Wednesday, August 17, 2022

ಪುರಾಣಗಳು

ಸಂಸ್ಕೃತದ ಧಾರ್ಮಿಕ ವಾಙ್ಮಯದಲ್ಲಿನ ಒಂದು ಪ್ರಮುಖ ಭಾಗವನ್ನು ಈ ಹೆಸರಿನಿಂದ ಕರೆಯುತ್ತಾರೆ. ಪುರಾಣವೆಂದರೆ ಪುರಾತನವಾದುದು ಎಂಬ ಅರ್ಥ ಇದೆಯಾದರೂ ಹೊಸ ಕಳೆ ಇರುವ ಹಳೆಯ ನಿರೂಪಣೆ “ಪುರಾಪಿ ನವಂ” ಎಂದು ಇದಕ್ಕೆ ಅರ್ಥೈಸಲಾಗಿದೆ. ಪುರಾಣಗಳಿಗೆ ಸಂಪ್ರದಾಯದಲ್ಲಿ ಪಂಚಲಕ್ಷಣಗಳನ್ನು ಹೇಳುತ್ತಾರೆ. ಸರ್ಗ - ಜಗತ್ತಿನ ಹುಟ್ಟು, ಪ್ರತಿಸರ್ಗ - ಅವನತಿ, ಸಾವು, ವಂಶ - ಋಷಿ, ದೇವತೆಗಳ ಜೀವಿತ ವಿವರ, ಮನ್ವಂತರಗಳು - ಸೂರ್ಯಚಂದ್ರವಂಶೀಯ ರಾಜರ ಚರಿತ್ರೆಗಳು. ಇವೇ ಆ ಐದು ಲಕ್ಷಣಗಳು. ಎಂದರೆ ಪುರಾಣದಲ್ಲಿ ವಿವರಣೆಗೆ ನಿರೂಪಣೆಗೆ ಬರುವ ವಿವರಗಳ ವ್ಯಾಪ್ತಿ ದೊಡ್ಡದು. ವೇದೋಪನಿಷತ್ತುಗಳಲ್ಲಿ ಬರುವ ಗಹನತತ್ತ್ವಗಳನ್ನು ಕಥೆಗಳ ಮೂಲಕ ಪಾಮರಗ್ರಾಹ್ಯವಾಗಿ ಹೇಳುವುದು ಪುರಾಣದ ಪ್ರಮುಖ ಪ್ರಯೋಜನವಾದರೂ ಭಾರತದ ಪ್ರಾಚೀನ ಯುಗದ ಇತಿಹಾಸವನ್ನು ಪುನಃ ನಿರ್ಮಿಸಲು ಪುರಾಣ ತುಂಬಾ ನೆರವಾಗಿದೆ. ಇದು ಸಾಹಿತ್ಯ ರಾಶಿಯಲ್ಲಿ ಶತಕೋಟಿ ಪ್ರವಿಸ್ತರವಾದದ್ದಾದರೂ ಇದನ್ನು ಆಯ್ದು ಅಷ್ಟಾದಶ ಮಹಾಪುರಾಣಗಳನ್ನು ಹೇಳುತ್ತಾರೆ. ಬ್ರಹ್ಮ, ಪದ್ಮ, ವಿಷ್ಣು, ಶಿವ, ವಾಯು, ಭಾಗವತ, ನಾರದ, ಅಗ್ನಿ, ಭವಿಷ್ಯತ್, ಬ್ರಹ್ಮವೈವರ್ತ, ಲಿಂಗ, ಸ್ಕಾಂದ, ವಾರಾಹ, ವಾಮನ, ಕೂರ್ಮ, ಮತ್ಸ್ಯ, ಗರುಡ, ಬ್ರಹ್ಮಾಂಡ ಪುರಾಣಗಳೆಂಬುದಾಗಿ. ಈಗ ಅವುಗಳನ್ನು ಒಂದೊಂದಾಗಿ ಅತೀ ಸಂಕ್ಷೇಪದಲ್ಲಿ ನೋಡೋಣ.



1) ಬ್ರಹ್ಮ ಪುರಾಣ: ಇದಕ್ಕೆ ಆದಿ ಪುರಾಣ ಎಂಬ ಹೆಸರೂ ಇದೆ.

2) ಪದ್ಮ ಪುರಾಣ: ವಿಷ್ಣುವನ್ನು ಕೇಂದ್ರವಾಗಿಸಿ ಬ್ರಹ್ಮಾಂಡದ ವಿವರಣೆ ನೀಡಲಾಗಿದೆ.

3) ವಿಷ್ಣುಪುರಾಣ: ಮಹಾವಿಷ್ಣುವಿನ ಬಗ್ಗೆ, ಪರಮಾತ್ಮ ಮಹಾವಿಷ್ಣು ಬಗ್ಗೆ ವಿವರವಾಗಿ ಇದೆ.

4) ಶಿವ ಪುರಾಣ: ಶೈವದ ಬಗ್ಗೆ ತಿಳಿಸುತ್ತದೆ. ಶಿವನಿಂದ ವಿಷ್ಣು, ಬ್ರಹ್ಮ ಬಂದಿದ್ದಾಗಿ ಹೇಳುತ್ತದೆ.

5) ಭಾಗವತ ಪುರಾಣ: ಅತ್ಯಧಿಕ ಜಾನಾದರಣೆ ಪಡೆದ ಪುರಾಣ. ವಿಷ್ಣುವಿನ ಅವತಾರಗಳನ್ನೇ ವಿವರಿಸುತ್ತದೆ.

6) ನಾರದ ಪುರಾಣ: ಭಾರತ ದೇಶದಲ್ಲಿ ಇರುವ ಪವಿತ್ರ ನದಿಗಳ ಬಗ್ಗೆ ತಿಳಿಸುತ್ತದೆ. ಗ್ರಹ ತಾರೆಗಳ ಕುರಿತಾದ ವಿಪುಲ ಮಾಹಿತಿಯಿದೆ.

7) ಮಾರ್ಕಂಡೇಯ ಮಹಾಪುರಾಣ: ಶಕ್ತಿತತ್ವವನ್ನು ಎತ್ತಿ ಹೇಳುವ ಪುರಾಣ ಇದು.

8) ಅಗ್ನಿಪುರಾಣ: ರಾಜಕೀಯಗಳು, ವಾಸ್ತುಶಾಸ್ತ್ರ, ಸೈನ್ಯ ಮತ್ತು ವಿಜ್ಞಾನಗಳ ಕುರಿತು ಚಿಂತಿಸಿದೆ.

9) ಬ್ರಹ್ಮಾಂಡ ಪುರಾಣ: ನ್ಯಾಯ, ಸರಕಾರಗಳು, ರಾಜಕೀಯ ಇಂತಹ ಅಂಶಗಳು ವರ್ಣಿತವಾಗಿವೆ.

10) ಮತ್ಸ್ಯ ಪುರಾಣ: ಮತ್ಸ್ಯ ಅವತಾರದ ಬಗ್ಗೆ ಹೇಳುತ್ತದೆ.

11) ಬ್ರಹ್ಮ ವೈವರ್ತ ಪುರಾಣ: ದೇವ, ದೇವತೆಗಳ ಪ್ರೇಮ ಕಥೆಗಳೇ ಇಲ್ಲಿಯ ಪ್ರಧಾನ ಅಂಶ.

12) ವಾಮನ ಪುರಾಣ: ಇದು ವಿಷ್ಣುವಿನ ಅವತಾರ ವರ್ಣನೆಯೇ ಆಗಿದೆ.

13) ಲಿಂಗ ಪುರಾಣ: ಶಿವನ ಲಿಂಗವನ್ನೇ ಸೃಷ್ಟಿಗೆ ಮೂಲವಾಗಿ ವರ್ಣಿಸಿದೆ.

14) ವರಾಹ ಪುರಾಣ: ನಾರಾಯಣನ ವರಾಹ ಅವತಾರದ ಕಥೆಯಿದು.

15) ವಾಯು: ಅತಿ ಪ್ರಾಚೀನವಾದ ಪುರಾಣಗಳಲ್ಲಿ ಒಂದು. ದಕ್ಷಿಣ ಭಾರತದ ವರ್ಣನೆ ಇಲ್ಲಿದೆ.

16) ಸ್ಕಂದ ಪುರಾಣ: ಶಿವನ ಮಗ ಕಾರ್ತಿಕೇಯನ ಬಗ್ಗೆ ಹೆಚ್ಚಾಗಿ ತಿಳಿಸಿದ್ದಾರೆ. ಮತ್ತು ಪವಿತ್ರ ಸ್ಥಳಗಳ ಬಗ್ಗೆ ಇಲ್ಲಿ ವಿಪುಲ ಸಾಮಗ್ರಿಗಳಿವೆ.

17) ಕೂರ್ಮ ಪುರಾಣ: ನಾರಾಯಣನ ಕೂರ್ಮ ಅವತಾರದ ಬಗ್ಗೆ ಇದರಲ್ಲಿ ಕಥೆ ಇದೆ.

18) ಗರುಡ ಪುರಾಣ: ಸ್ವರ್ಗ, ನರಕ, ಜನ್ಮ ಪುನರ್ಜನ್ಮ, ಪಾಪಗಳು, ಪುಣ್ಯಗಳು, ಶಿಕ್ಷೆಗಳು ಹೀಗೆ ನೀತಿ, ವಿವೇಕ ಮತ್ತು ವಿಜ್ಞಾನಗಳಿಂದ ಕೂಡಿದ ಒಂದು ವಿಶ್ವ ಕೋಶವೇ ಇದು.

