಜನರು ಕಂಡು ಕೊಂಡರೆ ಸಮಾಜದ ಬಹುತೇಕ ಶೋಷಣೆಗಳು ದೂರಾಗುತ್ತವೆ. ಅಂತೂ “ಶೋಷಣೆ ಎಂಬ ರೋಗಕ್ಕೆ ತುತ್ತಾಗುವವರಲ್ಲಿ ಅರ್ಧದಷ್ಟು ಜನರನ್ನು ಈ ರೋಗದಿಂದ ದೂರಗೊಳಿಸಬಹುದು” ಎಂಬುದು ನಮಗೆ ಸ್ಪಷ್ಟವಾಯಿತು. ಅದು ಆರ್ಥಿಕ ಸಬಲೀಕರಣದಿಂದ ಸಾಧ್ಯ. ಇದು ಸಹಕಾರೀ ತತ್ವದ ಪರಮಧ್ಯೇಯವೂ ಆಗಿದೆ. ಹಾಗಾಗಿ ’ಸಮಾಜದಲ್ಲಿ ಹರಡಿರುವ ಶೋಷಣೆ ಎಂಬ ರೋಗಕ್ಕೆ ಸಹಕಾರೀ ತತ್ವ ಒಂದು ಪರಿಣಾಮಕಾರೀ ಔಷಧ’ ಎಂಬಲ್ಲಿ ಎರಡು ಮಾತಿಲ್ಲ!

ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಲ್ಲಿ ಸುಮಾರು ಕ್ರಿ. ಶ. ೧೯೦೪ರಿಂದಲೇ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ. ಭಾರತದಲ್ಲಿ ಒಂದು ನೂರು ವರ್ಷಗಳನ್ನು ಪೂರೈಸಿರುವ ಸಹಕಾರಿ ರಂಗವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ, ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಮತ್ತು ರೈತರ ಅಭಿವೃದ್ಧಿಯಲ್ಲಿ ಅಚ್ಚರಿಯ ಕೊಡುಗೆಯನ್ನು ನೀಡಿರುತ್ತದೆ.

ಕರ್ನಾಟಕ ಸರ್ಕಾರದಲ್ಲಿ ಸಹಕಾರ ಇಲಾಖೆಯು ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. ಈ ಇಲಾಖೆಯು ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ವಿವಿಧ ಇತರೆ ಇಲಾಖೆಗಳ ಸಂಪೂರ್ಣ ಸಹಕಾರ ಹಾಗೂ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಹಕಾರ ಇಲಾಖೆಯು ವಿವಿಧ ಸಹಕಾರ ಸಂಸ್ಥೆಗಳ ಆಡಳಿತ ಮತ್ತು ಕಾರ್ಯವ್ಯವಹಾರವನ್ನು ನೋಡಿಕೊಳ್ಳುತ್ತದೆ. ಜವಳಿ, ರೇಷ್ಮೆ, ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಕ್ಕರೆ ತೋಟಗಾರಿಕೆ, ಕೃಷಿ ಮತ್ತು ನೀರಾವರಿ ಇಲಾಖೆಗಳು, ಅದಕ್ಕೆ ಸಂಬಂಧಿಸಿದ ಸಂಘಗಳ ಕಾರ್ಯನಿರ್ವಹಣೆಗೆ ಹಣಕಾಸಿನ ನೆರವನ್ನು ನೀಡುವುದರ ಜೊತೆಗೆ, ಆಯಾ ವಿಭಾಗದ ತಾಂತ್ರಿಕ ಮಾರ್ಗದರ್ಶನಗಳನ್ನೂ ನೀಡುತ್ತವೆ.

ಸಾಲ ಮತ್ತು ಸಾಲೇತರ ಕ್ಷೇತ್ರಗಳಲ್ಲಿ ಸಹಕಾರ ಸಂಸ್ಥೆಗಳು ಅಣಬೆಗಳಂತೆ ಬೆಳೆದಿವೆ. ಸಾಲ ಮತ್ತು ಸಾಲೇತರ ಸಹಕಾರ ಸಂಸ್ಥೆಗಳೆರಡೂ ಸಹ ಪ್ರಾಥಮಿಕ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಹಂತದ ಕಾರ್ಯಭಾರವನ್ನು ನಿರ್ವಹಿಸುತ್ತದೆ. ಅದು ಪ್ರಾಥಮಿಕ, ಮಾಧ್ಯಮಿಕ ಮತ್ತು ನಡುವಣ ಹಂತದ ಕ್ಷೇತ್ರಗಳಲ್ಲಿ; ಅರ್ಥ ವ್ಯವಸ್ಥೆಯ ಎಲ್ಲಾ ಮಜಲುಗಳಲ್ಲೂ ಸಹ ಭಾರಿ ಪ್ರಮಾಣದ ವಿಭಿನ್ನ ಚಟುವಟಿಕೆಗಳನ್ನು ಹೊಂದಿದೆ. ಇದರ ಪರಿಣಾಮವಾಗಿ ಇಂದು ಆರ್ಥಿಕ ಸಬಲೀಕರಣ ಸಾಧ್ಯವಾಗಿದೆ. ಆದರೆ ಈ ಯಶಸ್ಸು ಕೇವಲ ಸಹಕಾರೀ ತತ್ವದಿಂದ ಮಾತ್ರ ಸಾಧ್ಯವಾಗಿದೆಯೆಂದಲ್ಲ! ಬದಲಾಗಿ ದೇಶದ ಆರ್ಥಿಕತೆಗೆ ಸವಾಲಾಗಿರುವ ಭ್ರಷ್ಟಾಚಾರಕ್ಕೆ ಇದು ಅಲ್ಲಲ್ಲಿ ಆಶ್ರಯವನ್ನು ನೀಡಿದೆ ಮತ್ತು ದುಷ್ಟ ರಾಜಕಾರಣಿಗಳಿಗೆ ತಮ್ಮ ಮುಖ ಮುಚ್ಚಿ ಕೊಳ್ಳಲೂ ಅವಕಾಶ ನೀಡಿದ್ದು, ಜನಸಾಮಾನ್ಯರ ಹಣದ ಒಂದಿಷ್ಟು ಪಾಲಿನ ದುರ್ಬಳಕೆಯೂ ಆಗಿದೆಯೆಂಬುದು, ಅಪ್ರಿಯವೆನಿಸಿದರೂ ಸತ್ಯದ ಮಾತಾಗಿದೆ.

