Monday, August 10, 2020

ತೀರ್ಥ

ವಿದ್ಯಾತೀರ್ಥೇ ಜಗತಿ ವಿಬುಧಾಃ ಸಾಧವಃ ಸತ್ಯತೀರ್ಥೇ

ಗಙ್ಗಾತೀರ್ಥೇ ಮಲಿನಮನಸೋ ಯೋಗಿನೋ ಧ್ಯಾನತೀರ್ಥೇ |

ಧಾರಾತೀರ್ಥೇ ಧರಣಿಪತಯೋ ದಾನತೀರ್ಥೇ ಧನಾಢ್ಯಾ

ಲಜ್ಜಾತೀರ್ಥೇ ಕುಲಯುವತಯಃ ಪಾತಕಂ ಕ್ಷಾಲಯನ್ತಿ ||

 

ತೀರ್ಥ ಎಂಬುದು ಸಂಸ್ಕೃತ ಸಾಹಿತ್ಯದಲ್ಲಿರುವ ವಿಶಿಷ್ಟ ಪದ. ಇದು ಅನೇಕ ಅರ್ಥಗಳನ್ನು ತನ್ನೊಳಗೆ ತುಂಬಿ ಕೊಂಡಿದೆ. ಹೆಚ್ಚಾಗಿ ಈ ಪದವನ್ನು ಪವಿತ್ರವಾದ, ಪುಣ್ಯಕರವಾದ, ಪೂಜನೀಯವಾದ ಎಂಬ ಅರ್ಥದಲ್ಲಿ ನಾವು ನೋಡುತ್ತೇವೆ. ಇನ್ನು ಸ್ನಾನ ಯೋಗ್ಯವೂ, ಪಾನ ಯೋಗ್ಯವೂ ಆದ ಜಲವನ್ನು ತೀರ್ಥ ಎಂದು ಹೇಳಿದ್ದಾರೆ. ವಿದ್ಯಾ ಗುರುವನ್ನು ತೀರ್ಥ ಎಂದು ಗುರುತಿಸಿದ್ದಾರೆ. ಒಂದೇ ಗುರುವಿನ ಶಿಷ್ಯರನ್ನು ಸತೀರ್ಥರು ಎಂಬುದಾಗಿ ಕರೆಯುತ್ತಾರೆ. ಅದೇ ರೀತಿ ದೈವಸಾನ್ನಿಧ್ಯವಿರುವ, ಋಷಿಪದಪಾವನವಾದ ಮತ್ತು ಗೌರವಯೋಗ್ಯವಾದ, ಕ್ಷೇತ್ರವನ್ನೂ, ಸಮುದ್ರವನ್ನೂ, ಜಲಾಶಯಗಳನ್ನೂ, ಬಾವಿ-ನದಿ-ನದಗಳನ್ನೂ ಅಷ್ಟೇ ಏಕೆ? ಶಾಸ್ತ್ರವನ್ನೂ ತೀರ್ಥ ಎಂದೇ ಕರೆದಿದ್ದಾರೆ.

ತೀರ್ಥ ಶಬ್ದಾರ್ಥವನ್ನು ಕೋಶಕಾರರು ಮೂರಾಗಿ ವಿಭಾಗಿಸಿದ್ದಾರೆ.

’ತೀರ್ಥಂ ತ್ರಿವಿಧಂ ಜಂಗಮಂ ಮಾನಸಂ ಸ್ಥಾವರಂ ಚ’ | ಎಂಬುದಾಗಿ.