ಒಟ್ಟಿನಲ್ಲಿ ಭಾರತೀಯರಿಗೆ ಇತಿಹಾಸದ ದೃಷ್ಟಿಯಿಲ್ಲವೆಂಬ ಅಪವಾದವಿದೆ. ಇಂದಿಗೂ ಇದು ಅಸ್ಪಷ್ಟವಾಗಿಯೇ ಉಳಿದಿದೆ. ಈ ಅಸ್ಪಷ್ಟತೆಯನ್ನು ಪರಿಹರಿಸಲು ಪುರಾಣಗಳು ನೆರವಾಗುತ್ತವೆ.

ಅಭಿಜ್ಞಾನ ಶಾಕುಂತಲ ಕಥೆ ಮತ್ತು ವಿಮರ್ಶೆ

ಕವಿಕುಲಗುರುಎಂದು ಪ್ರಖ್ಯಾತನಾದ ಕಾಳಿದಾಸನು ಸಂಸ್ಕೃತದಲ್ಲಿ ಬರೆದ ಏಳು ಅಂಕಗಳ ನಾಟಕ ಅಭಿಜ್ಞಾನ ಶಾಕುಂತಲಮ್. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವಾಗಿರುವ ಕೃತಿ. ಇದರ ಕಥಾವಸ್ತು ಕವಿಯ ಕಲ್ಪನೆಯಲ್ಲ; ವ್ಯಾಸನಿಂದ ರಚಿತವಾದ ಮಹಾಭಾರತದಲ್ಲಿ ಇದರ ಉಲ್ಲೇಖವಿದೆ.



ದುಷ್ಯಂತನು ಚಂದ್ರವಂಶದಲ್ಲಿ ಪ್ರಸಿದ್ಧನಾದ ದೊರೆ. ಇವನಿಗೆ ತಂದೆ ಈಲಿನ. ನಾಲ್ವರು ಸಹೋದರರು - ಶೂರ, ಭೀಮ, ವಸು, ಪ್ರವಸು ಎಂದು, ಮೊದಲ ಹೆಂಡತಿ ಲಕ್ಷ್ಮೀ. ಆಕೆಯಲ್ಲಿ ಹುಟ್ಟಿದ ಮಗ ಜನಮೇಜಯ. ಎರಡನೆಯ ಹೆಂಡತಿ ಶಕುಂತಲೆ. ಇವಳು ವಿಶ್ವಾಮಿತ್ರ ಮೇನಕೆಯರ ಮಗಳು. ಕಣ್ವಾಶ್ರಮದಲ್ಲೇ ಬೆಳೆದ ಈಕೆಯನ್ನು ಬೇಟೆಗೆ ಹೋದ ದುಷ್ಯಂತ ಕಂಡು ಮೋಹಿತನಾಗಿ ಗಾಂಧರ್ವ ರೀತಿಯಲ್ಲಿ ಈಕೆಯನ್ನು ವಿವಾಹವಾಗುತ್ತಾನೆ. ಕೆಲಕಾಲ ಜೊತೆಗಿದ್ದು ತಾನೊಬ್ಬನೇ ರಾಜಧಾನಿಗೆ ಹಿಂತಿರುಗುತ್ತಾನೆ. ಗರ್ಭವತಿ ಶಕುಂತಲೆ ಆಶ್ರಮದಲ್ಲಿದ್ದುಕೊಂಡು ಗಂಡು ಮಗುವನ್ನು ಪ್ರಸವಿಸುತ್ತಾಳೆ. ಕಣ್ವರು ಮಗುವಿಗೆ ಸರ್ವದಮನ ಎಂದು ನಾಮಕರಣ ಮಾಡುತ್ತಾರೆ. ದುಷ್ಯಂತ ಮತ್ತೆ ಕಣ್ವಾಶ್ರಮಕ್ಕೆ ಬರುವುದೂ ಇಲ್ಲ; ಹೆಂಡತಿಯನ್ನು ಕರೆಸಿಕೊಳ್ಳುವುದೂ ಇಲ್ಲ! ಆಗ ಕಣ್ವರು ಶಕುಂತಲೆಯನ್ನೂ ಸರ್ವದಮನನನ್ನೂ ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ. ದುಷ್ಯಂತ ಶಕುಂತಲೆಯನ್ನು ಮರೆತು ಬಿಟ್ಟಿದ್ದನಾದ ಕಾರಣ ತಾನು ಆತನ ಪತ್ನಿ ಎಂಬುದನ್ನು ಹೇಗೆ ಸ್ಪಷ್ಟಪಡಿಸಿದರೂ ಆಕೆಯನ್ನು ಅವನು ಗುರುತಿಸಲಾರ-ದಾಗುತ್ತಾನೆ. ಆ ಸಮಯದಲ್ಲಿ ಅಶರೀರವಾಣಿಯೊಂದು ಶಕುಂತಲೆ ಆತನ ಪತ್ನೀ ಎಂದೂ ಸರ್ವದಮನ ಆತನ ಮಗನೆಂದೂ ಅವರಿಬ್ಬರನ್ನೂ ಸ್ವೀಕರಿಸಬೇಕೆಂದೂ ನುಡಿಯುತ್ತದೆ. ಆಗ ದುಷ್ಯಂತ ಮರುಮಾತಾಡದೆ ಸ್ವೀಕರಿಸುತ್ತಾನೆ. ಆಗಲೆ ಮಗನಿಗೆ ಭರತ ಎಂದು ಹೊಸದಾಗಿ ಹೆಸರಿಡುತ್ತಾನೆ. ಮಹಾಭಾರತದ ಆದಿಪರ್ವದಲ್ಲಿ ಬರುವ ದುಷ್ಯಂತೋಪಾಖ್ಯಾನವೆಂಬ ಈ ಕತೆಯನ್ನು ಕೆಲವು ಮಾರ್ಪಾಡುಗಳೊಂದಿಗೆ ಕಾಳಿದಾಸ ಬಳಸಿಕೊಂಡು ತನ್ನ ವಿಶ್ವವಿಖ್ಯಾತ ಅಭಿಜ್ಞಾನ ಶಾಕುಂತಲಾ ಎಂಬ ನಾಟಕವನ್ನು ಬರೆದಿದ್ದಾನೆ.

ಪದ್ಮಪುರಾಣದ ಮಾತೃಕೆಗಳಲ್ಲಿ ಶಾಕುಂತಲೋಪಾಖ್ಯಾನದ ಬೇರೊಂದು ಪಾಠ ದೊರೆಯುತ್ತದೆ. ಇದರ ಕಥೆಗೂ ಕಾಳಿದಾಸನ ನಾಟಕಕ್ಕೂ ತುಂಬ ಸಾಮ್ಯ ಉದ್ದಕ್ಕೂ ಕಾಣಬರುತ್ತದೆ. ಅವುಗಳಲ್ಲಿ ಬಹು ಮುಖ್ಯವಾದದ್ದು ದುರ್ವಾಸರ ಶಾಪ. ಇದರ ಫಲವಾಗಿಯೇ ಶಕುಂತಲೆಯ ನಿರಾಕರಣೆ. ಬೆಸ್ತನಿಂದಲೇ ಉಂಗುರ ದೊರೆಯುತ್ತದೆ. ಮಾರೀಚಾಶ್ರಮದಲ್ಲೇ, ಭರತನ ಮೂಲಕವೇ ದಂಪತಿಗಳ ಸಮಾಗಮ. ಹೀಗೆ ಈ ಕತೆಯೇ ಕಾಳಿದಾಸನಿಗೆ ಮೂಲವಸ್ತುವಾಗಿರಬೇಕೆಂದು ಕೆಲವರು ಅಭಿಪ್ರಾಯಪಡುತ್ತಾರೆ.



ನಾಟಕ ರಚನೆಯ ಕಾಲದ ಬಗ್ಗೆ ನೋಡಿದರೆ, ಕಾಳಿದಾಸನಿದ್ದ ಕಾಲವನ್ನು ಕುರಿತು ಇನ್ನೂ ಅನಿರ್ದಿಷ್ಟತೆಯಿರುವಾಗ ಈ ನಾಟಕವನ್ನು ಯಾವಾಗ ಬರೆದನೆಂದು ಹೇಳುವುದು ತುಂಬಾ ಕಷ್ಟ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ, ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ. ಬದುಕಿನಲ್ಲಿ ಕೃತಕೃತ್ಯನಾದವನು ಆಡುವ ಭರತವಾಕ್ಯವಿದು, ಎನ್ನುತ್ತಾರೆ ವಿಮರ್ಶಕರು. ಆದ್ದರಿಂದ ಅಭಿಜ್ಞಾನ ಶಾಕುಂತಲಕಾಳಿದಾಸನ ಕೊನೆಯ ಕೃತಿಯೆಂದು ಅಭಿಪ್ರಾಯ ಪಡುತ್ತಾರೆ.

Saturday, July 16, 2022

ಅರ್ಚತ ಪ್ರಾರ್ಚತ!