ಜೀವನದಲ್ಲಿ ಯಶಸ್ಸು ಅನ್ನುವುದು ಯಾವುದೋ ಒಂದು ಸಂಗತಿಯನ್ನು ಅವಲಂಬಿಸಿರದೆ ಹಲವಾರು ಸಂಗತಿಗಳ ಸಮ್ಮಿಲಿತದ ಫಲವಾಗಿರುತ್ತದೆ. ಉದಾಹರಣೆಗೆ: ಗಾಳಿಯಲ್ಲದೆ ಉಸಿರಾಡಲಾರೆವು! ನಿಜ. ಆದರೆ ಶ್ವಾಸಕೋಶಗಳಿಲ್ಲದೆಯೂ ಸಹ ಉಸಿರಾಡಲಾಗುವುದಿಲ್ಲವಲ್ಲ! ಸಾಮಾಜಿಕ ಜೀವನಕ್ಕೂ ಈ ನಿಯಮ ಅನ್ವಯವಾಗುತ್ತದೆ. ನಾವು ಪರಸ್ಪರ ಹೊಂದಾಣಿಕೆ, ಸಹಕಾರ ಮತ್ತು ಅರ್ಥ ಮಾಡಿಕೊಳ್ಳುವಿಕೆಯಿಂದ ಬಾಳಬೇಕಾಗುತ್ತದೆ. ಆಗ ಪರಿಣಾಮಕಾರೀ ಪ್ರಯೋಜನವನ್ನು ಪಡೆಯುತ್ತೇವೆ.
ಪ್ರದತ್ತ ವಿಷಯದಲ್ಲಿ ಶೋಷಣೆಯ ಪರಿಹಾರಕ್ಕೆ ಈ ಸಹಕಾರೀ ತತ್ವ, ಒಂದು ಪರಿಣಾಮಕಾರೀ ಔಷಧ ಎಂಬುದು ನಿರ್ವಿವಾದ. ಆದರೆ ಅದೊಂದೇ ಸಾಧನ ಎನ್ನುವುದು ಅತಿರೇಕ ಅಥವಾ ಅತಿಶಯದ ಮಾತಾದೀತು!?

ಇನ್ನು ನಿರ್ಮೂಲನ ಎಂಬ ಶಬ್ದದ ಬಗ್ಗೆ ನೋಡಿದರೆ ನಮಗೆ ವಿಷಯ ಮನವರಿಕೆಯಾಗುತ್ತದೆ. ಮೂಲ ಎಂಬ ಪದದಿಂದ ತಳ, ಬುಡ, ಬೇರು, ಆಧಾರ ಎಂಬ ಅರ್ಥಗಳು ಹೊರಹೊಮ್ಮುತ್ತವೆ.  ಈಗ ನಿರ್ಮೂಲನವೆಂದರೆ ಬೇರುಸಹಿತ ಕೀಳುವುದು, ತಳದಿಂದ ಪರಿಹರಿಸುವುದು, ಬುಡದಿಂದ ಸರಿ ಪಡಿಸುವುದು ಎಂದು ಅರ್ಥವಾಗುತ್ತದೆ. ಶೋಷಣೆಯ ಬುಡವನ್ನೇ ಇಲ್ಲವಾಗಿಸಿದರೆ ನಿರ್ಮೂಲ ಗೊಳಿಸಿದಂತಾಗುತ್ತದೆ ತಾನೆ? ಆದರೆ ನಾನು ಮೊದಲೇ ಹೇಳಿದಂತೆ ಶೋಷಣೆಗೆ ಒಳಪಡುವವರ ಆರ್ಥಿಕ ಸಬಲೀಕರಣದಿಂದ ಶೋಷಣೆಗೆ ಒಳಪಡುವ ಅರ್ಧ ಭಾಗಕ್ಕೆ ಮಾತ್ರ ಪರಿಹಾರ ಸಿಕ್ಕಂತಾಗುತ್ತದೆ. ಇದು ನಿರ್ಮೂಲಗೊಳಿಸಿದಂತಲ್ಲ! ಏಕೆಂದರೆ ಉಳಿದರ್ಧ ಭಾಗವಾದ ಶೋಷಣೆ ಮಾಡುವ ಬಲವಂತರಿಂದ, ರಾಕ್ಷಸರಿಂದ, ಮರ್ಯಾದೆಯ ಸೋಗು ಹಾಕಿರುವ ಸೋಗಲಾಡಿಗಳಿಂದ ಇಲ್ಲಿ ಪರಿಹಾರವಿಲ್ಲ! ಬದಲಾಗಿ ಅವರನ್ನೇ ಬೆಳೆಸುವ, ಅವರ ದುಷ್ಟತನವನ್ನೇ ಮುಚ್ಚಿಸುವ, ಭ್ರಷ್ಟಾಚಾರವನ್ನೇ ಶಿಷ್ಟಾಚಾರವಾಗಿಸುವ ಅಪಾಯವೂ ಈ ಸಹಕಾರೀ ತತ್ವದಲ್ಲಿ ಅಡಗಿಕೊಂಡಿದೆ.
 
ಹಾಗಾಗಿ ನಾನು ನೇರ ನುಡಿಗಳಲ್ಲಿ ಹೇಳುವುದೇನೆಂದರೆ: ನನ್ನ ವಿರೋಧೀ ಮಿತ್ರರ ಮಾತು ಮತ್ತು ಸತ್ಯಾಂಶಗಳಿಗೆ; ಕಡಿಮೆಯೆಂದರೂ ಕುಮುಟಾದಿಂದ ಕಾಶಿಗೆ ಇರುವಷ್ಟು ದೂರವಾಗಿದ್ದು; ಪ್ರಕೃತ ವಿಷಯದಲ್ಲಿ ಶೋಷಣೆಯ ನಿರ್ಮೂಲನೆ ಅಂದರೆ ಬುಡಸಹಿತ ಪರಿಹಾರ ಈ ಸಹಕಾರೀ ತತ್ವದಿಂದೆಲ್ಲ ಸಿಗುವಂಥದ್ದಲ್ಲ. ಮತ್ತು ವಿಷಯದಲ್ಲಿ ಹೇಳಿರುವ ಸಹಕಾರಿ ತತ್ವವೊಂದೇ ಎಂಬ ಅಂಶವೂ ಅತಿಶಯೋಕ್ತಿಯೇ ವಿನಹ ವಾಸ್ತವಕ್ಕೆ ನಿಲುಕುವುದಲ್ಲ! ಅಂದರೆ ನಿರ್ಮೂಲನೆ ಮತ್ತು ಒಂದೇ ಎಂಬ ಅಂಶಗಳು ನನಗೆ ಸಮ್ಮತವಿಲ್ಲ. ಸಹಕಾರೀ ತತ್ವ ಅತ್ಯುತ್ತಮವಾದದ್ದು, ಇದರಿಂದ ಆರ್ಥಿಕ ಸಬಲತೆ ದೊರೆತಿದೆ, ಪರಿಣಾಮವಾಗಿ ಸಮಾಜದ ಶೋಷಣೆ ಅರ್ಧದಷ್ಟು ಪರಿಹಾರವಾಗಿದೆ ಎನ್ನಬಹುದು. ಪ್ರದತ್ತ ವಿಷಯದಲ್ಲಿ ಸಮಾಜದ ಶೋಷಣೆ ದೂರಮಾಡಲು ಸಹಕಾರೀ ತತ್ವ ತುಂಬಾ ಸಹಕರಿಸಿದೆ ಎನ್ನುವುದು ನಿರ್ವಿವಾದವಾದ ಅಂಶ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ |
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ |
’ನಮ್ಮ ಅಭಿಪ್ರಾಯಗಳು ಒಂದಾಗಿ ಸಾಗಿ ಈ ಸಮಾಜ ಶೋಷಣೆಗೆ ಒಳಪಡದೆ ಆರೋಗ್ಯದಿಂದ ಸಾಗುವಂತಾಗಲಿ.’ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
|| ಜೈ ಹಿಂದ್ ||
ಪರಮೇಶ್ವರ ಪುಟ್ಟನಮನೆ