     ಬ್ರಾಹ್ಮಣಾ ಜಂಗಮಂ ತೀರ್ಥಂ ನಿರ್ಮಲಂ ಸಾರ್ವಕಾಮಿಕಮ್ |

ಏಷಾಂ ವಾಕ್ಯೋದಕೇನೈವ ಶುದ್ಧ್ಯಂತಿ ಮಲಿನಾ ಜನಾಃ || 

ಬ್ರಾಹ್ಮಣರನ್ನು (ಇಲ್ಲಿ ಬ್ರಾಹಣ ಪದವು ಒಂದು ಜಾತಿಯನ್ನು ತಿಳಿಸುತ್ತಿಲ್ಲ! ಒಂದು ಶಿಸ್ತಿನಲ್ಲಿ ಬದುಕುವವರನ್ನು ಗುರು-ಹಿರಿಯರನ್ನು ತಿಳುವಳಿಕೆಯುಳ್ಳವರನ್ನು ಪ್ರತಿನಿಧಿಸುತ್ತದೆ.) ಜಂಗಮತೀರ್ಥದ ಸಾಲಿಗೆ ಉದಾಹರಣೆಯಾಗಿ ಗುರುತಿಸಿದ್ದಾರೆ. ಯಾರು ತಮ್ಮ ವಾಕ್ಯದಿಂದ ನಮ್ಮನ್ನು (ಸಾಮಾನ್ಯರನ್ನು) ಪಾವನ ಗೊಳಿಸುತ್ತಾರೋ ಅವರು ಎಂದರ್ಥ. ಅವರು ಋಷಿಗಳು, ಗುರುಗಳು, ಹಿರಿಯರು, ಜ್ಞಾನಿಗಳು, ಆದರ್ಶಪ್ರಾಯರು, ಮಾರ್ಗದರ್ಶಕರು ಹೀಗೆ ಇಂಥವರು ಜಂಗಮ ತೀರ್ಥರು.

     ಸತ್ಯಂ ತೀರ್ಥಂ ಕ್ಷಮಾ ತೀರ್ಥಂ ತೀರ್ಥಮಿಂದ್ರಿಯನಿಗ್ರಹಃ |

ಸರ್ವಭೂತದಯಾ ತೀರ್ಥಂ ಸರ್ವತ್ರಾರ್ಜವಮೇವ ಚ ||

ದಾನಂ ತೀರ್ಥಂ ದಮಸ್ತೀರ್ಥಂ ಸಂತೋಷಸ್ತೀರ್ಥಮುಚ್ಯತೇ |

ಬ್ರಹ್ಮಚರ್ಯಂ ಪರಂ ತೀರ್ಥಂ ತೀರ್ಥಂ ಚ ಪ್ರಿಯವಾದಿತಾ ||

ಜ್ಞಾನಂ ತೀರ್ಥಂ ಧೃತಿಸ್ತೀರ್ಥಂ ಪುಣ್ಯಂ ತೀರ್ಥಮುದಾಹೃತಮ್ |

ತೀರ್ಥಾನಾಮಪಿ ತತ್ತೀರ್ಥಂ ವಿಶುದ್ಧಿರ್ಮನಸಃ ಪರಾ || 

ಯಾವ ಯಾವ ಗುಣಗಳು ಮನುಷ್ಯನ ಮನಸ್ಸನ್ನು ತಿಳಿಯಾಗಿರಿಸುತ್ತವೆಯೋ ಆ ಎಲ್ಲ ಗುಣಗಳೂ ತೀರ್ಥಗಳೇ ಆಗಿವೆ. ಹೀಗೆ ಮನಸ್ಸನ್ನು ಹದವಾಗಿಯೂ, ಮುದವಾಗಿಯೂ ಇಡುವ ಮೇಲಿನ ಎಲ್ಲ ಒಳ್ಳೆಯ ಅಂಶಗಳನ್ನೂ ಒಟ್ಟಾಗಿ ಮಾನಸ ತೀರ್ಥಗಳೆನ್ನುತ್ತಾರೆ.