ಜೀವ-ನ ಬದುಕಿಗೆ ದಾರಿ ನೂರೆಂಟು. ಅವುಗಳಲ್ಲಿ ಹೆದ್ದಾರಿಗಳನ್ನು ಎರಡು ತೆರನಾಗಿ ಗುರುತಿಸುತ್ತಾರೆ. ದೇವರಿಗೆ ಅಭಿಮುಖವಾಗಿ ಬದುಕುವುದು ಒಂದು. ದೇವರಿಗೆ ಬೆನ್ನುಮಾಡಿ ಬದುಕುವುದು ಇನ್ನೊಂದು. ಇವೆರಡಕ್ಕೂ ದೇವರೇ ಕೇಂದ್ರವಾದದ್ದು ಸೋಜಿಗ! ಹಾಗಾಗಿ `ಜೀವನ ಕೇಂದ್ರವಾದ ದೇವನ ಉಪಾಸನೆ ಮಾನವನಿಗೆ ಅನಿವಾರ್ಯ. ಅದನ್ನೇ ದೇವತಾರ್ಚನೆ, ದೇವವಂದನೆ, ದೇವತಾರಾಧನೆ, ದೇವಪೂಜೆ ಎಂಬುದಾಗಿ ಕರೆದಿದ್ದಾರೆ. ಪೂಜೆಗೆ ಅತೀಮುಖ್ಯವಾಗಿ ಬೇಕಾಗಿರುವವು ಪೂಜ್ಯ ಮತ್ತು ಪೂಜಕರು. ಈ ಕಾರಣಕ್ಕಾಗಿಯೇ ತಂತ್ರ ಸಮುಚ್ಚಯವೆಂಬ ಆಗಮ ಗ್ರಂಥ ದೇವಾಲಯ ಮತ್ತು ದೇವತಾ ಪ್ರತಿಷ್ಠೆಗಳನ್ನು ಮೊದಲು ಹೇಳಿ, ಆಮೇಲೆ ಅಥಾಖಿಲೇಶಾರ್ಚನಮುಚ್ಯತೇಧುನಾ ಎಂದು ಪೂಜಾ ಪಟಲವನ್ನು ಆರಂಭಿಸುತ್ತದೆ.

 

ಪ್ರತಿಯೊಬ್ಬನೂ ನಿರ್ಗುಣ ಬ್ರಹ್ಮನಿಂದ ಬೇರೆ ಬೇರೆಯದೇ ಆದ ವಿಶಿಷ್ಟಗುಣಗಳನ್ನು ಪ್ರತಿಫಲಿಸುತ್ತಿರುತ್ತಾನೆ. ಆದ ಕಾರಣ ಪ್ರತಿಯೊಬ್ಬನಿಗೂ ಪರಬ್ರಹ್ಮನೊಂದಿಗೆ ಸಂಪರ್ಕ ಬೆಳೆಸಲು 'ತಮ್ಮ ಗುಣಗಳಿಗೆ ಹತ್ತಿರವಾದ ದೈವೀಶಕ್ತಿ' ಪೂರಕವಾಗಿ ಕೆಲಸ ಮಾಡುತ್ತಿರುತ್ತದೆ. ಅದಕ್ಕೆಂದೇ ಆಗಮಗಳು ನೂರಾರು ವಿಭಿನ್ನ ಗುಣಗಳ ದೇವತೆಗಳನ್ನು ಪ್ರಕಲ್ಪಿಸಿವೆ. ನಿರ್ಗುಣನೂ ನಿರಾಕಾರನೂ ಆದ ಪರಮಾತ್ಮನನ್ನು ಧ್ಯಾನಿಸಲು ಅಥವಾ ಉಪಾಸನೆ ಮಾಡಲು, ನಿರ್ವಿಕಾರ ಭಾವನೆ ಅತ್ಯಗತ್ಯ. ಮನಸ್ಸಿನ ಸಮಾಹಿತ ಸ್ಥಿತಿಯಿಲ್ಲದೇ ನಿರಾಕಾರನನ್ನು ಉಪಾಸನೆಮಾಡುವುದು ಕಷ್ಟ! ಚಿತ್ತೈಕಾಗ್ರತೆ ಇಲ್ಲದ ಮನಸ್ಸು ಉಪಾಸನೆಯಲ್ಲೂ ನೆಲೆ ಕಾಣಲಾರದು. ಅದಕ್ಕೆಂದೇ ಪ್ರಾಜ್ಞರು ಉಪಾಸನೆಗೆ ಮನಸ್ಸುನ್ನು ಕೇಂದ್ರಗೊಳಿಸಲು ಧ್ಯೇಯನಾದ ಭಗವಂತನಿಗೆ ವಿಗ್ರಹಗಳನ್ನು ಮಾಡಿದ್ದಾರೆ. ಶಬ್ದವೇ ಹೇಳುವಂತೆ ಅಮೂರ್ತನಾದ ಭಗವಂತನನ್ನು ಬಿಗಿಯಾಗಿ ಹಿಡಿದುಕೊಳ್ಳಲು ಸಹಕಾರಿಯಾದದ್ದೇ ಈ ವಿ-ಗ್ರಹ. ಇದು ಭಗವಂತನ ಮಹಿಮೆ, ಭಗವಂತನಿಗೆ ಮಾಧ್ಯಮ, ಭಗವಂತನ ಮೂರ್ತಿ, ಭಗವದ್ವಸ್ತು, ಧ್ಯೇಯ ವಸ್ತು ... ಅಷ್ಟೇ ಏಕೆ? ಇದು ನಮ್ಮ ಭಾವ ಕೇಂದ್ರವೇ ಆಗಿದೆ. ಆದ್ದರಿಂದಲೇ ವಿಗ್ರಹಗಳಿಗೆ, ಪ್ರತಿಮೆಗಳಿಗೆ ನಿರ್ದಿಷ್ಟವಾದ ಮತ್ತು ನಿರ್ದುಷ್ಟವಾದ ಪವಿತ್ರ ಉದ್ದೇಶಗಳಿವೆ.

ಮಂಡಲೇ ಕರ್ಮಣಾಂ ಸಾಕ್ಷೀ ಕಲಶೇ ಯಜ್ಞರಕ್ಷಕಃ |

ಹೋಮಾಧಿಕರಣಂ ವಹ್ನೌ ಶಿಷ್ಯೇ ಪಾಶವಿಮೋಚಕಃ ||

ಸ್ವಾತ್ಮನ್ಯನುಗೃಹೀತೇತಿ ಪಂಚಾಧಾರೋಽಯಮೀಶ್ವರಃ || 

ಎಂದು ಸೋಮಶಂಭುಪದ್ಧತಿಯೆಂಬ ಆಗಮ ಗ್ರಂಥ ಸಾರಿ ಹೇಳಿದೆ. [ದೇವನು ಈ ಐದು ಮನೆಗಳಲ್ಲಿ ಐದು ಉದ್ದೇಶದೊಂದಿಗೆ ಇರಬಲ್ಲನು! ಮಂಡಲದಲ್ಲಿ ಸಾಕ್ಷಿಯಾಗಿಯೂ, ಕಲಶದಲ್ಲಿ ರಕ್ಷಕನಾಗಿಯೂ, ಅಗ್ನಿಯಲ್ಲಿ ಕರ್ಮದ ಬೆನ್ನೆಲುಬಾಗಿಯೂ, ತನ್ನೊಳಗೆ ಅನುಗ್ರಹಕಾರಕನಾಗಿಯೂ, ಉಳಿದಂತೆ ಶಾಸ್ತ್ರ ತಿಳಿಸಿದ ಹಾಗೆ - ಪಂಚ ಭೂತಗಳಲ್ಲಿ, ಮರ ಗಿಡಗಳಲ್ಲಿ, ನದೀ ನದಗಳಲ್ಲಿ, ಪವಿತ್ರ ಕ್ಷೇತ್ರಗಳಲ್ಲಿ ಮೋಹ, ಆಲಸ್ಯ, ವಿಘ್ನಗಳೆಂಬ ಪಾಶಗಳನ್ನು ಹೋಗಲಾಡಿಸುವವನಾಗಿಯೂ... ಆಗಿರುತ್ತಾನೆ.]


 

ಧ್ಯಾನಕ್ಕೆ ವಸ್ತುವಾಗುವ ವಿಗ್ರಹಗಳು ಉಪಾಸಕನ ಅಂತರಂಗದ ತಿಳಿವನ್ನು ಪ್ರತಿನಿಧಿಸುವುದರ ಜೊತೆಗೆ ಜಗದ್ವ್ಯಾಪಿಯಾದ ಪರಮಾತ್ಮನನ್ನೂ ಅರ್ಥೈಸುವಲ್ಲಿ ಸಮರ್ಥ ಸಂಕೇತವಾಗಬೇಕು. ಪ್ರತಿಯೊಬ್ಬ ಮಾನವನ ಹೃತ್ಕಮಲವನ್ನು ಅರಳಿಸುವಂತೆಯೂ, ಒಳ್ಳೆಯ ನೆನಪಿನ ಪರಿಮಳವನ್ನು ಸೂಸುವಂತೆಯೂ, ಮಾಡುವ ದೈವಿಕ ಹಿನ್ನೆಲೆ ಈ ವಿಗ್ರಹಕ್ಕೆ ಇರಲೇ ಬೇಕು. ಏಕೆಂದರೆ ವಿಗ್ರಹ ಧ್ಯಾನ ಕೇಂದ್ರ ತಾನೆ? ಪ್ರತೀಕೋಪಾಸನೆಯಲ್ಲಿ ಮೂರ್ತಿಯ ವಿಶೇಷಗಳನ್ನು ಮನಸ್ಸಿನಲ್ಲಿ ಚಿಂತಿಸುತ್ತಾ ಅದರಲ್ಲಿ ಲೀನವಾಗುವುದೇ ಧ್ಯಾನ. ಧ್ಯಾನದಲ್ಲಿ ದೇವತಾಸ್ತುತಿಯು ತೈಲಧಾರೆಯಂತೆ ಒಂದೇ ಸಮನೆ ಹರಿಯುತ್ತಿರಬೇಕು. ಉಪಾಸಕನ ಮೊದಲ ಹೆಜ್ಜೆ ಮತ್ತು ಉಪಾಸನೆಯ ಪ್ರಥಮ ಉಪಚಾರವೂ ಧ್ಯಾನವೇ ಆಗಿದೆ. ಉದಾಹರಣೆಗೆ

ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್ |

ಪಾಶಾಂಕುಶಧರಂ ದೇವಂ ಧ್ಯಾಯೇತ್ಸಿದ್ಧಿವಿನಾಯಕಮ್ || 

ಗಣೇಶ ಚೌತಿಯಲ್ಲಿ ಆರಾಧ್ಯನಾದ ಭಗವಂತ ಶ್ರೀಸಿದ್ಧಿವಿನಾಯಕನ ಧ್ಯಾನ ವ್ರತರಾಜ ಗ್ರಂಥದಲ್ಲಿ ಹೀಗಿದೆ. ಒಂದು ಹಲ್ಲಿನ, ಮೊರದ ಕಿವಿಗಳ ಆನೆ ಮೊಗದವಗೆ ನಾಲ್ಕು ಕೈಗಳಿವೆ. ಅವುಗಳಲ್ಲಿ ಪಾಶ, ಅಂಕುಶ ಪಿಡಿದ ಶ್ರೀ ಸಿದ್ಧಿವಿನಾಯಕನು ನಮಗೆ ಧ್ಯೇಯನಾಗಿಹನು. ಮೇಲಿನ ಬಲಗೈಯ್ಯಲ್ಲಿ ಪಾಶವನ್ನೂ, ಎಡಗೈಯ್ಯಲ್ಲಿ ಅಂಕುಶವನ್ನೂ ಕೆಳಗಿನ ಬಲಗೈಯ್ಯಲ್ಲಿ ವರಪ್ರದನಾಗಿಯೂ, ಎಡಗೈಯ್ಯಲ್ಲಿ ಮುರಿದ ತನ್ನ ಎಡದಂತದ ಚೂರನ್ನು ಹಿಡಿದ್ವನಾಗಿಯೂ, ಇಲಿಯ ಧ್ವಜದೊಂದಿಗೆ ಭಕ್ತರಿಗೆ ಕಾಣಿಸಿ ಕೊಂಡಿದ್ದಾನೆಂದು ಉಪನಿಷತ್ತಿನ ಋಷಿಗಳು ಇನ್ನೂ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಏಕದಂತಂ ಚತುರ್ಹಸ್ತಂ ಪಾಶಮಂಕುಶ ಧಾರಿಣಮ್ |

ರದಂ ಚ ವರದಂ ಹಸ್ತೈರ್ಬಿಭ್ರಾಣಂ ಮೂಷಕಧ್ವಜಮ್ || 

ಹೀಗೆ ಇಷ್ಟು ಸ್ಪಷ್ಟವಾಗಿ ನಮ್ಮ ಋಷಿಗಳು ಹೇಳಿದರೂ, ಇವತ್ತು ನಾನಾ ವ್ಯಂಗ್ಯಗಳಿಂದ ಕೂಡಿದ ಗಣಪತಿಯ ಕಲಾ ಮೂರ್ತಿಗಳನ್ನು ನಾವು ನೋಡುತ್ತಿದ್ದೇವೆ! ಇವು ಸರ್ವಥಾ ಸರಿಯಲ್ಲ! {ಕಲೆಯಾಗಿ ಪ್ರದರ್ಶನಕ್ಕೆ ಸರಿಯೆನಿಸಿದರೂ, ಧಾರ್ಮಿಕ ಆಚರಣೆಯ ದೃಷ್ಟಿಯಲ್ಲಿ, ವ್ರತ ನಿಯಮಗಳಿಗೆ ಒಪ್ಪಿತವಾದ ಧ್ಯೇಯ ಮೂರ್ತಿಯಾಗಿ ಇದು ಸರಿಯಲ್ಲ!} ನಟರೋ, ಆಟಗಾರರೋ, ಇನ್ನಾರೋ... ನಮಗಿಂದು ಆದರ್ಶವಾಗಿ ನಮ್ಮ ಪರಮ ಧ್ಯೇಯನಾದ ಶ್ರೀ ಸಿದ್ಧಿವಿನಾಯಕನನ್ನೇ ನಾವು ವಿರೂಪಗೊಳಿಸಿದ್ದೇವೆ.  ಇದರಿಂದ ಧ್ಯೇಯಭಂಗ ಎಂಬ ದೋಷ ನಮ್ಮ ಸಮಕಾಲದಲ್ಲಿ ಸಂಭವಿಸುತ್ತಿದೆ. ನಮ್ಮ ಹಿರಿಯರು ನಮಗೆ (ಆಗ ಕಿರಿಯರಾದ ನಮಗೆ) ಆದರ್ಶಗಳನ್ನು ವೇದ, ವೇದಾಂಗಗಳ ರೂಪದಲ್ಲಿ, ಪುರಾಣ ಕಥೆಗಳ ನಿಟ್ಟಿನಲ್ಲಿ, ರಾಮಾಯಣ ಮಹಾಭಾರತಗಳಂಥ ಇತಿಹಾಸಗಳ ಸ್ಮರಣಿಕೆಗಳಲ್ಲಿ ಮತ್ತು ವ್ರತ-ನಿಯಮಗಳ ಆಚರಣೆಯ ತಳಹದಿಯಲ್ಲಿ ಸರಿಯಾಗಿಯೇ ಉಳಿಸಿ, ಬೆಳೆಸಿ ಕೊಟ್ಟಿದ್ದಾರೆ. ಅದನ್ನು ಮುಂದುವರಿಸಲು (ಮುಂದಿನ ಮಕ್ಕಳಿಗೆ ವರ್ಗಾಯಿಸಲು) ನಾವು ಎಡವಿದ್ದೇವೆಂಬುದು ಅತ್ಯಂತ ಖೇದಕರ ಅಂಶವಾಗಿದೆ. ಇರಲಿ ಪ್ರಕೃತ ದೇವಪೂಜೆಯ ಉದ್ದೇಶಗಳನ್ನು ನೋಡೋಣ.

 

ದೇವಪೂಜೆಯನ್ನು ದುರಿತಕ್ಷಯಕ್ಕಾಗಿಯೂ, ಪುಣ್ಯಸಂಚಯನಕ್ಕಾಗಿಯೂ ಮಾಡುತ್ತಾರೆ. ದೇವತೆಗಳು ಕೊಡುವವರು, ಬೇಡುವವರು ನಾವು. ಬೇಡುವ ರೀತಿಯನ್ನೇ ಉಪಾಸನೆ ಎಂಬುದಾಗಿ ಋಷಿಗಳು ಕ್ರಮಗೊಳಿಸಿರುವರು. ಮನೆಯಲ್ಲಿ ಮಾಡುವ ಪೂಜೆ ಸ್ವಹಿತಕ್ಕೆ ಕಾರಣವಾಗಿರುವುದು. ಇದರಲ್ಲಿ ತನ್ನ ಮತ್ತು ತನ್ನವರ ಕ್ಷೇಮ, ಸ್ಥೈರ್ಯ, ಜಯ, ಆಯುರಾರೋಗ್ಯಗಳು ಸೇರಿಕೊಂಡಿವೆ. ಊರಿನಲ್ಲಿ ಮತ್ತು ಗುಡಿಗಳಲ್ಲಿ ಮಾಡುವ ಪೂಜೆಯು ಪರಾರ್ಥ ವಾಗಿರುವುದು. ಇವು ಊರಿನವರ ಮತ್ತು ಒಡೆಯರ ಪೀಡಾ ಪರಿಹಾರವಾಗಿಯೂ, ಗ್ರಾಮಕ್ಕೆ ಬಂದಿರುವ ಮತ್ತು ಒದಗಬಹುದಾದ ಆಪತ್ತು, ಆತಂಕಗಳ ನಿವಾರಣೆಗಾಗಿಯೂ, ಲೋಕಕಲ್ಯಾಣಕ್ಕೆ ಒತ್ತುನೀಡುವ ರೀತಿಯಲ್ಲಿಯೂ ಇರುತ್ತವೆ. ಒಟ್ಟರ್ಥದಲ್ಲಿ ಆತ್ಮಾರ್ಥವಾಗಿಯೂ ಪರಾರ್ಥವಾಗಿಯೂ ಸಾರ್ಥಕವೆನಿಸಿದ ಪೂಜೆಯನ್ನು ಕೈಗೊಳ್ಳುವಾಗ ಪೂಜಕನ ಮನಸ್ಸು “ದೇವಾ! ನಾನು ನಿನ್ನ ದಾಸ!” ಎನ್ನುವ ದ್ವೈತ ಭಾವನೆಯಿಂದಲೂ; “ನಾನು ಅದು!” ಎಂಬ ವಿಶಿಷ್ಟಾದ್ವೈತ ಭಾವನೆಯಿಂದಲೂ; ಇನ್ನು ಮೂರನೆಯ ಹಂತವಾದ “ನಾನು ನೀನು ಬೇರೆಯಲ್ಲವೆಂಬುದಾಗಿ” ಅದ್ವೈತ ಭಾವನೆಯಿಂದಲೂ ತುಂಬಿಕೊಂಡಿರುತ್ತದೆ.  ಇವು ಮೂರೂ ಭಾವಗಳೂ ದೇವತಾರ್ಚನೆಯ ಫಲವಾಗಿವೆ. ಹಾಗೆಂದೇ ಶಂಕರರು ’’ಚಿತ್ತಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ ಎಂದು ಘಂಟಾಘೋಷವಾಗಿ ಕಟುವಾಸ್ತವವನ್ನು ಎತ್ತಿ ಹಿಡಿದಿದ್ದಾರೆ. 