Thursday, November 02, 2017

“ಮಾತೃಭಾಷಾ ಮಾಧ್ಯಮ, ಶಿಕ್ಷಣಕ್ಕೆ ಅತ್ಯುತ್ತಮ”

ಶಿಕ್ಷಣ ಎಂದರೆ ಕಲಿಕೆ, ತರಬೇತಿ, ವಿಕಾಸ, ವಿದ್ಯಾಭ್ಯಾಸ, ಅಭ್ಯಾಸ, ಅರಿಯುವಿಕೆ...ಎಂದರ್ಥ. ’ಇದು ಮನುಷ್ಯನ ವ್ಯಕ್ತಿತ್ವ ವಿಕಾಸದ ಮೆಟ್ಟಿಲು’ ಎಂದರೆ ತಪ್ಪಲ್ಲ. ಇದನ್ನು ಮಾಹಿತಿ ಪರ ಮತ್ತು ಅನುಭವ ಪರ ಎಂದು ಎರಡಾಗಿ ವಿಭಾಗಿಸಬಹುದು. ಮಾಹಿತಿ ಪರ ಶಿಕ್ಷಣವು ವಿಷಯ ಸಂಗ್ರಹರೂಪದಲ್ಲಿದ್ದು, ಅನುಭವ ಪರ ಶಿಕ್ಷಣವು ಅರಿವು ಮೂಡಿಸುವುದಾಗಿದೆ. ಇನ್ನು ಈ ಶಿಕ್ಷಣವನ್ನು ವಿದ್ಯಾರ್ಥಿಯ ವಯಸ್ಸು ಮತ್ತು ಉದ್ದೇಶವನ್ನು ಗುರುತಿಸಿ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ತಾಂತ್ರಿಕ ಅಥವಾ ವೃತ್ತಿಪರ ಶಿಕ್ಷಣ ಎಂದೂ, ಮೂರು ತೆರನಾಗಿ ವಿಭಾಗಿಸುತ್ತಾರೆ. ಇವು ತಮಗೆಲ್ಲಾ ತಿಳಿದದ್ದೇ ಆಗಿವೆ.
ಪ್ರಾಚೀನ ಕಾಲದ ಶಿಕ್ಷಣ ಪದ್ಧತಿಯ ಸೌಂದರ್ಯವೇ ಬೇರೆ. ಅಂದು ಶಿಕ್ಷಣ ಮಾರಾಟದ ಸರಕಾಗಿರಲಿಲ್ಲ. ಶಿಕ್ಷಕರು ಸಂಬಳಕ್ಕೆ ದುಡಿಯುವವರಾಗಿರಲಿಲ್ಲ. ಹಣಗಳಿಸಿ ಶ್ರೀಮಂತಿಕೆಯ ಕನಸು ಕಾಣುತ್ತಿದ್ದವ ಈ ವೃತ್ತಿಗೆ ಕಾಲಿಡುತ್ತಲೇ ಇರಲಿಲ್ಲ. ಅವನು ಸೇನೆಗೆ ಸೇರುತ್ತಿದ್ದ, ವ್ಯಾಪಾರಿಯಾಗುತ್ತಿದ್ದ ಅಥವಾ ಇತರೆ ನೌಕರಿ, ಚಾಕರಿ ಮಾಡಿಕೊಂಡು ಹಾಯಾಗಿರುತ್ತಿದ್ದ. ಸರಳವಾಗಿ ಹೇಳಬೇಕೆಂದರೆ ಐಷಾರಾಮಿ ಬದುಕು ಬಯಸುವವ ಈ ಶಿಕ್ಷಣ ಮಾರ್ಗದಲ್ಲಿ ಕಾಣಿಸಿ ಕೊಳ್ಳುತ್ತಲೇ ಇರಲಿಲ್ಲ! ಇಲ್ಲಿ ಪರಿಶ್ರಮ ಅನಿವಾರ್ಯವಾಗಿದ್ದು, “ಗುರು ಶುಶ್ರೂಷಯಾ ವಿದ್ಯಾ” ಎಂಬುದು ನಿಜಕ್ಕೂ ಅರ್ಥವತ್ತಾಗಿತ್ತು ಮತ್ತು ಆಲಸ್ಯಕ್ಕೂ ವಿದ್ಯೆಗೂ ಸದಾ ಆಗಿಬರುತ್ತಿರಲಿಲ್ಲ.
ಆದರೆ ಇಂದು ಶಿಕ್ಷಣ ತನ್ನ ಹಾದಿಯನ್ನು ತಪ್ಪಿ ಎತ್ತೆತ್ತಲೋ ಸಾಗುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟೆಲ್ಲ ವರುಷಗಳಾದರೂ, ಭಾಷಾವಾರು ಪ್ರಾಂತ್ಯ ರಚನೆಯಾಗಿ ಆರು ದಶಕಗಳೇ ಕಳೆದರೂ, ಇಪ್ಪತ್ತೆರಡು ಭಾಷೆಗಳನ್ನು ರಾಜ್ಯಭಾಷೆಗಳನ್ನಾಗಿ ಸಂವಿಧಾನದಲ್ಲಿ ಒಪ್ಪಿಕೊಂಡರೂ, ಸರ್ಕಾರಗಳಿಗೆ “ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡುವುದು ಮುಖ್ಯ” ಎಂದೆನಿಸಲಿಲ್ಲ! ವರ್ಷದಿಂದ ವರ್ಷಕ್ಕೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡುವ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರ, ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಮಟ್ಟದಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಖಾಸಗೀಕರಣವನ್ನು ಉತ್ತೇಜಿಸುತ್ತಿದೆ. ಒಂದು ಕಡೆ ಮಾರುಕಟ್ಟೆಯ ಸೆಳೆತ, ಉದ್ಯೋಗಾವಕಾಶಗಳ ಏರಿಳಿತ, ಇಂಗ್ಲಿಷ್ ಭಾಷಾ ಜ್ಞಾನವೇ ನಿಜವಾದ ಅರ್ಹತೆ ಎನ್ನುವ ಮಿಥ್ಯೆ, ಅದಕ್ಕೆ ಪೂರಕವಾಗಿ ಲಾಭಕೋರ ಖಾಸಗಿ ಶಾಲೆಗಳು. ಹೀಗೆ ಇವೆಲ್ಲದರ ಪರಿಣಾಮವಾಗಿ ’ಇಂಗ್ಲಿಷ್ ಕಲಿತರಷ್ಟೆ ಬದುಕುವ ಅವಕಾಶ’ ಎಂಬ ಧಾವಂತಕ್ಕೆ ಪಾಲಕರು ಬೀಳುವಂತಾಗಿದೆ. 
ಭಾಷೆ ಎಂದರೆ ಬುದ್ಧಿ, ಭಾವಗಳ ವಿದ್ಯುದಾಲಿಂಗನ. ಭಾವದ ಸಂಪರ್ಕವಿಲ್ಲದೆ ಬುದ್ಧಿ ಬರಡಾಗುತ್ತದೆ. ಭಾಷೆಯು ಭಾವನೆ ಮತ್ತು ವಿಚಾರಗಳ ವಾಹಕವಾಗಿದೆ.  ಅದು ಸಂವಹನ, ಸಂಪರ್ಕ ಹಾಗೂ ಚಿಂತನೆಗಳ ಸಾಧನ. ಹೀಗೆ ಸಾಧನವಾದ ಒಂದೊಂದು ಭಾಷೆ ಆಯಾ ವ್ಯಕ್ತಿಯ ಹುಟ್ಟು, ಬೆಳೆದ ಪರಿಸರ, ಬದುಕುವ ಪ್ರದೇಶ ಇವುಗಳಿಗನುಗುಣವಾಗಿ ಅವರವರಿಗೆ ’ಮಾತೃಭಾಷೆ’ಯಾಗಿ ರೂಪಿತವಾಗುತ್ತದೆ. ವ್ಯಕ್ತಿಯ ಬದುಕಿನ ಆದಿಯಿಂದ ಅಂತ್ಯದ ತನಕ ಜೊತೆಗಾರನಾಗಿ, ಸಹಚರನಾಗಿ ನೆರವಿಗೆ ಬರುವುದೇ ಈ ಮಾತೃಭಾಷೆ.  