Wednesday, September 13, 2017

Gurudeva!

ಮಾನವನು ಸದಾ ಆನಂದದ ಹುಡುಕುವಿಕೆಯಲ್ಲಿ ಅಲೆದಾಡುತ್ತಿರುತ್ತಾನೆ. ಈ ಅಲೆದಾಟದಲ್ಲಿ ಮಹರ್ಷಿಗಳಿಂದ ಯಾವ ತತ್ತ್ವವು ಶೋಧಿತವಾಯಿತೊ, ಅದು ಅಚ್ಚರಿದಾಯಕ ಮಾತ್ರವಲ್ಲ; ಶೋಧನೆಯ ವಸ್ತುವೂ ಹೌದು. ಈ ಶೋಧನೆಯಿಂದ ತಿಳಿದು ಬಂದಿದ್ದು, ಎಲ್ಲ ಇಂದ್ರಿಯಗಳೂ ಮನೋವಶವಾಗಿವೆ. ಎಲ್ಲಿಯವರೆಗೆ ಮನಸ್ಸು ಸಾಂಸಾರಿಕವಾಗಿರುತ್ತದೆಯೊ, ಅಲ್ಲಿಯವರೆಗೆ ಹೊಯ್ದಾಟದಲ್ಲಿರುತ್ತದೆ. ಆದ್ದರಿಂದ ಮನಸ್ಸನ್ನು ಸಂಸಾರದ ಪಾತಳಿಯಿಂದ ಮೇಲೆತ್ತುವ ಸಾಹಸಕ್ಕೆ ಮಹರ್ಷಿಗಳು ಕೈ ಹಾಕಿದರು. ಈ ಸಾಹಸ ಕೆಲವೊಮ್ಮೆ 'ದುಃಸ್ಸಾಧ್ಯ!' ಎಂದು ಅನಿಸುವುದೂ ಉಂಟು. ಇಂಥ ಅನಿಸಿಕೆಗಳಿಂದ ನಮ್ಮನ್ನು ಸ್ಥಿರತೆಗೆ ಒಯ್ಯಲು ನಮ್ಮ ಗುರು-ಹಿರಿಯರು ದಾರಿ ಮಾಡಿದರು. ಅದನ್ನು ಆರ್ಷ ಪರಂಪರೆ ಒಪ್ಪುವಂತಿರಬೇಕು ಮತ್ತು ನಮ್ಮ ಪರಮ ಲಕ್ಷ್ಯವನ್ನು ನೆನಪಿಸುವಂತಿರಬೇಕು. ಹೀಗೆ ಅನ್ವೇಷಿಸಿದ ಮಾರ್ಗ 'ಗುರುಶಿಷ್ಯ ಪರಂಪರೆ'. ಇಲ್ಲಿ ಗುರುವನ್ನು ಅನುಸರಿಸಿ ಶಿಷ್ಯನ ಮನಸ್ಸು ಹದಗೊಳ್ಳುವುದರ ಜೊತೆಗೆ, ಶಿಷ್ಯನಿಗೆ ಹೇಳಿದ್ದು ಹೇಗೆ ಪರಿಣಾಮ ಪಡೆಯಿತು? ಎಂಬಲ್ಲಿ ಗುರುವೂ ಆಯಾ ಕಾಲಕ್ಕೆ ಸ್ಪಂದಿಸುವ ಅವಕಾಶ ಮಾಡಿಕೊಟ್ಟಿತು. ಇದರ ಪರಿಣಾಮವೇ ಗುರುಶಿಷ್ಯ ಸಂಬಂಧ. ಅದು ಇಂದಿಗೂ ಅವಿರತವಾಗಿ ಮುನ್ನಡೆಯುತ್ತಿದೆ.





'ಅರಿವು' ಪ್ರಧಾನವೆನಿಸಿದ ಆ ಕಾಲದಲ್ಲಿ ಗುರು ಅದನ್ನು ಪೂರೈಸಿದ. ಶಿಷ್ಯ ತನ್ನ ಗುರಿ ತಲುಪಿದ ಸಂತಸ ಪಡೆದ. ಇಂದಾದರೋ ಶತಶತಮಾನಗಳವರೆಗೆ ಆಳಿದ ರಾಜವಂಶ, ತನ್ನ ನಾಮಮಾತ್ರದ ಅಸ್ತಿತ್ವವನ್ನೂ ಉಳಿಸಿಕೊಂಡಿಲ್ಲ! ಅದೇ ರೀತಿ ಕುಟುಂಬ ಪರಂಪರೆಯಿಂದ ಬಂದ ನಾಟೀವೈದ್ಯಕೀಯವೇ ಮೊದಲಾದ ಕುಲಕಸುಬುಗಳೂ ಕಾಲವಶಕ್ಕೆ ಒಳಪಟ್ಟಿವೆ. 'ಮಾಹಿತಿ' ಪ್ರಧಾನವಾದ ಈ ಕಾಲಕ್ಕೂ ಗಟ್ಟಿಯಾಗಿ ನಡೆದು ಬರುತ್ತಿರುವ ಗುರುಶಿಷ್ಯ ಸಂಬಂಧ ಚಿರಾಯುವಾಗಿದೆ. ಇದು ಕೇವಲ ದೇಹ ದೇಹಗಳ ಸಂಬಂಧವಲ್ಲ!