ವಾಸ್ತವವಾಗಿ ಎಲ್ಲ ಇಂದ್ರಿಯಗಳೂ ಮನೋವಶವಾಗಿವೆ. ಎಲ್ಲಿಯವರೆಗೆ ಮನವು ಸಾಂಸಾರಿಕವಾಗಿರುತ್ತದೆಯೋ; ಅಲ್ಲಿಯವರೆಗೆ ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ ಮನಸ್ಸನ್ನು ಸಂಸಾರ ಪಾತಳಿಯಿಂದ ಮೇಲೆತ್ತುವ ಸಾಹಸವೇ ಅರ್ಚನೆ! ಅದನ್ನು ಅನುಶಾಸನ ಬದ್ಧರಾಗಿ ಪ್ರೇಮದಿಂದ ಆಚರಿಸಿರಿ... ಎಂದು ವೇದವೂ ಸಾರಿ ಹೇಳುತ್ತಿದೆ. ಅರ್ಚತ ಪ್ರಾರ್ಚತ ಪ್ರಿಯಮೇಧಾಸೋ ಅರ್ಚತ ||

 

ಪರಮೇಶ್ವರ ಪುಟ್ಟನಮನೆ

Monday, March 14, 2022

ಸುಳ್ಳು ಬಾಳಿಗನ ಪರಮ ಗೋಳು!


ಮಾನವನು ಸದಾ ಆನಂದದ ಹುಡುಕುವಿಕೆಯಲ್ಲಿ ಅಲೆದಾಡುತ್ತಿರುತ್ತಾನೆ. ಈ ಅಲೆದಾಟದಲ್ಲಿ ಮಹರ್ಷಿಗಳಿಂದ ಯಾವ ತತ್ತ್ವವು ಶೋಧಿತವಾಯಿತೋ
, ಅದು ಅಚ್ಚರಿದಾಯಕ ಮಾತ್ರವಲ್ಲ; ಶೋಧನೆಯ ವಸ್ತುವೂ ಹೌದು. ಈ ಶೋಧನೆಯಿಂದ ತಿಳಿದು ಬಂದಿದ್ದು, ಎಲ್ಲ ಇಂದ್ರಿಯಗಳೂ ಮನೋವಶವಾಗಿವೆ. ಎಲ್ಲಿಯವರೆಗೆ ಮನಸ್ಸು ಸಾಂಸಾರಿಕವಾಗಿರುತ್ತದೆಯೋ, ಅಲ್ಲಿಯವರೆಗೆ ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ ಮನಸ್ಸನ್ನು ಸಂಸಾರದ ಪಾತಳಿಯಿಂದ ಮೇಲೆತ್ತುವ ಸಾಹಸಕ್ಕೆ ಮಹರ್ಷಿಗಳು ಕೈ ಹಾಕಿದರು. ಈ ಸಾಹಸ ಕಾರ್ಯ ಕೆಲವೊಮ್ಮೆ 'ದುಃಸ್ಸಾಧ್ಯ!' ಎಂದು ಅನಿಸುವ ಮಟ್ಟಕ್ಕೆ ಹೋಗುವುದೂ ಉಂಟು. ಇಂಥ ಅನಿಸಿಕೆಗಳಿಂದ ನಮ್ಮನ್ನು ಸ್ಥಿರತೆಗೆ ಒಯ್ಯಲು ಋಷಿಗಳು ಭದ್ರವಾದ ದಾರಿಯನ್ನು ಮಾಡಿದರು. ಆ ದಾರಿಯಲ್ಲಿ ಎದ್ದು ನಿಲ್ಲುವ ಎರಡು ತಂಗುದಾಣಗಳು ಅಂದರೆ ರಾಮಾಯಣ ಮತ್ತು ಮಹಾಭಾರತಗಳು.


ಆದಿಕವಿ ವಾಲ್ಮೀಕಿ ಒಮ್ಮೆ ನಾರದರನ್ನು ಕೇಳುತ್ತಾನೆ “ ಈ ಜಗತ್ತಿನಲ್ಲಿ ಧರ್ಮಜ್ಞನೂ ಮತ್ತು ವೀರನೂ ಶೂರನೂ ಆದವನು ಯಾರಿದ್ದಾನೆ?” ಅವತ್ತಿನಿಂದ ಇವತ್ತಿನವರೆಗೂ ಒಳ್ಳೆಯವರು ಯಾರಿದ್ದಾರಪ್ಪಾ? ಎಂಬ ಹುಡುಕಾಟ ಸಾಮಾನ್ಯವಾಗಿದೆ. ಅಲ್ಲದೇ ನಮ್ಮ ಸಮಕಾಲೀನ ಪರಿಸ್ಥಿತಿಯಲ್ಲಿ ಒಳ್ಳೆಯವರನ್ನು ಗುರುತಿಸುವುದೂ ತುಂಬಾ ಕಷ್ಟ ಸಾಧ್ಯ! ಇಂಥ ಕೆಲಸಕ್ಕೆ ನಾಲ್ಕೂ ದಿಕ್ಕುಗಳಲ್ಲಿ ಪ್ರವಾಸ ಮಾಡುವ ಮುನಿಶ್ರೇಷ್ಠರಾದ ನಾರದರೇ ಸರಿ. ಅವರು ತೋರಿಸಿದ್ದು ಪ್ರಭು ಶ್ರೀರಾಮನನ್ನು! ಆಗ ವಾಲ್ಮೀಕಿ ಮಹರ್ಷಿ ರಾಮನ ಗುಣಗಳಿಗೆ ಪ್ರಭಾವಿತನಾಗಿ ಅವನ ಗುಣಗಳನ್ನು ಬಿತ್ತರಿಸುವ ಮತ್ತು ಎತ್ತರಿಸುವ ಸಂಕಲ್ಪ ಮಾಡಿದ. ಅದರ ಪರಿಣಾಮವಾಗಿ ರಾಮಾಯಣ ಮಹಾಕಾವ್ಯ ಅಥವಾ ಆದಿಕಾವ್ಯ ಇವತ್ತು ನಮ್ಮ ಹೆಮ್ಮೆಯ ಕಾವ್ಯವಾಗಿ, ನಮ್ಮ ಗುಣೋತ್ಕರ್ಷಕ್ಕೆ ಕಾರಣವಾಗಿ, ಸನಾತನ ಸಂಸ್ಕೃತಿಗೆ ಬೆನ್ನೆಲುಬಾಗಿ ನಿಂತಿದೆ.

ಆದಿಕಾವ್ಯ ರಾಮಾಯಣದಲ್ಲಿ ಬ್ರಾಹ್ಮಣರೇ ಧರ್ಮದ ಹಾದಿತಪ್ಪಿಸಲು, ರಾಮನನ್ನು ಪರೀಕ್ಷಿಸಲು ಪ್ರಯತ್ನ ಮಾಡುತ್ತಾರೆ. ಅದರಲ್ಲಿ (ಈ ಪರೀಕ್ಷೆಯಲ್ಲಿ) ರಾಮ ತೇರ್ಗಡೆಯಾದದ್ದು ಅವನ ಗುಣರಾಶಿಗೆ ಹಿಡಿದ ಕನ್ನಡಿಯಾಗಿದೆ. ಹಾಗಾದರೆ ಪ್ರಕೃತದಲ್ಲಿ ಆ ಸಂದರ್ಭವನ್ನೊಮ್ಮೆ ಪರಿಶೀಲಿಸೋಣ. ತಂದೆಯಾದ ದಶರಥನು ತಾಯಿ ಕೈಕೇಯಿಗೆ ಕೊಟ್ಟ ಮಾತಿನಂತೆ ಭರತನಿಗೆ ಸಿಂಹಾಸನ ಮತ್ತು ರಾಮನಿಗೆ ವನವಾಸ ಎಂಬ ಎರಡು ಅಂಶಗಳನ್ನು ಎತ್ತಿ ಹಿಡಿದು ರಾಮ ಕಾಡಿಗೆ ಹೋಗುತ್ತಾನೆ. ಇದನ್ನು ಪುನರ್ವಿಮರ್ಶಿಸಲು ಭರತ ಕಾಡಿಗೆ ಬಂದು ಅಣ್ಣನಲ್ಲಿ ಕೇಳಿಕೊಳ್ಳುತ್ತಾನೆ. ’ಅಣ್ಣ ತಂದೆಯ ಮನಸ್ಸನ್ನು ಅರಿತು, ನಾಡಿನ ಭವಿಷ್ಯವನ್ನು ಗಮನಿಸಿ, ಅಯೋಧ್ಯೆಯ ಜನರಿಗೆ ನ್ಯಾಯ ಒದಗಿಸಬೇಕು. ನೀನೇ ಅಯೋಧ್ಯೆಯ ನಾಡಿಗೆ ಅಧಿಪತಿಯಾಗಿದ್ದೀಯಾ! ಬಂದು ರಾಜನಾಗಿ ಪ್ರಜೆಗಳನ್ನು ಪಾಲಿಸಬೇಕು.” ಅದಕ್ಕೆ ಶ್ರೀರಾಮನು “ನೀನು ಅಯೋಧ್ಯೆಯ ರಾಜ್ಯಭಾರವನ್ನು ನೋಡಿಕೋ, ನಾನು ದಂಡಕಾರಣ್ಯವಾಸಿಯಾಗಿ ವನವಾಸಿಗಳ ಮನಸ್ಸನ್ನು ಗೆಲ್ಲುತ್ತೇನೆ, ಒಟ್ಟಿನಲ್ಲಿ ಎಲ್ಲೆಡೆಯೂ ಧರ್ಮದ ಆಡಳಿತ ವಿಸ್ತರಿಸಲಿ. ನೀನು ಮರುಕಪಡುವ ಅಗತ್ಯವಿಲ್ಲ!” ಎಂದು ಸಮಾಧಾನವನ್ನು ಮಾಡುತ್ತಾನೆ.