ದೈನಂದಿನ ವ್ಯಾಪಾರ, ವ್ಯವಹಾರ, ಸಲ್ಲಾಪ, ಪ್ರೇಮ, ಕಲಹ-ಕಲಾಪ ಎಲ್ಲವೂ ವ್ಯಕ್ತಿಯ ಮಾತೃಭಾಷೆಯಲ್ಲೇ ನಡೆಯುತ್ತದೆ. ತೊಟ್ಟಲಿನಿಂದ ಚಟ್ಟದವರೆಗೆ ಮಾತೃಭಾಷೆ ವ್ಯಕ್ತಿಗೆ ಊರುಗೋಲು’ ಎಂದರೆ ಅತಿಶಯವಲ್ಲ! ಅದು ಎಲ್ಲ ವಿಧದಲ್ಲಿ ವ್ಯಕ್ತಿಯ ಬಾಳನ್ನು ಬೆಳಗುತ್ತದೆ. ಬದುಕು ಮತ್ತು ಭಾವವನ್ನು  ಸಂಸ್ಕರಿಸುತ್ತದೆ. ಹಾಗಾಗಿ ಮಾತೃಭಾಷೆಯು ಪ್ರತಿಯೊಬ್ಬ ವ್ಯಕ್ತಿಯ ನೆರಳಿನಂತೆ.  ಅದು ವ್ಯಕ್ತಿತ್ವದ ಅವಿನಾಭಾವ ಅಂಗ.  ಆದ್ದರಿಂದ ಮಾತೃಭಾಷೆಯನ್ನು  ಶಾಲೆಗಳಲ್ಲಿ ಪ್ರಥಮ ಭಾಷೆಯ ನೆಲೆಯಲ್ಲಿ ಕಲಿಸಲಾಗುತ್ತದೆ. 
ಪ್ರಪಂಚದಾದ್ಯಂತ ಶಿಕ್ಷಣಕ್ರಮದಲ್ಲಿ ಮಾತೃಭಾಷೆಗೇ ಪ್ರಾಶಸ್ತ್ಯ ನೀಡಲಾಗಿದೆ.  ಭಾರತದಲ್ಲಾದರೋ ಹತ್ತೊಂಭತ್ತನೆಯ ಶತಮಾನದ ಆದಿಯಿಂದಲೇ ಮಾತೃಭಾಷೆಯೇ ಶಿಕ್ಷಣದ ಮಾಧ್ಯಮವಾಗಬೇಕೆಂಬ ಬೇಡಿಕೆಗಳು ಕೇಳಿಬಂದವು. ಎಲ್ಲ ಶಿಕ್ಷಣ ಆಯೋಗಗಳು ಹಾಗೂ ಗಾಂಧಿ, ರಾಧಾಕೃಷ್ಣನ್ ಮುಂತಾದ ವಿಚಾರವೇತ್ತರು ಮಾತೃಭಾಷೆಯ ಮೂಲಕ ಬೋಧನೆ ಮತ್ತು ಕಲಿಕೆಯನ್ನು ಸಮರ್ಥಿಸಿದ್ದಾರೆ.  ಕನಿಷ್ಠ ಪ್ರೌಢಶಾಲಾ ಹಂತದವರೆಗಾದರೂ ಶಿಕ್ಷಣವನ್ನು ಮಗುವಿನ ತಾಯ್ನುಡಿಯ ಮೂಲಕವೇ ಕೊಡಬೇಕೆಂಬುದು ಶಿಕ್ಷಣತಜ್ಞರ ಒಮ್ಮತದ ಅಭಿಪ್ರಾಯ. ನಮ್ಮ ಚಿಂತನ ಶೀಲತೆ, ವೈಚಾರಿಕ ಪ್ರಕ್ರಿಯೆ ಪ್ರಥಮವಾಗಿ ನಡೆಯುವುದು ನಮ್ಮ ಮಾತೃಭಾಷೆಯಲ್ಲಿ. ಬೇರಾವುದೇ ಭಾಷೆ ಮಾತನಾಡುವಾಗಲೂ ನಮ್ಮ ಮನಸ್ಸು ಒಳಒಳಗೇ ತರ್ಜುಮೆ ಮಾಡುತ್ತಿರುತ್ತದೆ. ತಾನು ನೋಡುವ ಪದಾರ್ಥಗಳನ್ನು, ಗ್ರಹಿಸುವ ಗಂಧವನ್ನು, ಸವಿಯುವ ರುಚಿಯನ್ನು, ಕೇಳುವ ಧ್ವನಿಗಳನ್ನು, ಬಣ್ಣಗಳನ್ನು ಮಗುವು ತನ್ನ ತಾಯ್ನುಡಿಯ ಮೂಲಕವೇ ಹೆಸರಿಸಲು ಕಲಿಯುತ್ತದೆ.  ಆಮೇಲೆ ಮಗು ಬೆಳೆದಂತೆ, ಭಾಷಾಂತರ ಪ್ರಕ್ರಿಯೆಯಿಂದ ವಿಷಯವನ್ನು ಗ್ರಹಿಸುತ್ತದೆ. ಆದ್ದರಿಂದ ಪ್ರತಿಯೊಂದು ಮಗುವಿನ ಬುದ್ಧಿವಿಕಾಸ ಹಾಗೂ ಭಾವಪ್ರಕಾಶದ ದೃಷ್ಟಿಯಿಂದ ಮಾತೃಭಾಷಾ ಬೋಧನೆ ಆಗಬೇಕು. ಅದಿಲ್ಲದಿದ್ದರೆ ನೇರವಾಗಿ ವಿಷಯ ಗ್ರಹಣವಾಗುವುದಿಲ್ಲ.
ಭಾಷೆ ಕರ್ತೃ, ಕರ್ಮ, ಕ್ರಿಯಾಪದಮಾತ್ರವಲ್ಲ. ಅದು ಒಂದು ಸಾಂಸ್ಕೃತಿಕ ಅನುಭವ.  ನಮ್ಮ ಸುತ್ತ ಒಂದು ಸಾಂಸ್ಕೃತಿಕ ಆವರಣ ಇದೆ. ಪ್ರತಿಯೊಂದು ಸಂಸ್ಕೃತಿಯಲ್ಲೂ ನೂರಾರು ಆಚರಣೆಗಳು, ವಿಧಿ ನಿಷೇಧಗಳು, ಕಟ್ಟು ಪಾಡುಗಳು ಇದ್ದೇ ಇರುತ್ತವೆ. ಇವೆಲ್ಲವೂ ಭಾಷೆಯ ಮೂಲಕ ಹಾಸು ಹೊಕ್ಕಾಗಿ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುತ್ತವೆ. ಆದ್ದರಿಂದ ’ಭಾಷೆ ನಶಿಸಿದರೆ ಸಂಸ್ಕೃತಿ  ನಾಶವಾದಂತೆ’ ಎಂಬ ಅನಂತಮೂರ್ತಿಯವರ ಮಾತೂ ಕೂಡ ಮೌಲಿಕವಾಗಿದೆ. ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ರವಾನಿಸುವ ದೃಷ್ಟಿಯಿಂದಲೂ ತಾಯ್ನುಡಿ ಬೋಧನೆ ಮಾಡುವುದು ಅತ್ಯವಶ್ಯ. ಏಕೆಂದರೆ ಯಾವುದೇ ಶಿಕ್ಷಣದ ಅಂತಿಮ ಗುರಿ ಮನುಷ್ಯನನ್ನು ಹೆಚ್ಚು ಸುಸಂಸ್ಕೃತನನ್ನಾಗಿಸುವುದು, ಮಾನವೀಯಗೊಳಿಸುವುದು.  ಮಾತೃಭಾಷಾ ಬೋಧನೆ ಈ ಗುರಿಸಾಧನೆಗೆ ಪೂರಕವಾಗಿದೆ. ಪರಭಾಷಾ ಮಾಧ್ಯಮದ ಶಿಕ್ಷಣದಲ್ಲಿ ಆಗುವ ಅಡೆತಡೆಗಳು, ಮಾನಸಿಕ ಪ್ರಕ್ರಿಯೆಗಳ ವ್ಯತ್ಯಯಗಳು ಮತ್ತು ಸಾಂಸ್ಕೃತಿಕ ವೈಪರೀತ್ಯಗಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವಾಗ ಆಗದು; ಎಂಬಲ್ಲಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ’ಉತ್ತಮ ಮಾಧ್ಯಮ’ ಎನಿಸುವುದು ಮತ್ತು ಪರಭಾಷಾ ಮಾಧ್ಯಮ ಮಾತೃಭಾಷಾ ಮಾಧ್ಯಮದಷ್ಟು ಉತ್ತಮವಲ್ಲ ಎಂದೂ ಕೂಡ ಸ್ಪಷ್ಟವಾಗಿ ಹೇಳಬಹುದು.