ನಮ್ಮ ಸಮಸ್ತ ಸಿದ್ಧಿಗಳಿಗೂ ದೇಹವೇ ಮೂಲ. ಒಂದು ರೂಪಾಯಿಗೆ ಒಂದು ಸೇರು ಅಕ್ಕಿ ತಂದಂತೆ, ಇಲ್ಲಿ ಎಲ್ಲದಕ್ಕೂ ಒಂದು ಬೆಲೆ ತೆರಬೇಕು. ನಾವು ಕೊಟ್ಟದ್ದು ಒಂದು ರೂಪಾಯಿ, ನಮಗೆ ದೊರೆತದ್ದು ಎರಡು ಸೇರು ಅಕ್ಕಿ ಅಥವಾ ಅರ್ಧ ಸೇರು ಅಕ್ಕಿ ಹೀಗೂ ಆಗಬಹುದು. ಇಂಥ ಕಡೆಗಳಲ್ಲಿ ನಮ್ಮಿಂದ ಸಂದ ಬೆಲೆ, ಮತ್ತು ನಮಗೆ ಬಂದ ವಸ್ತು ಇವುಗಳ ಕಾರ್ಯ-ಕಾರಣ ಸಂಬಂಧವನ್ನು ತಿಳಿಸಿಕೊಡುವುದೇ ಶಾಸ್ತ್ರ. (ನಮ್ಮಿಂದ ನಮಗೆ ಗೊತ್ತಿಲ್ಲದೇ ಏನೋ ಸಂದಿದೆ, ಅಥವಾ ಅಲ್ಲಿಂದ ನಮಗೆ ಏನೋ ಬಂದಿದೆ. ಇದನ್ನರುಹುವುದೇ ಶಾಸ್ತ್ರ.) ಇದನ್ನು ನಮಗೆ ತಿಳಿಯುವಂತೆ ಹೇಳಿಕೊಡುವವನೇ ಗುರು. ಈ ಗುರುವಿನ ಮಾರ್ಗದರ್ಶನದಲ್ಲಿ, ಆ ಶಾಸ್ತ್ರವನ್ನು ಅನುಸರಿಸಿದರೆ ಸಿಗುವುದೇ ಬ್ರಹ್ಮ. ಅದಕ್ಕಾಗಿ ಹಿರಿಯರು ಹೇಳಿದರು. ಗುರು ಇದ್ದವನಿಗೆ ಎಲ್ಲವೂ ತಿಳಿಯುವುದು. "ಆಚಾರ್ಯವಾನ್ ಪುರುಷೋ ವೇದ" ಎಂದು. ಹಾಗಾದರೆ ಗುರುವು ತನಗೆ ತೋರಿದಂತೆಯೇ ಹೇಳುವನೋ? ಹಾಗಲ್ಲ! ಗುರುವು ಮೊದಲು ತಿಳಿಯುತ್ತಾನೆ; ತಾನು ತಿಳಿದದ್ದನ್ನು ಇನ್ನೊಬ್ಬರಿಗೆ ತಿಳಿಸುತ್ತಾನೆ; ತಿಳಿಸಿದಂತೆ ಅವನಿಂದ ಮಾಡಿಸುತ್ತಾನೆ. ಇದು ಆತನ ಗುರುತ್ವ.