ಈ ಸಂದರ್ಭದಲ್ಲಿ ಬ್ರಾಹ್ಮಣ ಶ್ರೇಷ್ಠನಾದ ಜಾಬಾಲಿಯು “ತಂದೆ ಯಾರು? ತಾಯಿ ಯಾರು? ಅವರ ಮಾತೇನು? ಇವುಗಳಿಗೆ ಕಟ್ಟಿ ಬಿದ್ದು ಪ್ರಜೆಗಳನ್ನು ಕಾಪಾಡುವ ಮಹತ್ಕಾರ್ಯದಿಂದ ದೂರಾಗುವುದು, ಅದರಲ್ಲೂ ವನವಾಸಕ್ಕೆ ಹೊಂದಿಕೊಳ್ಳುವುದು ಹುಚ್ಚುತನದ ಪರಮಾವಧಿಯಾಗಿದೆ!” ಎಂಬುದಾಗಿ ಹೇಳುತ್ತಾ; ಇಹ - ಪರಗಳಲ್ಲಿ ಇಹವೇ ಪ್ರಧಾನವೆಂದೂ, ಆಡಳಿತ ಮತ್ತು ಅಧಿಕಾರಗಳನ್ನೇ ಜೀವಾಳವೆಂದೂ ಎತ್ತಿ ಹಿಡಿಯುತ್ತಾನೆ. ಇಂಥ ಜಾಬಾಲಿಯನ್ನು ಉದ್ದೇಶಿಸಿ ಶ್ರೀರಾಮ ಹೇಳುತ್ತಾನೆ.


“ನೀವು ನನ್ನನ್ನು ಸಂತೋಷ ಪಡಿಸ ಬೇಕೆಂದು ಮಾತನಾಡುತ್ತಿದ್ದೀರಿ. ಆದರೆ ಅದು ಹಾಗಲ್ಲ! ತಂದೆ ಕೊಟ್ಟ ಭಾಷೆ ನನಗೆ ಗೊತ್ತು, ತಾಯಿ ಕೇಳಿದ ವರಗಳು ನನಗೆ ಸ್ಪಷ್ಟವಾಗಿವೆ. ಹೀಗಿರುವಾಗ ನಾನು ಅಧಿಕಾರಕ್ಕೆ ಓ ಗೊಟ್ಟರೆ, ರಾಜ್ಯಕ್ಕೆ ಕಟ್ಟು ಬಿದ್ದರೆ ಅದು ಸತ್ಯಮಾರ್ಗವಲ್ಲ! ಸತ್ಯ ಮತ್ತು ದಯೆಗಳೇ ರಾಜನ ನಿಜವಾದ ಗುಣಗಳು. ಅದನ್ನೇ ನಾನು ಮರೆತರೆ ಸನಾತನ ಧರ್ಮವನ್ನು ಪಾಲಿಸಿದ ಹಾಗಾಗುವುದಿಲ್ಲ!”

ಋಷಯಶ್ಚೈವ ದೇವಾಶ್ಚ ಸತ್ಯಮೇವ ಹಿ ಮೇನಿರೇ |

ಸತ್ಯವಾದೀ ಹಿ ಲೋಕೇಸ್ಮಿನ್ಪರಂ ಗಚ್ಛತಿ ಚಾಕ್ಷಯಮ್ || ಋಷಿಗಳು ಮತ್ತು ದೇವತೆಗಳು ಕೂಡ ಇಹದಲ್ಲಿ ಸತ್ಯವನ್ನೇ ಶ್ರೇಷ್ಠವೆಂದು ಎತ್ತಿ ಹಿಡಿದಿದ್ದಾರೆ. ಇನ್ನು ಪರದಲ್ಲಿ ಸತ್ಯವಾದಿಗಳಿಗೆ ಅಕ್ಷಯವಾದ ಸುಖವನ್ನೂ ಕೊಂಡಾಡಿದ್ದಾರೆ. ಮನುಷ್ಯರಲ್ಲೂ ಸುಳ್ಳಿನ ಸಹಾಯದಿಂದ ಬದುಕುವವನನ್ನು ಹಾವಿನಂತೆ ಜನ ದೂರವಿಡುತ್ತಾರೆ. ಸುಳ್ಳುಗಾರನಿಗೆ ಇಲ್ಲಿ ಕಿಂಚಿತ್ತೂ ಬೆಲೆಯಿಲ್ಲ. ಅಲ್ಲದೇ ಆತನಿಂದ ಜನ ಹೆದರುತ್ತಾರೆ, ಅದೇ ಸತ್ಯದಲ್ಲಿರುವವನಿಗೆ ಧಾರ್ಮಿಕನೆಂದು ಜನ ಪ್ರೀತಿಸುತ್ತಾರೆ. ಅವನ ಸಮೀಪಕ್ಕೆ ಬಂದು ಅವನಿಗೆ ಸಹಾಯ ಹಸ್ತವನ್ನು ನೀಡುತ್ತಾರೆ.

ಉದ್ವಿಜಂತೇ ಯಥಾ ಸರ್ಪಾನ್ನರಾದನೃತವಾದಿನಃ |

ಧರ್ಮಃ ಸತ್ಯಂ ಪರೋ ಲೋಕೇ ಮೂಲಂ ಸ್ವರ್ಗಸ್ಯ ಚೋಚ್ಯತೇ ||

ಶ್ರೀರಾಮಚಂದ್ರನ ಈ ಮಾತು ಇಂದಿಗೂ ಅಕ್ಷರಶಃ ಸತ್ಯವಾಗಿದೆ. ಅಂದಿನ ಸಮಾಜ ಸತ್ಯವಂತರ ಪರವಾಗಿ ನಿಲ್ಲುತ್ತಿತ್ತು, ಎಂಬ ಅಂಶವೂ ಇಲ್ಲಿ ಬೆಳಕಿಗೆ ಬಂದಿದೆ. ಇವತ್ತು ನಾವು ಸತ್ಯವನ್ನು ಗೌರವಿಸ ಬೇಕೆಂಬ ಸಂದೇಶವೂ ಇದರಲ್ಲಿ ಅಡಗಿದೆ! ಸತ್ಯವೇ ಧರ್ಮ ಮತ್ತು ಸತ್ಯವೇ ಸ್ವರ್ಗಕ್ಕೆ ಸೋಪಾನ ಎಂದು ಯಾವ ಕಾಲದಿಂದಲೂ ನಮ್ಮಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೂ ಸುಳ್ಳಿಗೆ ಬಹುಮತ ಇದೆ! ಇದು ಹೇಗೆ?

ನೋಡಿ, ಸತ್ಯದಿಂದ ಇದ್ದವನಿಗೆ ಒಂದು ವೇಳೆ ವಿಶೇಷ ಫಲ ದೊರೆಯದಿದ್ದರೂ, ತಾನು ಸತ್ಯಮಾರ್ಗದಲ್ಲಿ ಸಾಗಿದ ಹೆಮ್ಮೆ ಮತ್ತು ವಿಶ್ವಾಸ ಅವನನ್ನು ಕಳೆಗುಂದದೆ ಇರಲು ಸಹಾಯ ಮಾಡುತ್ತದೆ. ಸತ್ಯ ಆತನ ಪಾಲಿನ ಬಾಳಿಗೆ ಬೆಳಕಾಗಿಯೂ, ಬಲವಾಗಿಯೂ ಪರಿಣಮಿಸುತ್ತದೆ. ಅದೇ ಸುಳ್ಳಿನ ಮಾರ್ಗದಿಂದ ವಿಶೇಷ ಪ್ರಾಪ್ತಿಯುಂಟಾದರೂ, ಒಳಗಿನ ಸಾಕ್ಷ್ಯ (ಅಂತಃ ಸಾಕ್ಷ್ಯ) ಇದು ಸುಳ್ಳಿನ ತಳಹದಿಯದ್ದು ಎಂಬುದಾಗಿ ಕೊರಗನ್ನು ಕೂಡಿಕೊಂಡು ಹೊರಗಿನ ಮತ್ತು ಒಳಗಿನ ಬದುಕನ್ನು ನಾಶಮಾಡುತ್ತದೆ. ಒಂದು ವೇಳೆ ಸುಳ್ಳು ತನಗೂ ತಮ್ಮವರಿಗೂ ಪ್ರಿಯವಾಗಿದ್ದರೂ; ಅದನ್ನು ಹೇಳಬಾರದು! ಎಂದು ಮನುಧರ್ಮಶಾಸ್ತ್ರ ನಮ್ಮನ್ನು ಎಚ್ಚರಿಸಿದೆ. ’ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮಃ ಸನಾತನಃ’ | ಹೀಗೆ ಸುಳ್ಳನ್ನು ಬಲವಾಗಿ ನಿಂದಿಸಿದ ನಮ್ಮ ಧರ್ಮಶಾಸ್ತ್ರ, ಒಂದು ಸಮಾಜವೇ ನಾಶ ಹೊಂದುತ್ತದೆ ಎಂಬ ಸಂದರ್ಭ ಒದಗಿ ಬಂದರೆ ಅಲ್ಲಿ ಸುಳ್ಳು ಹೇಳಿದರೆ ತಪ್ಪಿಲ್ಲ! ಎಂದು ಅಪವಾದ ಶಾಸ್ತ್ರವನ್ನೂ ಹೇಳಿದೆ. ’ವರ್ಣಿನಾಂ ಹಿ ವಧೋ ಯತ್ರ ತತ್ರ ಸಾಕ್ಷ್ಯನೃತಂ ವದೇತ್ ’|