ಹೀಗೆ ನಿರೂಪಿಸಿದ ಅಂಶಗಳನ್ನು ನಾನು ನಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಹೇಳಿದ್ದೇನೆ. ಅದನ್ನೇ ಪರಭಾಷೆಯಲ್ಲಿ ಹೇಳಿದ್ದಿದ್ದರೆ, ನಿಮ್ಮಲ್ಲಿ ಎಷ್ಟು ಜನರಿಗೆ ಅದು ಅರ್ಥವಾಗುತ್ತಿತ್ತೋ ನಾನು ಕಾಣೆ! ಹಾಗಾಗಿ ನಮಗೆ ಅರ್ಥವಾಗುವ ದೃಷ್ಟಿಯಲ್ಲಿ ಮಾತೃಭಾಷೆಯ ಮಾಧ್ಯಮ ಉತ್ತಮವಾಗುತ್ತದೆ. ಇನ್ನು ಶಿಕ್ಷಣ ಉದ್ಯೋಗಪ್ರದವಾಗಬೇಕು, ಪರದೇಶದಲ್ಲಿ ವಾಸ ಬೇಕು, ಪರಸಂಸ್ಕೃತಿಯ ಮೋಹ ಬಿಡದು! ಎನ್ನುವವರಿಗೆ ಮಾತೃಭಾಷಾ ಶಿಕ್ಷಣ ಉತ್ತಮವಾಗದಿರಬಹುದು. ಆದರೆ ಯಾವತ್ತೂ ಅನುಭವ ಪರ ಶಿಕ್ಷಣ ಕೋಟಿಗೆ ಒತ್ತು ನೀಡಿದ ನಮ್ಮ ಸಂಸ್ಕೃತಿಯ ಹಿರಿಯರು ’ಅರಿವೇ ಗುರು’ ಎಂಬುದನ್ನು ನಮ್ಮ ಶಿಕ್ಷಣದ ಧ್ಯೇಯವಾಗಿ ಕಂಡವರು. ಹೀಗಿರುವಾಗ ಎಲ್ಲ ಹಿರಿಯರೂ ನನ್ನ ಮಾತಿಗೆ ಬೆಂಬಲವಾಗಿರುವರು ಎಂಬುದನ್ನು ಬಲವಾಗಿ ನಂಬಿ, “ಮಾತೃಭಾಷಾ ಮಾಧ್ಯಮ, ಶಿಕ್ಷಣಕ್ಕೆ ಅತ್ಯುತ್ತಮ” ಎಂದು ಪುನಃ ಪುನಃ ಹೇಳುತ್ತೇನೆ.