ಗುರುತ್ವ ಪ್ರಕಾಶಗೊಳ್ಳುವ ಸ್ಥಾನ ಮಠ. ಇಲ್ಲಿ, ಗುರುವಿನ ಅಂಕೆಯಲ್ಲಿ ಉಪದೇಶ ಮತ್ತು ಉಪಾಸನೆಗಳು ಸದಾ ನಡೆಯುತ್ತಿರುತ್ತವೆ. ಗುರುವಿನ ಮಾತೇ ಉಪದೇಶವಾದಂತೆ, ಅವರ ಮುಖಕಮಲದಿಂದ ಬಂದ ಮಂತ್ರಗಳಿಂದಲೇ ಉಪಾಸನೆಗಳು ನೆರವೇರುತ್ತವೆ. ಜೀವನ ಬದುಕಿಗೆ ದಾರಿ ನೂರೆಂಟು. ಅಲ್ಲಿ ಓತಪ್ರೋತವಾದ `ನಿಲುಮೆ' ಎರಡು ತೆರನಾಗಿರುತ್ತದೆ. ದೇವರಿಗೆ ಅಭಿಮುಖವಾಗಿ ಬದುಕುವುದು ಒಂದು. ದೇವರಿಗೆ ಬೆನ್ನುಮಾಡಿ ಬದುಕುವುದು ಇನ್ನೊಂದು. ಇವೆರಡಕ್ಕೂ ದೇವರೇ ಕೇಂದ್ರವಾದದ್ದು ಸೋಜಿಗ! ಹಾಗಾಗಿ `ಜೀವ’ನ ಕೇಂದ್ರವಾದ ದೇವರ ಉಪಾಸನೆ ಮಾನವನಿಗೆ ಅನಿವಾರ್ಯ. ಸಂಸ್ಕøತದ 'ರಾಧ್' ಎಂಬ ಒಂದೇ ಧಾತು ಎರಡು ಉಪಸರ್ಗಗಳ ಜೊತೆ ಸೇರಿ ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ. ದೇವರಿಗೆ ಅಭಿಮುಖಿಯಾದವನೇ `ಆರಾಧಕ'. ಅದಕ್ಕೆ ವಿಪರೀತನಾದವನೇ `ಅಪರಾಧೀ'. ನಮ್ಮನ್ನು `ಆರಾಧಕ ಕೋಟಿ’ಗೆ ಕರೆದೊಯ್ಯಲು ಗುರು ತೋರಿದ ಮಾರ್ಗವೇ `ಉಪಾಸನೆ'. ಈ ಮಾರ್ಗಕ್ಕೆ ಕೇಂದ್ರವಾದದ್ದು ದೇವತಾ ತತ್ತ್ವ. ಮಂತ್ರವಶವರ್ತಿಯಾದ ಅದು ಮಂತ್ರಾಭಿಮಾನಿಯೂ, ತತ್ತ್ವಾಭಿಮಾನಿಯೂ ಆಗಿರುತ್ತದೆ.


ದೇವರನ್ನು ಶಾಂತ, ಗಂಭೀರ ಮತ್ತು ಉಗ್ರ ಎಂಬುದಾಗಿ ವಿವೇಕಿಸಬಹುದು. ಲಕ್ಷ್ಮೀನಾರಾಯಣ, ಶಾರದೆ, ದತ್ತಾತ್ರೇಯ, ಬ್ರಹ್ಮ ಮೊದಲಾದವರು ಶಾಂತಗುಣ ವಿಶಿಷ್ಟರೆಂದೂ, ಕೃಷ್ಣ, ವಿಷ್ಣು, ಗಣಪತಿ, ಲಕ್ಷ್ಮೀ ಮುಂತಾದವರು ಗಂಭೀರ ಸ್ವಭಾವದವರೆಂದೂ, ರುದ್ರ, ಭೈರವ, ಕಾಳೀ, ಚಾಮುಂಡೀ ಮೊದಲಾದವರನ್ನು ಉಗ್ರತತ್ತ್ವದವರೆಂದೂ ವಿಭಾಗಿಸಬಹುದು. ಪ್ರತಿಯೊಂದು ಎಲೆ, ಕಡ್ಡಿಗಳೂ ಒಂದು ಇನ್ನೊಂದಕ್ಕಿಂತ ಭಿನ್ನವಾಗಿರುವಂತೆ ವಿಶ್ವದ ಪ್ರತಿಯೊಂದು ಜೀವರಾಶಿಯೂ ಭಿನ್ನವಾಗಿರುತ್ತದೆ. ಮಾನವರಲ್ಲೂ ಬೇರೆ ಬೇರೆ ಪ್ರಕೃತಿಯವರು ಇರುತ್ತಾರೆ. ಪಾರಮಾರ್ಥಿಕವಾಗಿ ಬಹ್ಮವಸ್ತುವಿಗಿಂತ ಯಾರೂ ಭಿನ್ನರಲ್ಲ. ಆದರೆ ಬದುಕಿನಲ್ಲಿ ಬ್ರಹ್ಮಭಾವವು ಮರೆಯಾಗಿರುತ್ತದೆ. ಮರೆಯಾದ ಈ ಬ್ರಹ್ಮಭಾವವನ್ನು `ಅನುಭವ’ದಲ್ಲಿ ತಂದುಕೊಳ್ಳಲು ದೈವೀ ಆರಾಧನೆಯೂ ಒಂದು ಸಾಧನವಾಗಿದೆ. ಆ ಕಾರಣದಿಂದ ಶಾಸ್ತ್ರಗಳು ವಿಭಿನ್ನ ಗುಣಗಳ ಅನೇಕ ದೇವತೆಗಳನ್ನು ಕಲ್ಪಿಸಿವೆ.