     ಯಥಾ ಶರೀರಸ್ಯೋದ್ದೇಶಾಃ ಕೇಚಿನ್ಮೇಧ್ಯತಮಾಃ ಸ್ಮೃತಾಃ |

ತಥಾ ಪೃಥಿವ್ಯಾಮುದ್ದೇಶಾಃ ಕೇಚಿತ್ಪುಣ್ಯತಮಾಸ್ಸ್ಮೃತಾಃ ||

ಪ್ರಭಾವಾದದ್ಭುತಾದ್ಭೂಮೇಃ ಸಲಿಲಸ್ಯ ಚ ತೇಜಸಾ |

ಪರಿಗ್ರಹಾನ್ ಮುನೀನಾಂ ಚ ತೀರ್ಥಾನಾಂ ಪುಣ್ಯತಾ ಸ್ಮೃತಾ ||

ಸ್ಥಾವರ ತೀರ್ಥಗಳ ಉದ್ಭವ ಹೇತುಗಳನ್ನು ಸ್ಪಷ್ಟ ಪಡಿಸುತ್ತಾರೆ. ಹೇಗೆ ಈ ಶರೀರದಲ್ಲಿ ಒಳ್ಳೆಯ ಸ್ಥಾನಗಳು, ನೀಚ ಸ್ಥಾನಗಳು ಎಂಬುದಾಗಿ ಭೇದವನ್ನು ಕಾಣುತ್ತೇವೋ, ಅದೇ ರೀತಿ ಈ ಭೂಮಿಗೂ ಒಳ್ಳೆಯ ಕ್ಷೇತ್ರ ಮತ್ತು ಹಾಳುಬಿದ್ದ ಜಾಗ ಎಂದು ವಿಭಾಗಗಳಿವೆ. ಯಾವ ಭೂ ಭಾಗಗಳಲ್ಲಿ ಪ್ರಕೃತಿ ಪ್ರಭಾವದಿಂದ ಅದ್ಭುತವಾದ ಮತ್ತು ಆಹ್ಲಾದಕವಾದ ಗುಣಗಳಿರುತ್ತವೆಯೋ, ಯಾವ ನೆಲ, ಜಲ, ಸ್ಥಾನಗಳಲ್ಲಿ ನೀರು ಮತ್ತು ತೇಜಸ್ಸಿನ ಪ್ರಭಾವ ಎದ್ದು ತೋರುತ್ತದೆಯೋ, ಯಾವ ಕ್ಷೇತ್ರಗಳಲ್ಲಿ ಋಷಿ ಮುನಿಗಳ ಪುಣ್ಯ ಪ್ರಭಾವ ಆವರಿಸಿರುತ್ತದೆಯೋ ಅಂಥ ಜಲಸ್ಥಾನಗಳನ್ನು, ಅಂಥ ಅರಣ್ಯಪ್ರದೇಶಗಳನ್ನು, ಅಂಥ ಪುಣ್ಯ ಭೂಮಿಯನ್ನು ಸ್ಥಾವರ ತೀರ್ಥಗಳೆಂದು ಗುರುತಿಸಿದ್ದಾರೆ.

ಹೀಗೆ ಈ ತೀರ್ಥಗಳ ಸ್ಥೂಲ ಪರಿಚಯ ಮಾಡಿ ಕೊಂಡ ಮೇಲೆ, ಇವುಗಳನ್ನು ಸೇವಿಸಿ [ತೀರ್ಥದರ್ಶನ, ತೀರ್ಥಪ್ರಾಶನ, ತೀರ್ಥಗಮನ, ತೀರ್ಥಸ್ನಾನ, ತೀರ್ಥಾವಗಾಹನ, ತೀರ್ಥಾನುಸಂಧಾನಮಾಡಿ] ಆತ್ಮೋನ್ನತಿಯನ್ನು ಹೊಂದಬೇಕಾಗಿದೆ.

ತಸ್ಮಾದ್ಭೌಮೇಷು ತೀರ್ಥೇಷು ಮಾನಸೇಷು ಚ ನಿತ್ಯಶಃ |

ಉಭಯೇಷ್ವಪಿ ಯಃ ಸ್ನಾತಿ ಸ ಯಾತಿ ಪರಮಾಂ ಗತಿಮ್ ||


ಅಂದರೆ ಸ್ಥಾವರ ಮತ್ತು ಮಾನಸ ತೀರ್ಥಗಳಲ್ಲಿ ಮಿಂದರೆ ಉತ್ತಮ ಗತಿ ದೊರೆಯುತ್ತದೆ. ಆದರೆ ಸ್ಥಾವರ ಮತ್ತು ಮಾನಸ ತೀರ್ಥಗಳನ್ನು ಸಂದರ್ಶನ ಮಾಡುವುದು ಸುಲಭ ಸಾಧ್ಯವಲ್ಲ! ಅದಕ್ಕೆಂದೇ ಇವೆಲ್ಲವುಗಳ ಸಾರಾತಿಸಾರವಾದ ಒಂದು ತೀರ್ಥ ರಚನೆ ನಮ್ಮಲ್ಲಿ ಬಂತು. ಅದು ಸುಲಭ ಸಾಧ್ಯವೂ ಮತ್ತು ಪರಿಣಾಮಕಾರಿಯೂ ಹೌದು. ಅದೇ ಶಂಖದಿಂದ ಬಂದ ತೀರ್ಥ. ಅದೇ ದೇವತೀರ್ಥ ಅಥವಾ ದೇವಪಾದೋದಕ. ಈ ದೇವಪಾದೋದಕವನ್ನು ಪಂಚ ಲಕ್ಷಣವೆಂದೂ ಷಡ್-ಲಕ್ಷಣ ಗಳಿಂದ ಕೂಡಿದ್ದೆಂದೂ ಅನೇಕ ವಿಧವಾಗಿ ಪುರಾಣಗಳು ವರ್ಣಿಸುತ್ತವೆ.