Wednesday, September 13, 2017

Gurudeva!

ಮಾನವನು ಸದಾ ಆನಂದದ ಹುಡುಕುವಿಕೆಯಲ್ಲಿ ಅಲೆದಾಡುತ್ತಿರುತ್ತಾನೆ. ಈ ಅಲೆದಾಟದಲ್ಲಿ ಮಹರ್ಷಿಗಳಿಂದ ಯಾವ ತತ್ತ್ವವು ಶೋಧಿತವಾಯಿತೊ, ಅದು ಅಚ್ಚರಿದಾಯಕ ಮಾತ್ರವಲ್ಲ; ಶೋಧನೆಯ ವಸ್ತುವೂ ಹೌದು. ಈ ಶೋಧನೆಯಿಂದ ತಿಳಿದು ಬಂದಿದ್ದು, ಎಲ್ಲ ಇಂದ್ರಿಯಗಳೂ ಮನೋವಶವಾಗಿವೆ. ಎಲ್ಲಿಯವರೆಗೆ ಮನಸ್ಸು ಸಾಂಸಾರಿಕವಾಗಿರುತ್ತದೆಯೊ, ಅಲ್ಲಿಯವರೆಗೆ ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ ಮನಸ್ಸನ್ನು ಸಂಸಾರದ ಪಾತಳಿಯಿಂದ ಮೇಲೆತ್ತುವ ಸಾಹಸಕ್ಕೆ ಮಹರ್ಷಿಗಳು ಕೈ ಹಾಕಿದರು. ಈ ಸಾಹಸ ಕೆಲವೊಮ್ಮೆ 'ದುಃಸ್ಸಾಧ್ಯ!' ಎಂದು ಅನಿಸುವುದೂ ಉಂಟು. ಇಂಥ ಅನಿಸಿಕೆಗಳಿಂದ ನಮ್ಮನ್ನು ಸ್ಥಿರತೆಗೆ ಒಯ್ಯಲು ನಮ್ಮ ಗುರು-ಹಿರಿಯರು ದಾರಿ ಮಾಡಿದರು. ಅದನ್ನು ಆರ್ಷ ಪರಂಪರೆ ಒಪ್ಪುವಂತಿರಬೇಕು ಮತ್ತು ನಮ್ಮ ಪರಮ ಲಕ್ಷ್ಯವನ್ನು ನೆನಪಿಸುವಂತಿರಬೇಕು. ಹೀಗೆ ಅನ್ವೇಷಿಸಿದ ಮಾರ್ಗ 'ಗುರುಶಿಷ್ಯ ಪರಂಪರೆ'. ಇಲ್ಲಿ ಗುರುವನ್ನು ಅನುಸರಿಸಿ ಶಿಷ್ಯನ ಮನಸ್ಸು ಹದಗೊಳ್ಳುವುದರ ಜೊತೆಗೆ, ಶಿಷ್ಯನಿಗೆ ಹೇಳಿದ್ದು ಹೇಗೆ ಪರಿಣಾಮ ಪಡೆಯಿತು? ಎಂಬಲ್ಲಿ ಗುರುವೂ ಆಯಾ ಕಾಲಕ್ಕೆ ಸ್ಪಂದಿಸುವ ಅವಕಾಶ ಮಾಡಿಕೊಟ್ಟಿತು. ಇದರ ಪರಿಣಾಮವೇ ಗುರುಶಿಷ್ಯ ಸಂಬಂಧ. ಅದು ಇಂದಿಗೂ ಅವಿರತವಾಗಿ ಮುನ್ನಡೆಯುತ್ತಿದೆ.





'ಅರಿವು' ಪ್ರಧಾನವೆನಿಸಿದ ಆ ಕಾಲದಲ್ಲಿ ಗುರು ಅದನ್ನು ಪೂರೈಸಿದ. ಶಿಷ್ಯ ತನ್ನ ಗುರಿ ತಲುಪಿದ ಸಂತಸ ಪಡೆದ. ಇಂದಾದರೋ ಶತಶತಮಾನಗಳವರೆಗೆ ಆಳಿದ ರಾಜವಂಶ, ತನ್ನ ನಾಮಮಾತ್ರದ ಅಸ್ತಿತ್ವವನ್ನೂ ಉಳಿಸಿಕೊಂಡಿಲ್ಲ! ಅದೇ ರೀತಿ ಕುಟುಂಬ ಪರಂಪರೆಯಿಂದ ಬಂದ ನಾಟೀವೈದ್ಯಕೀಯವೇ ಮೊದಲಾದ ಕುಲಕಸುಬುಗಳೂ ಕಾಲವಶಕ್ಕೆ ಒಳಪಟ್ಟಿವೆ. 'ಮಾಹಿತಿ' ಪ್ರಧಾನವಾದ ಈ ಕಾಲಕ್ಕೂ ಗಟ್ಟಿಯಾಗಿ ನಡೆದು ಬರುತ್ತಿರುವ ಗುರುಶಿಷ್ಯ ಸಂಬಂಧ ಚಿರಾಯುವಾಗಿದೆ. ಇದು ಕೇವಲ ದೇಹ ದೇಹಗಳ ಸಂಬಂಧವಲ್ಲ!