ಇಷ್ಟಕ್ಕೂ ಸುಳ್ಳು ಹೇಳುವ ಅಥವಾ ಸುಳ್ಳು ಮಾಡುವ ಅನಿವಾರ್ಯತೆ ಬಾಳಿಗನಿಗೆ ಏಕೆ ಬರುತ್ತದೆ? ಎಂದರೆ ಉತ್ತರ ಒಂದೇ - ಅದು ಸ್ವಾರ್ಥ! ಇಲ್ಲ ನಾನು ಪರಾರ್ಥಕ್ಕೂ ಸುಳ್ಳು ಹೇಳುವ ಸನ್ನಿವೇಶ ಬಂದಿದೆ! ಎಂದರೆ ಅದರ ಕುರಿತು ನಮ್ಮ ಹಿರಿಯರು ಗಮನಿಸಿ ಹೇಳಿದ್ದಾರೆ.

ಪಂಚ ಕನ್ಯಾನೃತೇ ಹಂತಿ ದಶ ಹಂತಿ ಗವಾನೃತೇ |

ಶತಮಶ್ವಾನೃತೇ ಹಂತಿ ಸಹಸ್ರಂ ಪುರುಷಾನೃತೇ ||

ಸಾವಿರ ಸುಳ್ಳನ್ನು ಹೇಳಿಯಾದರೂ ಮದುವೆ ಮಾಡು ಎಂದು ಗಾದೆ ಹೇಳುತ್ತದೆ. ಇಲ್ಲಿ ಬದುಕನ್ನು ಕಟ್ಟಿ ಕೊಡುವುದು ಅತೀ ಮುಖ್ಯವಾಗಿದೆ! ಎಂಬುದು ಸ್ಪಷ್ಟ. ಆದರೂ ಹೇಳಿದರು - ನಿನ್ನ ಮಗಳ ಬಗ್ಗೆ ಆಡಿದ ಸುಳ್ಳು ನಿನ್ನ ವ್ಯಕ್ತಿತ್ವದ ಐದು ಅಂಕಗಳನ್ನು ನಾಳೆ ನುಂಗಿ ಹಾಕುತ್ತದೆ. ಅದೇ ನಿನ್ನ ಮನೆಯ ಬಗ್ಗೆ ಆಡಿದ ಸುಳ್ಳು ನಿನ್ನ ಬದುಕಿನ ಹತ್ತು ಅಂಕಗಳನ್ನು ನಾಶಮಾಡುತ್ತದೆ. ರಾಜ್ಯದ ಮತ್ತು ರಕ್ಷಣೆಯ ವಿಷಯದಲ್ಲಿ ಆಡಿದ ಸುಳ್ಳು ನಿನ್ನ ನೂರು ಗುಣಗಳನ್ನೂ ತಿಂದು ಹಾಕುತ್ತದೆ. ಮನುಷ್ಯರಿಗೆ (ಮನುಷ್ಯತ್ವಕ್ಕೆ) ಮಾಡಿದ ಸುಳ್ಳು ಸಾವಿರ ಸಂಖ್ಯೆಯಲ್ಲಿ ತಿರುಗಿ ಅವನತಿಯನ್ನುಂಟು ಮಾಡುತ್ತದೆ.

ಒಟ್ಟಿನಲ್ಲಿ ಸುಳ್ಳು ಒಳ್ಳೆಯದಲ್ಲ! ಇದನ್ನು ಬಿಡಬೇಕೆಂಬ ಮನುಷ್ಯನ ಪ್ರಯತ್ನ ಇಂದು ನಿನ್ನೆಯದಲ್ಲ! ರಾಮಾಯಣ ಕಾಲದಿಂದಲೂ ಇದು ಮಾನವನ ಪ್ರಯತ್ನಕೋಟಿಯಲ್ಲೇ ವಿರಾಜಮಾನವಾಗಿದೆ. ಒಂದಂತೂ ಸತ್ಯ - ಬಿಡಲಾಗದ ಸುಳ್ಳು ಬೆಂಬಿಡದೆ ಕಾಡುತ್ತದೆ. ಬಯಲಾದರೂ ಸತ್ಯ ತಂಪನ್ನು ಕೊಡುತ್ತದೆ. ಸುಖ-ದುಃಖಗಳ ಆಚೆಗಿನ ಆನಂದಕ್ಕೆ ಸತ್ಯವೇ ಭದ್ರ ಬುನಾದಿ.

ಪರಮೇಶ್ವರ ಪುಟ್ಟನ್ಮನೆ

Friday, May 28, 2021

ಕರೋನಾಡಳಿತದಲ್ಲಿ ಶ್ರಾದ್ಧ!

ಆಸ್ತಿಕರು ಕರೋನಾದಿಂದಾಗಿ ನಿಜವಾಗಿಯೂ ಧರ್ಮಸಂಕಟದಲ್ಲಿದ್ದಾರೆ. ವಿಶೇಷವಾಗಿ ಹಿರಿಯರ ಶ್ರಾದ್ಧವನ್ನು ಮಾಡುವುದು ಹೇಗೆ? ಎಂಬ ಸಂದಿಗ್ಧದಲ್ಲಿದ್ದಾರೆ.  ಶ್ರಾದ್ಧ ತಾನೇ ? ಬಿಟ್ಟರಾಯಿತು.  ಅದರಿಂದೇನು? ಎಂದು ತಟಸ್ಥರಾಗಲು ಅಂತಃಕರಣವು ಸಿದ್ಧವಾಗಿಲ್ಲ!  ವಿಧಿಯುಕ್ತವಾಗಿ ಶ್ರಾದ್ಧವನ್ನು ಮಾಡಲು ವಿಪ್ರರೇ ದುರ್ಲಭರಾಗಿದ್ದಾರೆ. ಕರೋನಾದ ಆಡಳಿತದಲ್ಲಿ ವಿಪ್ರರು ಉಳಿದವರಂತೆ ಮನೆಯಿಂದ ಹೊರಬರಲಾರರು.  ಕರೋನಾಕ್ಕೆ ವೈದಿಕರು-ಅವೈದಿಕರೆಂಬ ಭೇದಭಾವವಿಲ್ಲವಷ್ಟೇ? ಯಾರನ್ನಾದರೂ ಆಲಂಗಿಸುತ್ತದೆ. ಆ ವಿಷಯದಲ್ಲಿ ಕರೋನಾ ನಿಷ್ಪಕ್ಷಪಾತಿಯಾಗಿದೆ. ಆದ್ದರಿಂದ ಏಕಾಂತವೇ ತಾರಕ. ಲೋಕಾಂತ ಮಾರಕ. ಸಾಮಾಜಿಕ ಅಂತರ ಇಂದಿನ ಅನಿವಾರ್ಯತೆ.  ಇಂತಹ ಪರಿಸ್ಥಿಯಲ್ಲಿ ಶ್ರಾದ್ಧಾಚರಣೆ ಹೇಗೆ?

 

ಶ್ರಾದ್ಧಕ್ಕೆ ಮೂಲಭೂತವಾಗಿ ಬೇಕಾದದ್ದು ಶ್ರದ್ಧೆ. ಸಾಮಗ್ರಿಗಳೆಲ್ಲ ಇದ್ದು ಶ್ರದ್ಧೆ ಇಲ್ಲದಿದ್ದರೆ ಅದು ಶ್ರಾದ್ಧಾಭಾಸ. ಆದ್ದರಿಂದ ಧರ್ಮಶಾಸ್ತ್ರದಲ್ಲಿ ಇಂಥ ಅಪರಿಹಾರ್ಯ ಸಂದರ್ಭದಲ್ಲಿ ಶ್ರಾದ್ಧಾಚರಣೆಯ ಪರ್ಯಾಯಮಾರ್ಗವನ್ನು ತಿಳಿಸಿದ್ದಾರೆ. ಶಾಸ್ತ್ರಕಾರರ ಮುನ್ನೋಟ ನಮ್ಮನ್ನು ಮೂಕರನ್ನಾಗಿಸುತ್ತದೆ. ಕರ್ಮಕಾಂಡದ ಗಂಧಗಾಳಿಯಿಲ್ಲದವರೂ ನೆರವೇರಿಸಬಹುದಾದ ಸರಳ ಹಾಗೂ ಅರ್ಥಪೂರ್ಣವಾದ ಪರ್ಯಾಯಗಳಿವು. 