"ಸಾಳಗ್ರಾಮೋದ್ಭವೋ ದೇವೋ ದೇವೋ ದ್ವಾರಾವತೀಭವಃ |

ತುಳಸೀ ಶಂಖತೋಯಂ ಚ ಪು಼ಂಸೂಕ್ತೇನ ಚ ಮಂತ್ರಿತಃ ||

ಏತಾನಿ ಪಂಚತೀರ್ಥಾನಿ ಪಂಚಪಾತಕನಾಶನೇ” || 

ಸಾಲಿಗ್ರಾಮ, ಚಕ್ರಾಣಿಕೆ (ದ್ವಾರಾವತೀ ಶಿಲೆ), ತುಳಸೀ, ಶಂಖಜಲ ಮತ್ತು ಪುರುಷ ಸೂಕ್ತ ಮಂತ್ರಗಳು ಹೀಗೆ ಐದರ ಸಾನ್ನಿಧ್ಯದಿಂದ ಪವಿತ್ರವಾದ ತೀರ್ಥ ಸಿದ್ಧಿಸುವುದು. ಈ ವಿಷಯವಾಗಿ ಸರ್ವಸ್ಮೃತಿಸಾರಸಂಗ್ರಹದಲ್ಲಿ

ಗಂಡಕೀ ದ್ವಾರಕೀ ಚಕ್ರಂ ತುಳಸೀ ತಾಮ್ರ ಭಾಜನಮ್ |

ಘಂಟಾ ಪುರುಷಸೂಕ್ತಂ ಚೇತ್ಯೇತೇ ತೀರ್ಥಲಕ್ಷಣಮ್ || 

ಎಂದಿದ್ದಾರೆ. ಸಾಲಿಗ್ರಾಮ, ದ್ವಾರಾವತೀ ಶಿಲೆ, ತುಳಸೀ ಪತ್ರೆ, ತಾಮ್ರ ಪಾತ್ರೆ, ಘಂಟಾನಾದ ಮತ್ತು ಪುರುಷಸೂಕ್ತಗಳು ಸೇರಿದಾಗ ಫಲಿಸಿದ ತೀರ್ಥ. ಕೆಲವರು ಇದಕ್ಕೇ ಶಂಖಜಲ ಮತ್ತು ಗಂಧವನ್ನೂ ಸೇರಿಸಿ ಅಷ್ಟಲಕ್ಷಣ ತೀರ್ಥವಾಗಿಸುತ್ತಾರೆ. ಈ ತೀರ್ಥದಲ್ಲಿ ಋಷಿ ದರ್ಶನವಾದ ಪುರುಷ ಸೂಕ್ತವೂ, ಮನಸ್ಸಿಗೆ ಮುದನೀಡುವ ನಾದಮಯವಾದ ಘಂಟಾಸ್ವನವೂ, ಸಾಲಿಗ್ರಾಮವೇ ಮೊದಲಾದ ಎಲ್ಲ ವಸ್ತುನಿಷ್ಠ ತೀರ್ಥಗಳೂ ಮೇಳೈಸಿವೆ. ಹಾಗಾಗಿ ಇದು ಜಂಗಮ-ಮಾನಸ-ಸ್ಥಾವರ ತೀರ್ಥಗಳ ಸಾರವಾಗಿದೆ.