ನಮ್ಮ ಸಮಸ್ತ ಸಿದ್ಧಿಗಳಿಗೂ ದೇಹವೇ ಮೂಲ. ಒಂದು ರೂಪಾಯಿಗೆ ಒಂದು ಸೇರು ಅಕ್ಕಿ ತಂದಂತೆ, ಇಲ್ಲಿ ಎಲ್ಲದಕ್ಕೂ ಒಂದು ಬೆಲೆ ತೆರಬೇಕು. ನಾವು ಕೊಟ್ಟದ್ದು ಒಂದು ರೂಪಾಯಿ, ನಮಗೆ ದೊರೆತದ್ದು ಎರಡು ಸೇರು ಅಕ್ಕಿ ಅಥವಾ ಅರ್ಧ ಸೇರು ಅಕ್ಕಿ ಹೀಗೂ ಆಗಬಹುದು. ಇಂಥ ಕಡೆಗಳಲ್ಲಿ ನಮ್ಮಿಂದ ಸಂದ ಬೆಲೆ, ಮತ್ತು ನಮಗೆ ಬಂದ ವಸ್ತು ಇವುಗಳ ಕಾರ್ಯ-ಕಾರಣ ಸಂಬಂಧವನ್ನು ತಿಳಿಸಿಕೊಡುವುದೇ ಶಾಸ್ತ್ರ. (ನಮ್ಮಿಂದ ನಮಗೆ ಗೊತ್ತಿಲ್ಲದೇ ಏನೋ ಸಂದಿದೆ, ಅಥವಾ ಅಲ್ಲಿಂದ ನಮಗೆ ಏನೋ ಬಂದಿದೆ. ಇದನ್ನರುಹುವುದೇ ಶಾಸ್ತ್ರ.) ಇದನ್ನು ನಮಗೆ ತಿಳಿಯುವಂತೆ ಹೇಳಿಕೊಡುವವನೇ ಗುರು. ಈ ಗುರುವಿನ ಮಾರ್ಗದರ್ಶನದಲ್ಲಿ, ಆ ಶಾಸ್ತ್ರವನ್ನು ಅನುಸರಿಸಿದರೆ ಸಿಗುವುದೇ ಬ್ರಹ್ಮ. ಅದಕ್ಕಾಗಿ ಹಿರಿಯರು ಹೇಳಿದರು. ಗುರು ಇದ್ದವನಿಗೆ ಎಲ್ಲವೂ ತಿಳಿಯುವುದು. "ಆಚಾರ್ಯವಾನ್ ಪುರುಷೋ ವೇದ" ಎಂದು. ಹಾಗಾದರೆ ಗುರುವು ತನಗೆ ತೋರಿದಂತೆಯೇ ಹೇಳುವನೋ? ಹಾಗಲ್ಲ! ಗುರುವು ಮೊದಲು ತಿಳಿಯುತ್ತಾನೆ; ತಾನು ತಿಳಿದದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಾನೆ; ತಿಳಿಸಿದಂತೆ ಅವನಿಂದ ಮಾಡಿಸುತ್ತಾನೆ. ಇದು ಆತನ ಗುರುತ್ವ.

ಗುರುತ್ವ ಪ್ರಕಾಶಗೊಳ್ಳುವ ಸ್ಥಾನ ಮಠ. ಇಲ್ಲಿ, ಗುರುವಿನ ಅಂಕೆಯಲ್ಲಿ ಉಪದೇಶ ಮತ್ತು ಉಪಾಸನೆಗಳು ಸದಾ ನಡೆಯುತ್ತಿರುತ್ತವೆ. ಗುರುವಿನ ಮಾತೇ ಉಪದೇಶವಾದಂತೆ, ಅವರ ಮುಖಕಮಲದಿಂದ ಬಂದ ಮಂತ್ರಗಳಿಂದಲೇ ಉಪಾಸನೆಗಳು ನೆರವೇರುತ್ತವೆ. ಜೀವನ ಬದುಕಿಗೆ ದಾರಿ ನೂರೆಂಟು. ಅಲ್ಲಿ ಓತಪ್ರೋತವಾದ `ನಿಲುಮೆ' ಎರಡು ತೆರನಾಗಿರುತ್ತದೆ. ದೇವರಿಗೆ ಅಭಿಮುಖವಾಗಿ ಬದುಕುವುದು ಒಂದು. ದೇವರಿಗೆ ಬೆನ್ನುಮಾಡಿ ಬದುಕುವುದು ಇನ್ನೊಂದು. ಇವೆರಡಕ್ಕೂ ದೇವರೇ ಕೇಂದ್ರವಾದದ್ದು ಸೋಜಿಗ! ಹಾಗಾಗಿ `ಜೀವ’ನ ಕೇಂದ್ರವಾದ ದೇವರ ಉಪಾಸನೆ ಮಾನವನಿಗೆ ಅನಿವಾರ್ಯ. ಸಂಸ್ಕøತದ 'ರಾಧ್' ಎಂಬ ಒಂದೇ ಧಾತು ಎರಡು ಉಪಸರ್ಗಗಳ ಜೊತೆ ಸೇರಿ ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ. ದೇವರಿಗೆ ಅಭಿಮುಖಿಯಾದವನೇ `ಆರಾಧಕ'. ಅದಕ್ಕೆ ವಿಪರೀತನಾದವನೇ `ಅಪರಾಧೀ'. ನಮ್ಮನ್ನು `ಆರಾಧಕ ಕೋಟಿ’ಗೆ ಕರೆದೊಯ್ಯಲು ಗುರು ತೋರಿದ ಮಾರ್ಗವೇ `ಉಪಾಸನೆ'. ಈ ಮಾರ್ಗಕ್ಕೆ ಕೇಂದ್ರವಾದದ್ದು ದೇವತಾ ತತ್ತ್ವ. ಮಂತ್ರವಶವರ್ತಿಯಾದ ಅದು ಮಂತ್ರಾಭಿಮಾನಿಯೂ, ತತ್ತ್ವಾಭಿಮಾನಿಯೂ ಆಗಿರುತ್ತದೆ.