 

                         I.      ವಿಪ್ರಸ್ಯ ಅನ್ನಾದೇರ್ವಾ ಅಭಾವೇ ಯಥಾಶಕ್ತಿ ಅನ್ನಮುದ್ಧೃತ್ಯ ಷೋಢಾ ವಿಭಜ್ಯ

           1)     ಅಸ್ಮತ್ ಪಿತೃಭ್ಯಃ ಇದಮನ್ನಂ ಸ್ವಧಾ ನ ಮಮ |

           2)     ಅಸ್ಮತ್ ಪಿತಾಮಹೇಭ್ಯಃ ಇದಮನ್ನಂ ಸ್ವಧಾ ನ ಮಮ |

           3)     ಅಸ್ಮತ್ ಪ್ರಪಿತಾಮಹೇಭ್ಯಃ ಇದಮನ್ನಂ ಸ್ವಧಾ ನ ಮಮ |

           4)     ಅಸ್ಮತ್ ಮಾತೃಭ್ಯಃ ಇದಮನ್ನಂ ಸ್ವಧಾ ನ ಮಮ |

           5)     ಅಸ್ಮತ್ ಪಿತಾಮಹೀಭ್ಯಃ ಇದಮನ್ನಂ ಸ್ವಧಾ ನ ಮಮ |

6)     ಅಸ್ಮತ್ ಪ್ರಪಿತಾಮಹೀಭ್ಯಃ ಇದಮನ್ನಂ ಸ್ವಧಾ ನ ಮಮ | ಇತಿ ತ್ಯಜೇತ್ | ತದನ್ನಂ ವಿಪ್ರಾಯ, ಗೋಭ್ಯೋ ವಾ ದೇಯಮ್ | ಜಲಾದೌ ವಾ ತ್ಯಾಜ್ಯಮ್ |

ಶ್ರಾದ್ಧನಿರ್ವಹಿಸುವ ವಿಪ್ರರೇ ದೊರೆಯದಿದ್ದಾಗ ಪಾತ್ರೆಯಲ್ಲಿರುವ ಅನ್ನವನ್ನು ಸಾಧ್ಯವಿದ್ದಷ್ಟು ಎತ್ತಿಕೊಳ್ಳಬೇಕು, ಅದನ್ನು ಸಮನಾಗಿ ಆರು ಭಾಗಮಾಡಿ ವಿಂಗಡಿಸಬೇಕು. ವಿಂಗಡಿಸಿದ ಈ ಅನ್ನವನ್ನು ಕ್ರಮವಾಗಿ 1. ತಂದೆಗೆ 2. ಅಜ್ಜನಿಗೆ  3. ಮುತ್ತಜ್ಜನಿಗೆ  4. ತಾಯಿಗೆ 5. ಅಜ್ಜಿಗೆ  6. ಮುತ್ತಜ್ಜಿಗೆ ಎಂದು ಸಮರ್ಪಿಸಬೇಕು.  ಹೀಗೆ ಪಿತೃಗಳಿಗೆ ಮೀಸಲಿಟ್ಟ ಅನ್ನವನ್ನು ಗೋವುಗಳಿಗೆ ಗ್ರಾಸರೂಪವಾಗಿ ನೀಡಬೇಕು. ನಮ್ಮೂರಿನಲ್ಲಿ ನಾವು ಯಾರೂ ಗೋವನ್ನು ಸಾಕಿಲ್ಲ! ಎನ್ನುವವರಿದ್ದರೆ ಅವರು ಪಿತೃಗಳಿಗೆ ಸಮರ್ಪಿಸಿದ ಅನ್ನವನ್ನು ಜಲದಲ್ಲಿ ಬಿಡಬೇಕು.  ಈ ಆರು ಸಾಲು ಮಂತ್ರವನ್ನು ಹೇಳುವುದು ಅಸಾಧ್ಯವೆನ್ನುವವರು ಏನು ಮಾಡಬೇಕು? ಅದಕ್ಕೂ ಒಂದು ಪರ್ಯಾಯವಿದೆ. 

 II    ಯದ್ವಾ ಶ್ರಾದ್ಧದಿನೇ ಪ್ರಾಪ್ತೇ ಭವೇನ್ನಿರಶನಃ ಪುಮಾನ್ |

   ಶ್ರಾದ್ಧದ ದಿನ ಕರ್ತೃವು ಉಪವಾಸವಿದ್ದರಾಯಿತು. ಶ್ರಾದ್ಧಮಾಡಿದಂತೆಯೇ ಆಗುವುದು!  ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡೋಣ ?               ಅದಕ್ಕೂ ಒಂದು ಪರ್ಯಾಯವಿದೆ.

 III   ತೃಣಾನಿ ವಾ ಗವೇ ದದ್ಯಾತ್ |       

      ಹಸುಗಳಿಗೆ ಹುಲ್ಲನ್ನು ನೀಡಿ.

ಹಸುದೊರೆಯುವುದೇ ದುರ್ಲಭವೆಂದೆವಲ್ಲ? ಆಗೇನು ಗತಿ ? ಅದಕ್ಕೂ ಇದೆ ಪರ್ಯಾಯ.

                      IV.      ತೃಣಭಾರಂ ದಹೇತ್ |

      ಒಂದು ಹೊರೆ ಹುಲ್ಲನ್ನು ಸುಡಬೇಕು. 

ಇನ್ನೇನು ಹೇಳೋಣ ಇದೊಂದು ಅಂತಿಮ ಪರ್ಯಾಯ.

   V.        ಸರ್ವಾಭಾವೇ ವನಂ ಗತ್ವಾ ಊಧ್ರ್ವಬಾಹುಃ ಕಕ್ಷಂ ದರ್ಶಯನ್ನಿದಂ  ಪಠೇತ್ |

    ನ ಮೇಸ್ತಿ ವಿತ್ತಂ ನ ಧನಂ ನ ಚಾನ್ಯತ್-ಶ್ರಾದ್ಧೋಪಯೋಗಿ ಸ್ವಪಿತೄನ್ನತೋಸ್ಮಿ  |

      ತೃಪ್ಯಂತು ಭುಕ್ತ್ವಾ ಪಿತರೌಯೈತೌ ಭುಜೌ ಕೃತೌ ವರ್ತ್ಮನಿ ಮಾರುತಸ್ಯ  ||     

ಏನೂ ಇಲ್ಲದ ಅಸಹಾಯಕ ಸ್ಥಿತಿಯಲ್ಲಿ ಕಾಡಿಗೆ ಹೋಗಿ ಎರಡೂ ಕೈಯನ್ನು ಮೇಲೆತ್ತಿ ಈ ಶ್ಲೋಕವನ್ನು ಹೇಳಿ. ಶ್ಲೋಕ ಹೇಳಲು ಬಾರದಿದ್ದರೆ ಅದರ ಅರ್ಥವನ್ನು ಅನುಸಂಧಾನ ಮಾಡಿಕೊಳ್ಳಿ. ನನ್ನಲ್ಲಿ ಶ್ರಾದ್ಧಮಾಡಲು ಬೇಕಾದ ಸಂಪತ್ತಿಲ್ಲ, ಹಣವಿಲ್ಲ, ಮತ್ತೇನೂ ಇಲ್ಲ. ಪಿತೃಗಳಿಗೆ ನಮಿಸುತ್ತೇನೆ. ನನ್ನ ಈ ಎರಡೂ ಬಾಹುಗಳನ್ನು ಅಸಹಾಯಕತೆಯಿಂದ ಎತ್ತಿ ನಿಂತಿದ್ದೇನೆ. ಇದರಿಂದ ಪಿತೃಗಳು ತೃಪ್ತರಾಗಲಿ. ಹೀಗೆ ಧರ್ಮಶಾಸ್ತ್ರವು ಉದಾರವಾಗಿ ಅನೇಕ ಪರ್ಯಾಯಗಳನ್ನು ಸೂಚಿಸಿದೆ. ಇವೆಲ್ಲ ಧರ್ಮಸಿಂಧು ಗ್ರಂಥದ ಮೂರನೆಯ ಪರಿಚ್ಛೇದದ ಉತ್ತರಾರ್ಧದಲ್ಲಿ ಉಲ್ಲಿಖಿತವಾದ ಶ್ರಾದ್ಧದ ಪರ್ಯಾಯ ವಿಧಾನಗಳು. ಆದ್ದರಿಂದ ಆಸ್ತಿಕರು ಕರೋನಾಡಳಿತಕ್ಕೂ ಜಗ್ಗದೇ ಧರ್ಮಮಾರ್ಗದಲ್ಲಿ ನಡೆಯಲು ಸಾಧ್ಯ.

 

೨೮ ಮೇ ೨೦೨೧

ಶುಕ್ರವಾರ                                                 ವಿದ್ವಾನ್ ಗಂಗಾಧರ ಭಟ್ಟ ಅಗ್ಗೆರೆ

(ಶ್ರೀಯುತರು ನಮ್ಮ ವಿದ್ಯಾಗುರುಗಳು, ಧೀಮಂತರು, ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ ಸಹೃದಯ ವಿದ್ವಾಂಸರು.) 

ಪರಮೇಶ್ವರ ಪುಟ್ಟನ್ಮನೆ