’ಇಂಥ ಅಪರೂಪದ ದೇವಪಾದೋದಕವೆಂಬ ತೀರ್ಥವನ್ನು ಪ್ರತಿನಿತ್ಯ ಸೇವಿಸ ಬೇಕು.’ ಎಂದು ನಮ್ಮ ಆಹ್ನಿಕ ಪ್ರಕರಣಗಳು ಮತ್ತು ಪುರಾಣಗಳು ಒತ್ತಿ ಹೇಳುತ್ತವೆ. ದೇವನನ್ನು ತನ್ನೊಡಲೊಳಗೆ ತುಂಬಿ ಕೊಳ್ಳುವ ಭಾವಪೂರ್ಣವೂ, ಆತ್ಮೋನ್ನತಿಕಾರಕವೂ ಮತ್ತು ಆರೋಗ್ಯಕರವೂ ಆದ ಆಚರಣೆ ಇದಾಗಿದೆ. ಇವತ್ತಿಗೂ ಶಿಷ್ಟರ ಮನೆಗಳಲ್ಲಿ ಇದನ್ನು ನಾವು ಕಾಣಬಹುದು.

ಇನ್ನು ಅಷ್ಟಲಕ್ಷಣವಾದ - ಅಷ್ಟಗಂಧ ಸೇರಿದ ತೀರ್ಥವಂತೂ ಆರೋಗ್ಯಪ್ರದವಾಗಿರುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ಅಲ್ಲಿ ಇರುವ ಎಂಟು ಗಂಧಗಳು ಆಯುರ್ವೇದದಲ್ಲಿ ಬಳಸುವ ಎಂಟು ಔಷಧ ಚೂರ್ಣಗಳೇ ಆಗಿವೆ. ಆಯಾ ದೇವತೆಗಳಿಗೆ ಹೊಂದುವಂತೆ ಮೂರು ತೆರನಾಗಿ ಅಷ್ಟಗಂಧಗಳನ್ನು ಶಾರದಾತಿಲಕ ಗ್ರಂಥ ನಮಗೆ ತಿಳಿಸಿ ಕೊಡುತ್ತದೆ.

ಗಂಧಾಷ್ಟಕಂ ತತ್ತ್ರಿವಿಧಂ ಶಕ್ತಿವಿಷ್ಣುಶಿವಾತ್ಮಕಮ್ |

ಚಂದನಾಗರುಕರ್ಪೂರಚೋರಕುಂಕುಮರೋಚನಾಃ ||

ಜಟಾಮಾಂಸೀಕಪಿಯುತಾಃ ಶಕ್ತೇರ್ಗಂಧಾಷ್ಟಕಂ ವಿದುಃ |

ಚಂದನಾಗರುಹ್ರೀಬೇರಕುಷ್ಠಕುಂಕುಮಸೇವ್ಯಕಾಃ ||

ಜಟಾಮಾಂಸೀಮುರಮಿತಿ ವಿಷ್ಣೋರ್ಗಂಧಾಷ್ಟಕಂ ವಿದುಃ |

ಚಂದನಾಗರುಕರ್ಪೂರತಮಾಲಜಲಕುಂಕುಮಮ್ ||

ಕುಶೀತಕುಷ್ಠಸಂಯುಕ್ತಂ ಶೈವಂ ಗಂಧಾಷ್ಟಕಂ ಸ್ಮೃತಮ್ | 

ಎಂದು. ಇವುಗಳಲ್ಲಿ ವಿಷ್ಣುವಿಗೆ ಹೇಳಿದ ಗಂಧಾಷ್ಟಕವನ್ನೇ ತೆಗೆದು ಕೊಂಡರೆ ಅದರಲ್ಲಿ ಗಂಧ, ರಕ್ತಚಂದನ, ಹಲವು ಮಕ್ಕಳ ತಾಯಿ ಬೇರು, ಕಂಕುಷ್ಠ, ಕೇಸರಿ, ಲಾವಂಚ, ಜಟಾಮಂಸೀ, ಪರಿಮಳದ ಮುರ ಹೀಗೆ ಉಪಯುಕ್ತವಾದ ಔಷಧೀಯ ಗುಣಭರಿತವಾದ ಅಂಶಗಳೇ ಸೇರಿಕೊಂಡಿವೆ. ಇಂಥ ಅಷ್ಟಗಂಧಗಳನ್ನು ಹಾಕಿ ನಿರ್ಮಿಸಿದ ಈ ತೀರ್ಥವು ನಿಜವಾಗಿಯೂ ಗಂಗೆಯಂತೆ ಪಾವಕವೂ, ಅಮೃತಕಲಶ ಹಸ್ತನಾದ ಧನ್ವಂತರಿ ಮಹಾವಿಷ್ಣುವಿನ ಪೂರ್ಣಾನುಗ್ರಹದಾಯಕವೂ ಆಗಿದ್ದು, ನಮಗೆ ಆರೋಗ್ಯಪ್ರದವೂ ಹೌದು. ಅದಕ್ಕೆಂದೇ