ದೇವರನ್ನು ಶಾಂತ, ಗಂಭೀರ ಮತ್ತು ಉಗ್ರ ಎಂಬುದಾಗಿ ವಿವೇಕಿಸಬಹುದು. ಲಕ್ಷ್ಮೀನಾರಾಯಣ, ಶಾರದೆ, ದತ್ತಾತ್ರೇಯ, ಬ್ರಹ್ಮ ಮೊದಲಾದವರು ಶಾಂತಗುಣ ವಿಶಿಷ್ಟರೆಂದೂ, ಕೃಷ್ಣ, ವಿಷ್ಣು, ಗಣಪತಿ, ಲಕ್ಷ್ಮೀ ಮುಂತಾದವರು ಗಂಭೀರ ಸ್ವಭಾವದವರೆಂದೂ, ರುದ್ರ, ಭೈರವ, ಕಾಳೀ, ಚಾಮುಂಡೀ ಮೊದಲಾದವರನ್ನು ಉಗ್ರತತ್ತ್ವದವರೆಂದೂ ವಿಭಾಗಿಸಬಹುದು. ಪ್ರತಿಯೊಂದು ಎಲೆ, ಕಡ್ಡಿಗಳೂ ಒಂದು ಇನ್ನೊಂದಕ್ಕಿಂತ ಭಿನ್ನವಾಗಿರುವಂತೆ ವಿಶ್ವದ ಪ್ರತಿಯೊಂದು ಜೀವರಾಶಿಯೂ ಭಿನ್ನವಾಗಿರುತ್ತದೆ. ಮಾನವರಲ್ಲೂ ಬೇರೆ ಬೇರೆ ಪ್ರಕೃತಿಯವರು ಇರುತ್ತಾರೆ. ಪಾರಮಾರ್ಥಿಕವಾಗಿ ಬಹ್ಮವಸ್ತುವಿಗಿಂತ ಯಾರೂ ಭಿನ್ನರಲ್ಲ. ಆದರೆ ಬದುಕಿನಲ್ಲಿ ಬ್ರಹ್ಮಭಾವವು ಮರೆಯಾಗಿರುತ್ತದೆ. ಮರೆಯಾದ ಈ ಬ್ರಹ್ಮಭಾವವನ್ನು `ಅನುಭವ’ದಲ್ಲಿ ತಂದುಕೊಳ್ಳಲು ದೈವೀ ಆರಾಧನೆಯೂ ಒಂದು ಸಾಧನವಾಗಿದೆ. ಆ ಕಾರಣದಿಂದ ಶಾಸ್ತ್ರಗಳು ವಿಭಿನ್ನ ಗುಣಗಳ ಅನೇಕ ದೇವತೆಗಳನ್ನು ಕಲ್ಪಿಸಿವೆ. 

Monday, February 13, 2017

ನಮ್ಮ ದೇವರು



ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು || ||

ನಾವು ಹೌದಂದ್ರ ಹೌದಂತಾವು,  
ನಾವಲ್ಲಂದ್ರ ಅಲ್ಲಂತಾವು
ನಕ್ಕರ ನಮ್ಮಗೂಡ ನಗತಾವು
ಅತ್ತರ ನಮ್ಮಗೂಡ ಅಳತಾವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೧||

ಮನೆಯಾಗಿಟ್ಟರ ಮನೆಯಾಗಿರ್ತಾವು
ಗುಡಿಯಾಗಿಟ್ಟರೂ ಗುಡಿಯಾಗಿರ್ತಾವು
ಮಸೀದ್ಯಾಗಿಟ್ಟರ ಮಸೀದ್ಯಾಗಿರ್ತಾವು,  
ಚರ್ಚ್ನಾಗಿಟ್ಟರ ಚರ್ಚ್ನಾಗಿರ್ತಾವು

ನಾವಿಟ್ಟಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೨||

ನಾ ವಿಭೂತಿ ಹಚ್ಚಿದರ ಇಭೂತಿ ಹಚ್ಗೋತಾವು,
ಕುಂಕ್ಮ ಹಚ್ಚಿದರ ಕುಂಕ್ಮಾ ಹಚ್ಗೋತಾವು
ಭಂಡಾರ ಹಚ್ಚಿದರ ಭಂಡಾರ ಹಚ್ಗೋತಾವು,  
ಗಂಧ ಇಟ್ಟರ ಗಂಧ ಹಚ್ಗೋತಾವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು,
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೩||

ನಾವು ಹಾಲು ತುಪ್ಪ ಸುರಿದಾರೆ ಕುಡೀತಾವು,  
ಹೋಳ್ಗಿ ಹುಗ್ಗಿ ಮಾಡಿದರೆ ಹೊಡೀತಾವು
ಕೋಳಿಕುರಿ ಕೊಯ್ದರೆ ತಿಂತಾವು,  
ಅನ್ನಗಿನ್ನ ಬೇಯ್ಸಿದರೆ ಉಣತಾವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೪||

ಮಾತಾಡೊ ದೇವರ ಮರೆತೇವು
ನಂಬಿದ ದೇವರ ಕೈ ಬಿಟ್ಟೇವು
ಇಲ್ಲದ ದೇವರ ಹುಟ್ಶೇವು,  
ಅಲ್ಲದ ಊರಿಗೆ ಹೊಂಟೇವು

ನಾವಿದ್ದಾಂಗ ಇರ್ತಾವು ನಮ್ಮ ದೇವ್ರು
ನಾವು ಹೇಳಿದ್ದು ಕೇಳ್ತಾವು ನಮ್ಮ ದೇವ್ರು ||೦೫||

ರಚನೆ
ಸಿದ್ದಪ್ಪ ಸಾವಣ್ಣ ಬಿದರಿ



Wednesday, January 25, 2017

वनसंरक्षणम्



            इदं जीवनं सुशोभनं भवेद् ! इति आकांक्षा सदोदेति खलु? तर्हि तज्जीवनं वनं हित्वा कथं सिद्ध्येत  
            जीवाम शरदश्शतंइति मन्यमानैः पूर्वजैः आर्षैः वनसंरक्षणं कृतम् यत्नेन किं तु मातृभावेन वनं अस्माकं जीवनम् अत एव सा प्रकृतिरिति कथ्यते प्रकृतिर्न केवलमस्माकमाश्रयभूता किन्तु मातृस्थानीया। सा माता अस्मान् आजीवनं पालयति अस्माकं सन्ततेरपि रक्षणं तयैव कर्तव्यम् अतः सा माता अस्माभिः रक्षितव्या भवति । प्रकृतिस्तु स्वस्याः सर्वसम्पदमपि मातृवत् पुत्राणां सुखार्थं विनियुंक्ते ।कुपुत्रो जायेत क्वचिदपि कुमाता भवतिइति।

            किन्तु तस्या अपि एका सीमा वर्तते । तदतिरिच्य सा यदि यत्किंचिद्ददाति चेदपि तद्विषायत एव! पुत्रा वयं मातुः मातृत्त्वं पालयामः । तथा च चिन्तयाम अस्य पर्यावरणस्य परिरक्षणं कथं कर्तुं शक्यते? इति । एवमेव परिभावयाम समस्तपृथिवी हरिद्रांचितं यथा भवेत् । तदर्थमस्माभिः यत्नेन वनसंरक्षणं, वनसंवर्धनमपि कार्यम् । नो चेदागामि जीवप्रपञ्चे नास्माकं गणना गुणेन गौरवेण वा स्यात्! जीवनं संजीवनं यथा भवेत् । उज्जीवनं च भवेदिति वनस्य योगक्षेमं वहामहे ॥


             अत आशास्महे । 
प्रवर्ततां प्रकृतिहिताय पार्थिवः सरस्वती श्रुतिमहती महीयताम् ॥
ममापि च क्षपयतु नीललोहितः पुनर्भवं परिगतशक्तिरात्मभूः ॥ इति ॥