ಶರೀರೇ ಜರ್ಜರೀಭೂತೇ ವ್ಯಾಧಿಗ್ರಸ್ತೇ ಕಲೇವರೇ |

ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃ || 

ಎಂದು ಈ ತೀರ್ಥವನ್ನು ಸ್ವಯಂ ವೈದ್ಯನೂ ನಾರಾಯಣನೂ ಎಲ್ಲವನ್ನೂ ಪರಿಹರಿಸುವವನೂ ಆದ ಭಗವಂತನಿಗೆ ಸಮವೆಂದು ಕೊಂಡಾಡಿದ್ದಾರೆ.

 

ಮನುಷ್ಯನ ದೇಹದಲ್ಲಿ ನೀರಿನ ಅಂಶ ಸರಿಸುಮಾರು ಎಂಭತ್ತರಷ್ಟಿದೆ. ಈ ನೀರು ಪವಿತ್ರಗೊಂಡರೆ ಮಾನವನ ಮುಕ್ಕಾಲು ಪಾಲು ಪವಿತ್ರವಾದಂತೆ ಅಲ್ಲವೇ? ನೀರಿಗೆ ಒಂದು ವಿಶೇಷ ಗುಣವಿದೆ! ನೀರಿಗೆ ಲಿಂಬೆರಸ ಸೇರಿದರೆ ಪಾನಕವಾಗುವಂತೆ. ಅದು ತನ್ನೊಳಗೆ ಸೇರುವ ಪದಾರ್ಥವೇ ತಾನಾಗಿ ಬಿಡುತ್ತದೆ. ಇದನ್ನೇ ಮತ್ಸ್ಯಪುರಾಣದಲ್ಲಿ “ಪುಣ್ಯಾಂಬು ಸಮಾಯೋಗಾದ್ದುಷ್ಟಮಪ್ಯಂಬು-ಪಾವನಮ್” || ಎಂದಿದ್ದಾರೆ. ಈಗ ಪವಿತ್ರವೂ ದೇವಪಾದೋದಕವೂ ಆದ ತೀರ್ಥ ನಮ್ಮೊಡಲ ಸೇರಿದರೆ ನಾವು ದೇವನನ್ನೇ ತುಂಬಿಕೊಂಡಂತೆ ಮತ್ತು ಪಾವನರಾದಂತೆ ಅಲ್ಲವೇ? ಹಾಗಾಗಿ ಪ್ರತಿನಿತ್ಯ ಕೆಳಗಿನ ಮಂತ್ರವನ್ನು ಹೇಳುತ್ತಾ ದೇವತೀರ್ಥವನ್ನು ಪ್ರಾಶನಮಾಡಿ ಎಂದಿದ್ದಾರೆ.

ಅಕಾಲಮೃತ್ಯುಹರಣಂ ಸರ್ವವ್ಯಾಧಿನಿವಾರಣಮ್ |

ಸರ್ವದುರಿತೋಪಶಮನಂ ದೇವಪಾದೋದಕಂ ಶುಭಮ್ ||

ಎಂಬುದಾಗಿ ಉದ್ಧರಣೆಯಿಂದ ತೀರ್ಥವನ್ನು ಗೋಕರ್ಣಾಕೃತಿಹಸ್ತದಲ್ಲಿ (ಬಲಗೈನ ಹಿರಿಕಿರಿಬೆರಳುಗಳನ್ನು ಬಿಟ್ಟು ಉಳಿದಂತೆ ಎಲ್ಲ ಬೆರಳುಗಳನ್ನು ಒತ್ತಟ್ಟಿಗೆ ಹಿಡಿದರೆ ಆಕಳ ಕಿವಿಯಾಕಾರದ ಮುದ್ರೆ ರೂಪುಗೊಳ್ಳೂತ್ತದೆ. ಅದನ್ನೇ ಗೋಕರ್ಣಾಕೃತಿಹಸ್ತವೆನ್ನುತ್ತಾರೆ.) ಕ್ರಮವಾಗಿ ತೆಗೆದು ಕೊಂಡರೆ, ಅದು ನಮಗೆ ಮೃತ್ಯು ನಾಶಕವೂ, ವ್ಯಾಧಿ ನಿವಾರಕವೂ, ಪಾಪ ಪರಿಹಾರಕವೂ, ಆಗಿ ಪರಿಣಮಿಸುತ್ತದೆ. ಇದೇ ರೀತಿ ಮೂರು ಬಾರಿ ತೀರ್ಥವನ್ನು ಪ್ರಾಶನೆಮಾಡುವ ಕುರಿತು ಪ್ರಾಶಸ್ತ್ಯವನ್ನೂ ವಿವರಿಸುತ್ತಾರೆ.

ಪ್ರಥಮೇ ದೇಹಶುದ್ಧಿಃ ಸ್ಯಾದ್ದ್ವಿತೀಯೇ ಕರ್ಮ ಸಿದ್ಧಯೇ |

ತೃತೀಯೇ ಮೋಕ್ಷಸಿದ್ಧಿಃ ಸ್ಯಾತ್ತೀರ್ಥಪ್ರಾಶನಲಕ್ಷಣಮ್ [1] ||

ಮೊದಲನೆಯ ಉದ್ಧರಣೆಯಿಂದ ಶಾರೀರಿಕ ಮತ್ತು ಮಾನಸಿಕ ಶುದ್ಧಿಯೂ, ಎರಡನೆಯದರಿಂದ ಉತ್ತಮ ನಡುವಳಿಕೆ ಮತ್ತು ಕಾರ್ಯ ಸಾಧನೆಯೂ,

ಇನ್ನು ಮೂರನೆಯ ಹುಟ್ಟಿನಿಂದ ಪರಮೇಶ್ವರನ ಪರಮ ಪದವೂ ದೊರೆಯುವುದರಲ್ಲಿ ಸಂಶಯವಿಲ್ಲ. ಇಂಥ ತೀರ್ಥವನ್ನು ನಿತ್ಯವೂ ಸೇವಿಸಿ ಪಾಪಮುಕ್ತರಾಗಿ ಪವಿತ್ರರಾಗಿ ಧನ್ಯರಾಗೋಣ.

ಪ್ರಾರಂಭದಲ್ಲಿ ತೋರಿಸಿದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನ ಮಾರ್ಗದಲ್ಲಿ ಒಂದಲ್ಲ ಒಂದು ತೀರ್ಥವನ್ನು ಆಶ್ರಯಿಸಿ, ಪಾಪವನ್ನು ತೊಳೆದುಕೊಂಡು, ಪಾವನಗೊಳ್ಳುತ್ತಾರೆ. ಬುದ್ಧಿವಂತರು ವಿದ್ಯೆಯೆಂಬ ತೀರ್ಥವನ್ನೂ, ಸಾಧುಗಳು ಸತ್ಯತೀರ್ಥವನ್ನೂ, ಮುಗ್ಗಿದ ಮನಸ್ಸಿನವರು ಗಂಗೆಯನ್ನೂ, ಯೋಗಿಗಳು ಧ್ಯಾನತೀರ್ಥವನ್ನೂ, ರಾಜರು ಶೌರ್ಯತೀರ್ಥವನ್ನೂ, ಧನವಂತರು ದಾನತೀರ್ಥವನ್ನೂ, ಕುಲವಂತರು ಮ್ಲಾನತೀರ್ಥವನ್ನೂ ಆಶ್ರಯಿಸಿರುವುದನ್ನು ಕವಿ ಗುರುತಿಸಿದ್ದಾನೆ.

ಪರಮೇಶ್ವರ ಪುಟ್ಟನಮನೆ                                    



[1] ಪ್ರಥಮಂ ದೇಹಶುದ್ಧ್ಯರ್ಥಂ ದ್ವಿತೀಯಂ ಧರ್ಮಸಿದ್ಧಯೇ |

ತೃತೀಯಂ ಮೋಕ್ಷ ಸಿದ್ಧ್ಯರ್ಥಂ ತ್ತ್ರಿವಾರಂ ತೀರ್ಥಸೇವನಮ್ || ಹೀಗೆ ಪಾಠಾಂತರವೂ ಇದೆ.